ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ
ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಕಾರ್ಯಕ್ರಮ ಆಯೋಜನೆ
ಸಸಿ ವಿತರಣೆ, ಪರಿಸರಗೀತೆ ಗಾಯನ, ವಿದ್ಯಾರ್ಥಿ ಉಪನ್ಯಾಸ
ಉಜಿರೆ: ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವಂತಹ ಪ್ರಜ್ಞಾಪೂರ್ವಕ ಪ್ರಯತ್ನವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ. ಕರೆ ನೀಡಿದರು.
ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಜೂ.5ರಂದು ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಪ್ಲಾಸ್ಟಿಕ್ ಎಂಬುದು ನಿತ್ಯ ಬಳಕೆಯ ಮೂಲಭೂತ ವಸ್ತುವಾಗಿ ಮಾರ್ಪಟ್ಟಿದ್ದು, ಇದರ ಮೇಲಿನ ಅತಿಯಾದ ಅವಲಂಬನೆ ಪರಿಸರವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಮಿತಗೊಳಿಸುವ ಮೂಲಕ ವಿದ್ಯಾರ್ಥಿಗಳು ಜವಾಬ್ದಾರಿ ಮೆರೆಯಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ, ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ಅಧ್ಯಾಪಕ ದೀಕ್ಷಿತ್ ರೈ ಅವರು ಪ್ರಕೃತಿಯಲ್ಲಿ ಉಂಟಾಗುವ ವಿಕೋಪಗಳ ಕುರಿತು ಮಾತನಾಡಿ, ಉದಾಹರಣೆಗಳ ಮೂಲಕ ವಾಸ್ತವ ಜಗತ್ತು ಹಾಗೂ ಪರಿಸರದ ಪರಿಚಯ ನೀಡಿದರು.
“ನಮ್ಮ ವಿನಾಶಕ್ಕೆ ನಾವೇ ನಾಂದಿ ಹಾಡುತ್ತಿದ್ದು, ಶೂನ್ಯದ ಕಡೆಗೆ ಹೋಗುವುದನ್ನು ಬಿಟ್ಟು ಪೂರ್ಣತೆಯ ಕಡೆಗೆ ಚಲಿಸೋಣ ಹಾಗೂ ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡೋಣ” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಬಳಿಕ, ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ.ಎ. ಅವರು ವಿದ್ಯಾರ್ಥಿಗಳು ರಚಿಸಿದ ಇ-ಭಿತ್ತಿಪತ್ರಿಕೆಯನ್ನು ಅನಾವರಣಗೊಳಿಸಿ, ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿದರು. ವಿದ್ಯಾರ್ಥಿಗಳು ಸರಣಿ ಪರಿಸರಗೀತೆಗಳನ್ನು ಹಾಡಿದರು.
ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಸಾಧನಾ ಹೆಗ್ಡೆ, ವರ್ಷ ಹಾಗೂ ನಯನ ವಿದ್ಯಾರ್ಥಿ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಪ್ರೊ. ಶಕುಂತಲಾ, ಅಭಿಲಾಷ್ ಕೆ.ಎಸ್., ಸ್ವಾತಿ, ಮಂಜುಶ್ರೀ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಜನಾ ಎಸ್. ಸ್ವಾಗತಿಸಿ, ಸುಪ್ರೀತ್ ಬಿ. ವಂದಿಸಿದರು. ವೀಕ್ಷಿತಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ