ಒಂದು ಮಾತು ಸತ್ಯ ಹೇಳಿದ್ದೀರಿ ಲಕ್ಷ್ಮೀ ಅಕ್ಕ . ನಾವು ಕರಾವಳಿಗರು ಅನ್ನೋದಕ್ಕೆ ಹೆಮ್ಮೆ ಎನಿಸಿತು . ಬದುಕು ಸಹ್ಯವೂ ಸುಂದರವಾಗೋದು ಕೇವಲ ದುಡ್ಡಿನಿಂದಲೋ ಅಲ್ಲ ತಾಯೀ ...ಭಾವನೆಗಳಿಂದ ...ಅರ್ಥಾತ್ ದುಡ್ಡು ಬೇಡವೇ ? ಬೇಕು ಆದ್ರೆ ಮೊದಲ ಆಯ್ಕೆ ಅಲ್ಲ . ನಿಂತ ನೆಲ , ಹುಟ್ಟಿದ ಧರ್ಮ ಹುಟ್ಟಿಸಿದ ದೇವರು ತಂದೆ ತಾಯಿ ವಿದ್ಯೆಕೊಟ್ಟ ಗುರುಗಳ ಬಗ್ಗೆ ಇವೇ ಮೊದಲಾದವು ಗಳ ಬಗ್ಗೆ ಋಣೀ ಭಾವ ಜಾಗೃತವಾಗಿದ್ದಷ್ಟೂ ಬದುಕು ಸಹ್ಯವೂ ಸುಂದರವೂ ಆದೀತು . ಹಣದಿಂದ ಸುಂದರವಾದ ಮಂಚ ಖರೀದಿಸಬಹುದು ಸುಖನಿದ್ರೆಯನ್ನಲ್ಲ, ಬೇಕಷ್ಟು ಆಹಾರಗಳನ್ನು ಖರೀದಿಸಬಹುದು ಆರೋಗ್ಯವನ್ನಲ್ಲ. ಅಂದ್ರೆ ಬಾಗಿದ ನೆಲೆ ಭಗವಂತನ ಸೆಲೆ ಅಂದ್ರು ಹಿರಿಯರು .ಅಂಥಾ ಭಾವನೆಗಳು ಮಾತ್ರ ಸುಖನಿದ್ರೆ, ಸೌಖ್ಯ ಎಲ್ಲವನ್ನೂ ತಂದೀತು . ಅದು ಬಿಟ್ಟು ಅಹಂ ಬ್ರಹ್ಮಾಸ್ಮಿ ಅನ್ನೋ ಅಹಂಕಾರ, ನಂದೇ ಮರ್ಜಿ, ನಾನು ಉಚಿತ ಕೊಡ್ತೀನಿ ಯಾರಪ್ಪನ್ ದುಡ್ಡು, ಕೇಳೋಕೆ ಯಾರು? ಇವೆಲ್ಲ ಒಂದು ಸಂದರ್ಭದ ಮೇಲಾಟಕ್ಕಷ್ಟೆ ಆದೀತು. ನೂರು ಕಾಲಕ್ಕಲ್ಲ. ಈ ನೆಲೆಯಲ್ಲೇ ನಮ್ಮವರು ಬದುಕಿನಷ್ಟೇ ಅಥವಾ ಬದುಕಿಗೆ ಭಾವನೆಗಳ ಮೌಲ್ಯಕ್ಕೆ ಒತ್ತು ಕೊಟ್ರು ಅದಕ್ಕಾಗಿಯೇ ವೇದ ಉಪನಿಷತ್ತು ,ಕಾವ್ಯ ಸಾಹಿತ್ಯ ನೀತಿಮಾರ್ಗದ ಬೋಧನೆಗಳು ಹುಟ್ಟಿಕೊಂಡವು ಲಕ್ಷ್ಮೀ ಅಕ್ಕಾ. ಭಾವನೆಗಳಿಂದ ಅತೀತವಾಗಿ ಬದುಕು ರೂಪಿತವಾಗೋದು ಸಾಧ್ಯವಿಲ್ಲ . ಭಾವನೆ ಮತ್ತು ಬದುಕಿಗೆ ತರುಲತೆಯ ನಂಟು; ಮರವನ್ನಾಶ್ರಯಿಸಿ ಬಳ್ಳಿ ಬೆಳೆಯುವಂತೆ. ಅವುಗಳು ಅನ್ಯೋನ್ಯಾಶ್ರಯ ಸಂಬಂಧಿಗಳು. ಮರದ ಆಶ್ರಯವಿಲ್ಲದ ಬಳ್ಳಿ ಯದ್ವಾತದ್ವಾ ಬೆಳೀತದೆ.
ಅದೇ ರೀತಿ ಭಾವನೆಗಳಿಲ್ಲದ ಬದುಕೂ ಕೂಡಾ. ಆದ್ದರಿಂದ ಬದುಕು ಮತ್ತು ಭಾವನೆಯ ಆಯ್ಕೆ ಎದುರಾದಾಗ ಕರಾವಳಿಗರ ಮೊದಲ ಆಯ್ಕೆ ಭಾವನೆ. ಈ ಸತ್ಯವನ್ನು ಕರಾವಳಿಯ ಧರ್ಮನೆಲೆ ನಮಗೆ ಹೇಳಿಕೊಟ್ಟಿದೆ. ಅದು ತಲಾಂತರದಿಂದ ಇಲ್ಲಿನ ಜನರ ರಕ್ತದಲ್ಲಿ ವಾಹಿನಿಯಾಗಿ ಹರಿದು ಬಂದಿದೆ. ಬಾಕಿ ಕಡೆಗಳಲ್ಲಿ ಈ ಪ್ರಜ್ಞೆ ಇಲ್ವಾ? ಅನ್ನೋ ಪ್ರಶ್ನೆಗೆ ಸದ್ಯ ಉತ್ತರ ಕೊಡೋದು ಸ್ವಲ್ಪ ಕಷ್ಟ. ಅಲ್ಲೂ ಇರಬಹುದು ಆದ್ರೆ ನಿತ್ಯ ಜಾಗೃತ ಸ್ಥಿತಿಯಲ್ಲಿ ಇಲ್ದೇ ಇರಬಹುದು ಅನ್ಸುತ್ತೆ. ಆ ಕಾರಣದಿಂದ ಗ್ಯಾರಂಟಿಗಳ ಘೋಷಣೆಯಾರ್ಭಟಕ್ಕೆ ಅವರೆಲ್ಲ ತಲೆ ಬಾಗಿರಬಹುದು. ಕರಾವಳಿ ಜನರಲ್ಲಿ ಆ ಪ್ರಜ್ಞೆ ನಿತ್ಯ ಸಂಜೀವಿನಿಯಾಗಿ ಜೀವಾಳ ಜೀವಧ್ವನಿ ಜೀವಸ್ವರವಾಗಿ ಇರೋದ್ರಿಂದ ಅಂಥವುಗಳಿಗೆ ಸುಲಭವಾಗಿ ಮರುಳುಗೊಳಿಸಲು ಸಾಧ್ಯವಾಗಿಲ್ಲ; ಮಾತ್ರವಲ್ಲ ಆ ಕಾರಣಗಳಿಗಾಗಿಯೇ ಭಾವನೆಗಳೊಂದಿಗೆ ಚೆಲ್ಲಾಟವಾಡುವವರನ್ನು ಕಂಡ್ರೆ ಕೆರಳಿ ಕೆಂಡವಾಗುತ್ತಾರೆ. ಭ್ರಮೆಯನ್ನು ಮೀರಿದ ವಾಸ್ತವಕ್ಕೆ, ಭಾವನೆಗಳನ್ನು ಗೌರವಿಸುವ ಸಜ್ಜನಿಕೆ ಸಹೃದಯತೆಯೆದುರು ವಿನೀತರಾಗುತ್ತಾರೆ. ಆ ನೆಲೆಯಲ್ಲಿ ಕರಾವಳಿಗರ ಜನಮಾನಸದಲ್ಲಿ ಉನ್ನತ ಭಾವನೆಗಳನ್ನು ದೃಢಗೊಳಿಸಿದ ಇಲ್ಲಿನ ದೈವೀನೆಲೆಗಳಿಗೆ, ಧರ್ಮಶಕ್ತಿಗಳಿಗೆ, ನೆಲದ ಗರಿಮೆಗೆ, ಹಿರಿಯರು ಮುನ್ನಡೆಸಿದ ಶ್ರೇಷ್ಠ ಪರಂಪರೆಗೆ ಶ್ರದ್ಧಯಾ ತಲೆಬಾಗುತ್ತೇವೆ.
ಏನೇ ಇರ್ಲಿ. ನೀವಂದಂತೆ ಎಲ್ಲೆಡೆ ಭಾವನೆಗಳಿಗೆ ಬೆಲೆಕೊಡುವ ಬದುಕು ಸಾಧ್ಯವಾಗಲಿ ಎಂದು ಆಶಿಸೋಣ. ನಿಮ್ಮ ಬಗ್ಗೆ ಗೌರವ ಇದೆ. ಒಳ್ಳೆಯ ವಿಚಾರ ಮುಂದಿಟ್ಟಿದ್ದೀರಿ. ನಿಮಗೂ ಒಳಿತಾಗಲಿ.
-ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


