-ಡಾ. ಎ. ಜಯಕುಮಾರ ಶೆಟ್ಟಿ
ನಮ್ಮ ಭಯ
ಹವಾಮಾನ ವೈಪರೀತ್ಯವು ನಮ್ಮ ಪೃಥ್ವಿಯ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ತಡೆಯುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಜಾಗತಿಕ ತಾಪಮಾನಕ್ಕೆ 1.5 ಡಿಗ್ರಿ ಸೆಲ್ಶಿಯಸ್‌ನ ಮಿತಿಯನ್ನು ನಿಗದಿಪಡಿಸಿತ್ತು. ಆದರೆ ಈ ಮಿತಿಯನ್ನು ಇತ್ತೀಚೆಗೆ ಮೀರಿರುವುದು ಆಘಾತಕಾರಿ ಸನ್ನಿವೇಶಕ್ಕೆ ಮುನ್ನುಡಿಯೋ ಎಂಬ ಭಯ ಕಾಡಲಾರಂಭಿಸಿದೆ.
2023 ಜೂನ್ 6 ರಂದು ಗರಿಷ್ಠ ತಾಪಮಾನ ದಾಖಲು
ಕೈಗಾರಿಕಾ ಕ್ರಾಂತಿಯ ಮೊದಲು ಭೂಮಿಯ ಸರಾಸರಿ ತಾಪಮಾನ ಎಷ್ಟಿತ್ತೋ ಅದಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ನಷ್ಟು ಏರಿಕೆಯಾದರೆ ಮನುಷ್ಯನ ಸಹಿತ ಬಹುತೇಕ ಜೀವ ಸಂಕುಲಗಳು ನಾಶವಾಗುತ್ತವೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಬಂದಿದ್ದಾರೆ. ತಾಪಮಾನ 1.5 ಡಿಗ್ರಿ ಏರುವ ಹೊತ್ತಿಗೆ ಸಾಗರಗಳು ಏರಿಬಂದು ಬಹುಪಾಲು ಸಣ್ಣ ದ್ವೀಪರಾಷ್ಟ್ರಗಳು ಮುಳುಗಡೆಯಾಗಲಿದೆ ಎಂಬ ಭೀತಿಯನ್ನೂ ವ್ಯಕ್ತಪಡಿಸಿದ್ದಾರೆ. ಇದೇ ಜೂನ್ 9 ರಂದು ಜಾಗತಿಕ ತಾಪಮಾನವು ಗರಿಷ್ಠ 1.69 ಡಿ.ಸೆ. ದಾಖಲಾಗುವ ಮೂಲಕ ಅಪಾಯದ ಕರೆಗಂಟೆಯನ್ನು ಬಾರಿಸಿದೆ.
ಪ್ಯಾರಿಸ್ ಒಪ್ಪಂದ:
ಪ್ಯಾರಿಸ್ ನಲ್ಲಿ 2015ರ ಅಂತ್ಯದಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ರಾಷ್ಟ್ರಗಳು ಜಾಗತಿಕ ತಾಪಮಾನ ಏರಕೆಯನ್ನು ಮಿತಿಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಿದವು. ಅನಿಲ ಸೂಸುವಿಕೆಯನ್ನು ತಗ್ಗಸುವ ಹಾಗೂ ಈ ಶತಮಾನದಲ್ಲಿ ಜಾಗತಕ ತಾಪಮಾನ ಏರಿಕೆಯನ್ನು 2 ಡಿ.ಸೆ.ಗೆ ಮಿತಿಗೊಳಿಸುವ ದೀರ್ಘಾವಧಿ ಧ್ಯೇಯವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಈ ಎಚ್ಚರಿಕೆ ಹಾಗೂ ಒಪ್ಪಂದ ಘೋಷಣೆಯಾಗಿಯೇ ಉಳಿಯಿತು. ಇಚ್ಚಾಶಕ್ತಿ ಮತ್ತು ಬದ್ಧತೆಯ ಕೊರತೆಯಿಂದಾಗ ಇಂದಿಗೂ ಪರಪೂರ್ಣವಾಗಿ ಕಾರ್ಯಗತವಾಗದೇ ಇರುವುದು ವಿಷಾದನೀಯ.
ನಾಡಿಗೆ ಬರ ಬಾರದಿರಲಿ:
ಜೂನ್ ತಿಂಗಳು ಮುಗಿಯುತ್ತಾ ಬಂದರೂ ಮುಂಗಾರು ಚುರುಕುಗೊಂಡಿಲ್ಲ. ನಮ್ಮ ರಾಜ್ಯದ ಜಲಾಶಯಗಳಲ್ಲಿ ನೀರನ ಕೊರತೆ ಉಂಟಾಗಿ ವಿದ್ಯುತ್ ಉತ್ಪಾದನೆ ಸ್ಥಗತಗೊಳ್ಳುವ ಆತಂಕ ಎದುರಾಗಿದೆ. ರಾಜ್ಯದಲ್ಲಿ ಜೂ. 1ರಿಂದ 17ರ ವರೆಗೆ ವಾಡಿಕೆಗಿಂತ ಶೇ.72 ರಷ್ಟು ಮಳೆ ಕೊರತೆಯಾಗಿದೆ ಎಂದು ರಾಜ್ಯ ನೈಸರ್ಗಕ ವಿಪತ್ತು ನಿರ್ವಹಣ ಕೇಂದ್ರ ತಿಳಿಸಿದೆ. ಮುಂಗಾರು ಇನ್ನೂ ಚುರುಕುಗೊಳ್ಳದೆ ಇದ್ದರೆ ಬಿತ್ತನೆ ವಿಳಂಬವಾಗಿ ಆಹಾರ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರೊಂದಿಗೆ ಬರಗಾಲದ ಕರಿಛಾಯಯೂ ತಲೆದೋರಿದೆ.
ಪ್ರತಿಯೊಬ್ಬರಲ್ಲಿ ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ಮೂಡಿಸುವ ಸಲುವಾಗಿ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ. ಸುಸ್ಥಿರ ಅಭಿವೃದ್ಧಿಯ ಆಶಯವೇ ಅಭಿವೃದ್ಧಿ ಪ್ರಯತ್ನಗಳು ಪರಿಸರವನ್ನು ನಾಶಮಾಡಬಾರದು ಮತ್ತು ಹವಾಮಾನ ವೈಪರೀತ್ಯವನ್ನುಂಟು ಮಾಡಬಾರದು ಎಂದು. ಸುಸ್ಥಿರ ಅಭಿವೃದ್ಧಿ ಫಲಿತಾಂಶಗಳನ್ನು ಸಾಧಿಸಲು ಹವಾಮಾನ ವೈಪರೀತ್ಯ ತಡೆ ಕಾರ್ಯತಂತ್ರ ಮತ್ತು ಅಳವಡಿಕೆಗೆ ಒತ್ತು ನೀಡಬೇಕಾಗಿದೆ. ಏರುತ್ತಿರುವ ತಾಪಮಾನವು ಪರಿಸರ-ಆರ್ಥಿಕ-ಸಾಮಾಜಿಕ ಸ್ಥಿತಿಗತಿಯ ಮೇಲೆ ಗರಿಷ್ಟ ಪರಿಣಾಮಗಳಾಗಲಿವೆ.
ಸಾಮಾನ್ಯರ ದುರಂತ:
"ಟ್ರಾಜೆಡಿ ಆಫ್ ದಿ ಕಾಮನ್ಸ್" ಎನ್ನುವುದು ಅರ್ಥಶಾಸ್ತ್ರದಲ್ಲಿ ಬರುವ ಪರಿಕಲ್ಪನೆ. ಸಾಮಾನ್ಯ ಹುಲ್ಲುಗಾವಲು ಅಥವಾ ಮೀನುಗಾರಿಕೆಯಂತಹ ಸಂಪನ್ಮೂಲವನ್ನು ಮಿತಿಮೀರಿದ ಮತ್ತು ಅಂತಿಮವಾಗಿ ತಮ್ಮ ಸ್ವಂತ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸುವ ವೈಯಕ್ತಿಕ ಬಳಕೆದಾರರ ಕ್ರಿಯೆಗಳಿಂದಾಗಿ ಖಾಲಿಯಾಗುವ ಪರಿಸ್ಥಿತಿಯನ್ನು ವಿವರಿಸಲು ಬಳಸಲಾಗುವ ಪದವಾಗಿದೆ.
ಹವಾಮಾನ ವೈಪರೀತ್ಯವು ಕೂಡಾ ಎಲ್ಲರ ಒಳಿತನ್ನು ಗಮನಿಸದೆ ಸ್ವಂತ ಹಿತಾಸಕ್ತಿಗೆ ಹೆಚ್ಚು ಗಮನ ನೀಡುವ ವ್ಯವಹಾರ ಮತ್ತು ಜೀವನ ಕ್ರಮದ ಪರಿಣಾಮ. ಇದರಿಂದ ಹೆಚ್ಚು ತೊಂದರೆಗೊಳಗಾಗುವವರು ಬಡವರು.
'ಮತಿಯ ವಿಶ್ವದಿ ಬೆರೆಸಿ ಜೀವಿತವ ವಿಸ್ತರಿಸೆ'
ಎಲ್ಲರ ಒಳಿತು, ನಮ್ಮೆಲ್ಲರಿಗೂ ಒಳಿತಾಗಲಿದೆ ಎಂಬುದನ್ನು ಒಪ್ಪಿಕೊಳ್ಳುವವರೆಗೆ ಸುಸ್ಥಿರ ಅಭಿವೃದ್ಧಿ ಸಾಧ್ಯವಾಗದು. ಪ್ರತಿ ಹಜ್ಜೆಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸಂವರ್ಧನೆ ನಮ್ಮ ಗುರಿಯಾಗಬೇಕು. ನಮ್ಮ ನಡವಳಿಕೆ, ಜೀವನಕ್ರಮಗಳು ನಮಗೂ, ಸಮಷ್ಠಿಗೂ ಹಿತವನ್ನು ಉಂಟುಮಾಡುವಂತಾದಾಗ ಮಾತ್ರ ನಿಜವಾದ ಅರ್ಥದಲ್ಲಿ ಅಭಿವೃದ್ಧಿಯನ್ನು ಪಡೆಯಲು ಸಾಧ್ಯ.
“ಮತಿಯ ವಿಶ್ವದಿ ಬೆರೆಸಿ ಜೀವಿತವ ವಿಸ್ತರಿಸೆ” ಎಂಬ ಡಿವಿಜಿಯವರ ಮಂಕುತಿಮ್ಮನ ಕಗ್ಗದ ಸಾಲು ಮನದ ಆಲೋಚನೆಯನ್ನು ವಿಸ್ತಾರಗೊಳಿಸಿ ಸ್ವಾರ್ಥವನ್ನು ಬಿಟ್ಟು, ಸರ್ವರ ಹಿತ ಒಳಿತಿಗಾಗಿ ತೊಡಗಸಿಕೊಳ್ಳುವುದೇ ಜೀವನದಲ್ಲಿ 'ಮುಕ್ತಿ'ಗೆ ದಾರಿ ಎಂಬ ಸೂತ್ರವನ್ನು ತೆರೆದಿಡುತ್ತದೆ. ಕಗ್ಗದ ಈ ಸಾಲು ನಮ್ಮ ಜೀವನ ಕ್ರಮಕ್ಕೆ ಮಾರ್ಗದರ್ಶಿಯಾಗಬೇಕು. ನಮ್ಮ ಪ್ರತಿಯೊಂದು ಚಟುವಟಿಕೆಗಳು ಹವಾಮಾನ ವೈಪರೀತ್ಯಕ್ಕೆ ಕೊಡುಗೆ ನೀಡದಿರಲಿ ಎಂಬ ಎಚ್ಚರ ಸಹ್ಯ ಪರಿಸರ ನಿರ್ಮಾಣದೊಂದಿಗೆ ಸುಸ್ಥಿರ ಅಭಿವೃದ್ಧಿಗೆ ನಾಂದಿ.

-ಡಾ. ಎ. ಜಯಕುಮಾರ ಶೆಟ್ಟಿ
ನಿವೃತ್ತ ಪ್ರಾಚಾರ್ಯರು
ಶ್ರೀ. ಧ.ಮಂ. ಕಾಲೇಜು, ಉಜಿರೆ-574240
ದೂ: 9448154001
ajkshetty@gmail.com
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ