ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ‘ವೇದಾಂಗ-2023’
ವಿದ್ಯಾಗಿರಿ (ಮೂಡುಬಿದಿರೆ): ‘ವೇದಾಂಗಗಳಿಲ್ಲದೆ ವೇದ ಅಪೂರ್ಣ’ ಎಂದು ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದ ಸ್ವಾಮೀಜಿ ಹೇಳಿದರು.
ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆಯುರ್ವೇದ ಸಂಹಿತಾ ಮತ್ತು ಸಿದ್ಧಾಂತ ವಿಭಾಗದ ವತಿಯಿಂದ ಶನಿವಾರ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ‘ವೇದಾಂಗ 2023' ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಾ, ಕಲ್ಪ, ನಿರುಕ್ತಾ, ವ್ಯಾಕರಣ, ಛಂದಸ್ಸು, ಜ್ಯೋತಿಷ್ಯ ಎಂಬ ಆರು ವೇದಾಂಗಗಳಿವೆ. ನಿರಂತರ ಅಭ್ಯಾಸದ ಮೂಲಕ ವೇದಗಳನ್ನು ಅರ್ಥೈಸಿಕೊಳ್ಳಲು ಸಾಧ್ಯ ಎಂದರು.
ವಿಶ್ವಕ್ಕೆ ಜ್ಞಾನದ ಕೊಡುಗೆ ನೀಡಿದವರು ಭಾರತೀಯರು. ಯೋಗ, ಆಯುರ್ವೇದದ ಹುಟ್ಟು ಭಾರತದಲ್ಲೇ ಆಗಿದೆ. ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿಗಳು ಸಂಸ್ಕøತ ಶ್ಲೋಕಗಳ ಮೂಲಧಾತು ಹಾಗೂ ಅರ್ಥವನ್ನು ಅರಿತುಕೊಂಡು ಪಠಿಸಬೇಕು ಎಂದು ಸಲಹೆ ನೀಡಿದರು.
ಆಯುರ್ವೇದಕ್ಕೆ ಸಮನಾದ ಅನೇಕ ಉತ್ಪನ್ನಗಳು ಇಂದು ಸೃಷ್ಟಿಯಾಗುತ್ತಿವೆ. ಆದರೆ ಈ ಎಲ್ಲಾ ಹೊಸ ಉತ್ಪನ್ನಗಳಿಗೆ ಅಡಿಪಾಯ ಆಯುರ್ವೇದ ಎಂದರು.
ಪ್ರತಿಯೊಂದು ಸಸಿಯು ಔಷಧೀಯ ಗುಣವನ್ನು ಹೊಂದಿದೆ. ಇದರ ಸಂಶೋಧನೆ ಅಗತ್ಯ ಎಂದ ಅವರು, ನಮ್ಮ ಸಂಸ್ಕೃತಿಯನ್ನು ಪ್ರಾಯೋಗಿಕ ಅನ್ವಯದಿಂದ ಮಾತ್ರ ಉಳಿಸಲು ಸಾಧ್ಯ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ಉಲ್ಲೇಖಿಸಿದರು.
ನಾವು ಮಾಡುವ ಎಲ್ಲ ಕೆಲಸಗಳು ಉಪಪ್ರಜ್ಞೆಯಾಗಿ ಮೆದುಳಿನಲ್ಲಿ ಶೇಖರಣೆಯಾಗಿ ಮುಂದೆ ಅನೇಕ ಕ್ರಿಯೆಗಳನ್ನು ಪ್ರಚೋದಿಸುತ್ತದೆ. ಇದರಿಂದ ದೇಹ ಮತ್ತು ಮನಸ್ಸು ಕಾಯಿಲೆಯ ಕಾರ್ಖಾನೆಯಾಗುತ್ತದೆ ಎಂದು ಮಾಹಿತಿ ನೀಡಿದರು.
ಕೋಲ್ಕತ್ತಾದ ಬೇಲೂರು ಮಠದಲ್ಲಿರುವ ವಿವೇಕಾನಂದ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಹಾಗೂ ರಾಮಕೃಷ್ಣ ಮಿಷನ್‍ನ ಭಾರತೀಯ ಪರಂಪರೆ ಶಾಲೆಯ ಸಂಸ್ಕೃತ ಮತ್ತು ತತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ಜಪಸಿದ್ಧಾನಂದ ಸ್ವಾಮೀಜಿ ಗುರುವಂದನೆ ಮಂತ್ರದ ಅರ್ಥವನ್ನು ವಿವರಿಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಕೆನರಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಿ. ಎನ್. ಭಟ್, ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಜಿತ್ ಎಂ, ಕಾಲೇಜಿನ ಡೀನ್ ಡಾ. ರವಿಪ್ರಸಾದ್ ಹೆಗ್ಡೆ, ಸಂಹಿತಾ ಮತ್ತು ಸಿದ್ಧಾಂತ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯ ಸರಸ್ವತಿ ಇದ್ದರು.
ಡಾ. ಪೃಥ್ವಿ ಭಟ್ ಪ್ರಾರ್ಥಿಸಿ, ಡಾ. ಗೀತಾ ಬಿ. ಮಾರ್ಕಂಡೆ ನಿರೂಪಿಸಿ, ಡಾ. ಸತ್ಯನಾರಾಯಣ ಭಟ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ