ವಿದ್ಯಾಗಿರಿ: ‘ಉತ್ತಮ ಮನುಷ್ಯನಾಗಲು ದೊಡ್ಡ ಕಲಾವಿದ ಆಗಬೇಕಾಗಿಲ್ಲ. ಒಳ್ಳೆಯ ಪ್ರೇಕ್ಷಕನಾದರೆ ಸಾಕು. ಬದುಕಿನಲ್ಲಿ ಸೌಂದರ್ಯ ಪ್ರಜ್ಞೆ ಅವಶ್ಯ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ಆಳ್ವಾಸ್ ಕಾಲೇಜಿನ ಕೃಷಿಸಿರಿ ವೇದಿಕೆಯ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ಮಂಗಳವಾರ ಸಂಜೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಾರ್ಷಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳು ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಭೌತಶಾಸ್ತ್ರ ಕಲಿತು ವೈದ್ಯ ಅಥಾವ ಎಂಜಿನಿಯರ್ ಆಗಬಹುದು. ಉನ್ನತ ಅಧ್ಯಯನ ಮಾಡಬಹುದು. ಆದರೆ, ಆ ವೃತ್ತಿಯಲ್ಲಿ ಯಶಸ್ಸು ಗಳಿಸಲು ಉತ್ತಮ ಮನಸ್ಸು ಬೇಕಲ್ಲವೇ? ಅದಕ್ಕೆ ಸೌಂದರ್ಯ ಪ್ರಜ್ಞೆ ಅಗತ್ಯ ಎಂದರು.
ಸಂಗೀತ, ನೃತ್ಯ, ವಾದ್ಯ ಪರಿಕರ, ನಾಟಕ ಇತ್ಯಾದಿ ಕಲಾ ಪ್ರಕಾರಗಳೆಲ್ಲ ಸರಳವಲ್ಲ. ಸಂಗೀತದಲ್ಲಿರುವ 36 ಸಾವಿರಕ್ಕೂ ಅಧಿಕ ರಾಗ ಸಂಯೋಜನೆಯು ಗಣಿತ- ರಸಾಯನಶಾಸ್ತ್ರಕ್ಕೂ ನಿಲುಕದ ವಿಚಾರ. ನಾಟಕ ಸಂಯೋಜನೆಯು ಭೌತಶಾಸ್ತ್ರಕ್ಕೂ ಎಟಕದೇ ಇರಬಹುದು. ಅಂತಹ ಸಾಮಥ್ರ್ಯ ಸೌಂದರ್ಯ ಪ್ರಜ್ಞೆಗೆ ಇದೆ ಎಂದು ವಿವರಿಸಿದರು.
ಸೌಂದರ್ಯ ಪ್ರಜ್ಞೆ ಜಾತಿ, ಧರ್ಮ, ಪ್ರದೇಶ, ಹಣಗಳಿಗೆ ಅತೀತವಾಗಿದೆ. ಆದರೆ, ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಮಾನವೀಯತೆ, ಕರುಣೆ, ಸಾಮಾಜಿಕ ಪರಿಕಲ್ಪನೆ, ಪ್ರೀತಿ... ಎಲ್ಲವನ್ನೂ ಕಲಿಸುತ್ತದೆ. ಸಾಮರಸ್ಯದ ಬದುಕು ನೀಡುತ್ತದೆ ಎಂದ ಅವರು, ಸೌಂದರ್ಯ ಪ್ರಜ್ಞೆ ಇಲ್ಲದ ವ್ಯಕ್ತಿ ಸಮಾಜ ಹಾಗೂ ದೇಶಕ್ಕೂ ಅಪಾಯಕಾರಿ ಎಂದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ. ಸದಾಕತ್ ಇದ್ದರು. ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನರಾಂ ಸುಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮನಸೆಳೆದ ಮಕ್ಕಳ ಮಾಯಾಲೋಕ: ಬಳಿಕ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಜೀವನರಾಂ ಸುಳ್ಯ ನಿರ್ದೇಶನದಲ್ಲಿ ಅಭಿನಯಿಸಿದ ‘ಮಕ್ಕಳ ಮಾಯಾಲೋಕ’ ನಾಟಕವು ಮನಸೂರೆಗೊಂಡಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


