ಆಳ್ವಾಸ್‍ನಲ್ಲಿ ‘ರೀಚ್-2023' ವಿಚಾರಸಂಕಿರಣದಲ್ಲಿ ವಕೀಲೆ ಲತಾ ಸಿ.ಎಸ್. ಹೊಳ್ಳ
ವಿದ್ಯಾಗಿರಿ (ಮೂಡುಬಿದಿರೆ): ‘ಜಗತ್ತು ಇಂದು ಡಿಜಿಟಲ್ ತೆಕ್ಕೆಗೆ ಜಾರಿದ್ದು, ಅಂತರ್ಜಾಲ ಬದುಕಿನ ಭಾಗವಾಗಿದ್ದು, ಬಳಕೆದಾರರಿಗೆ ಒಳಿತು ಕೆಡುಕಿನ ಅರಿವು ಇರಬೇಕು’ ಎಂದು ಮಂಗಳೂರಿನ ವಕೀಲೆ ಲತಾ ಸಿ. ಎಸ್ ಹೊಳ್ಳ ಎಂದು ಹೇಳಿದರು.
ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ಶುಕ್ರವಾರ ಕುವೆಂಪು ಸಭಾಂಗಣದಲ್ಲಿ ನಡೆದ ‘ಆಳ್ವಾಸ್ ರೀಚ್ -2023’ ರಾಜ್ಯ ಮಟ್ಟದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ತಂತ್ರಜ್ಞಾನದ ಬೆಳವಣಿಗೆ ದೇಶದ ಅಭಿವೃದ್ಧಿಗೆ ಪೂರಕ. ಆದರೆ, ಅದು ನಮ್ಮ ನಿಯಂತ್ರಣದಲ್ಲಿರಬೇಕು. ಅದರೆ, ಅಂತರ್ಜಾಲವು ಜಗತ್ತನ್ನು ಆಳುವ ಸರ್ವಾಧಿಕಾರಿ ಆಗಿದೆ. ಡಿಜಿಟಲ್ ಜಗತ್ತಿನಲ್ಲಿ ಕಳೆದು ಹೋದ ವ್ಯಕ್ತಿ ಒಬ್ಬಂಟಿಯಾಗುತ್ತಾನೆ. ಅದಕ್ಕಾಗಿ ಡಿಜಿಟಲ್ ಉಪವಾಸವೂ ಅವಶ್ಯ ಎಂದರು.
ತಂತ್ರಜ್ಞಾನದ ಅತಿ ಬಳಕೆಯಿಂದ ದೈಹಿಕ- ಮಾನಸಿಕ ಆರೋಗ್ಯ ಸಮಸ್ಯೆ ಉಂಟಾಗುತ್ತಿದೆ. ಹಲವರು ಕ್ರಿಮಿನಲ್ ಕೃತ್ಯಕ್ಕೂ ಕೈ ಹಾಕಿರುವುದು ವಿಷಾದನೀಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಮಾತನಾಡಿ, ‘ಬದಲಾವಣೆ ಪ್ರಕೃತಿಯ ನಿಯಮ. ಆದರೆ, ಮಾನವನ ಪ್ರತಿ ಕ್ಷಣವೂ ಅಂತರ್ಜಾಲದ ಕಪಿಮುಷ್ಠಿಯಲ್ಲಿದೆ. ಅಂತರ್ಜಾಲದಿಂದ ಒಳ್ಳೆಯ ವಿಚಾರಗಳನ್ನು ತೆಗೆದುಕೊಳ್ಳಬೇಕು. ಇದರಿಂದ ಸಾಕಷ್ಟು ಒಳ್ಳೆಯ ವಿಚಾರವನ್ನು ತೆಗೆದುಕೊಂಡು ಚಲಾವಣೆಗೆಯಲ್ಲಿರುವ ನಾಣ್ಯವಾಗಬೇಕು ಎಂದರು.
ಮಂಗಳೂರು ನಗರದ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ) ಮನೋಜ್ ಕುಮಾರ್ ಮಾತನಾಡಿ, ಸೈಬರ್ ಅಪರಾಧ ಕಾನೂನು ಬಾಹಿರ ಕೃತ್ಯ. ಸೈಬರ್ ವಂಚನೆ ಹೆಚ್ಚಾಗಿದೆ. ಸೈಬರ್ ಅಶ್ಲೀಲತೆ, ಸೈಬರ್ ಹಿಂಬಾಲಿಕೆ, ಸೈಬರ್ ಹ್ಯಾಕಿಂಗ್‍ನಿಂದಾಗಿ ಮನುಷ್ಯನಿಗೆ ಅಭದ್ರತೆ ಕಾಡುತ್ತಿದೆ. ಆನ್‍ಲೈನ್ ಜೂಜು, ಬೌದ್ಧಿಕ ಆಸ್ತಿ ಉಲ್ಲಂಘನೆ, ಫಿಶಿಂಗ್, ಕ್ರೆಡಿಟ್ ಕಾರ್ಡ್ ವಂಚನೆಗಳಂತಹ ಅಪರಾಧಗಳು ಹೆಚ್ಚುತ್ತಿವೆ ಎಂದರು.
ಆದರೆ, ವಂಚನೆಗೆ ಒಳಗಾಗದಂತೆ ಸದಾ ಎಚ್ಚರ ವಹಿಸಬೇಕು. ವಂಚನೆಗೆ ಒಳಗಾದರೆ, ಪೋಲೀಸ್ ಠಾಣೆಗೆ ದೂರು ನೀಡಿ ಕಾನೂನು ಸಹಾಯ ಪಡೆಯಬೇಕು ಎಂದರು.
ಮಂಗಳೂರಿನ ಆಪ್ತಸಮಾಲೋಚಕಿ ರುಕ್ಸಾನಾ ಹಸನ್, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ, ಪ್ರಾಧ್ಯಾಪಕಿ ಡಾ. ಸ್ವಪ್ನ, ಕಾರ್ಕಳದ ನಿಟ್ಟೆ ಗಜ್ರಿಯಾ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶುಭಕರ ಅಂಚನ್, ಆಳ್ವಾಸ್ ಸ್ಪಟಿಕಾ ವೇದಿಕೆಯ ವಿದ್ಯಾರ್ಥಿ ಸಂಯೋಜಕ ಅಕ್ಷಯ ಇದ್ದರು.
ವಿದ್ಯಾರ್ಥಿನಿ ಲೂಯಿಸ್ ಮತ್ತು ಸಮೀಕ್ಷಾ ನಿರೂಪಿಸಿದರು. ವಿದ್ಯಾರ್ಥಿ ಸರ್ವೈಶ್ ಸ್ವಾಗತಿಸಿ, ಸುಜನ್ ಶೆಟ್ಟಿ ವಂದಿಸಿದರು.
ವಿಚಾರಸಂಕಿರಣದ ಅಂಗವಾಗಿ ವಿದ್ಯಾರ್ಥಿಗಳಿಗೆ ಪೋಸ್ಟರ್ ಮೇಕಿಂಗ್, ಮೈಮ್ ಷೋ, ಕಿರುಚಿತ್ರ ಪ್ರದರ್ಶನ, ಸೋಶಿಯಲ್ ಮೆಲೋಡಿ, ಪ್ರಬಂಧ ಮಂಡನೆ ಸ್ಪರ್ಧೆಗಳು ನಡೆಯಿತು. ರಾಜ್ಯದ 13 ಕಾಲೇಜುಗಳಿಂದ 325ಕ್ಕೂ ಅಧಿಕ ವಿದ್ಯಾರ್ಥಿಗಳು ರಾಜ್ಯಮಟ್ಟದ ವಿಚಾರಸಂಕಿರಣದಲ್ಲಿ ಭಾಗವಹಿಸಿದರು.
ಸಮಾರೋಪ ಸಮಾರಂಭ
ಮಾಹೆಯ ವಿದ್ಯಾರ್ಥಿ ಸಮಾಲೋಚಕ ಡಾ ರಾಯನ್ ಚಾಲ್ರ್ಸ ಮಾಥಾಯಸ್, ಮಂಗಳೂರು ವಿವಿಯ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ ಮೋಹನ ಸಿಂಘೆ, ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ