ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆ ರದ್ದತಿ ದುಸ್ಸಾಹಸ ಮಾಡಬೇಡಿ: ಪೇಜಾವರ ಶ್ರೀಗಳ ಎಚ್ಚರಿಕೆ

Upayuktha
0

ಉಡುಪಿ: ಮತಾಂತರ ನಿಷೇಧ ಕಾಯ್ದೆ ಮತ್ತು ಗೋಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ನೂತನ ಕಾಂಗ್ರೆಸ್ ಸರಕಾರದ ಕ್ರಮವನ್ನು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬಲವಾಗಿ ಖಂಡಿಸಿದ್ದಾರೆ.


ಆಮಿಷ ಅಥವಾ ಬಲವಂತದ ಮತಾಂತರದ ಹಾವಳಿಯಿಂದಾಗಿ ಕುಟುಂಬದಲ್ಲಿ ತಂದೆ-ತಾಯಿ, ಮಕ್ಕಳು ಬೇರೆ ಬೇರೆಯಾಗಿ ಇಡೀ ಕುಟುಂಬಗಳೇ ಹಾಳಾಗುವ ಪ್ರಸಂಗ ಬಂದಿತ್ತು. ಅಂತಹ ದುರ್ಭರ ಸನ್ನಿವೇಶವನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆ ನೆರವಾಗಿತ್ತು. ಆದರೆ ಈಗ ಬಂದಿರುವ ಕಾಂಗ್ರೆಸ್ ಸರಕಾರ ಈ ಕಾಯ್ದೆಯನ್ನು ರದ್ದುಪಡಿಸುವ ಮೂಲಕ ಮತಾಂತರದ ಹಾವಳಿಗೆ ಮತ್ತೆ ಅವಕಾಶ ಕೊಟ್ಟಿದೆ. ಇಂತಹ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂದು ಸ್ವಾಮೀಜಿ ಹೇಳಿದರು.



ನಮ್ಮ ಹಿಂದೂ ಸಂಸ್ಕೃತಿಯ ಪ್ರತೀಕವಾದ ಗೋಮಾತೆಯ ರಕ್ಷಣೆಗಾಗಿ ಹಿಂದಿನ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದು ಜಾರಿಗೆ ಬಂದ ನಂತರ ಕರಾವಳಿ ಭಾಗದಲ್ಲಿ ದುಷ್ಕರ್ಮಿಗಳು ಹಟ್ಟಿಗಳಿಗೆ ನುಗ್ಗಿ ಗೋವುಗಳನ್ನು ಕದ್ದೊಯ್ಯುವ ಪ್ರಕರಣಗಳು ಗಣನೀಯವಾಗಿ ನಿಯಂತ್ರಣಕ್ಕೆ ಬಂದಿದ್ದವು. ಅದರೆ ಹೊಸ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದು ಮಾಡಲು ಹೊರಟಿರುವುದು ಕಟುಕರಿಗೆ ರಾಜಾರೋಷವಾಗಿಯೇ ತಮ್ಮ ದಂಧೆ ನಡೆಸಲು ಅನುವು ಮಾಡಿಕೊಟ್ಟಂತಾಗಿದೆ. ಹೊಸದಾಗಿ ಬಂದಿರುವ ಕಾಂಗ್ರೆಸ್ ಸರಕಾರ ಈ ಕಾಯ್ದೆಗಳನ್ನು ರದ್ದುಪಡಿಸುವ ಮೂಲಕ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಿಕೊಳ್ಳದಿರಲಿ ಎಂದು ಶ್ರೀಪಾದರು ಆಗ್ರಹಿಸಿದರು.


ರಾತ್ರೋ ರಾತ್ರಿ ಕಳ್ಳರು ಬಂದು ಹಸುಗಳನ್ನು ಹಟ್ಟಿಯಿಂದ ಕದ್ದೊಯ್ಯುವ ಪರಿಸ್ಥಿತಿ ಇದೆ. ಅದನ್ನು ತಡೆಯಲು ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂದಿನ ಸರಕಾರ ತಂದಿತ್ತು. ಆದರೆ ಈಗ ಬಂದಿರುವ ಹೊಸ ಸರಕಾರ ಈ ಎರಡು ಪ್ರಮುಖ ಕಾಯ್ದೆಗಳನ್ನು ಹಿಂಪಡೆಯುವ ದುಸ್ಸಾಹಸ ಮಾಡಬಾರದು. ಜನಪ್ರತಿನಿಧಿಗಳ ಮೂಲಕ ಜನಾಭಿಪ್ರಾಯ ರೂಪಿಸಿಕೊಂಡು ಕಾಯ್ದೆಗಳನ್ನು ಹಿಂಪಡೆಯುವ ದುಸ್ಸಾಹಸ ಮಾಡಬೇಡಿ ಎಂದು ಶ್ರೀಗಳು ಎಚ್ಚರಿಕೆ ನೀಡಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top