ಅಮೃತ ಜ್ಯೋತಿರ್ವಿಜ್ಞಾನ ಅಧ್ಯಯನ ಕೇಂದ್ರದ ಜ್ಯೋತಿಷ್ಯ ಸಲಹಾ ಕೇಂದ್ರ ಉದ್ಘಾಟನೆ
ಮಂಗಳೂರು: ನಗರದ ಅಮೃತ ವಿದ್ಯಾಲಯಂ ಆವರಣದಲ್ಲಿರುವ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಜ್ಯೋತಿಷ್ಯ ಸಲಹಾ ಕೇಂದ್ರ ತೆರೆಯಲಾಯಿತು.
ಅಮೃತ ಜ್ಯೋತಿರ್ವಿಜ್ಞಾನ ಅಧ್ಯಯನ ಕೇಂದ್ರದ ವತಿಯಿಂದ ನಿರ್ವಹಿಸಲ್ಪಡುವ ಈ ಕೇಂದ್ರದ ಉದ್ಘಾಟನೆಯನ್ನು ಸ್ವಾಮಿನಿ ಮಂಗಳಾಮೃತ ಪ್ರಾಣ ರವರು ನೆರವೇರಿಸಿದರು. ಈ ಸಂದರ್ಭದಲ್ಲಿ ಆಶೀರ್ವಚನವಿತ್ತು "ಜ್ಯೋತಿಷ್ಯದಿಂದ ಜೀವನ ಪಥದಲ್ಲಿ ಕಂಡು ಬರುವ ಅಡೆತಡೆಗಳನ್ನು ಮುಂಚಿತವಾಗಿ ತಿಳಿದು ಸೂಕ್ತ ಪರಿಹಾರಗಳೊಂದಿಗೆ ಸಂಕಷ್ಟಗಳಿಂದ ಪಾರಾಗಲು ಸಾಧ್ಯವಿದೆ. ಪ್ರಾರಬ್ಧ ಕರ್ಮಗಳ ದೋಷಗಳನ್ನು ಜಾತಕದ ಆಧಾರದಿಂದ ಜ್ಯೋತಿಷ್ಯರ ಮೂಲಕ ತಿಳಿದು ಅದಕ್ಕೆ ಗುರುಗಳ ಸಾನ್ನಿಧ್ಯದ ಪವಿತ್ರ ಕ್ಷೇತ್ರದಲ್ಲಿ ಮಾಡುವ ಪರಿಹಾರೋಪಾಯಗಳು ಸಂಕಷ್ಟಗಳಿಂದ ಹೊರಬರಲು ಸಹಕಾರಿಯಾಗಲಿದೆ. ಈ ಸದುದ್ದೇಶದಿಂದ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಪ್ರಾಣ ಪ್ರತಿಷ್ಠೆ ಮಾಡಿದ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಭಕ್ತರ ಬೇಡಿಕೆಯಂತೆ ಜ್ಯೋತಿಷ್ಯ ಸಲಹಾ ಕೇಂದ್ರ ಪ್ರಾರಂಭಿಸಲಾಗಿದೆ" ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅಷ್ಟಾವದಾನಿ ಡಾ.ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜರವರು ಮಾತನಾಡಿ, ಭಾರತೀಯ ಜ್ಯೋತಿಷ್ಯ ಶಾಸ್ತ್ರ ಅಧ್ಭುತವಾದಶಾಸ್ತ್ರವಾಗಿದ್ದು, ಹಿಂದೆ ಆಗಿಹೋದ ಮುಂದೆ ಆಗಬಹುದಾದ ಸತ್ಯಶೋಧನಾತ್ಮಕ ವಿಚಾರಗಳನ್ನು ತಿಳಿಸಿಕೊಡುವ ಶಾಸ್ತ್ರ ಎಂದರೆ ಅದು ಭಾರತದ ಸಂಪದ್ಭರಿತವಾದ ಜ್ಯೋತಿಷ್ಯ ಶಾಸ್ತ್ರ. ಇದು ವಿಶ್ವವಿದ್ಯಾಲಯಗಳಲ್ಲಿ ಪದವಿ ಪಠ್ಯವಾಗಿ ವಿಜೃಂಭಿಸಬೇಕು ಎಂದರು.
ಶ್ರೀ ರಾಮಚಂದ್ರ ದೇವಸ್ಥಾನ ಯೆಯ್ಯಾಡಿಯ ಪ್ರಧಾನ ಅರ್ಚಕರೂ ಜ್ಯೋತಿಷಿಗಳೂ ಆಗಿರುವ ಶ್ರೀ ಸಚ್ಚಿದಾನಂದ ನೇಗ್ಲೆಯವರು ಈ ಸಂದರ್ಭದಲ್ಲಿ ಮಾತನಾಡಿ ವೇದಗಳಲ್ಲಿ ಜ್ಯೋತಿಷ್ಯ ಕಣ್ಣುಗಳು ಇದ್ದಂತೆ ದಾರಿದೀಪವಾಗಿದೆ.ಉತ್ತಮ ವೈದ್ಯರು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವಂತೆ ಉತ್ತಮ ಜ್ಯೋತಿಷ್ಯರು ಸೂಕ್ತವಾದ ಪರಿಹಾರೋಪಾಯಗಳ ಮೂಲಕ ದೋಷಗಳಿಂದ ಬರಬಹುದಾದ ಸಮಸ್ಯೆಗಳನ್ನು ಕಡಿಮೆ ಮಾಡಬಹುದಾಗಿದೆ. ನಾಗದೋಷ ನಿವಾರಣೆಗಾಗಿ ನಾಗಾರಾಧನೆ, ಕುಜದೋಷ ನಿವಾರಣೆಗಾಗಿ ಪೂಜೆ ಸಲ್ಲಿಸುವ ಮೂಲಕ ಪರಿಹಾರ ಸಾಧ್ಯ ಎಂದರು.
ಸಲಹಾ ಕೇಂದ್ರದ ಜ್ಯೋತಿಷಿ ಮೆಲ್ಕಾರ್ ಕೃಷ್ಣ ಭಟ್ ರವರು ಜ್ಯೋತಿಷ್ಯ ಶಾಸ್ತ್ರದ ಮಹತ್ವಗಳ ಬಗ್ಗೆ ತಿಳಿಸಿದರು ಹಾಗೂ ಪ್ರತೀ ಶನಿವಾರ ಜ್ಯೋತಿಷ್ಯ ಶಾಸ್ತ್ರದ ಸೇವೆಗೆ ಶ್ರೀ ಕ್ಷೇತ್ರದಲ್ಲಿ ಲಭ್ಯರಿರುವುದಾಗಿ ತಿಳಿಸಿದರು. ವೇದಿಕೆಯಲ್ಲಿ ಮುರಳೀಧರ್ ಶೆಟ್ಟಿ ಉಪಸ್ಥಿತರಿದ್ದರು.
ಜ್ಯೋತಿಷಿ ಶ್ರೀ ಪ್ರವೀಣ್ ಚಂದ್ರ ಶರ್ಮರವರು ಸ್ವಾಗತಿಸಿ ಶ್ರೀ ಬ್ರಹ್ಮಸ್ಥಾನ ಕ್ಷೇತ್ರದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಡಾ.ವಸಂತ ಕುಮಾರ್ ಪೆರ್ಲ ವಂದಿಸಿದರು. ಡಾ.ದೇವದಾಸ್ ಪುತ್ರನ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಜ್ಯೋತಿಷ್ಯ ತರಬೇತಿ ಪಡೆದವರು, ಸೇವಾ ಸಮಿತಿಯ ಪದಾಧಿಕಾರಿಗಳು, ಅಮ್ಮನ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


