ತಂದೆ ಎಂದರೆ ಮನದಲ್ಲಿ ಏನೋ ಒಂದು ರೀತಿಯ ಹಬ್ಬದೌತಣ, ಮೊಗದಲ್ಲಿ ಎಲ್ಲಿಲ್ಲದ ಕಿರುನಗೆ ಮೂಡುವುದು.ತಂದೆ ಎಂದರೆ ಗದರಿಸುವ ಜೀವ ಎನ್ನುವರು, ಆದರೆ ಅವರ ಪ್ರೀತಿಯನ್ನರಿತವರು ಬಲ್ಲರು ತಂದೆ ಪ್ರೀತಿಯ. ತಾಯಿಯು ರೈಲಿನಂತಾದರೆ, ತಂದೆಯು ರೈಲಿನ ಅಡಿಪಾಯವಾಗಿರುತ್ತಾರೆ. ಇಂದು ನಾನು ನನ್ನ ಜೀವನದ ಅಳಿಸಲಾಗದ ಕಹಿ ಘಟನೆಯನ್ನು ನಿಮ್ಮೊಂದಿಗೆ ಹೇಳಹೊರಟಿದ್ದೇನೆ.
ಅಪ್ಪ ಎಂದರೆ ಮನದೊಳಗೆ ಅಚ್ಚು- ಮೆಚ್ಚು. ಅಪ್ಪ ಬರುತ್ತಿದ್ದಾರೆಂಬ ಸುದ್ದಿ ಕೇಳಿದಾಗ ಕಾಲಿಗೊಂದು ನಡುಕ. ನಮ್ಮ ಪುಟ್ಟ ಪ್ರಪಂಚದಲ್ಲಿ ನಲಿಯುವೆವು, ಕುಣಿಯುವೆವು, ನಮ್ಮದೊಂದು ಬೃಂದಾವನ. ನಾನೊಂದು ಹಟಮಾರಿ ತುಂಟ, ನನ್ನನ್ನು ನಗಿಸಲು ನೀ ಆಗುವೆ ಸಂತ. ಎಳವೆಯಿಂದಲೂ ಮನೆಯನ್ನು ಬಿಟ್ಟಿರದ ನಾನು, ನನ್ನ ಗುರಿಯ ವಿದ್ಯಾಭ್ಯಾಸಕ್ಕೆಂದು ಮನೆಯನ್ನು ತೊರೆದು ದೂರದ ಊರಿಗೆ ಹೋಗಲು ಕಠಿಣ ನಿರ್ಧಾರ ಮಾಡಿದೆ. ಮರುದಿನ ಅಪ್ಪ , ಅಮ್ಮ ಹಾಗೂ ಅಕ್ಕ ಮನದಲ್ಲಿ ದುಃಖವನ್ನು ನುಂಗಿ, ಮೊಗದಲ್ಲಿ ನಗು ಬೀರುತ್ತ ನನಗೆ ಹಾರೈಸಿ ಕಳುಹಿಸಿದರು. ಮನೆಯನ್ನು ತೊರೆದು ಬಂದ ನನಗೆ ಮನದಲ್ಲಿ ಏನೋ ಒಂದು ರೀತಿಯ ಸಂಕಟ.
"ಹತ್ತಿರವಿದ್ದಾಗ ತಂದೆ-ತಾಯಿಯ ಬೆಲೆ ತಿಳಿಯದು ದೂರವಾದಾಗ ಗೊತ್ತಾಗುವುದು" ಎಂಬ ಮಾತಿನ ಸತ್ಯರ್ಥದಂತೆ ನನ್ನಲ್ಲೂ ಮೂಡಿತು. ಅಪ್ಪ ನನ್ನನ್ನು ಕಾಣದೆ, ಮನದಲ್ಲಿಯೇ ನೋವು ನುಂಗುತ್ತಾ, ಮಾನಸಿಕವಾಗಿ ಕುಗ್ಗಿದ್ದರು. ಅಪ್ಪ ನನ್ನನ್ನು ಇಷ್ಟು ಹಚ್ಚಿಕೊಂಡಿದ್ದಾರೆಂಬ ಸಂತೋಷ ನನ್ನದು. ಒಂದು ದಿನ ಅಪ್ಪ ನನ್ನ ಬಳಿ ಮಾತನಾಡಬೇಕೆಂದು ನಾನಿದ್ದ ಪಿ.ಜಿ ಆಂಟಿಗೆ ಕರೆ ಮಾಡಿದರು. ಆದರೆ ನಾನು ಆ ಸಮಯದಲ್ಲಿ ಕ್ರಿಕೆಟ್ ಆಡಲೆಂದು ಕ್ರೀಡಾಂಗಣಕ್ಕೆ ತೆರಳಿದ್ದೆನು. ಸುಮಾರು ರಾತ್ರಿ ಒಂದು ಗಂಟೆಗೆ ಮನೆಯಿಂದ ಪಿ.ಜಿ ಆಂಟಿಗೆ ಒಂದು ಕರೆ ಬಂದಿತ್ತು. ಅವರು ನನ್ನನ್ನು ಕರೆದು "ನೋಡಪ್ಪ ಸ್ವಲ್ಪ ಹೊತ್ತಿನಲ್ಲಿಯೇ ನಿಮ್ಮ ಮನೆಯವರು ನಿನ್ನನ್ನು ಕರೆದುಕೊಂಡು ಹೋಗಲು ಬರುತ್ತಾರೆ"ಎಂದರು. ಈ ಸುದ್ದಿಯನ್ನು ಕೇಳಿದ ನನಗೆ ಮನದಲ್ಲಿ ಆತಂಕ ಮನೆಮಾಡಿತು. ಇಷ್ಟು ಅವಸರದಿ ಬಂದ ಕಾರಣವನ್ನು ನಾನು ಮಾವನೊಡನೆ ಕೇಳಿದಾಗ ಅವರು, ನಿನ್ನ ತಂದೆಯನ್ನು ಆಸ್ಪತ್ರೆಯಲ್ಲಿ ಸೇರಿಸಲಾಗಿದೆ ಹಾಗೂ ಅವರು ನಿನ್ನನ್ನು ನೋಡಬೇಕೆಂದು ಬಯಸುತ್ತಿದ್ದಾರೆ ನೀನು ಈಗಲೇ ನಮ್ಮೊಂದಿಗೆ ಬಾ ಎಂದರು.
ಹೋಗುವ ದಾರಿಯಲ್ಲಿ ನಾನು ಎಷ್ಟೇ ಹಠ ಮಾಡಿದರು ಅವರು ಅಪ್ಪನಿಗೆ ಏನಾಗಿದೆ? ಎಂದು ಹೇಳಲಿಲ್ಲ. ಮನದಲ್ಲಿ ತುಸು ಅನುಮಾನ ಹಾಗೂ ಭಯ ಕವಿದಿತ್ತು. ಮನೆಯ ಬಳಿ ಸಮೀಪಿಸಿದಾಗ ಮನೆಯ ಮುಂದೆ ಉರಿಯುತ್ತಿದ್ದ ಬೆಂಕಿ, ಜನಜಂಗುಳಿ ಹಾಗೂ ಆಕ್ರಂದನದ ಸದ್ದು ಕೇಳಿ ಒಮ್ಮೆ ಎದೆಬಡಿತವೇ ನಿಂತಂತಾಯಿತು. ಕನಸಿನಲ್ಲೂ ಆಲೋಚಿಸದ ಕಹಿ ಘಟನೆಯೊಂದು ಕಣ್ಣೆದುರೇ ಕಾಣುವಂತಾಯಿತು. ಮುಂದೆ ಅಪ್ಪನ ಶವವನ್ನು ನೋಡಿ ಒಮ್ಮೆಲೆ ದಿಗ್ಬ್ರಮೆಗೊಂಡು ಒಂದು ನಿಮಿಷ ನಿಂತುಬಿಟ್ಟೆ. ನಾನು ಓಡಿ ಹೋಗಿ ಅಪ್ಪನನ್ನು ತಬ್ಬಿಕೊಂಡು ಅತ್ತು ಬಿಟ್ಟೆ. ಒಂದೆಡೆ ಅಮ್ಮ ಹಾಗೂ ಅಕ್ಕನ ಕಣ್ಣೀರಿನ ಬೋರ್ಗರೆತಕ್ಕೆ ಎಲ್ಲೆಯೇ ಇರಲಿಲ್ಲ. ಸ್ವಲ್ಪ ಸಮಯದ ಬಳಿಕ ಒಂಟಿಯಾಗಿ ಕುಳಿತು ಆಲೋಚಿಸಿದೆ "ಅಮ್ಮನನ್ನು ಸಮಾಧಾನ ಮಾಡಬೇಕೇ? ಅಥವಾ ಆ ದೇವರು ಮಾಡಿರುವ ಅನ್ಯಾಯವನ್ನು ಕಾಣಬೇಕೇ?" ಎಂದು. ಅಂದು ನನ್ನ ಹಾಗೂ ಮನೆಯವರ ಅಳಲಾಟಕ್ಕೆ ಮಿತಿಯೇ ಇರಲಿಲ್ಲ. ನನ್ನ ಅಪ್ಪನ ಸಾವನ್ನು ನನಗೆ ಊಹಿಸಲು ಕೂಡ ಸಾಧ್ಯವಾಗದು. ದೇವರ ಮೇಲಿನ ನಂಬಿಕೆಯೇ ಮುರಿದುಹೋಯಿತು. ದೇವರೆಂದರೆ ಕಣ್ಣು ಮುಚ್ಚಿರುವ ಕಲ್ಲಿನಂತೆ ಗೋಚರವಾಯಿತು.
ಹೊರಜಗತ್ತನ್ನೇ ತಿಳಿಯದ, ನೋವು-ಸಂಕಷ್ಟದ ಅರಿವಿಲ್ಲದ, ಮಹಾರಾಣಿಯಂತಿದ್ದ ನನ್ನ ತಾಯಿಗೆ, ಮಹಾರಾಜರ ಸಾವು ಬದುಕಿನ ಪಥವನ್ನೇ ತಿರುಚಿತು. ಅಪ್ಪನೆಂದರೆ ಮನೆಗೆ ಅಡಿಪಾಯವಿದ್ದಂತೆ. ಒಂದು ಮನೆಗೆ ಅಡಿಪಾಯವೇ ಇಲ್ಲದಿದ್ದರೆ ಆ ಮನೆ ಉಳಿಯಲು ಸಾಧ್ಯವಿಲ್ಲ. ಅಪ್ಪ ಇರುವವರೆಗೂ ಕಷ್ಟ ಎಂಬ ಪದವೇ ನಮ್ಮ ಬಳಿ ಸುಳಿಯುತ್ತಿರಲಿಲ್ಲ. ಅದೇ ಅಪ್ಪ ತೀರಿಕೊಂಡಾಗ ನೋವು ಸಂಕಷ್ಟ ಬಿಟ್ಟರೆ ನಲಿವು-ಸಂತೋಷ ಎಂಬ ಪದದ ಅರಿವೇ ಇಲ್ಲದ ಹಾಗೆ ಆಗಿದೆ.
ಅಪ್ಪನ ಸಾವು ಒಳಗೊಂದು-ಹೊರಗೊಂದು ಎನ್ನುವ ಜನರ ಮುಖವಾಡವನ್ನು ಕಳಚಿತು. ಅಪ್ಪ ಇರುವಾಗ ಎಲ್ಲರೂ ನಾ ನಿನ್ನೊಂದಿಗಿದ್ದೇನೆ, ನಾ ನಿನ್ನ ಮಿತ್ರ,ನಿನ್ನ ಸಂಬಂಧಿಕ ಎಂದು ಬರುತ್ತಿದ್ದ ಊಸರವಳ್ಳಿ ಜನರು ಅಪ್ಪನ ಸಾವಿನ ನಂತರ ಅವರ ಸುಳಿವೇ ಕಣ್ಮರೆಯಾಯಿತು. ಬೆಳೆಯುವ ವಯಸ್ಸಿನಲ್ಲಿ ಮಕ್ಕಳಿಗೆ ತಂದೆ ಬೆನ್ನುಗಾವಲಾಗಬೇಕೇ ಹೊರತು ದೂರದಲ್ಲಿರುವ ಕಪ್ಪು ನೆರಳಾಗಬಾರದು. ದಾರಿಯು ತಿಳಿಯದಾಯಿತು, ಬದುಕಿಗೆ ಸಿಡಿಲುಬಡಿದಂತಾಯಿತು.ನನ್ನ ಕನಸಿನ ಗುರಿಯ ಪಥ, ದಿಕ್ಕು ಬದಲಾಯಿಸಿತು. ರೆಕ್ಕೆ ಬಿಚ್ಚಿ ಹಕ್ಕಿಯಂತೆ ಹಾರುತಿದ್ದ ನನಗೆ ರೆಕ್ಕೆ ಮುರಿದು ಬಿದ್ದ ಪಕ್ಷಿಯನ್ನಾಗಿಸಿತು.
ಅಕ್ಕ ಬೇರೊಂದು ಊರಿನಲ್ಲಿ ಓದುತ್ತಿದ್ದು,ನಮ್ಮ ಅಮ್ಮ ಒಬ್ಬಂಟಿಯಾದ ಕಾರಣ ನಾನು ಅಮ್ಮನೊಂದಿಗೆ ಇರಲು ಇಚ್ಚಿಸಿ ಊರಿನಲ್ಲಿಯೇ ಕಾಲೇಜಿಗೆ ಸೇರಿದೆ. ಹಣದ ಅರಿವೇ ತಿಳಿಯದಿದ್ದ ನನಗೆ ಕಷ್ಟಗಳ ಸಾಲಿನ ಪೂರವೇ ಸವಾಲಾಗಿ ಎದುರಾದವು. ಬಾನಿನಲ್ಲಿ ಹಾರಾಡುವ ಕನಸನ್ನು ಕಂಡಿದ್ದ ನನಗೆ ನನ್ನ ತಂದೆಯ ಸಾವು ರೆಕ್ಕೆ ಮುರಿದು ಬಿದ್ದ ಹಕ್ಕಿಯನ್ನಾಗಿಸಿತ್ತು. ಮಿತಿಗಳಿಗೆ ಅಂಜಿ, ಆಸೆಗಳನ್ನು ಬಚ್ಚಿಟ್ಟು ಬದುಕುವಂತಾಯಿತು. ತಂದೆಯಿಂದ ದೂರವಾದ ನನಗೆ ಮನಸ್ಸಿನಲ್ಲಿ ನಾನೊಬ್ಬ ನತದೃಷ್ಟನೆನಿಸುತ್ತದೆ. ಕಷ್ಟವೆಂಬ ಪದ ಸ್ವಲ್ಪವೂ ಸೋಂಕದಂತೆ ಬೆಳೆದಿದ್ದ ನನಗೆ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯ ಮೂಡಿತು. ಇದಕ್ಕೆಲ್ಲ ತಲೆದೂಗದೆ ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಗುರಿಯನ್ನು ಎದುರಿಟ್ಟು ದಿಟ್ಟ ನಡೆಯುವ ಪಣತೊಟ್ಟಿದೆ.
ಅನಿವಾರ್ಯಕ್ಕೆ ಬಂದಿಯಾಗಿ,ಬೇರೆ ವಿಧಿ ತೋರದೆ , ಅಮ್ಮನ ಕಷ್ಟವನ್ನು ನೋಡಲಾರದೆ, ವಿಧಿಯಾಟವನ್ನು ಒಪ್ಪಿಕೊಂಡು ಸಾಗಿದೆ.
ಉಳಿದಿರುವುದೊಂದೇ, ಜೀವನದ ತಿರುಚುಗಳಿಗೆ ಹೊಂದಿಕೊಂಡು ಬದುಕುವುದು. ಮನೆಯ ಕಿರಿ ಮಗನಾದರು ಹಿರಿಯ ಜವಾಬ್ದಾರಿಯನ್ನು ಹೊತ್ತಿರುವೆ. ಜೀವನದ ಹಾದಿಯಲ್ಲಿ ಹೊಸ ಕನಸುಗಳನ್ನು ಕಟ್ಟಿ ನಡೆಯುತ್ತಿದೆ ಪಯಣ. ಕ್ರೂರಿಯಾದ ದೇವನಿಗೆ ನನ್ನ ಗುರಿಯ ಮೆಟ್ಟಿಲು ಸವಾಲಾದಂತಾಗಿದೆ.
"ನನ್ನ ಇಚ್ಛೆ ಇಷ್ಟೆ, ಇಂದು ನಮ್ಮನ್ನು ತುಳಿದವರು ಒಮ್ಮೆ ಹಿಂದುರಿಗೆ ನೋಡುವಂತೆ ಮಾಡಬೇಕು ಎಂದು". ನನ್ನ ಸತತ ಪ್ರಯತ್ನ ನನ್ನ ಅಮ್ಮ ಹಾಗೂ ಅಕ್ಕನ ಮೊಗದಲ್ಲಿ ಸಂತೋಷ ತರುವುದು.
ಆಕಾಶ್ ಒಕ್ಕಲಿಗ ಕೂರ್ಗ್.
ಪ್ರಥಮ ಬಿ ಸಿ ಎ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ



