ಉಳ್ಳಾಲ ಬೀಚ್ ಪರಿಸರದ ತ್ಯಾಜ್ಯ ಸ್ವಚ್ಛ, ತಡೆಬೇಲಿ ಆವರಣ ನಿರ್ಮಾಣ

Upayuktha
0

ಶಾಸಕ, ಸ್ಪೀಕರ್ ಯು. ಟಿ. ಖಾದರ್ ಮಾರ್ಗದರ್ಶನ


ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿಯ ಬೀಚ್ ಪಕ್ಕದಲ್ಲಿ ದುರ್ನಾತ ಬೀರುತ್ತಿದ್ದ ತ್ಯಾಜ್ಯ ಸಂಗ್ರಹದ ಸ್ಥಳದಲ್ಲಿದ್ದ ಕಸದ ರಾಶಿಯನ್ನು ಖಾಲಿ ಮಾಡಿ, ಸ್ಥಳವನ್ನು ಸ್ವಚ್ಛ, ಸಮತಟ್ಟು ಮಾಡಿ, ಮುಂದಕ್ಕೆ ಈ ಸ್ಥಳದಲ್ಲಿ ಯಾರೂ ಕಸ ತ್ಯಾಜ್ಯ ಹಾಕದಂತೆ, ತಡೆ ಬೇಲಿ ಹಾಕಿ, ಎಚ್ಚರಿಕೆಯ ಫಲಕ ಹಾಕುವ ತುರ್ತು ಕಾಮಗಾರಿ ಶನಿವಾರ ನಡೆಯಿತು.


ಶಾಸಕ, ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷರೂ ಆಗಿರುವ ಯು. ಟಿ.ಖಾದರ್ ರವರ ಸಲಹೆ, ಮಾರ್ಗದರ್ಶನದಂತೆ, ಉಳ್ಳಾಲ ನಗರಸಭೆಯಲ್ಲಿ ಬೀಚ್ ಪರಿಸರದ ತ್ಯಾಜ್ಯ ವಿಲೇವಾರಿ ಮಾಡುವ ಮತ್ತು ವಯರ್ ನೆಟ್‌ನ ತಡೆ ಬೇಲಿ ಹಾಕುವ ತೀರ್ಮಾನದಂತೆ, ಸರ್ವ ಪಕ್ಷದ ಸದಸ್ಯರ ಸಹಕಾರದೊಂದಿಗೆ, ಕಳೆದ ಮೂರ್ನಾಲ್ಕು ದಿನದಲ್ಲಿ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿ, ತಡೆ ಬೇಲಿ ಹಾಕುವ ಕಾಮಗಾರಿ ಶನಿವಾರ ಸಂಜೆ ನಡೆಯಿತು.


ನಾನು ಪೌರಾಯುಕ್ತೆಯಾಗಿ ಹೆಚ್ಚುವರಿ ಅಧಿಕಾರ ವಹಿಸಿಕೊಂಡು, ಇಲ್ಲಿಗೆ ಬಂದ ತಕ್ಷಣ ಮೊದಲು ಮಾಡಿದ ಕೆಲಸವೇ, ಇಲ್ಲಿಯ ಕಸತ್ಯಾಜ್ಯ ವಿಲೇವಾರಿ ಬಗ್ಗೆ, ಜಿಲ್ಲಾಧಿಕಾರಿ, ಯೋಜನಾ ನಿರ್ದೇಶಕರ ಮಾರ್ಗದರ್ಶನ ಮತ್ತು ಸ್ಥಳೀಯ ಶಾಸಕರು, ಸ್ಪೀಕರ್ ಯು. ಟಿ. ಖಾದರ್ ರವರೊಡನೆ ಸಲಹೆ ಪಡೆದು, ಸದಸ್ಯರ ಮತ್ತು ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ, ಕಾರ್ಯ ಯೋಜನೆ ರೂಪಿಸಿ ತ್ಯಾಜ್ಯವನ್ನು ಸಾಗಿಸುವ ಯೋಜನೆ ಹಾಕಿಕೊಂಡೆ. ಇದಕ್ಕಿಂತ ಮೊದಲೂ ಇಲ್ಲಿ ಸಂಗ್ರಹವಾದ ಹಸಿ ಕಸ, ಒಣ ಕಸ ಮಂಗಳೂರು ಮಹಾನಗರ ಪಾಲಿಕೆಗೆ ಹೋಗುತ್ತಿತ್ತು. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಣ ಕಸ ತೆಗೆದುಕೊಳ್ಳದ ಕಾರಣ, ಇಲ್ಲಿ ಕಸ ರಾಶಿ ಬಿದ್ದಿತ್ತು, ಅದನ್ನು ಸ್ವಚ್ಛಗೊಳಿಸುವ ತೀರ್ಮಾನ ಆದ ಒಂದೆರಡು ದಿನದಲ್ಲಿ, ಯಾವುದೇ ಮುನ್ಸೂಚನೆ ಇಲ್ಲದೆ ಇಲ್ಲಿ ಕೆಲವರು ಸೇರಿ ಪ್ರತಿಭಟನೆ ನಡೆಸಿದರು. ಇಲ್ಲಿ ಈಗ ಕಸದ ರಾಶಿ ಖಾಲಿಯಾಗಿದೆ, ಇದಕ್ಕಾಗಿ ನಗರಸಭೆಯ ಆರೋಗ್ಯ ಇಲಾಖೆ ಅಧಿüಕಾರಿಗಳು, ಸಿಬ್ಬಂದಿಗಳು, ಪೌರ ಕಾರ್ಮಿಕರು ಮೂರ್ನಾಲ್ಕು ದಿನದಲ್ಲಿ ಅಹರ್ನಿಶಿ ದುಡಿದಿದ್ದಾರೆ, ಇನ್ನು ಮುಂದಕ್ಕೆ ಇಲ್ಲಿ ಯಾರು ಕಸ, ತ್ಯಾಜ್ಯ ಹಾಕಿದರೂ ಅಂತಹವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು, ಪ್ರಭಾರ ಪೌರಾಯುಕ್ತೆ, ವಾಣಿ ವಿ. ಆಳ್ವ ತಿಳಿಸಿದರು.


ಉಳ್ಳಾಲ ಬೀಚ್ ಪರಿಸರದ ಈ ಸ್ಥಳವನ್ನು ಸ್ವಚ್ಛ ಮಾಡುವ, ಮತ್ತು ತಡೆಬೇಲಿ ಹಾಕುವ ತೀರ್ಮಾನ, ಶಾಸಕರು, ಸಭಾಪತಿಗಳು ಯು.ಟಿ. ಖಾದರ್ ರವರ ಸಲಹೆಯಂತೆ ನಗರಸಭೆಯಲ್ಲಿ ತೀರ್ಮಾನಿಸಲಾಗಿತ್ತು, ಇದಕ್ಕೆ ಎಲ್ಲಾ ಪಕ್ಷದ ಸದಸ್ಯರು ಬೆಂಬಲವನ್ನೂ ಸೂಚಿಸಿದ್ದರು. ಆದರೂ ಕೆಲವೊಂದು ಮಂದಿ ಸೇರಿ ದಿಢೀರ್ ಪ್ರತಿಭಟನೆ ನಡೆಸಿ ಇದನ್ನೊಂದು ದೊಡ್ಡ ವಿಷಯ ಮಾಡಲು ನೋಡಿದರು. ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಪ್ರತ್ಯೇಕ ಸ್ಥಳ ಇಲ್ಲದ ಕಾರಣ ಈ ಜಾಗದಲ್ಲಿ, ತ್ಯಾಜ್ಯ ಸಂಗ್ರಹ ಆಗಿ ಮಂಗಳೂರಿಗೆ ಸಾಗಿಸಲ್ಪಡುತಿತ್ತು, ಸದ್ಯಕ್ಕೆ ಅದು ನಿಂತ ಕಾರಣ ಸ್ವಲ್ಪ ತೊಂದರೆಗೆ ಆಯಿತು, ಅದನ್ನು ವ್ಯವಸ್ಥಿತವಾಗಿ ಸರಿ ಮಾಡುವ ಕೆಲಸ ಆಗುತ್ತಿದೆ ಎಂದು ಉಳ್ಳಾಲ ನಗರಸಭಾ ಉಪಾಧ್ಯಕ್ಷ, ಅಯೂಬ್ ಮಂಚಿಲ ತಿಳಿಸಿದರು.


ನಮ್ಮ ಶಾಸಕರ ಸೂಚನೆಯಂತೆ ಇಲ್ಲಿಯ ಕಸ ತ್ಯಾಜ್ಯ ವಿಲೇವಾರಿಯ ಬಗ್ಗೆ ಮಾತುಕತೆ ಆಗಿ ಇದನ್ನು ತೆಗೆಯುವ ಯೋಜನೆ ಆದ ತಕ್ಷಣ ಇಲ್ಲಿ ಪ್ರತಿಭಟನೆ ನಡೆಸಿದರು. ಈಗ ಕಸ ತೆಗೆದು ತಡೆ ಬೇಲಿಯೂ ಆಗಿದೆ, ವ್ಯವಸ್ಥಿತವಾಗಿ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆಯೂ ಆಗಿದೆ ಎಂದು ಮುಕ್ಕಚ್ಚೇರಿ ವಾರ್ಡ್ ಸದಸ್ಯ ಇಬ್ರಾಹಿಂ ಖಲೀಲ್ ಸಾಂದರ್ಭಿಕವಾಗಿ ಮಾತನಾಡಿದರು.


ಉಳ್ಳಾಲ ನಗರಸಭಾ ಅಧ್ಯಕ್ಷೆ ಶ್ರೀಮತಿ ಚಿತ್ರಕಲಾ ಚಂದ್ರಕಾತ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ವೀಣಾ ಶಾಂತಿ ಡಿಸೋಜ, ಸದಸ್ಯರು ಇಬ್ರಾಹಿಂ ಅಶ್ರಫ್, ಬಾಸಿಲ್ ಡಿಸೋಜ, ಅಝೀಜ್, ಬಶೀರ್, ಗೀತಾ ಬಾಯಿ, ಆರೋಗ್ಯ ಅಧಿಕಾರಿಗಳು ಶಾಜಿತ್, ರವಿಕೃಷ್ಣ, ಮೇಲ್ವಿಚಾರಕ ಪ್ರದೀಪ್, ಕಂದಾಯ ನಿರೀಕ್ಷಕ ಚಂದ್ರಹಾಸ್, ಪೌರಕಾರ್ಮಿಕ ಕೆಂಚಪ್ಪ, ಪೌರಕಾರ್ಮಿಕ ಸಿಬ್ಬಂದಿಗಳು, ವಾಹನ ಚಾಲಕರು ಮತ್ತು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top