ಉಜಿರೆ: ಧರ್ಮಸ್ಥಳದ ಎಸ್.ಡಿ.ಎಂ. ಮೆಡಿಕಲ್ ಟ್ರಸ್ಟ್ ಆಶ್ರಯದಲ್ಲಿ 2013ರಲ್ಲಿ ಉಜಿರೆಯಲ್ಲಿ ಆರಂಭಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯು ಹತ್ತು ವರ್ಷಗಳ ಸಾರ್ಥಕ ಸೇವೆಯನ್ನು ಪೂರೈಸಿದ್ದು ಇದೇ 30 ರಂದು ಶುಕ್ರವಾರ ದಶಮಾನೋತ್ಸವ ಆಚರಿಸಲಿದೆ ಎಂದು ಆಸ್ಪತೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಾತ್ವಿಕ್ ಜೈನ್ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಸೇವೆ-ಸಾಧನೆಯ ಸಮಗ್ರ ಮಾಹಿತಿಯನ್ನು ನೀಡಿದ ಅವರು ದಶಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಆಸ್ಪತ್ರೆಗೆ ಎರಡು ಹೊಸ ಯೋಜನೆಗಳನ್ನು ಹೆಗ್ಗಡೆಯವರು ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
70 ಲಕ್ಷ ರೂ. ವೆಚ್ಚದಲ್ಲಿ ಮಗು ಮತ್ತು ಮಹಿಳಾ ಚಿಕಿತ್ಸಾ ಘಟಕ ಪ್ರಾರಂಭಗೊಳ್ಳಲಿದೆ. ಇಲ್ಲಿ ಇಬ್ಬರು ಪರಿಣತ ಸ್ತ್ರೀರೋಗ ತಜ್ಞರು ಹಾಗೂ ಮಕ್ಕಳ ರೋಗ ತಜ್ಞರ ಸೇವೆ ಲಭ್ಯವಿರುತ್ತದೆ.
ಹೃದಯರೋಗಿಗಳ ಚಿಕಿತ್ಸೆಗಾಗಿ ಕ್ಯಾತ್‌ಲ್ಯಾಬ್ (Cath lab) ಸದ್ಯದಲ್ಲಿಯೇ ಪ್ರಾರಂಭಗೊಳ್ಳಲಿದೆ. ಈ ಬಗ್ಯೆ ಈಗಾಗಲೆ ಬೆಂಗಳೂರಿನ ನಾರಾಯಣ ಹೃದಯಾಲಯದೊಂದಿಗೆ ಮಾತುಕತೆ ನಡೆಸಲಾಗಿದೆ.
ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ಆಸ್ಪತ್ರೆಯಲ್ಲಿ 22.51 ಕೋಟಿ ರೂ. ಮೌಲ್ಯದ ಔಷಧ ಮತ್ತು ಚಿಕಿತ್ಸೆಯನ್ನು ಬಡರೋಗಿಗಳಿಗೆ ಉಚಿತವಾಗಿ ನೀಡಲಾಗಿದೆ ಎಂದರು. 6,53,470 ಹೊರರೋಗಿಗಳಿಗೆ ಹಾಗೂ 32,978 ಒಳರೋಗಿಗಳಿಗೆ ವೈದ್ಯಕೀಯ ಸೇವೆ ನೀಡಲಾಗಿದೆ. ಇದೇ 30 ರಂದು ಶುಕ್ರವಾರ ಆಸ್ಪತ್ರೆಯಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ದಶಮಾನೋತ್ಸವ ಸಮಾರಂಭ ನಡೆಯಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ