ಮೋದಿ@9: ರಾಜ್ಯ ಬಿಜೆಪಿಯಿಂದ ಜುಲೈ 30ರ ವರೆಗೆ ಮನೆ ಮನೆ ತಲುಪುವ ವಿಶೇಷ ಅಭಿಯಾನ

Upayuktha
0

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಸರಕಾರ ಅಧಿಕಾರಕ್ಕೆ ಬಂದು 9 ವರ್ಷಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸರಕಾರದ ಜನೋಪಯೋಗಿ ಯೋಜನೆಗಳು ಮತ್ತು ಸಾಧನೆಗಳನ್ನು ಜನತೆಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಬಿಜೆಪಿ ಪ್ರಮುಖ ನಾಯಕರು ಮತ್ತು ಪದಾಧಿಕಾರಿಗಳನ್ನು ಒಳಗೊಂಡ 7 ತಂಡಗಳನ್ನು ರಚಿಸಿದ್ದು, ಈ ತಂಡಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಜನಸಂಪರ್ಕ ನಡೆಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು.


ಬಿಜೆಪಿ ಸರಕಾರದ 9 ವರ್ಷದ ಸಾಧನೆಗಳನ್ನು ಮನೆ ಮನೆಗೆ ಮುಟ್ಟಿಸುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ನಿರಂತರವಾಗಿ ಮೋದಿ @9 ಹೆಸರಿನಲ್ಲಿ ವಿವಿಧ ಕಾರ್ಯಕ್ರಮವನ್ನು ದೇಶದ ಉದ್ದಗಲಕ್ಕೆ ಹಮ್ಮಿಕೊಳ್ಳಲಾಗಿದೆ. ದೇಶಾದ್ಯಂತ ಜೂನ್ 30ರ ವರೆಗೆ ನಡೆಯುವ ಈ ಅಭಿಯಾನವನ್ನು ಕರ್ನಾಟಕದಲ್ಲಿ ಜುಲೈ 30ರ ವರೆಗೆ ವಿಸ್ತರಿಸಲಾಗಿದೆ ಎಂದು ಸಿ.ಟಿ. ರವಿ ತಿಳಿಸಿದರು.

ದ.ಕ ಜಿಲ್ಲಾ ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರ ಪುನಶ್ಚೇತನ ಸಭೆಗಾಗಿ ಆಗಮಿಸಿದ್ದ ಅವರು, ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಪಕ್ಷದ ನಾಯಕರಿಂದ 7 ತಂಡಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ನಡೆಸಲಾಗುತ್ತಿದೆ. ಅದರ ಭಾಗವಾಗಿ ಇಂದು ನಾನು, ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಎಂಎಲ್‌ಸಿ ಕೇಶವ ಪ್ರಸಾದ್ ಅವರನ್ನೊಳಗೊಂಡ ತಂಡ ಮಂಗಳೂರಿಗೆ ಭೇಟಿ ನೀಡಿದ್ದೇವೆ. ದಕ್ಷಿಣ ಕನ್ನಡ, ಉಡುಪಿ, ನಾಳೆ ಹೊನ್ನಾವರ, ಯಲ್ಲಾಪುರ, ಮುಂತಾದ ಕಡೆಗಳಿಗೆ ಪ್ರವಾಸ ಮಾಡುತ್ತಿದ್ದೇವೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದ್ದು:


* 2014ರ ಪೂರ್ವದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿದಾಗ ಮಾತ್ರ ಮೋದಿ ಅವರ ಅವಧಿಯಲ್ಲಿ ಆದ ಸಾಧನೆಗಳು, ಬದಲಾವಣೆಗಳು ಅತ್ಯಂತ ಸ್ಪಷ್ಟವಾಗಿ ನಮಗೆ ಗೋಚರವಾಗುತ್ತವೆ.


* 2004ರಿಂದ 14ರ ವರೆಗೆ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿ ಯುಪಿಎ ಸರಕಾರ ಆಡಳಿತದಲ್ಲಿತ್ತು. ಆದರೆ ಆಆ ಹತ್ತು ವರ್ಷಗಳಲ್ಲಿ ನಮಗೆ ಪ್ರತಿನಿತ್ಯ ಬರೀ ಹಗರಣಗಳದ್ದೇ ಸುದ್ದಿಗಳು ಕೇಳಿಬರುತ್ತಿದ್ದವು. ಮೋದಿಯವರ ಕಾಲಘಟ್ಟದ 9 ವರ್ಷಗಳಲ್ಲಿ ಹಗರಣಗಳು ಸುದ್ದಿಯಾಗಲಿಲ್ಲ. ಬದಲು ಯೋಜನೆಗಳು ಸುದ್ದಿಯಾಗುತ್ತಿವೆ. ಕಾಂಗ್ರೆಸ್ ಅವಧಿಯಲ್ಲಿ Scam ವರ್ಸಸ್ ಮೋದಿ ಅವರ ಅವಧಿಯಲ್ಲಿ Scheme ಗಳು ಸುದ್ದಿಯಾಗುತ್ತಿವೆ. ಇದೇ ವ್ಯತ್ಯಾಸ. ಹಗರಣಗಳಿಗಾಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಸುದ್ದಿಯಾದರೆ, ಯೋಜನೆ ಮತ್ತು ಅದರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಮೋದಿ ಸರಕಾರ ಸುದ್ದಿಯಾಗುತ್ತಿದೆ. Reform- Perform ಮತ್ತು Transform ನೆಲೆಗಟ್ಟಿನಲ್ಲಿ ಹಲವು ಕ್ಷೇತ್ರಗಳಲ್ಲಿ ಸುಧಾರಣೆಗಳಾಗಿವೆ.


* ತೆರಿಗೆ ವಲಯದಲ್ಲಿ ಜಿಎಸ್‌ಟಿ ಅನುಷ್ಠಾನದಿಂದ ಸುಧಾರಣೆಯಾಯಿತು. ಅದಕ್ಕೂ ಮೊದಲು 17 ಬಗೆಯ ವಿವಿಧ ತೆರಿಗೆಗಳು ಮತ್ತು ಸೆಸ್‌ಗಳು ಸೇರಿ 30ಕ್ಕೂ ಹೆಚ್ಚು ಬಗೆಯ ತೆರಿಗೆಗಳಿಂದ ಆರ್ಥಿಕ ಅಭಿವೃದ್ಧಿಗೆ ಹೊರೆಯಾಗಿ ಪರಿಣಮಿಸಿದ್ದವು. ಆದರೆ ಈಗ ಇಡೀ ದೇಶಕ್ಕೆ ಒಂದೇ ತೆರಿಗೆ- ಜಿಎಸ್‌ಟಿ ಮೂಲಕ ಜಾರಿಗೆ ಬಂದಿದೆ. ಹೀಗೆ ತೆರಿಗೆ ಕ್ಷೇತ್ರದಲ್ಲಿ ಸುಧಾರಣೆ ಆಯಿತು. ಜಿಎಸ್‌ಟಿ ತೆರಿಗೆ ಸಂಗ್ರಹ ಕೂಡ ಒಂದು ಹೊಸ ದಾಖಲೆಯನ್ನೇ ಸೃಷ್ಟಿಸಿತು. ಒಂದೇ ತಿಂಗಳಲ್ಲಿ 1 ಲಕ್ಷದ 86 ಸಾವಿರ ಕೋಟಿ ರೂ ತೆರಿಗೆ ಸಂಗ್ರಹಣೆ ಆಯಿತು. ಆ ಮೂಲಕ ಸರಕಾರದ ಬೊಕ್ಕಸಕ್ಕೆ ಅತಿ ಹೆಚ್ಚಿನ ಆದಾಯ ಹರಿದು ಬಂತು.


* ಇನ್‌ಸಾಲ್ವೆನ್ಸಿ ಅಂಡ್‌ ಬ್ಯಾಂಕ್‌ರಪ್ಟ್‌ಸಿ ಕೋಡ್‌ ಬಂದಿರುವುದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ಸಾಧ್ಯವಾಯಿತು. ಈ ಕೋಡ್ ಬರುವ ಮುಂಚೆ ಕ್ರೋನಿ ಕ್ಯಾಪಿಟಲಿಸ್ಟ್‌ಗಳು ಸಾಲ ತೆಗೆದುಕೊಂಡು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ವಂಚನೆ ಮಾಡುತ್ತಿದ್ದರು. ಈ ಕೋಡ್ ಜಾರಿಗೆ ಬಂದ ನಂತರ ಇಂತಹ ವಂಚನೆಗಳೆಲ್ಲ ಕೊನೆಯಾದವು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ದೊಡ್ಡ ಸುಧಾರಣೆ ತರಲು ಸಾಧ್ಯವಾಯಿತು.


* ಒನ್ ನೇಶನ್ ಒನ್ ರೇಶನ್ ಯೋಜನೆಯಡಿ ಇಡೀ ದೇಶಕ್ಕೆ ಒಂದೇ ಪಡಿತರ ಚೀಟಿ ವ್ಯವಸ್ಥೆ ಜಾರಿಗೊಳಿಸಲಾಯಿತು. ಇದರಿಂದಾಗಿ ಜನತೆ ಯಾವ ರಾಜ್ಯದಲ್ಲಿ ಯಾವ ಜಿಲ್ಲೆಯಲ್ಲಿ ಪಡಿತರ ಚೀಟಿ ಪಡೆದುಕೊಂಡರೂ ಅದು ಇಡೀ ದೇಶದಲ್ಲಿ ಎಲ್ಲಿ ಬೇಕಾದರೂ ಮಾನ್ಯತೆ ಪಡೆಯುವಂತಾಯಿತು. ಇದು ಪಡಿತರ ಕ್ಷೇತ್ರದ ಸುಧಾರಣೆಗೆ ನಾಂದಿ ಹಾಡಿತು.


* 1952ರಲ್ಲಿ ನಮ್ಮ ಮೊದಲ ರಾಷ್ಟ್ರೀಯ ಅಧ್ಯಕ್ಷರು ಏಕ್‌ ದೇಶ್ ಮೇಲೆ ದೋ ವಿಧಾನ್, ದೋ ನಿಶಾನ್ ನಹೀ ಚಲೇಗಾ ಎಂದು ದೊಡ್ಡ ಹೋರಾಟವನ್ನೇ ಮಾಡಿದ್ದರು. ಆ ಹೋರಾಟಕ್ಕೆ ನ್ಯಾಯ ಒದಗಿಸುವ ಕೆಲಸವನ್ನು ಪ್ರಧಾನಿ ಮೋದಿ ನೇತೃತ್ವದ ಸರಕಾರ ಆರ್ಟಿಕಲ್ 370 ರದ್ದುಪಡಿಸುವ ಮೂಲಕ ಮಾಡಿತು, ಕ್ರಾಂತಿಕಾರಿ ಸುಧಾರಣೆ ತಂದಿತು.


* ಇದಲ್ಲದೆ ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ರೇರಾ ಕಾಯ್ದೆ ಜಾರಿಗೆ ತರುವ ಮೂಲಕ, ಇದರ ಜತೆ ಜತೆಗೇ ಡಿಬಿಟಿ- ಡೈರೆಕ್ಟ್‌ ಬೆನಿಫಿಟ್ ಟ್ರಾನ್ಸ್‌ಫರ್‍‌ ಮೂಲಕ- ಎಲ್ಲ ಯೋಜನೆಗಳನ್ನು ಆನ್‌ಲೈನ್ ಸಿಸ್ಟಂಗೆ ತರುವುದರ ಮೂಲಕ ಮಧ್ಯವರ್ತಿಗಳು ಲೂಟಿ ಮಾಡುತ್ತಿದ್ದ ಹಣವನ್ನು ಉಳಿಸಲು ಮತ್ತು ಎಲ್ಲ ಮೊತ್ತವನ್ನು ಫಲಾನುಭವಿಗಳೇ ನೇರವಾಗಿ ಸಂದಾಯ ಮಾಡಲು ಸಾಧ್ಯವಾಯಿತು.


* 1986ರಲ್ಲಿ ರಾಜೀವ್ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದರು. ಆಗ ಅವರೇ ಹೇಳಿದಂತೆ ಯಾವುದೇ ಯೋಜನೆಯಲ್ಲಿ ಬಿಡುಗಡೆಯಾದ ಹಣದಲ್ಲಿ ನೂರು  ರೂಪಾಯಿಗೆ 15 ರೂಪಾಯಿ ಮಾತ್ರ ಕಟ್ಟಕಡೆಯ ಫಲಾನುಭವಿಗೆ ತಲುಪುತ್ತಿತ್ತು. 


* ಆ ಅವಧಿಯಲ್ಲಿ ದೇಶದ ಉದ್ದಗಲಕ್ಕೆ ಅಧಿಕಾರದಲ್ಲಿದ್ದು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್‌ ಸರಕಾರಗಳು ಮಾತ್ರ. ಜನರಿಗೆ ತಲುಪಬೇಕಾದ ಹಣವನ್ನು ನಡುವೆ ನುಂಗುತ್ತಿದ್ದ ಕಳ್ಳರು ಯಾರು ಎಂಬುದನ್ನು ಅವರು ಹುಡುಕಲಿಲ್ಲ. ಕಳ್ಳತನವನ್ನು ನಿಯಂತ್ರಿಸುವ ಕೆಲಸವನ್ನೂ ಮಾಡಲಿಲ್ಲ. ಆದರೆ ಇಂದು ನಾವು ಧೈರ್ಯದಿಂದ ಹೇಳಬಹುದು, ಕೇಂದ್ರದಿಂದ ಇದುವರೆಗೂ 30 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಮೊತ್ತವನ್ನು ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಡಿಬಿಟಿ ಮೂಲಕ ನೇರವಾಗಿ ತಲುಪಿಸಲಾಗಿದೆ. ಇದರಲ್ಲಿ ಒಂದು ಪೈಸೆಯೂ ಮಧ್ಯವರ್ತಿಗಳಿಗೆ ಹೋಗಲಿಲ್ಲ. ಕೇವಲ ಒಂದು ಬಟನ್ ಒತ್ತುವುದರ ಮೂಲಕ ಕೋಟ್ಯಂತರ ರೈತರ ಖಾತೆಗಳಿಗೆ ನೇರ ಜಮೆ ಆಯಿತು. ವಿವಿಧ ವೇತನಗಳು ನೇರವಾಗಿ ಜಮಾ ಆಗುತ್ತಿವೆ. ಇಂತಹದೊಂದು ಕ್ರಾಂತಿಕಾರಿ ಬದಲಾವಣೆಯನ್ನು ಡಿಬಿಟಿ ಮೂಲಕ ಬಿಜೆಪಿ ಸರಕಾರ ಮಾಡಿದೆ.


* ಇನ್ನು ಪರ್‍‌ಫಾರ್‍ಮೆನ್ಸ್‌ ಬಗ್ಗೆ ಹೇಳುವುದಾದರೆ- ಎಲ್ಲ ಕ್ಷೇತ್ರಗಳಲ್ಲೂ ಸಧನೆ ಆಗಿರುವುದನ್ನು ಗಮನಿಸಬಹುದು. ಶೌಚಾಲಯ ನಿರ್ಮಾಣದಲ್ಲಿ ಒಂದು ಕ್ರಾಂತಿಯಾಯಿತು. 12 ಕೋಟಿ ಶೌಚಾಲಯಗಳು ನಿರ್ಮಾಣವಾದವು. 11 ಕೋಟಿಗೂ ಹೆಚ್ಚು ಬಡವರಿಗೆ ಗ್ಯಾನ್‌ ಸಂಪರ್ಕಗಳನ್ನು ಕೊಡಲಾಯಿತು. ದೇಶದಲ್ಲಿ ಮೋದಿಯವರು ಆಡಳಿತಕ್ಕೆ ಬರುವುದಕ್ಕೆ ಮೊದಲು 74 ಏರ್‍‌ಪೋರ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದವು. ಇಂದು 149 ಏರ್‍‌ಪೋರ್ಟ್‌ಗಳು ಕಾರ್ಯನಿರ್ವಹಿಸುತ್ತಿವೆ. ಕಳದ 9 ವರ್ಷಗಳಲ್ಲಿ 75 ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾದವು. ಅವುಗಳು ಈಗ ಕಾರ್ಯ ನಿರ್ವಹಿಸುತ್ತಿವೆ. ಇಡೀ ದೇಶದಲ್ಲಿ 2014ರ ಮೊದಲು 7 ಐಐಟಿಗಳು ಇದ್ದರೆ, ನಂತರದ 9 ವರ್ಷಗಳಲ್ಲಿ ಮತ್ತೆ 7 ಐಐಟಿಗಳು ಹೊಸದಾಗಿ ಸ್ಥಾಪನೆಯಾದವು. ಈಗ ಒಟ್ಟು 14 ಐಐಟಿಗಳು ಕಾರ್ಯನಿರ್ವಹಿಸುತ್ತಿವೆ. ಐಐಎಂಗಳು ಕೂಡ ಅಷ್ಟೆ. ಮುಂಚೆ ಇದ್ದ ಐಐಎಂಗಳ ಸಂಖ್ಯೆ 7 ಆಗಿತ್ತು. ಮೋದಿ ಸರಕಾರ ಬಂದ ನಂತರ ಮತ್ತೆ 7 ಐಐಎಂಗಳು ಸ್ಥಾಪನೆಯಾಗಿ ಈಗ ಒಟ್ಟು 14 ಐಐಎಂಗಳು ಕಾರ್ಯನಿರ್ವಹಿಸುತ್ತಿವೆ.


* ಇದರ ಜತೆ ಜತೆಗೆ, ಹಿಂದೆ ಇದ್ದಿದ್ದು 8 ಏಮ್ಸ್‌ (AIIMS) ಗಳಾದರೆ, ಈಗ 23 ಏಮ್ಸ್‌ಗಳು ಕಾರ್ಯನಿರ್ವಹಿಸುತ್ತಿವೆ. 15 ಹೊಸ ಏಮ್ಸ್‌ಗಳು ಮೋದಿ ಸರಕಾರದ ಅವಧಿಯಲ್ಲಿ ಸ್ಥಾಪನೆಯಾಗಿವೆ. 225 ಮೆಡಿಕಲ್ ಕಾಲೇಜುಗಳು ಈ 9 ವರ್ಷಗಳಲ್ಲಿ ಸ್ಥಾಪನೆಯಾಗಿವೆ.  190 ಹೊಸ ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ.


* ಇವೆಲ್ಲದರ ಜತೆಗೆ ಇಂಡಸ್ಟ್ರಿಯಲ್ ಕಾರಿಡಾರ್‍‌, ಡಿಫೆನ್ಸ್ ಕಾರಿಡಾರ್‍‌, ಸಾಗರ್‍‌ಮಾಲಾ, ಭಾರತ್‌ಮಾಲಾ, ರೈಲ್ವೇ ಯೋಜನೆಗಳಲ್ಲಿ ಕ್ರಾಂತಿ, ಹಳಿಗಳ ದ್ವಿಗುಣ ಕಾರ್ಯ,  ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗಳ ಪ್ರಾರಂಭ, ಗತಿಶಕ್ತಿ- ಹೀಗೆ ಮೂಲ ಸೌಕರ್ಯಗಳ ಅಭಿವೃದ್ಧಿಗೆ 3 ಲಕ್ಷ ಕೋಟಿ ರೂ.ಗಳ ಹೂಡಿಕೆ ಮಾಡಲಾಗಿದೆ.  



* ಜಾಗತಿಕವಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರಸ್ತುತ ಜಿಡಿಪಿ ಸೂಚ್ಯಂಕ ಋಣಾತ್ಮಕ (ಮೈನಸ್) ಆಗಿದ್ದರೆ, ಭಾರತದ ಜಿಡಿಪಿ ಮಾತ್ರ 7.2 ಇದೆ. ಕೋವಿಡ್‌ ನಂತರ ಭಾರತ ಹೊರತುಪಡಿಸಿ ಬೇರೆ ಯಾವುದೇ ದೇಶ ಈ ಪ್ರಮಾಣದ ಜಿಡಿಪಿ ದಾಖಲಿಸಿಲ್ಲ. ಕೋವಿಡ್ ಮತ್ತು ಉಕ್ರೇನ್‌-ರಷ್ಯಾ ಯುದ್ಧದ ನಡುವೆಯೂ ಭಾರತದ ಜಿಡಿಪಿ ಮಾತ್ರ ಉತ್ತಮ ರೀತಿಯಲ್ಲಿ ಬೆಳವಣಿಗೆ ಕಾಣುತ್ತಿದೆ. ಇದಕ್ಕೆ ಕಾರಣ ಸಕಾಲಿಕವಾದ ಮತ್ತು ಸಮರ್ಪಕವಾಗಿ ನೀತಿ ನಿರೂಪಣೆ ಮತ್ತು ಆಡಳಿತಾತ್ಮಕ ಧೋರಣೆಗಳು.


* ಈ ನಿಟ್ಟನಲ್ಲಿ ಭಾರತ 7.2ರ ಜಿಡಿಪಿಯೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಎರಡನೇ ಸ್ಥಾನದಲ್ಲಿ ಇಂಡೋನೇಷ್ಯಾ ಇದೆ. ನಂತರದ ಸ್ಥಾನಗಳು ಚೀನಾ, ಅಮೆರಿಕ, ಇಂಗ್ಲೆಂಡ್‌ನಂತಹ ದೇಶಗಳಿಗೆ ದಕ್ಕಿದೆ. ಭಾರತದ ಜಿಡಿಪಿ ದರಕ್ಕಿಂತ ಇವುಗಳು ಬಹು ದೂರದಲ್ಲಿವೆ. 


* ಈಸ್‌ ಆಫ್‌ ಡೂಯಿಂಗ್ ಬಿಸಿನೆಸ್‌ (ಸುಲಲಿತ ವ್ಯವಹಾರ) ನಲ್ಲಿ 145ನೇ ರ್‍ಯಾಂಕಿಂಗ್ ನಲ್ಲಿದ್ದ ಭಾರತ ಈಗ 63ನೇ ರ್‍ಯಾಂಕಿಂಗ್‌ಗೆ ಬಂದಿದೆ. ಭಾರತವೀಗ ಜಗತ್ತಿನ 5ನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮಿದೆ.  ಮೊದಲು 13ನೇ ಅತಿದೊಡ್ಡ ಅರ್ಥವ್ಯವಸ್ಥೆ ಎಂಬ ಸ್ಥಾನವಿತ್ತು. ಸರಕಾರದ ಸಮರ್‍ಥ ನಿರ್ವಹಣೆಯಿಂದಾಗಿ ಭಾರತ ಇನ್ನು ಎರಡು ವರ್ಷಗಳಲ್ಲಿ ಜರ್ಮನಿ ಮತ್ತು ಜಪಾನ್ ಅನ್ನು ಹಿಂದಿಕ್ಕಿ ಜಗತ್ತಿನ 3ನೇ ಅತಿದೊಡ್ಡ ಅರ್ಥ ವ್ಯವಸ್ಥೆಯಾಗಿ ಹೊರಹೊಮ್ಮಲಿದೆ ಎಂದು ಜಾಗತಿಕ ಆರ್ಥಿಕ ತಜ್ಞರು ಹೇಳುತ್ತಾರೆ.


* ಇವೆಲ್ಲವೂ ಪ್ರಗತಿಯಲ್ಲಿ ಆಗಿರುವಂತಹ ಅನುಭವಕ್ಕೆ ದಕ್ಕುವ ಸಂಗತಿಗಳು. ಇವೆಲ್ಲದರ ಜತೆಗೆ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಹೆಚ್ಚಾಗಿದೆ. ಪ್ರಧಾನಿ ನರೇಂದ್ರ ಮೋದಿಯವನ್ನು ಜಗತ್ತು ಕೊಂಡಾಡುವುದರ ಮೂಲಕ ಅದು ವ್ಯಕ್ತವಾಗುತ್ತಿದೆ. 'ಮೋದಿ ಈಸ್ ದ ಬಾಸ್' ಎಂಬ ಆಸ್ಟ್ರೇಲಿಯನ್ ಪ್ರಧಾನಿಯವರ ಹೇಳಿಕೆ, ನಾನು ಮೋದಿಯವರ ಅಭಿಮಾನಿ ಎಂಬ ಜಗತ್ತಿನ ಅತಿ ದೊಡ್ಡ ಶ್ರೀಮಂತ ಎಲಾನ್ ಮಸ್ಕ್‌ ಹೇಳಿಕೆ, ಅಮೆರಿಕದ ಅಧ್ಯಕ್ಷರೇ ನಿಮ್ಮದೊಂದು ಆಟೋಗ್ರಾಫ್ ಬೇಕು ಎಂದು ಕೇಳುವಷ್ಟರ ಮಟ್ಟಿಗೆ ನಮ್ಮ ಪ್ರಧಾನಿ ಜನಪ್ರಿಯರಾಗಿದ್ದಾರೆ, ಜಗತ್ತಿನ ಗೌರವಕ್ಕೆ ಪಾತ್ರರಾಗಿದ್ದಾರೆ. 


* ಮೋದಿಯವರು ಜಾಗತಿಕ ನಾಯಕರಾಗಿ ಹೊರಹೊಮ್ಮಿರುವುದು ಭಾರತಕ್ಕೆ ಸಂದ ಗೌರವ. ಭಾರತೀಯರಿಗೆ ಸಂದ ಗೌರವ. ವಿಶ್ವ ಯೋಗ ದಿನದ ಮೂಲಕ ಜಗತ್ತಿಗೆ ಭಾರತದ ಪ್ರಾಚೀನ ಪರಂಪರೆಯನ್ನು ಪರಿಚಯಿಸಿದಂತಹ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. 


* ಭಾರತ ದೇಶದ ಒಳಗೆ ಮತ್ತು ಹೊರಗೆ ತನ್ನ ಅಭಿವೃದ್ಧಿಯನ್ನು ಮತ್ತು ವೇಗವನ್ನು ಪ್ರದರ್ಶಿಸಿದ ಬಗೆಯಿಂದ ಇದೆಲ್ಲ ಸಾಧ್ಯವಾಯಿತು. ಒಂದು ಕಾಲದಲ್ಲಿ ಶೇ 99ರಷ್ಟು ಸ್ಮಾರ್ಟ್ ಫೋನ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ ಇಂದು ಶೇ 99ರಷ್ಟು ಸ್ಮಾರ್ಟ್ ಫೋನ್‌ಗಳನ್ನು ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಭಾರತದಲ್ಲೇ ನಿರ್ಮಿಸಲಾಗುತ್ತಿದೆ. ಅಲ್ಲದೆ 2022-23ನೇ ಸಾಲಿನಲ್ಲಿ  ಸುಮಾರು 45,000 ಕೋಟಿ ರೂಪಾಯಿಗಳ ಸ್ಮಾರ್ಟ್ ಫೋನ್ ರಫ್ತು ಕೂಡ ಮಾಡಲಾಗಿದೆ ಎಂಬುದು ಹೆಮ್ಮೆಯ ಸಂಗತಿ. 


* ಅಭಿವೃದ್ಧಿ ಯೋಜನೆಗಳ ಲಾಭಗಳೆಲ್ಲವೂ ಬಡವರಿಗೆ ವರ್ಗಾವಣೆಯಾಗಿದೆ. ಅಂಬಾನಿ, ಅದಾನಿ ಪರವಾಗಿ ಬಿಜೆಪಿ ಸರಕಾರ ಕೆಲಸ ಮಾಡುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. ಅವರೆಲ್ಲರೂ ರಾತೋರಾತ್ರಿ ಉದ್ಯಮಿಗಳಾಗಿ ಬೆಳೆದವರಲ್ಲ. ಬಿಜೆಪಿ ಸರಕಾರ ಬರುವುದಕ್ಕೆ ಮೊದಲು ಅವರೇನೂ ಬಿಪಿಎಲ್ ಕಾರ್ಡ್‌ದಾರರಾಗಿ ಇದ್ದವರಲ್ಲ ಎಂಬುದನ್ನು ಆರೋಪ ಮಾಡುವವರು ಗಮನಿಸಬೇಕು. ಮೋದಿಯವರು ಅಧಿಕಾರಕ್ಕೆ ಬಂದ ನಂತರ ಅವರೆಲ್ಲ ಶ್ರೀಮಂತರಾದರು ಎಂಬ ಭಾವನೆಯನ್ನು ಜನರ ಮುಂದೆ ಬಿಂಬಿಸುತ್ತಿದ್ದಾರೆ.  ನಮ್ಮ ಯಾವುದೇ ಯೋಜನೆಗಳು ಅದಾನಿ, ಅಂಬಾನಿಗಳಿಗೆ ಸಹಾಐ ಮಾಡಿದ ಯೋಜನೆಗಳಲ್ಲ. ಜನ್‌ಧನ್‌ ಖಾತೆಗಳ ಮೂಲಕ 45 ಕೋಟಿ ಜನರನ್ನು ಬ್ಯಾಂಕಿಂಗ್ ಸೌಲಭ್ಯದ ಜತೆ ಜೋಡಿಸಿದ್ದು, ಕಿಸಾನ್‌ ಸಮ್ಮಾನ್ ಯೋಜನೆಯ ಮೂಲಕ 11.5 ಕೋಟಿ ರೈತರಿಗೆ ಪ್ರತಿ 3 ತಿಂಗಳಿಗೊಮ್ಮೆ 2 ಸಾವಿರ ರೂ.ಗಳ ನೇರ ಧನ ಸಹಾಯ ಮಾಡುತ್ತಿರುವುದು, 85 ಕೋಟಿ ಬಡವರಿಗೆ ಗರೀಬಿ ಕಲ್ಯಾಣ್ ಯೋಜನೆಯ ಮೂಲಕ ಉಚಿತವಾಗಿ ರೇಶನ್ ಅನ್ನು ಭಾರತ ಸರಕಾರ ಕೊಡುತ್ತಿದೆ. ಕೋವಿಡ್ ಸಂದರ್ಭ ಪ್ರತಿ ತಿಂಗಳೂ 10 ಕೆ.ಜಿ ಆಹಾರ ಧಾನ್ಯ ನೀಡಲಾಗುತ್ತಿದ್ದರೆ, ಪ್ರಸ್ತುತ 5 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುತ್ತಿದೆ.


* ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಗಾಗಿ ಆತ್ಮನಿರ್ಭರ ಯೋಜನೆಯಡಿ ವೇಗ ನೀಡುವಂತಹ ಕೆಲಸಗಳು ನಡೆಯುತ್ತಿವೆ. ಇದೆಲ್ಲವೂ ಗಮನಿಸಬೇಕಾದ ಸಂಗತಿಗಳು. ಇವೆಲ್ಲದರ ಲಾಭ ಕಟ್ಟಕಡೆಯ ಬಡವನಿಗೆ ವರ್ಗಾವಣೆಯಾಗಿವೆ.


* ಕೋವಿಡ್ ನಿಯಂತ್ರಣಕ್ಕೆ ಭಾರತದಲ್ಲೇ ತಯಾರಿಸಿ ಲಸಿಕೆ ಸುಮಾರು 225 ಕೋಟಿ ಡೋಸ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಜಗತ್ತಿನ ಯಾವುದೇ ರಾಷ್ಟ್ರ ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆಯ ಉತ್ಪಾದನೆ ಮತ್ತು ಉಚಿತ ವಿತರಣೆ ಮಾಡಿಲ್ಲ. ಆದರೆ ಭಾರತ ಈ ಸಾಧನೆ ಮಾಡುವುದರ ಜತೆಗೆ ಇತರ ದೇಶಗಳಿಗೂ ಲಸಿಕೆ ವಿತರಣೆ ಮಾಡಿತು. ಆ ಮೂಲಕ ವಿಶ್ವವೇ ಒಂದು ಕುಟುಂಬ ಎಂಬ ಸಂದೇಶವನ್ನು ಭಾರತ ಸಾರಿತು. ಈ ಮೂಲಕವಾಗಿ ಭಾರತ ಇಂದು ಜಾಗತಿಕ ನಾಯಕನಾಗಿದೆ. 

ಇವೆಲ್ಲದರ ಪರಿಣಾಮವಾಗಿ ಭಾರತಕ್ಕೆ ಈಗ ಜಿ20 ಅಧ್ಯಕ್ಷತೆ ಕೂಡ ಲಭಿಸಿದ್ದು, ಅದನ್ನು ಸಮರ್ಥವಾಗಿ ನಿರ್ವಹಿಸಲಾಗುತ್ತಿದೆ.  


* ಪ್ರಧಾನಿ ಮೋದಿ ಅವರು ಪ್ರಸ್ತುತ ಅಮೆರಿಕ ಪ್ರವಾಸದಲ್ಲಿದ್ದು, ಬಹುಶಃ ಜಗತ್ತಿನಲ್ಲೇ ಮೊದಲ ಬಾರಿಗೆ ಒಂದು ದೇಶದ ಪ್ರಧಾನಿಗೆ ಎರಡನೇ ಬಾರಿ ತನ್ನ ಸಂಸತ್ತಿನಲ್ಲಿ ಅತಿಥಿಯಾಗಿ ಭಾಷಣ ಮಾಡಲು ಅಮೆರಿಕ ಆಹ್ವಾನಿಸಿದೆ.


* ವಿಪಕ್ಷಗಳು ಈ ಎಲ್ಲ ಸಾಧನೆಗಳನ್ನು ಕಂಡು ತಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುವ ಸನ್ನಿವೇಶ ಎದುರಾಗಿರುವುದನ್ನು ಮನಗಂಡು ಲೋಕತಂತ್ರ ಅಪಾಯದಲ್ಲಿದೆ ಎಂದು ಹುಯಿಲೆಬ್ಬಿಸುತ್ತಿವೆ. ವಾಸ್ತವದಲ್ಲಿ ಅಪಾಯದಲ್ಲಿರುವುದು ಪ್ರಜಾಪ್ರಭುತ್ವವಲ್ಲ; ಪರಿವಾರವಾದಿಗಳ ಸ್ವಾರ್ಥ ಕುಟುಂಬ ರಾಜಕಾರಣಕ್ಕೆ ಅಪಾಯ ಉಂಟಾಗಿದೆ. ಲೋಕತಂತ್ರಕ್ಕೆ ಬಲ ಬಂದಿದ್ದೇ ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ. ಪ್ರಜಾಪ್ರಭುತ್ವದ ಆಶಯಗಳಿಗೆ ಬಲ ಬಂದಿದೆ. ವಂಶ ರಾಜಕಾರಣ ಮಾಡುವವರು ಆತಂಕಕ್ಕೆ ಒಳಗಾಗಿದ್ದಾರೆ. ಪ್ರಧಾನಿ ಮೋದಿ ಅವರ ಪ್ರಜಾತಂತ್ರದ ಕಲ್ಪನೆ ಗಟ್ಟಿಯಾದಷ್ಟೂ ವಂಶವಾದಿ ರಾಜಕಾರಣಿಗಳು ದುರ್ಬಲರಾಗುತ್ತಿದ್ದಾರೆ. 


* ಸ್ಕ್ಯಾಮ್‌ ಮತ್ತು ಸ್ಕೀಮ್‌ ನಡುವಣ ಹೋರಾಟವಿದು. ಕಾಂಗ್ರೆಸ್, ಆರ್‍‌ಜೆಡಿ ಮತ್ತು ಇತರ ಪಕ್ಷಗಳು ಸ್ಕ್ಯಾಮ್ ಅನ್ನು ಪ್ರತಿನಿಧಿಸಿದರೆ. ಬಿಜೆಪಿ ಸ್ಕೀಮ್‌ ಅನ್ನು ಪ್ರತಿನಿಧಿಸುತ್ತದೆ. ವಂಶವಾದವನ್ನು ಅನ್ಯ ಪಕ್ಷಗಳು ಪ್ರತಿನಿಧಿಸಿದರೆ, ರಾಷ್ಟ್ರವಾದವನ್ನು ಭಾರತೀಯ ಜನತಾ ಪಕ್ಷ ಪ್ರತಿನಿಧಿಸುತ್ತದೆ. 


* ಈ 9 ವರ್ಷಗಳಲ್ಲಿ ಅಭಿವೃದ್ಧಿ ಮತ್ತು ಸಾಧನೆಗಳು ಜನರಿಗೆ ಅನುಭವವೇದ್ಯವಾಗಿವೆ. ಭಾರತಕ್ಕೆ ಜಾಗತಿಕ ಮನ್ನಣೆ ಸಿಗುತ್ತಿದೆ. ಭಾರತದ ಪಾಸ್‌ಪೋರ್ಟ್‌ಗಳಿಗೆ ಹೆಚ್ಚಿನ ಗೌರವ ಪ್ರಾಪ್ತವಾಗುತ್ತಿದೆ. ಭಾರತದಲ್ಲಿರುವ ಬಡವರಿಗೆ ಬಲ ತುಂಬುವ ಕೆಲಸವನ್ನು ಮೋದಿ ಅವರ ನೇತೃತ್ವದ ಬಿಜೆಪಿ ಸರಕಾರ ಮಾಡುತ್ತಿದೆ.


* ಈ ಎಲ್ಲ ಸಾಧನೆಗಳನ್ನು ದೇಶದ ಉದ್ದಗಲಕ್ಕೂ ಮನೆ ಮನೆಗಳಿಗೆ ಮುಟ್ಟಿಸುವ ಕೆಲಸವನ್ನು ಬಿಜೆಪಿ ಜೂನ್ 30ರ ವರೆಗೂ ಅಭಿಯಾನದ ರೂಪದಲ್ಲಿ ಮಾಡುತ್ತದೆ. ಕರ್ನಾಟಕದಲ್ಲಿ ಈ ಅಭಿಯಾನವನ್ನು ಜುಲೈ 30ರ ವರೆಗೂ ವಿಸ್ತರಿಸುತ್ತೇವೆ. ಇದರ ಅಂಗವಾಗಿ ಕರೆಯಲಾದ ಬೂತ್ ಮಟ್ಟದ ಕಾರ್ಯಕರ್ತರ ಸಭೆಗೆ ನಾವೆಲ್ಲರೂ ಬಂದಿದ್ದೇವೆ.

*******

ಪತ್ರಿಕಾಗೋಷ್ಠಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ, ಅರಗ ಜ್ಞಾನೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಎಂಎಲ್‌ಸಿ ಕೇಶವ ಪ್ರಸಾದ್,  ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top