"ಅಬ್ಬಾ ಎಂತಾ ಸೆಕೆ ಮರ್ರೇ... ಒಂದು ಮಳೆ ಕೂಡ ಇಲ್ಲ. ಈ ಉರಿ ಬಿಸಿಲನ್ನು ತಣಿಸಲು ಎರಡು ಹನಿಯಾದರೂ ಮಳೆ ಬಂದರೆ ಸಾಕಿತ್ತು". ಇದು ಮಳೆ ಪ್ರಾರಂಭವಾಗುವುದರ ಮೊದಲು ಎಲ್ಲೆಂದರಲ್ಲಿ ನಮ್ಮ ಕಿವಿಗೆ ಬೀಳುತ್ತಿದ್ದ ಸರ್ವೇಸಾಮಾನ್ಯ ಮಾತುಗಳು.
ಅಂತೂ ಇಂತೂ ಜನರ ಮೊರೆಗೆ ಓಗೊಟ್ಟು ವರುಣದೇವ ಭೂಮಿಗಿಳಿಯುವ ಕೃಪೆ ತೋರಿದ. ಹಾಗೂ ಹೀಗೂ ಮಳೆಗಾಲ ಶುರುವಾಗಿಯೇ ಬಿಟ್ಟಿತು. ಮಕ್ಕಳಿಗೆ ಶಾಲಾ ಕಾಲೇಜು ಪ್ರಾರಂಭವಾಗುವುದು ಮತ್ತು ಮಳೆಗಾಲ ಪ್ರಾರಂಭವಾಗುವುದು ಎರಡೂ ಜೊತೆ ಜೊತೆಗೆ ಆದಕಾರಣ ಎತ್ತ ಕಣ್ಣು ಹಾಯಿಸಿದರು ಬಣ್ಣಬಣ್ಣದ ಕೊಡೆಗಳು ರಾರಾಜಿಸುತ್ತಿರುತ್ತದೆ. ಅದರಲ್ಲೂ ಪುಟ್ಟ ಮಕ್ಕಳು ತನಗಿಂತ ಉದ್ದದ ಬ್ಯಾಗ್ ಗಳನ್ನು ಹಾಕಿಕೊಂಡು ಒಂದು ಕೈಯಲ್ಲಿ ಕೊಡೆ ಹಿಡಿದು ಹರಸಾಹಸಪಟ್ಟು ನಡೆದುಕೊಂಡು ಹೋಗುವುದನ್ನು ಕಂಡಾಗ ನಮ್ಮ ಬಾಲ್ಯದ ಕ್ಷಣ ಕಣ್ಮುಂದೆ ಸುಳಿದಾಡಿ ನಗು ಬರುತ್ತದೆ. ಸಣ್ಣವರಿದ್ದಾಗ ಛತ್ರಿ ಇದ್ದರೂ ಕೂಡ ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿದ್ದೆವು.
ಬ್ಯಾಗ್ ಪುಸ್ತಕ ಬಟ್ಟೆ ಎಲ್ಲವನ್ನು ಒದ್ದೆ ಮಾಡಿಕೊಂಡು ಹೋಗಿ ಕ್ಲಾಸ್ ರೂಮಿನಲ್ಲಿ ಕೂತು ಪಾಠ ಕೇಳಿ ಮನೆಗೆ ಮರಳುವಾಗ ಪುನಃ ಅದೇ ರೀತಿ ಗೆಳೆಯರೊಂದಿಗೆ ಸೇರಿಕೊಂಡು ಒದ್ದೆಯಾಗಿಕೊಂಡು ಮನೆಗೆ ಮರಳಿದರೆ ಅದಾಗಲೇ ಅಮ್ಮ ದಾರಿ ಕಾದುಕೊಂಡು ಕೂತಿರುತ್ತಿದ್ದರು. ನಮ್ಮ ಅವತ್ತೆ ಕಣ್ಣು ಒಂದಷ್ಟು ಬೈಗುಳಗಳ ಸರಮಾಲೆಯನ್ನೇ ಸುರಿಸಿ ಕರೆದುಕೊಂಡು ಹೋಗಿ ಬಿಸಿಬಿಸಿ ಚಹಾ ತಿಂಡಿ ಕೊಟ್ಟಾಗ ಅದನ್ನು ಚಪ್ಪರಿಸಿಕೊಂಡು ತಿನ್ನುವಾಗ ಬೆಳಗಿನಿಂದ ಕೂತ ಚಳಿಯೆಲ್ಲಾ ಓಡಿ ಹೋದಂತೆನಿಸುತ್ತಿತ್ತು.
ಶಾಲೆಯಲ್ಲಿ ಹೆಚ್ಚು ಬರೆಯಲು ಕೊಟ್ಟಾಗ ನಾಳೆ ಶಾಲೆಗೆ ರಜೆ ಸಿಗಲಪ್ಪಾ ದೇವರೇ... ಜೋರು ಮಳೆ ಬರಲಿ ಎಂದು ದೇವರಲ್ಲಿ ಮೊರೆಇಡುವುದಂತೂ ತಪ್ಪುತ್ತಿರಲಿಲ್ಲ. ಜೊತೆಗೆ ಮಳೆಗೆ ಟೀಚರ್ ಗೆ ಜ್ವರ ಬರಲಪ್ಪಾ ಎಂಬ ಬೇಡಿಕೆಯೂ ಒಮ್ಮೊಮ್ಮೆ ಇರುತ್ತಿತ್ತು.
ಎಷ್ಟೇ ಜೋರು ಮಳೆ ಇರಲಿ ಮನೆಯೊಳಗೆ ಕೂರುವ ಸಾಹಸವಂತೂ ಮಾಡುತ್ತಲೇ ಇರಲಿಲ್ಲ. ಮನೆಯ ಹತ್ತಿರವಿದ್ದ ಮಾವಿನ ಮರದಿಂದ ಹಣ್ಣುಗಳು ಗಾಳಿ ಮಳೆಗೆ ಯಥೇಚ್ಛವಾಗಿ ಬಿದ್ದುಬಿಡುತ್ತಿದ್ದವು.
ಅಮ್ಮನಿಗೆ ನಮ್ಮನ್ನು ಹೊರಹೋಗದಂತೆ ಮನೆಯಲ್ಲಿ ಕೂಡಿ ಹಾಕುವುದು ಹೇಗೆ ಎಂಬ ಚಿಂತೆಯಾದರೆ, ನಮಗೆ ಯಾವಾಗ ಹೋಗಿ ಮಾವಿನಕಾಯಿ ತಿನ್ನುವುದು ಎಂಬ ಚಿಂತೆ. ಆ ಚಿಕ್ಕ ಚಿಕ್ಕ ವಿಷಯಗಳಲ್ಲೇ ಅದೇನೋ ಒಂದು ರೀತಿಯ ಖುಷಿಯು ಅಡಗಿರುತ್ತಿತ್ತು.
ಹೀಗೆ ಮಳೆಗಾಲ ಬಂದಾಗ ಮಳೆಯಲ್ಲಿ ಬಾಲ್ಯದ ಸಿಹಿ ನೆನಪುಗಳು ಮರಳಿ ಬರಬಾರದೇ ಎಂದೆನಿಸುತ್ತದೆ. ಈಗಲೂ ಅಷ್ಟೇ ಮಳೆ ಬಂತೆಂದರೆ ಏನೋ ಖುಷಿ ಅಮ್ಮನ ಕಣ್ಣು ತಪ್ಪಿಸಿ ಮಳೆಯಲ್ಲಿ ನೆನೆಯುವುದೆಂದರೆ ಏನೋ ಸಾಧನೆ ಮಾಡಿದ ರೀತಿ.
ಕಾಲೇಜಿಗೆ ಹೋಗುವಾಗಲೂ ಅಷ್ಟೇ ಬಸ್ಸಿನಿಂದ ಇಳಿದು ನಡೆದುಕೊಂಡು ಹೋಗುವಾಗ ಛತ್ರಿ ಇದ್ದರೂ ಒದ್ದೆಯಾಗಿಕೊಂಡು ಹೋಗುವುದಲ್ಲದೇ ದಾರಿಯಲ್ಲಿ ತುಂಬಿರುವ ಮಳೆ ನೀರಿನ ಮೇಲೆ ಜೋರಾಗಿ ಕಾಲ ಪಡಿಸಿ ನನ್ನಿಬ್ಬರು ಗೆಳೆಯರನ್ನು ಒದ್ದೆ ಮಾಡಿ ಅವರ ಕೆಂಗಣ್ಣಿಗೆ ಗುರಿಯಾಗುತ್ತಿದೆ. ಆದರೆ ಬಹಳ ಹೊತ್ತೇನೂ ಅವರ ಕೋಪ ನಿಲ್ಲುತ್ತಿರಲಿಲ್ಲ.ನಾನು ಪುಟ್ಟ ಮಕ್ಕಳಂತೆ ತುಟಿಯುಬ್ಬಿಸಿ ನಿಂತರೆ ಸಾಕು ಕೊನೆಗೆ ಅವರೇ ರಾಜಿಯಾಗಿಬಿಡುತ್ತಿದ್ದರು. ಅವರಿಗೂ ನನ್ನ ಬುದ್ಧಿ ಗೊತ್ತಿರುವ ಕಾರಣ ಏನೂ ಪ್ರಯೋಜನವಿಲ್ಲವೆಂದು ತಿಳಿದು ಮಳೆಯೊಂದಿಗೆ ನನ್ನ ಕೀಟಲೆಯನ್ನು ಸಹಿಸಿಕೊಂಡು ಜೊತೆಗೆ ಸುಮ್ಮನೆ ಬರುತ್ತಿದ್ದರು.
ಕಾಲ ಎಷ್ಟೇ ಬದಲಾಗಿರಲಿ ಆದರೆ ಮಳೆಯಲ್ಲಿ ಆದಿ ನೆನೆದು ಜ್ವರ ಬರಿಸಿಕೊಳ್ಳುವ ನನ್ನ ಬುದ್ಧಿ ಮಾತ್ರ ಇನ್ನೂ ಬದಲಾಗಲೇ ಇಲ್ಲ.
ಪ್ರಸಾದಿನಿ.ಕೆ ತಿಂಗಳಾಡಿ
ಪ್ರಥಮ ಪತ್ರಿಕೋದ್ಯಮ ವಿಭಾಗ
ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ)ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ