ಉತ್ತಮ ಕಾರ್ಯಗಳ ಫಲ ಯಾರಿಗೆ, ಯಾವಾಗ, ಯಾವ ರೂಪದಲ್ಲಿ ಬರುವುದೋ ಹೇಳೋಕಾಗಲ್ಲ, ನಾನು ನಿಮಗೆಲ್ಲ ಒಂದು ನೈಜ ಘಟನೆಯನ್ನು ತಿಳಿಸಲು ಹೊರಟಿರುವೆ, ಅದು ಹೀಗಿದೆ:
ಬ್ರಿಟನ್ನಿನ ಸ್ಕಾಟ್ಲೆಂಡಿನಲ್ಲಿ ಫ್ಲೆಮಿಂಗ್ ಎಂಬ ಹೆಸರಿನ ಒಬ್ಬ ಬಡ ರೈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ. ಆ ಸಮಯದಲ್ಲಿ ಕಿಟಾರೆಂದು ಚೀರಿದ ಶಬ್ದ ಕೇಳಿಸಿತು. ಶಬ್ದ ಬಂದ ಕಡೆ ಹೋಗಿ ರೈತ ನೋಡುತ್ತಾನೆ. ಒಬ್ಬ ಪುಟ್ಟ ಹುಡುಗ ಕೆಸರಿನಲ್ಲಿ ಹೂತು ಹೋಗಿದ್ದ. ಸೊಂಟದವರೆಗೂ ಆತನ ದೇಹ ಹೂತುಹೋಗಿತ್ತು. ಕಷ್ಟಪಟ್ಟು ಆತನನ್ನು ಕಾಪಾಡಲು ಪ್ರಯತ್ನಿಸಿದ ರೈತ ತನ್ನ ಪ್ರಯತ್ನದಲ್ಲಿ ಸಫಲನೂ ಆದ. ಆ ಹುಡುಗ ರೈತನಿಗೆ ಧನ್ಯವಾದ ಅರ್ಪಿಸಿ ಹೊರಟು ಹೋದ.
ಮಾರನೆಯ ದಿನ ಫಳ ಫಳ ಹೊಳೆಯುವ ಕಾರೊಂದು ರೈತನ ಗುಡಿಸಲಿನ ಮುಂದೆ ಬಂದು ನಿಂತಿತು. ರೈತ ಕುತೂಹಲದಿಂದ ನೋಡುತ್ತಾ ನಿಂತಿದ್ದನು. ಆಗ ಆ ಕಾರಿನಿಂದ ಸೂಟು ಬೂಟು ಧರಿಸಿದ್ದ ಒಬ್ಬ ಶ್ರೀಮಂತ ವ್ಯಕ್ತಿ ಇಳಿದನು. ನೇರವಾಗಿ ರೈತನೆಡೆಗೆ ಬಂದು ಮಾತನಾಡಲು ಪ್ರಾರಂಭಿಸಿದನು: "ನನ್ನ ಹೆಸರು #ರಿಡಾಲ್ಫ್ ಚರ್ಚಿಲ್, ನಿನ್ನೆ ನಡೆದ ದುರ್ಘಟನೆಯಿಂದ ನನ್ನ ಮಗನನ್ನು ನೀವು ಪಾರು ಮಾಡಿದ್ದೀರಿ, ನನ್ನ ಮಗನ ಪ್ರಾಣವನ್ನು ಉಳಿಸಿದ ನಿಮಗೆ ಏನಾದರೂ ಕೊಡಬೇಕೆಂದು ಬಂದಿರುವೆ" ಎಂದು ಹೇಳಿದಾಗ ರೈತ, "ನಾನು ನಿಮ್ಮಿಂದ ಏನನ್ನೂ ಸಹ ಪಡೆಯಲಾರೆ, ನಾನು ನಿಮ್ಮ ಮಗನನ್ನು ಕಾಪಾಡಿದ್ದು ಮಾನವೀಯತೆಯ ದೃಷ್ಟಿಯಿಂದ ಹೊರತು ಯಾವ ನಿರೀಕ್ಷೆಯಿಂದನೂ ಅಲ್ಲ, ದಯವಿಟ್ಟು ಕ್ಷಮಿಸಿ" ಎಂದು ಸ್ವಾಭಿಮಾನಿಯಾದ ರೈತ ನಯವಾಗಿಯೇ ತಿರಸ್ಕರಿಸುತ್ತಾನೆ.
ಅದೇ ಸಮಯದಲ್ಲಿ ಗುಡಿಸಲ ದ್ವಾರದಿಂದ ಒಬ್ಬ ಪುಟ್ಟ ಹುಡುಗ ಇಣುಕಿ ನೋಡುತ್ತಿದ್ದ. ಇದನ್ನು ಗಮನಿಸಿದ ಆ ಶ್ರೀಮಂತ ವ್ಯಕ್ತಿ "ಆ ಹುಡುಗ ನಿಮ್ಮ ಮಗನೆ?" ಎಂದು ಪ್ರಶ್ನಿಸುತ್ತಾರೆ. ರೈತ ಹೆಮ್ಮೆಯಿಂದ, "ಹೌದು ಸ್ವಾಮಿ, ಇವನು ನನ್ನ ಮಗ" ಎಂದು ಹೇಳುತ್ತಾನೆ. ಆಗ ಆ ಶ್ರೀಮಂತ ವ್ಯಕ್ತಿ, "ನೀವು ನಮ್ಮಿಂದ ಏನನ್ನೂ ಪಡೆಯಲು ಸಿದ್ಧವಿಲ್ಲ, ನೀವು ಒಪ್ಪಿದರೆ ನಿಮ್ಮ ಮಗನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ. ನನ್ನ ಮಗನಿಗೆ ಯಾವ ಪ್ರಕಾರದ ಶಿಕ್ಷಣ ಕೊಡಿಸುವೆನೊ ಅದೇ ಸ್ಥರದ ಶಿಕ್ಷಣವನ್ನು ನಿಮ್ಮ ಮಗನಿಗೂ ಕೊಡಿಸುತ್ತೇನೆ ದಯವಿಟ್ಟು ಈ ಮಾತಿಗೆ ಒಲ್ಲೆ ಎನ್ನದೆ ಒಪ್ಪಿಕೊಳ್ಳಿ" ಎಂದು ಕೇಳಿಕೊಳ್ಳುತ್ತಾನೆ.
ರೈತ ಯೋಚನೆ ಮಾಡಿ, ಹೇಗಿದ್ದರೂ ತನಗೆ ಉತ್ತಮ ಶಿಕ್ಷಣ ಕೊಡಿಸುವ ಸಾಮರ್ಥ್ಯ ಇಲ್ಲ. ನನ್ನ ಮಗನಿಗೆ ಒಳ್ಳೆ ಶಿಕ್ಷಣ ಸಿಗುತ್ತದೆಯಲ್ಲ ಎಂದು ಒಪ್ಪಿಕೊಳ್ಳುತ್ತಾನೆ. ವರ್ಷಗಳು ಕಳೆಯುತ್ತಾ ಹೋಯಿತು. ರೈತನ ಮಗ ಆ ಶ್ರೀಮಂತನ ಮಗನ ಜೊತೆಯಲ್ಲಿಯೇ ಉತ್ತಮ ಶಿಕ್ಷಣವನ್ನು ಪಡೆದನು. ದೊಡ್ಡ ವಿಜ್ಞಾನಿಯಾದನು ಅವನು ಬೇರೆ ಯಾರೂ ಅಲ್ಲ ಪೆನಿಸಿಲಿನ್ ಎಂಬ ಔಷಧಿಯನ್ನು ಕಂಡು ಹಿಡಿದ ಅಲೆಕ್ಸಾಂಡರ್ ಫ್ಲೆಮಿಂಗ್. ಹಾಗೆಯೇ ಆ ಶ್ರೀಮಂತನ ಮಗ ಬೇರಾರೂ ಅಲ್ಲ. ಆತನೇ ಎರಡು ಬಾರಿ ಇಂಗ್ಲೆಂಡಿನ ಪ್ರಧಾನ ಮಂತ್ರಿಯಾದ ವಿನ್ ಸ್ಟನ್ ಚರ್ಚಿಲ್. ಇವರು ಮಾರಕ ಖಾಯಿಲೆಗೆ ಗುರಿಯಾದಾಗ ಪೆನಿಸಿಲಿನ್ ಔಷಧದಿಂದಲೇ ಗುಣವಾದರು.
ಒಂದು ಕಡೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬಡ ರೈತ ಕಷ್ಟದಲ್ಲಿದ್ದ ಹುಡುಗನಿಗೆ ಮಾಡಿದ ಸಹಾಯ, ಈ ಬಹುದೊಡ್ಡ ಉಪಕಾರಕ್ಕೆ ಪ್ರತಿಯಾಗಿ ಏನಾದರೂ ಮಾಡಿ ಋಣ ತೀರಿಸಬೇಕೆಂಬ ಶ್ರೀಮಂತ ತಂದೆಯ ಉದಾರ ಮನೋಭಾವ, ಆ ಉದಾರತೆಯ ಕಾರಣದಿಂದಲೇ ಮಾರಕ ಖಾಯಿಲೆಯೊಂದರಿಂದ ಬಳಲುತ್ತಿದ್ದ ಮಗನ ಪ್ರಾಣ ಕಾಪಾಡಿದ ಪೆನಿಸಿಲಿನ್ ಎಂಬ ಔಷಧದ ಅನ್ವೇಷಕ.
ನಾವು ಇಂದು ಮಾಡಿದ ಉತ್ತಮ ಕಾರ್ಯ ಮುಂದೊಂದು ದಿನ ಫಲ ಕೊಟ್ಟೇ ಕೊಡುತ್ತದೆ. ಆದರೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಮ್ಮ ನಮ್ಮ ಕರ್ತವ್ಯಗಳನ್ನು ನಿಷ್ಠೆ, ಪ್ರಾಮಾಣಿಕತೆಗಳಿಂದ ಮಾಡುತ್ತಾ ಸಾಗಬೇಕು ಎಂಬುದಕ್ಕೆ ಈ ಸತ್ಯ ಕಥೆಯನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆ ಬಂಧುಗಳೇ.
ಈ ಸ್ವಾರ್ಥ ತುಂಬಿದ ಜಗದಲ್ಲಿ ಸ್ವಾರ್ಥ ರಹಿತವಾದದ್ದೇನಾದರೂ ಮಾಡುತ್ತಾ ಸಾಗೋಣ ಅಲ್ಲವೇ ಬಂಧುಗಳೇ?
-ಕು. ಹರ್ಷಿಯಾ ಭಾನು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ




