ಹಳೆಯ ತಲೆಮಾರಿನ ಹೇಳಿಕೆಯೊಂದಿತ್ತು. ಪ್ರತಿ ಮನೆಯಲ್ಲಿ ನಿತ್ಯ ಪೂಜೆ ಇಲ್ಲದಿದ್ದರೂ, ವರುಷಕ್ಕೊಂದಾವರ್ತಿಯಾದರೂ ಪೂಜೆ ಮಾಡಿ ನಾಲ್ಕು ಜನ ಆತ್ಮೀಯರನ್ನು ಆಮಂತ್ರಿಸಿ ಹಸ್ತೋದಕದ ಮೂಲಕ ಭೋಜನ ವ್ಯವಸ್ಥೆಯಾದಲ್ಲಿ ಮನೆಗೆ ಶೋಭೆ.
ಮನೆಯ ಮಕ್ಕಳಲ್ಲಿ ಬೆಳೆಯ ಬೇಕಾದ ಅತಿಥಿ ಸತ್ಕಾರದ ಗುಣ, ನಾಲ್ಕು ಜನರಲ್ಲಿ ಮಾತನಾಡಿ ಆತ್ಮೀಯತೆ ಬೆಳೆಸಿಕೊಳ್ಳುವ ಗುಣ, ಪೂಜಾ ಸಂಸ್ಕಾರದ ಮಹತ್ವ, ದೇವರ ಮೇಲಿನ ಭಕ್ತಿ, ಅತಿಥಿಗಳು ಬರುವಾಗಿನ ಪೂರ್ವ ತಯಾರಿ ಮುಂತಾದವುಗಳಿಗೆಲ್ಲ ಗಟ್ಟಿ ಅಡಿಪಾಯವೇ ಮನೆಯ ಪೂಜೆ.
ವ್ಯಕ್ತಿಯ ಮನದಲ್ಲಿ ದೈವಭಕ್ತಿ ಮೂಡಬೇಕಾದರೆ ಅದಕ್ಕೊಂದು ಸಂಸ್ಕಾರ ಬೇಕು. ಆ ಸಂಸ್ಕಾರವನ್ನು ನೀಡಬೇಕಾದದ್ದು ತಂದೆ ತಾಯಿಗಳು ಅಥವಾ ಅಜ್ಜ ಅಜ್ಜಿಯಂದಿರು. ಅದಕ್ಕಾಗಿ ಹಿರಿಯರು ರೂಪಿಸಿಕೊಟ್ಟ ದಾರಿಗಳೇ ಭಜನೆ, ಶ್ಲೋಕ, ಸಂಧ್ಯಾವಂದನೆ, ಹೊಸ್ತಿಲು ಪೂಜೆ ಇತ್ಯಾದಿ ಇತ್ಯಾದಿ.
ಧರ್ಮೋನ್ನತಿಗಾಗಿ, ಧರ್ಮ ದಾರಿ ತಪ್ಪಿದಾಗ ತಿದ್ದುವುದಕ್ಕಾಗಿ ಸ್ಥಾಪಿತವಾದದ್ದೇ ಗುರುಮಠಗಳು. ಆ ಕಾರ್ಯದಲ್ಲಿ ಆಚಾರ್ಯ ಶಂಕರರ ಮೂಲಕವಾಗಿ ಸ್ಥಾಪಿತವಾದ ಮಠಗಳಲ್ಲಿ ಶ್ರೀ ರಾಮಚಂದ್ರಾಪುರ ಮಠವೂ ಒಂದು. ನಮ್ಮ ಸಂಸ್ಕಾರದ ವಿಧಿ ವಿಧಾನಗಳಲ್ಲಿ, ಭಾರತೀಯ ಮೂಲ ಸಂಸ್ಕೃತಿ ಕ್ಷಯಿಸುವುದನ್ನು ಕಂಡು, ದೇವ ಸ್ತುತಿಯನ್ನು ಮಾಡುವ ಅರ್ಥಗರ್ಭಿತ ಶ್ಲೋಕಗಳು ಮನೆ ಮನೆಯಲ್ಲಿ ನಶಿಸುವುದನ್ನು ಕಂಡು, ಮಠಗಳು ಮಾಡಬೇಕಾದ ಕೈಂಕರ್ಯಕ್ಕೆ ಕೈಯಿಕ್ಕಿದವರು ನಮ್ಮ ಗುರುಗಳಾದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು.
ಅದರ ಫಲ ಶ್ರುತಿಯೇ ಒಂದು ಶಂಕರ ಜಯಂತಿಯಿಂದ ಮುಂದಿನ ಶಂಕರ ಜಯಂತಿಯ ವರೆಗೆ, ಪ್ರತಿ ವರ್ಷ ಒಂದೊಂದು ಆಚಾರ್ಯ ಶಂಕರ ವಿರಚಿತ ಶ್ಲೋಕದ ಪಠಣ. ಪ್ರತಿನಿತ್ಯ ಮನೆಯಲ್ಲಿ ಶ್ಲೋಕ ಪಠಣ ಮಾಡಿ ವರುಷವೊಂದಕ್ಕೆ ಶ್ಲೋಕದ ಸಂಖ್ಯಾ ಗುರಿಯನ್ನೂ ನಿರ್ದೇಶಿಸಿಬಿಡುತ್ತಾರೆ. ಒತ್ತಡದ ಪ್ರಾಪಂಚಿಕ ಜೀವನದಲ್ಲಿ ಔದಾಸೀನ್ಯವನ್ನು ತೋರಬಾರದೆಂಬುದು ಇದರ ಮುಖ್ಯ ಉದ್ದೇಶಗಳಲ್ಲಿ ಒಂದು. ಆ ಮೂಲಕ ಮನೆ ಮನೆಯಲ್ಲಿಯೇ ಈ ಶ್ಲೋಕಗಳು ಅನುರಣಿಸಬೇಕಾದ ಅನಿವಾರ್ಯತೆ ಭಕ್ತ ಜನರ ಮನೆಯಲ್ಲಿ ಮತ್ತು ಮನದಲ್ಲಿ ಬಂತು.
ನಮ್ಮ ಮನೆಯೂ ಇದರಲ್ಲಿ ಹೊರತಾಗಿಲ್ಲ. ನನ್ನಾಕೆ ಪ್ರತಿನಿತ್ಯ ಈ ಶ್ಲೋಕವನ್ನು ಉಚ್ಚರಿಸುತ್ತಾಳೆ. ಎರಡೂವರೆ ವರ್ಷದ ಮೊಮ್ಮಗ ಅಜ್ಜಿ ಶ್ಲೋಕ ಹೇಳುವಾಗ ಶ್ಲೋಕವನ್ನು ಕೇಳುತ್ತಾ ಕೀಟಲೆಯನ್ನು ಮಾಡುತ್ತಲೇ ಇರುತ್ತಾನೆ. ಅಜ್ಜಿ ಪುಳ್ಳಿಯ ಅನುರಾಗದ ಸಂಭಾಷಣೆಯಲ್ಲಿ ಶ್ಲೋಕ ಮುಗಿದಿರುತ್ತದೆ.
ಕೆಲ ದಿನಗಳ ಹಿಂದೆ ದಿನಪತ್ರಿಕೆಯನ್ನು ಓದುತ್ತಾ ಕುಳಿತಿದ್ದೆ. ನನ್ನ ಎದುರು ಕುಳಿತಿದ್ದ ಮೊಮ್ಮಗ ಆಟವಾಡುತ್ತಿದ್ದಂತೆ ಏಕಾಗ್ರ ಚಿತ್ತನಾಗಿ ತೊದಲ ಭಾಷೆಯಲ್ಲಿ ಮುದಾಕರಾತ್ತಮೋದಕಂ ಹಾಡುತ್ತಾ ಕುಳಿತಿದ್ದ. ಎದುರು ಬಂದರೆ ಅವನ ಏಕಾಗ್ರತೆಗೆ ಅಡ್ಡಿಯಾಗಬಹುದೆಂಬ ಕಾರಣಕ್ಕೆ ಹಿಂದಿನಿಂದಲೇ ಅವನ ಹಾಡನ್ನು ದಾಖಲಿಸಿಕೊಂಡೆ. ಗುರುಚಿತ್ತಕ್ಕೆ ಶರಣು ಶರಣು ಶರಣೆಂದೆ.
ಕಂದನ ಹೃದಯದಲ್ಲಿ ಭಾರತೀಯ ಸಂಸ್ಕಾರ ಮೊಳಕೆ ಒಡೆಯುವುದನ್ನು ಕಂಡ ತಾಯಿ ಹೃದಯ ಕಂದನೊಂದಿಗೆ ಪ್ರತಿನಿತ್ಯ ಶ್ಲೋಕ ಪಠಣೆ ಮುಂದುವರಿಸುವುದನ್ನು ಕಂಡಾಗ ಗುರು ಆಶಯ ಸಾರ್ಥಕವಾಯಿತು ಎಂದೆನಿಸಿತು. ಪ್ರತಿ ಮನೆಯಲ್ಲೂ ಶ್ಲೋಕಗಳು ಮೊಳಗಲಿ. ಸಂಸಾರಗಳು ಭಾರತೀಯ ಸಂಸ್ಕೃತಿಯಲ್ಲಿ ಬೆಳಗಲಿ.
ಹರೇ ರಾಮ
-ಎ.ಪಿ. ಸದಾಶಿವ ಮರಿಕೆ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ