ಸಂಸ್ಕಾರ ಶೂನ್ಯತೆ, ನೈತಿಕಶಿಕ್ಷಣದ ಕೊರತೆಯೇ ನಮ್ಮ ಸಮಸ್ಯೆಗಳ ಮೂಲ : ಸರಪಾಡಿ ಅಶೋಕ ಶೆಟ್ಟಿ

Upayuktha
0

         ಮಂಗಳೂರು ವಿವಿ ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆಯ ಸಂಭ್ರಮ

ಮಂಗಳೂರು: ಬಾಲ್ಯದ ಸಂಸ್ಕಾರ ಶೂನ್ಯತೆ, ನೈತಿಕಶಿಕ್ಷಣದ ಕೊರತೆ ನಮ್ಮ ಇಂದಿನ ಹೆಚ್ಚಿನ ಸಮಸ್ಯೆಗಳಿಗೆ ಕಾರಣ. ಯಕ್ಷಗಾನದಂತಹ ಕಲೆಗಳು, ಮನೆಯ ಹಿರಿಯರಿಂದ ಪುರಾಣ ಪ್ರಜ್ಞೆ ಬೆಳೆಸಿಕೊಂಡು 'ಬುದ್ಧಿವಂತರು' ಎನಿಸಿಕೊಂಡ ಕರಾವಳಿಯ ಜನರು ಈಗ ಅದನ್ನೆಲ್ಲಾ ಕಳೆದುಕೊಳ್ಳುತ್ತಿದ್ದಾರೆ, ಎಂದು ತೆಂಕುತಿಟ್ಟು ಯಕ್ಷಗಾನ ಕಲಾವಿದ ಸರಪಾಡಿ ಅಶೋಕಶೆಟ್ಟಿ ಅಭಿಪ್ರಾಯಪಟ್ಟರು. 


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳವಾರ ಪ್ರತಿಭಾ ದಿನಾಚರಣೆಯ ಮುಖ್ಯಅತಿಥಿಯಾಗಿ ಮಾತನಾಡಿದ ಅವರು, ನಮಗೆ ಹುಟ್ಟಿನಿಂದಲೇ ಕಷ್ಟ, ಸುಖಗಳನ್ನು ನೀಡುವ ಪ್ರಕೃತಿಯೇ ನಮ್ಮ ಮೊದಲ ಗುರು. ಯುವ ಮನಸ್ಸುಗಳು ಇದನ್ನರಿತು ಪ್ರಯತ್ನಶೀಲತೆಯನ್ನು ಮೈಗೂಡಿಸಿಕೊಂಡಾದ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಸಾಧ್ಯ, ಎಂದರು. 


ಇನ್ನೋರ್ವ ಮುಖ್ಯ ಅತಿಥಿ, ವಾಗ್ಮಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಅವರು ಮಾತನಾಡಿ, ಯುವ ಮನಸ್ಸು ಚಂಚಲವಾಗಿರಬಹುದು, ಆದರೆ ಸ್ವಾಮಿ ವಿವೇಕನಂದರು, ವೀರ ಸಾವರ್ಕರ್, ಸುಭಾಷ್‌ಚಂದ್ರಭೋಸ್ ಮೊದಲಾದವರು ಯುವಕರಾಗಿ ಸಾಧಿಸಿದ್ದು ನಮಗೆ ಪ್ರೇರಣೆಯಾಗಲಿ. ಹಿಂದೂ, ಮುಸ್ಲಿಂ ಎನ್ನದೆ ನಾವೆಲ್ಲರೂ ಇಡೀ ಜಗತ್ತಿಗೆ ಶಿಕ್ಷಣ ಕೊಟ್ಟ, ಜಗತ್ತೆಲ್ಲಾ ಒಂದೇ ಎಂದು ಸಾರಿದ ಭಾರತದ ಭವ್ಯ ಸಂಸ್ಕೃತಿಯ ವಾರಸುದಾರರು.  ಬದಲಾಗುತ್ತಿರುವ ಹೆಮ್ಮೆಯ ಭಾರತದಲ್ಲಿ ನಮ್ಮ ಪಾತ್ರವೇನು ಎಂದು ಅರಿತುಕೊಳ್ಳೋಣ. ದೇಶ ವಿರೋಧಿ ಚಟುವಟಿಕೆಗಳ ಬಗ್ಗೆ ಎಚ್ಚೆತ್ತುಕೊಳ್ಳೋಣ, ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 


ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಠಿಣ ಸಂದರ್ಭಗಳನ್ನು ಎದುರಿಸಿ ಸಹಕಾರವಿತ್ತ ಸಹೋದ್ಯೋಗಿಗಳನ್ನು, ವಿದ್ಯಾರ್ಥಿಗಳನ್ನು ನೆನೆದರು. ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಲಲಿತಕಲಾಸಂಘದ ವತಿಯಿಂದ ಬಹುಮಾನ ವಿತರಿಸಲಾಯಿತು. ಕ್ರೀಡಾಪಟುಗಳು, ಎನ್‌ಸಿಸಿ ವಿದ್ಯಾರ್ಥಿಗಳನ್ನೂ ಗುರುತಿಸಲಾಯಿತು. 


ವಿದ್ಯಾರ್ಥಿಸಂಘದ ಉಪನಿರ್ದೇಶಕಿ ಪ್ರೊ. ಲತಾ ಎ. ಪಂಡಿತ್ ಅತಿಥಿಗಳನ್ನು ಸ್ವಾಗತಿಸಿದರು. ಲಲಿತಕಲಾ ಸಂಘದ ಸಹನಿರ್ದೇಶಕಿ ಡಾ. ಮೀನಾಕ್ಷಿ ಎಂ. ಎಂ ಸಂಘದ ವಾರ್ಷಿಕ ವರದಿ ವಾಚಿಸಿದರು. ಲಲಿತಕಲಾ ಸಂಘದ ಕಾರ್ಯದರ್ಶಿನಿ ಪ್ರತೀಕ್ಷಾ ಪಿ. ಧನ್ಯವಾದ ಸಮರ್ಪಿಸಿದರು. ಅಂತಿಮ ಬಿ.ಎ ವಿದ್ಯಾರ್ಥಿ ಲತೇಶ ಸಾಂತ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜನ್ ವಿ. ಶೆಟ್ಟಿ, ಕಾರ್ಯದರ್ಶಿ ತಶ್ವಿತ್ ಎ, ಸಹಕಾರ್ಯದರ್ಶಿ ನಿಯಶಸ್ವಿ ಕೆ,ಲಲಿತಕಲಾ ಸಂಘದ ಸಹಕಾರ್ಯದರ್ಶಿನಿ ಶರಣ್ಯಪಿ, ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 


ಸಾಂಸ್ಕೃತಿಕ ವೈವಿಧ್ಯ

ಪ್ರತಿಭಾ ದಿನಾಚರಣೆಯ ಅಂಗವಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ವಿದ್ಯಾರ್ಥಿಗಳು ದಿನವಿಡೀ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಿದರು. ಸುಮಾರು 40 ಕ್ಕೂಹೆಚ್ಚು ಕಾರ್ಯಕ್ರಮಗಳಲ್ಲಿ ಶಾಸ್ತ್ರೀಯ ಸಂಗೀತ- ನೃತ್ಯ, ಮಾಶ್ಚಿಮಾತ್ಯ ಸಂಗೀತ- ನೃತ್ಯ, ಇವೆರಡರ ಸಂಗಮವಾಗಿದ್ದ ಪ್ರದರ್ಶನಗಳು, ರೂಪಕಗಳು, ಯಕ್ಷಗಾನದಂತಹ ಶಾಸ್ತ್ರೀಯ ಕಲೆಗೆ ಪಾಶ್ಚಿಮಾತ್ಯ ಸಂಗೀತದ ಸ್ಪರ್ಶ ಗಮನಸೆಳೆದವು. ತುಂಬಿತುಳುಕುತ್ತಿದ್ದ ರವೀಂದ್ರ ಕಲಾಭವನದಲ್ಲಿ ಸಂಭ್ರಮದ ವಾತಾವರಣ ಮನೆ ಮಾಡಿತ್ತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top