ತುಷ್ಟೀಕರಣ, ಸೇಡಿನ ರಾಜಕಾರಣ ಮಾಡಿದರೆ ಕಾಂಗ್ರೆಸ್‌ಗೆ ತಕ್ಕ ಪಾಠ: ಸುದರ್ಶನ ಮೂಡುಬಿದಿರೆ

Upayuktha
0

ಮಂಗಳೂರು: ತುಷ್ಟೀಕರಣ ರಾಜಕೀಯವನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್, ಮತಾಂತರ ನಿಷೇಧ ಕಾಯ್ದೆ, ಎಪಿಎಂಸಿ ಕಾಯ್ದೆ, ಪಠ್ಯಪುಸ್ತಕ ಪರಿಷ್ಕರಣೆ ವಾಪಸ್ ಪಡೆಯಲು ಮುಂದಾಗಿದೆ ಎಂದು  ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಆರೋಪಿಸಿದರು.


ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಎಂದರೆ ತುಷ್ಟೀಕರಣ ಮತ್ತು ವಿಭಜನಕಾರಿ ರಾಜಕಾರಣಕ್ಕೆ ಮತ್ತೊಂದು ಹೆಸರು. ಆಮಿಷದ ಮತಾಂತರದಿಂದ ದೇಶಕ್ಕೆ ಹಾನಿ ಮತ್ತು ಅಪಾಯ ಇರುವುದನ್ನು ಅರಿತು ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತ್ತು. ಗಾಂಧೀಜಿ ಅವರು ಕೂಡ ಮತಾಂತರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಮತಾಂತರವೆಂದರೆ ರಾಷ್ಟ್ರಾಂತರದ ಪ್ರಕ್ರಿಯೆ ಕೂಡ ಆಗಿದೆ. ಈ ಕಾರಣಕ್ಕಾಗಿಯೇ ಕಾಯ್ದೆ ಜಾರಿ ಮಾಡಲಾಗಿತ್ತು. ಈಗ ಕಾಯ್ದೆ ಹಿಂಪಡೆವ ಮೂಲಕ ಕಾಂಗ್ರೆಸ್ ಒಂದು ವರ್ಗವನ್ನು ತೃಪ್ತಿಪಡಿಸಲು ಮುಂದಾಗಿದೆ ಎಂದು ಆರೋಪಿಸಿದರು.


ಪಠ್ಯ ಪುಸ್ತಕ ತಿದ್ದುಪಡಿ ವಿಚಾರದಲ್ಲಿಯೂ ಕಾಂಗ್ರೆಸ್ ಸರ್ಕಾರವು ರಾಜಕಾರಣಕ್ಕೆ ಮುಂದಾಗಿದೆ. ಸುಳ್ಳು ಇತಿಹಾಸ ಬೋಧಿಸುವ ಮೂಲಕ ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದೆ. ಎಪಿಎಂಸಿ ಕಾಯ್ದೆ ರದ್ದು ಪಡಿಸುವ ಮೂಲಕ ದಲ್ಲಾಳಿಗಳಿಗೆ ಮಣೆ ಹಾಕಲು ಮುಂದಾಗಿದೆ. ಕಾಂಗ್ರೆಸ್ ಪಕ್ಷವೇ ದಲ್ಲಾಳಿಗಳ ಕೂಟ ಆಗಿದೆ. ರೈತರಿಗೆ ಅನ್ಯಾಯ ಮಾಡುವ ಕ್ರಮಕ್ಕೆ ಅದು ಮುಂದಾಗಿದೆ. ಮಾರುಕಟ್ಟೆಗಳನ್ನು ದಲ್ಲಾಳಿಗಳ ಕೈಗೊಪ್ಪಿಸಲು ಸಿದ್ಧತೆ ಮಾಡಿದೆ. ಇದು ರೈತರನ್ನು ಮೋಸ ಮಾಡುವ ಹುನ್ನಾರ ಎಂದು ಸುದರ್ಶನ್ ಹೇಳಿದರು.


ಜೂನ್‌ 19ರಂದು ಪಕ್ಷದ ಮುಖಂಡರ ಸಭೆ ನಡೆಯಲಿದ್ದು ರಾಜ್ಯ ಸರ್ಕಾರದ ನಿರ್ಧಾರಗಳ ವಿರುದ್ಧ ಹೋರಾಟದ ರೂಪುರೇಷೆಗಳನ್ನು ತೀರ್ಮಾನ ಮಾಡಲಾಗುತ್ತದೆ. ಸರ್ಕಾರವು ಘೋಷಣೆ ಮಾಡಿರುವ ಗ್ಯಾರಂಟಿಗಳನ್ನು ವ್ಯವಸ್ಥಿತವಾಗಿ ಜಾರಿ ಮಾಡದೇ ಸಾಮಾನ್ಯ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದರು.


ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಆರಂಭಿಸುವ ಮೂಲಕ ಜಿಲ್ಲೆಯನ್ನು ಪ್ರತ್ಯೇಕಿಸುವ ಕೆಲಸ ಆಗುತ್ತಿದೆ. ಈ ಘಟಕ ಸ್ಥಾಪಿಸುವ ಮೂಲಕ ಕಾಂಗ್ರೆಸ್‌ ಪಕ್ಷವು ಯಾರನ್ನು ರಕ್ಷಣೆ ಮಾಡಲು ಹೊರಟಿದೆ ಎಂಬುದನ್ನು ಗೃಹ ಸಚಿವರು ಸ್ಪಷ್ಟಪಡಿಸಬೇಕು. ಈ ಸರ್ಕಾರಕ್ಕೆ ಹಾಗೂ ಸಚಿವರಿಗೆ ಪೊಲೀಸರ ಮೇಲೆ ವಿಶ್ವಾಸವಿಲ್ಲ. ಇಂತಹ ಹೊಣೆಗೇಡಿ ಕ್ರಮಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ನಮ್ಮ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.


ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯದರ್ಶಿ ಸುಧೀರ್‌ ಶೆಟ್ಟಿ ಕಣ್ಣೂರು, ರವಿಶಂಕರ ಮಿಜಾರು, ಕಸ್ತೂರಿ ಪಂಜ ಹಾಗೂ ರಣದೀಪ್‌ ಕಾಂಚನ್‌ ುಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top