ಛಲದಿಂದ ಕನಸು ನನಸು ಮಾಡಿ : ಪ್ರೊ. ಎಂ ಸದಾಕತ್

Upayuktha
0

 ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ(ಬಿಎಡ್) ನೂತನ ವಿದ್ಯಾರ್ಥಿಗಳಿಗೆ ಸ್ವಾಗತ



ವಿದ್ಯಾಗಿರಿ: ಬದುಕಿನಲ್ಲಿ ಗುರಿಯಿದ್ದಾಗ ಮಾತ್ರ ಅನನ್ಯವಾದುದ್ದನ್ನು ಸಾಧಿಸಲು ಸಾಧ್ಯ. ಗುರಿಯೆಡೆಗಿನ ಶ್ರಮ ನಿಮ್ಮ ಯಶಸ್ಸನ್ನು ನಿರ್ಧರಿಸುತ್ತದೆ ಎಂದು ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ ಸದಾಕತ್ ಹೇಳಿದರು. 


ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಕುವೆಂಪು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನೂತನ ವಿದ್ಯಾರ್ಥಿಗಳ ಸ್ವಾಗತ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 


‘ಪ್ರತಿಕ್ಷಣವೂ ನಿಮಗೆ ನಿಮ್ಮ ಗುರಿ ಗೋಚರಿಸುತ್ತಿರಬೇಕು. ವಿದ್ಯಾಭ್ಯಾಸದ ಮೂಲಕ ನಾವು ನಮ್ಮ ಎಲ್ಲ ಜಂಜಾಟಗಳಿಗೆ ಮುಕ್ತಿ ನೀಡಲು ಸಾಧ್ಯ. ಆದರೆ, ಅಧ್ಯಯನವೊಂದರ ಪ್ರಕಾರ ಕೇವಲ ಶೇ 1 ರಷ್ಟು ವಿದ್ಯಾರ್ಥಿಗಳು ಮಾತ್ರ ಸ್ಪಷ್ಟ ಗುರಿಯನ್ನು ಹೊಂದಿರುತ್ತಾರೆ’ ಎಂದರು. 


‘ಗುರಿ ಸಾಧಿಸುವ ಸಾಧಕರಿಗೆ ಡಾ.ಮೋಹನ ಆಳ್ವ  ಬಹುದೊಡ್ಡ ಮಾದರಿ. ಅವರು ತಮ್ಮ ಗುರಿಯೆಡೆಗಿನ ಶ್ರಮದಿಂದ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ’ ಎಂದರು. 

‘ನಿಮ್ಮ ಕನಸನ್ನು ನನಸು ಮಾಡಲು ಪ್ರೋತ್ಸಾಹವೂ ಅಗತ್ಯ. ಅಂತಹ ಪ್ರೋತ್ಸಾಹಭರಿತ ವಾತಾವರಣ ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿದೆ’ ಎಂದರು. 


ಆಳ್ವಾಸ್ ಕಾಲೇಜು ಆಡಳಿತಾಧಿಕಾರಿ ಬಾಲಕೃಷ್ಣ  ಶೆಟ್ಟಿ ಮಾತನಾಡಿ, ‘ನಾವು ಸ್ಪರ್ಧಾತ್ಮಕ ಜಗತ್ತಿನಲ್ಲಿ ಇದ್ದೇವೆ. ಇಲ್ಲಿ ಕಷ್ಟಪಟ್ಟು ಕೆಲಸ ಮಾಡುವುದಕ್ಕಿಂತ ಚಾಣಾಕ್ಷ ಕೆಲಸ ಅಗತ್ಯವಾಗಿದೆ ಎಂದರು. 


ಜಗತ್ತಿನಲ್ಲಿ  ಎರಡು ವರ್ಗದ ಜನರು ಇರುತ್ತಾರೆ. ಒಂದು ವರ್ಗ ಎಲ್ಲ ಹೆಸರನ್ನು ನೆನಪಿಟ್ಟುಕೊಂಡರೆ, ಇನ್ನೊಂದು ವರ್ಗ ತಮ್ಮ ಹೆಸರನ್ನು ಇತರರು ನೆನಪಿಟ್ಟುಕೊಳ್ಳುವ ಒಳ್ಳೆಯ ಕೆಲಸ ಮಾಡುತ್ತದೆ. ಈ ಪೈಕಿ ನೀವು ಯಾರಾಗುತ್ತೀರಿ ಎಂದು ನಿರ್ಧರಿಸಿ ಎಂದರು. 

 ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. 


ಆಳ್ವಾಸ್ ಶಿಕ್ಷಣ ಕಾಲೇಜು ಪ್ರಾಂಶುಪಾಲ ಶಂಕರಮೂರ್ತಿ ಎಚ್.ಕೆ. ಮಾತನಾಡಿ, ಕೌಶಲ, ಜ್ಞಾನ, ಅನುಭವದ ಜೊತೆ ನಿಮಗೆ ತರಬೇತಿ ನೀಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.  ಪ್ರಶಿಕ್ಷಣಾರ್ಥಿ ಶ್ವೇತಾ ಪೈ ಕಾರ್ಯಕ್ರಮ ನಿರೂಪಿಸಿ,  ವೈಷ್ಣವಿ ಸ್ವಾಗತಿಸಿ, ಭವ್ಯಶ್ರೀ ವಂದಿಸಿದರು. 

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top