
"ಸರ್ವಂ ಪರಿಕ್ರೋಶಮ್ ಜಹಿ" ಅಂದರೆ ನಮ್ಮಲ್ಲಿರುವ ಎಲ್ಲಾ ಬಗೆಯ ಮತ್ಸರವನ್ನು ತ್ಯಜಿಸುವುದು. ದಿನನಿತ್ಯದ ಜೀವನದಲ್ಲಿ ನಾವು ನಮ್ಮ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕವಾಗಿ ಅನೇಕ ತೊಂದರೆಗಳನ್ನು ಎದುರಿಸುತ್ತಿರುತ್ತೇವೆ. ಅಲ್ಲದೇ ಹೊರಜಗತ್ತಿನಲ್ಲಿ ಆಗುತ್ತಿರುವ ಎಲ್ಲಾ ಸಮಸ್ಯೆಗಳನ್ನು ನಾವು ನಿಯಂತ್ರಿಸಲು ಸಾಧ್ಯವಿಲ್ಲ. ಆದರೆ ನಮ್ಮೊಳಗೆ ಏನಾಗುತ್ತಿದೆ ಹಾಗೂ ಏನಾಗಬೇಕು ಎಂಬುದನ್ನು ಸಾಧ್ಯವಿದೆ. ಹೇಗೆಂದರೆ ಅದು ಯೋಗ ಎಂಬ ಅಸ್ತ್ರದಿಂದ. ಹೌದು ಇತ್ತೀಚಿನ ದಿನಗಳಲ್ಲಿ ಜನರು ದೈಹಿಕವಾಗಿ ನಾನಾ ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆಲ್ಲ ಪರಿಹಾರವೆಂದರೆ ಅದು ಯೋಗ. ನಮ್ಮನ್ನು ದೈಹಿಕವಾಗಿ ಮಾತ್ರ ನಿಯಂತ್ರಿಸುವುದಲ್ಲದೆ ಮಾನಸಿಕವಾಗಿಯೂ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಶತಮಾನಗಳ ಹಿಂದೆ ಶತಮಾನಗಳ ಹಿಂದೆ ಅತ್ಯಂತ ಜನಪ್ರಿಯ ಸಂಸ್ಕೃತ ಕವಿಗಳಲ್ಲಿ ಒಬ್ಬರಾದ ಭರ್ತೃಹರಿಯು ಯೋಗದ ವಿಶೇಷತೆಯನ್ನು ಎತ್ತಿ ತೋರಿಸುತ್ತಾ ಹೀಗೆ ನುಡಿಯುತ್ತಾರೆ.
ಧೈರ್ಯ ಯಸ್ಯ ಪಿತಾ ಕ್ಷಮಾ ಚ ಜನನಿ
ಶಾಂತಿ: ಚಿರಂ ಗೇಹಿನಿ ಸತ್ಯಂ ಸೂನು:
ಅಯಂ: ದಯಾ ಭಚ : |
ಶಯ್ಯ ಭೂಮಿತಂ ದಿಶ: ಅಪಿ ವಸನಂ
ಜ್ಞಾನಂ;ನಾಮಭೂತಂ ಭೋಜನಂ ಏತೇ
ಯಸ್ಯ ಕುಟುಂಬ: ಭಯಂ ಯೋಗಿನ: ||
ಅಂದರೆ ಯೋಗಾಭ್ಯಾಸ ನಮ್ಮಲ್ಲಿ ಅಳವಡಿಕೆಯಾದರೆ ಅದರ ಮೂಲಕ, ಒಬ್ಬ ವ್ಯಕ್ತಿಯು ಧೈರ್ಯವಂತ ತಂದೆಯಂತಹ ರಕ್ಷಕನಾಗಿ,ಕ್ಷಮಿಸುವ ತಾಯಿಯಂತೆ, ಸಂಗಾತಿಯಂತೆ ಶಾಂತ ಮನಸ್ಸು, ಸತ್ಯ ಅವರ ಮಗ ಅಥವಾ ಮಗಳು, ಕರುಣೆ ಹಾಗೂ ಮನಸ್ಸಿನ ನಿಯಂತ್ರಣ ಸಹೋದರ ಹಾಗೂ ಸಹೋದರಿಯಂತೆ ಶಾಶ್ವತ ಸ್ನೇಹಿತನಾಗಿ ಮಾನಸಿಕ ಶಾಂತಿಯಂತಹ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳುತ್ತಾರೆ.
ಬದಲಾಗುತ್ತಿರುವ ಈ ಪ್ರಪಂಚದಲ್ಲಿ ಜನರು ದಿನದಿಂದ ದಿನಕ್ಕೆ ತಮ್ಮನ್ನು ತಾವು ಆರೋಗ್ಯ ಪೂರ್ಣವಂತರಾಗಿ ಬದುಕಲು ಕಷ್ಟಕರವಾಗುತ್ತದೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಚಿಕ್ಕ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗಿನವರು ಮಾನಸಿಕ ಒತ್ತಡಗಳಿಂದ ಕುಂದುತ್ತಿರುವ ಸಂದರ್ಭಗಳು ಎದುರಾಗುತ್ತಿರುವುದನ್ನು ಕಾಣಬಹುದು. ನಮ್ಮಲ್ಲಿರುವ ಮಾನಸಿಕ ಒತ್ತಡಗಳನ್ನು ತೊಡೆದುಹಾಕಲು ಪ್ರಾಣಾಯಾಮವು ನಮಗೆ ಸಹಾಯ ಮಾಡುತ್ತದೆ.ಹಾಗೇ ದೈಹಿಕವಾಗಿ ಬಲಿಷ್ಠಗೊಳ್ಳಲು, ನಮ್ಮನ್ನು ನಾವು ನಿಯಂತ್ರಣಕ್ಕೆ ತರಲು ನಾವು ಮಾಡಬೇಕಾದುದು ಒಂದೇ ಅದು ಯೋಗ.ನಮ್ಮ ಮಾನಸಿಕ ಹಾಗೂ ದೈಹಿಕ ಯೋಗಕ್ಷೇಮಕ್ಕಾಗಿ ಸಮಗ್ರ ಅಭ್ಯಾಸವಾಗಿ ಯೋಗದ ಬಗ್ಗೆ ಜಾಗ್ರತಿ ಮೂಡಿಸುವ ಸಲುವಾಗಿಯೇ ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿರಲಾಗುತ್ತದೆ.
ಅಲ್ಲದೆ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅವಿರತ ಪ್ರಯತ್ನದಿಂದಾಗಿ ಜೂನ್ 21 ಅನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರಾಷ್ಟ್ರೀಯ ಯೋಗ ದಿನವನ್ನಾಗಿ 2015 ರಂದು ಘೋಷಿಸಿತು. ಈ ದಿನವೂ ಇಂದಿಗೂ ಚಾಲ್ತಿಯಲ್ಲಿದೆ, ಆದರೆ ಬೇಸರದ ಸಂಗತಿ ಏನೆಂದರೆ ಕೇವಲ ಜೂನ್ 21ರಂದು ಮಾತ್ರ ಯೋಗವು ಸೀಮಿತವಾಗಿದೆ ಎಂಬುದು. ನಮ್ಮ ಜೀವನಕ್ಕೆ ಬೇಕಾಗುವ ಎಲ್ಲಾ ಸಂಗತಿಗಳನ್ನು ನಾವು ಚಾಚೂ ತಪ್ಪದೆ ಮಾಡುತ್ತೇವೆ. ಆದರೆ ನಮ್ಮ ಜೀವನವನ್ನು ಸರಿದಾರಿಯಲ್ಲಿ ನಡೆಸಿಕೊಂಡು ಹೋಗಬೇಕಿದ್ದರೆ ಮೊದಲಿಗೆ ನಾವು ಆರೋಗ್ಯವಂತರಾಗಿರಬೇಕು. ಕೆಲವೊಮ್ಮೆ ತಮ್ಮ ಬಳಿಯೇ ಸಮಸ್ಯೆಗಳಿಗೆ ಪರಿಹಾರವಿದ್ದರೂ ಅದರ ಮೂಲ ಹುಡುಕದೆ ಸುಮ್ಮನಿರುತ್ತೇವೆ. ಹಾಗೇ ನಮ್ಮ ಆರೋಗ್ಯ ಹದಗೆಟ್ಟಿದೆ ಅಥವಾ ಹದಗೆಡುತ್ತಿದೆ ಎಂಬ ಸುಳಿವು ಸಿಕ್ಕರೆ ಸಾಕು ದಿನದಲ್ಲಿ ನಾಲ್ಕೈದು ಬಾರಿ ಆಸ್ಪತ್ರೆಗೆ ಹೋಗಲು ಮುಂದಾಗುತ್ತೇವೆ. ಇದರ ಬದಲಿಗೆ ನಮ್ಮ ಆರೋಗ್ಯಸ್ಥಿತಿ ಹದಗೆಡುವ ಮೊದಲೇ ನಮ್ಮನ್ನು ನಾವೇ ರೋಗ ಮುಕ್ತಗೊಳಿಸಿಕೊಳ್ಳಲು ಯೋಗದ ಮುಖಾಂತರ ಮುಂದುವರಿಯಬೇಕಿದೆ.
ಪ್ರತೀ ವರ್ಷದಂತೆ ಈ ಬಾರಿಯೂ 'ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ' ಎಂಬುದನ್ನು ಪ್ರತಿನಿಧಿಸುವ "ವಸುಧೈವ ಕುಟುಂಬಕಂ"ಎಂಬ ಆಶಯದೊಂದಿಗೆ ಆಚರಿಸಲಾಗುತ್ತಿದೆ. ಅದರಂತೆಯೇ ಯೋಗವು ನಮಗೆ ಎಲ್ಲಾ ರೀತಿಯಲ್ಲಿಯೂ ಸಹಾಯಮಾಡುತ್ತದೆ. ಇದಲ್ಲದೆ, ದಿನವು ಮಾನಸಿಕ ಸ್ಪಷ್ಟತೆ ಮತ್ತು ಸ್ವಯಂ-ಅರಿವನ್ನು ಬೆಳೆಸಲು ನಿಯಮಿತವಾದ ಧ್ಯಾನ ಅಭ್ಯಾಸವನ್ನು ಬೆಳೆಸಲು ಪ್ರೋತ್ಸಾಹಿಸುತ್ತದೆ, ಇದು ಒತ್ತಡ-ಮುಕ್ತ ವಾತಾವರಣದಲ್ಲಿ ಅಭಿವೃದ್ಧಿ ಹೊಂದಲು ಅವಶ್ಯಕವಾಗಿದೆ. ಆದ್ದರಿಂದ ಜೂನ್ 21ರಂದು ಮಾತ್ರ ಯೋಗ ದಿನಾಚರಣೆಯಾಗಿರದೆ,ಪ್ರತೀನಿತ್ಯದ ಆಚರಣೆಯನ್ನಾಗಿ ಮಾಡಿಕೊಂಡು ನಮ್ಮ ಜೀವದ ಅಧ್ಯಾಯವಾಗಬೇಕು.
-ಮೇಘಾ ಡಿ. ಕಿರಿಮಂಜೇಶ್ವರ
ಅಂಬಿಕಾ ಮಹಾವಿದ್ಯಾಲಯ, ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ