40 ಅಡಿ ಆಳದ ಬಾವಿಗಿಳಿದು ಬೆಕ್ಕನ್ನು ರಕ್ಷಿಸಿದ ಪೇಜಾವರ ಶ್ರೀಗಳು

Upayuktha
0

ಉಡುಪಿ: ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಧರ್ಮ, ಅಧ್ಯಾತ್ಮ, ಯೋಗ ಮುಂತಾದ ವಿಚಾರಗಳಲ್ಲಿ ಹೇಗೆ ಜ್ಞಾನಿಗಳೋ ಅಂತೆಯೇ ಲೌಕಿಕ ಕೆಲಸ ಕಾರ್ಯಗಳ ವಿಚಾರದಲ್ಲೂ ಅತ್ಯಂತ ಕೌಶಲ್ಯಪೂರ್ಣರು ಮತ್ತು ಜೀವದಯಾಪರರು ಎಂಬುದು ಅವರನ್ನು ಸಮೀಪದಿಂದ ಬಲ್ಲವರಿಗೆಲ್ಲ ಗೊತ್ತು. ಸ್ವಾಮೀಜಿಗಳ ಕಾರ್ಯಕೌಶಲ್ಯ ಎಂಥದು ಎಂಬುದು ಭಾನುವಾರ ಮತ್ತೊಮ್ಮೆ ಪ್ರಕಟವಾಯಿತು.


ಆಗಿದ್ದೇನು?

ಪೇಜಾವರ ಮಠದ ಅಧೀನದಲ್ಲಿರುವ ಮುಚ್ಚುಕೋಡು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಾವಿಗೆ ಬೆಕ್ಕೊಂದು ಹೇಗೋ ಆಯತಪ್ಪಿ ಬಿದ್ದಿದೆ. ಸ್ವಾಮೀಜಿಯವರು ಇಂದು ಸಂಜೆ (ಭಾನುವಾರ ಜೂನ್ 18) ಸುಮ್ಮನೇ ಅವಲೋಕಕ್ಕಾಗಿ ದೇವಸ್ಥಾನಕ್ಕೆ ತೆರಳಿದ್ದರು. ಆಗ ಅಲ್ಲಿನ ವ್ಯವಸ್ಥಾಪಕರು ಬೆಕ್ಕೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದಿರುವುದನ್ನು ಗುರುಗಳಿಗೆ ತಿಳಿಸಿದ್ದಾರೆ. ಅದನ್ನು ಕಂಡ ಶ್ರೀಗಳು ಖುದ್ದಾಗಿ ಬುಟ್ಟಿಯೊಂದನ್ನು ಬಾವಿಗೆ ಇಳಿಸಿ ಬೆಕ್ಕನ್ನು ಹೊರತರಲು ಪ್ರಯತ್ನಿಸಿದರು. ಆದರೆ ಆ ಪ್ರಯತ್ನ ಕೈಗೂಡಲಿಲ್ಲ. ಬಳಿಕ ಸ್ವತಃ ತಾವೇ ಹಗ್ಗ ಹಿಡಿದುಕೊಂಡು 40 ಅಡಿ ಆಳದ  ಬಾವಿಗೆ ಇಳಿದು ಬೆಕ್ಕನ್ನು ಸುರಕ್ಷಿತವಾಗಿ ಮೇಲೆತ್ತಿ ಪಾರು ಮಾಡಿದರು.



ಮೂರ್ನಾಲ್ಕು ದಿನಗಳ ಹಿಂದೆಯಷ್ಟೇ ಶ್ರೀಗಳು 30 ಅಡಿ ಎತ್ತರದ ಹಲಸಿನ ಮರ ಹತ್ತಿ ಹಲಸಿನ ಹಣ್ಣು ಕೊಯ್ದಿರುವ ಚಿತ್ರ, ಸುದ್ದಿ ಪ್ರಕಟವಾಗಿತ್ತು. ಹಲಸಿನ ಹಣ್ಣುಗಳನ್ನು ಮಠದ ಗೋಶಾಲೆಯ ಗೋವುಗಳಿಗಾಗಿ ಶ್ರೀಗಳು ಕೊಯ್ದಿದ್ದರು.


ಜಗದೊಡೆಯ ಶ್ರೀಕೃಷ್ಣನ ಪೂಜಾ ಕೈಂಕರ್ಯದಷ್ಟೇ ಶ್ರದ್ಧೆಯಿಂದ ತಮ್ಮ ಮುಂದಿರುವ ಎಲ್ಲ ಕಾರ್ಯಗಳನ್ನೂ ನೆರವೇರಿಸುವ ಶ್ರೀಗಳು, ಅಯೋಧ್ಯಾ ಪ್ರಭು ಶ್ರೀರಾಮಚಂದ್ರನ ಮಂದಿರ ನಿರ್ಮಾಣದ ಹೊಣೆ ಹೊತ್ತ ಅಯೋಧ್ಯಾ ಟ್ರಸ್ಟ್‌ನ ವಿಶ್ವಸ್ತರೂ ಹೌದು. ದೇಶವ್ಯಾಪಿ ಅಪಾರ ಗೌರವ ಪಡೆದಿರುವ ಶ್ರೀಗಳು ಒಂದಿನಿತೂ ಪ್ರತಿಷ್ಠೆ, ದೊಡ್ಡಸ್ತಿಕೆಯ ದೌರ್ಬಲ್ಯಗಳಿಗೆ ಸಿಲುಕದೆ, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಮಠದ ಗೋಶಾಲೆಯ ಗೋವುಗಳಿಗಾಗಿ ಸ್ವತಃ ಮುಂಡಾಸು ಸುತ್ತಿಕೊಂಡು ಹುಲ್ಲು ಕೊಯ್ದು ತರುವಷ್ಟು ಸರಳ ವ್ಯಕ್ತಿತ್ವದವರು. ಶ್ರೀಗಳ ನಡೆ-ನುಡಿಗಳು ಅಪಾರ ಮೆಚ್ಚುಗೆ, ಗೌರವಕ್ಕೆ ಪಾತ್ರವಾಗಿವೆ.

***************

(ರಾಮ್ ನಾರಾಯಣ್ ಕ್ಷಮೆಯಾಚಿಸಿ)

ಮರವನೇರಿ ಹಣ್ಣಕಿತ್ತರೋ 

ಪೇಜಾವರ ಸ್ವಾಮಿ

ಬಾವಿಗಳಿದು ಬೆಕ್ಕ ಹಿಡಿದರೋ


ಹಸುವಿಗಾಗಿ ಮರವನೇರಿ

ಬೆಕ್ಕನುಳಿಸೆ ಬಾವಿಗಿಳಿದು

ಮತ್ತೆ ಮತ್ತೆ ಸುದ್ದಿಯಾದರೋ

ಸಾಹಸಿ ಸ್ವಾಮಿ


ಮೂವತ್ತು ಅಡಿಯ ಹಲಸ ಮರವನೋ.. ಈ ನಮ್ಮ‌ಸ್ವಾಮಿ 

ಏರಿ ಮೂರು ದಿನವು ಕಳೆಯಿತು


ನಲವತ್ತು ಅಡಿಯ ಬಾವಿಯಾಳಕೆ... ಈ ನಮ್ಮ‌ ಸ್ವಾಮಿ

ಭಾನುವಾರ ಸಂಜೆ ಇಳಿದರೋ


ಮೂವತ್ತಡಿಯ ಮರವನೇರಿ

ನಲವತ್ತಡಿಯ ಬಾವಿಗಳಿದು 

ಜೀವದಯೆಯನೆತ್ತಿ ಹಿಡಿದರೋ 

ಈ ಯತಿವರ  ನಾಡಜನರ ಗಮನಸೆಳೆದರೋ ..

ಮರವನೇರಿ...


ಅಕ್ಷರ: ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top