ಗ್ಯಾರಂಟಿ ಕಾರ್ಡ್ ಹಿಡಿದು ಮಾಯಾ ಯುದ್ಧ ನಡೆಸಿದ ಕಾಂಗ್ರೆಸ್; ಬಿಜೆಪಿ ಸೋಲು ತಾತ್ಕಾಲಿಕ: ಸಿ.ಟಿ. ರವಿ

Upayuktha
0
ಬಿಜೆಪಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಸಿ.ಟಿ. ರವಿ


ಮಂಗಳೂರು: 'ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಹಿಡಿದು ಮಾಯಾ ಯುದ್ಧ ನಡೆಸಿತ್ತು. ಅದನ್ನು ಅರ್ಥಮಾಡಿಕೊಳ್ಳುವಲ್ಲಿ ನಾವು ಸೋತೆವು. ಈ ಚುನಾವಣೆಯ ಸೋಲು ತಾತ್ಕಾಲಿಕ' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳಲು ನಮ್ಮ ಸೋಲು ಮುಖ್ಯ ಕಾರಣ. ಇದಕ್ಕಾಗಿ ನಿಮ್ಮೆಲ್ಲರಲ್ಲೂ ನಾನು ಕ್ಷಮೆ ಕೇಳುತ್ತೇನೆ. ನಾವು ಸೋತಿರುವುದು ಚುನಾವಣೆಯಲ್ಲಿ ಮಾತ್ರ. ಸಿದ್ಧಾಂತದಲ್ಲಿ ಸೋಲು ಉಂಟಾಗಿಲ್ಲ. ಸಿದ್ಧಾಂತಕ್ಕೆ ಗೆಲುವು ಸಿಕ್ಕಿದೆ. ಈ ಬಾರಿ ಚುನಾವಣೆಯಲ್ಲೂ ಬಿಜೆಪಿಗೆ ಕಾಂಗ್ರೆಸ್, ಜೆಡಿಎಸ್ ಪಕ್ಷಕ್ಕಿಂತ ಹೆಚ್ಚು ಮತ ಬಂದಿದೆ, ಸೋಲಿಗೆ ಬೇರೆಯದ್ದೆ ಕಾರಣ ಇದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಗುರುವಾರ ನಡೆದ `ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ' ಉದ್ಘಾಟಿಸಿ ಅವರು ಮಾತನಾಡಿದರು.


'ಹಿಂದಿನ ಕಾಲದಲ್ಲಿ ರಕ್ಕಸರು ಮಾಯಾಯುದ್ಧ ನಡೆಸಿದಂತೆ ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್ ಹಿಡಿದು ಮಾಯಾಯುದ್ಧ ನಡೆಸಿತ್ತು. ಬಹುಕಾಲ ಈ ದೇಶವನ್ನು ಆಳಿದ ಕಾಂಗ್ರೆಸ್ ತನ್ನ ಸಾಧನೆ ಮುಂದಿಟ್ಟು ಮತಯಾಚನೆ ನಡೆಸುವ ಬದಲಿಗೆ, ಸುಳ್ಳು ಭರವಸೆಗಳನ್ನು ಜನತೆಗೆ ನೀಡಿತು. ಇದರಿಂದಾಗಿ ನಾವು ಸೋಲಬೇಕಾಯಿತು. ಲೋಕಸಭಾ ಚುನಾವಣೆಯಲ್ಲಿ ಹೀಗಾದರೆ ದೇಶವನ್ನು ಕಳೆದುಕೊಳ್ಳುತ್ತೇವೆ' ಎಂದರು.


'ದೇಶದಲ್ಲಿ ಸಮಾಜ ನಾಗರಿಕ ಸಂಹಿತೆ ಜಾರಿಗೊಳಿಸಬೇಕು ಎಂದು ಅಂಬೇಡ್ಕರ್ ಅವರೇ ಹೇಳಿದ್ದರು. ದೇಶ ಉಳಿಯಬೇಕಾದರೆ ಸಮಾನ ನಾಗರಿಕ ಸಂಹಿತೆ ಅಗತ್ಯ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಿದೆ. ಅದಕ್ಕಾಗಿ ಜನತೆಯಿಂದ ಸಲಹೆ ಕೇಳಿದೆ. ಸಮಾಜದಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಿದೆ' ಎಂದು ಅವರು ಹೇಳಿದರು.

ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿ ಆಗಬೇಕಿದೆ. ಆದರೆ, ಮುಸ್ಲಿಂ ತುಷ್ಟೀಕರಣ ರಾಜಕೀಯದಿಂದಾಗಿ ಕಾಂಗ್ರೆಸ್ ಈ ಕಾನೂನು ಜಾರಿಗೆ ಬಿಡುತ್ತಿಲ್ಲ. ಕಾಂಗ್ರೆಸ್ ಜನರಿಗೆ ಮೋಡಿ ಮಾಡಿ ತಾತ್ಕಾಲಿಕ ಗೆಲುವು ಪಡೆದಿದೆ. 2024ರಲ್ಲಿ ಮೈಮರೆತರೆ ನಾವು ದೇಶವನ್ನೇ ಕಳೆದುಕೊಳ್ಳುತ್ತೇವೆ. ಇದಕ್ಕಾಗಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳ ಬಗ್ಗೆ ಅರ್ಥ ಮಾಡಿಸಬೇಕಿದೆ. ನೀತಿ ಮತ್ತು ನಿಯತ್ತು ಇಲ್ಲದ ನೇತೃತ್ವ ಹಾನಿಕಾರಕ. ಕಾಂಗ್ರೆಸ್ ಗೆ ನೀತಿ ಮತ್ತು ನಿಯತ್ತು ಎರಡೂ ಇಲ್ಲ. ತುಕಡೆ ಗ್ಯಾಂಗ್ ಕೈಯಲ್ಲಿ ಕಾಂಗ್ರೆಸ್ ಹಿಡಿತ ಇದೆ. ಹಾಗಾಗಿ, ಜನರು ಕಾಂಗ್ರೆಸ್ ನೀತಿ ನಂಬಬಾರದು ಎಂದರು.


ಶಾಸಕರಾದ ಅರಗ ಜ್ಞಾನೇಂದ್ರ ಮಾತನಾಡಿ, 'ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ರಾಹುಲ್ ಗಾಂಧಿ ಅಮೆರಿಕದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಸುಳ್ಳನ್ನು 100 ಬಾರಿ ಹೇಳಿ ಸತ್ಯ ಮಾಡುವುದರಲ್ಲಿ ಕಾಂಗ್ರೆಸಿಗರು ನಿಸ್ಸೀಮರು. ದೇಶದಲ್ಲಿ ಕಾಂಗ್ರೆಸ್ ಪಕ್ಷ ತುರ್ತು ಪರಿಸ್ಥಿತಿ ಹೇರಿದಾಗ ಪ್ರಜಾಪ್ರಭುತ್ವ ಅಪಾಯದಲ್ಲಿತ್ತು ಎಂಬುದನ್ನು ರಾಹುಲ್ ಗಾಂಧಿಗೆ ತಿಳಿಸಬೇಕಿದೆ. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದ್ದು ಕಾಂಗ್ರೆಸ್ ಎಂಬುದನ್ನು ಜನತೆಗೆ ತಿಳಿಸಬೇಕು' ಎಂದರು.


ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಒಂದು ತಿಂಗಳ ಕಾಂಗ್ರೆಸ್ ಸರಕಾರದ ಆಡಳಿತ ನೋಡಿದರೆ, ಯಾಕಾದ್ರೂ ಈ ಸರ್ಕಾರ ಅಧಿಕಾರಕ್ಕೆ ಬಂತು ಎನ್ನುವ ಮಾತು ಜನರ ಬಾಯಲ್ಲಿ ಕೇಳುವಂತಾಗಿದೆ. ಸರ್ಕಾರ ತಮ್ಮ ವೈಫಲ್ಯ ಮುಚ್ಚಿಟ್ಟು ಗೊಂದಲ ಸೃಷ್ಟಿಸುವ ಕೆಲಸದಲ್ಲಿದೆ. ಸರ್ವರ್ ಡೌನ್ ಆದ್ರೆ ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಅನ್ನುವಷ್ಟು ಕೀಳು ಮಟ್ಟಕ್ಕೆ ಇಳಿದಿದ್ದಾರೆ. ಒಬ್ಬ ಮಂತ್ರಿ ಬೌದ್ಧಿಕ ದಿವಾಳಿತನ ಇದು. ಇಷ್ಟೊಂದು ಅರ್ಜಿ ಸಲ್ಲಿಕೆ ಆಗುವಾಗ ಸರ್ವರ್ ಡೌನ್ ಆಗತ್ತೆ ಎಂಬ ಸಾಮಾನ್ಯ ಜ್ಞಾನವು ಇಲ್ಲ ಎಂದರು.


ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 'ಗ್ಯಾರಂಟಿ ಯೋಜನೆಗಳನ್ನು ನಂಬಿ ಕಾಂಗ್ರೆಸ್‍ಗೆ ಮತ ನೀಡಿದವರು, ನಾವು ಯಾಕಾದರೂ ಇವರಿಗೆ ಓಟ್ ಹಾಕಿದೆವು ಎನ್ನುವಂತಾಗಿದೆ. ಸಚಿವರು ತಮ್ಮ ಇಲಾಖೆ ಬಿಟ್ಟು ಉಳಿದ ಎಲ್ಲ ವಿಚಾರಗಳನ್ನು ಮಾತನಾಡುತ್ತಿದ್ದಾರೆ. ಸಾರಿಗೆ ವ್ಯವಸ್ಥೆ ಅವ್ಯವಸ್ಥೆಯಾಗಿದೆ. ವಿದ್ಯುತ್ ಬಿಲ್ ನೋಡಿ ಜನತೆ ಮೂರ್ಛೆ ಹೋಗುತ್ತಿದ್ದಾರೆ. ಹೋಟೆಲ್, ಕೈಗಾರಿಕೆಗಳು ಬಂದ್ ಮಾಡುವ ಸ್ಥಿತಿಗೆ ಬಂದಿವೆ. ಕಾಂಗ್ರೆಸ್ ಸರಕಾರದ ವಚನಭ್ರಷ್ಟ, ಢೋಂಗಿ ಸರಕಾರ ಎಂದು ಜನ ಹೇಳುತ್ತಿದ್ದಾರೆ' ಎಂದರು.


ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯ ಕೇಶವ ಪ್ರಸಾದ್, ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಬಿಜೆಪಿ ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ ಉಪಸ್ಥಿತರಿದ್ದರು. ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಎಂ. ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುಧೀರ್ ಶೆಟ್ಟಿ ಕಣ್ಣೂರು ಸ್ವಾಗತಿಸಿದರು. ಕಸ್ತೂರಿ ಪಂಜ ವಂದಿಸಿದರು. ರಾಮದಾಸ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Advt Slider:
To Top