ಉಜಿರೆ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಕಾಶ ಕನಸಾದ ಸಂದರ್ಭದಲ್ಲಿ ಸ್ಥಾಪಿತವಾಗಿದ್ದ ಎಸ್.ಡಿ.ಎಂ. ಸಂಸ್ಥೆಯು ಹಲವರ ವ್ಯಕ್ತಿತ್ವದ ಬೆಳವಣಿಗೆಗೆ ಮಹತ್ವದ ಕೊಡುಗೆಗಳನ್ನು ನೀಡಿದೆ ಎಂದು ಬೆಂಗಳೂರಿನ ಕ್ಷೇಮವನ ನಿರ್ದೇಶಕರಾದ ಶ್ರದ್ಧಾ ಅಮಿತ್ ಹೇಳಿದರು. ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಮೇ.1ರಂದು ಹಿರಿಯ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಡಿ.ಎಂ. ಸಂಸ್ಥೆ ಮೊದಲಿನಿಂದಲೂ ವ್ಯಕ್ತಿತ್ವದ ಬೆಳವಣಿಗೆಗೆ ಪೂರಕವಾಗಿರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಶಿಕ್ಷಣದೊಂದಿಗೆ ಸಾಂಸ್ಕೃತಿಕವಾಗಿಯೂ ವಿದ್ಯಾರ್ಥಿಗಳನ್ನು ಬಲಪಡಿಸುತ್ತಿದೆ. ಈ ಕಾರಣಕ್ಕಾಗಿಯೇ ಉಳಿದ ಸಂಸ್ಥೆಗಳಿಗಿಂತ ಎಸ್ ಡಿ ಎಂ ಸಂಸ್ಥೆಯು ತನ್ನದೇ ಆದ ಹೆಗ್ಗುರುತು ಮೂಡಿಸಿದೆ ಎಂದರು.
"ಬಾಲ್ಯದಿಂದಲೂ ಈ ಶಿಕ್ಷಣ ಸಂಸ್ಥೆಯೊಂದಿಗೆ ನನ್ನದು ಭಾವನಾತ್ಮಕ ಬಂಧ. ಈ ಸಂಸ್ಥೆಯ ಆಡಳಿತಾತ್ಮಕ ನಾಯಕರ ಮಾತುಗಳನ್ನ ಹತ್ತಿರದಿಂದ ಕೇಳುತ್ತಾ ಬೆಳೆದೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಅಧಿಕಾರ ಸ್ವೀಕರಿಸಿದ ನಂತರ ಕೈಗೆತ್ತಿಕೊಂಡ ಮೊದಲ ಕೆಲಸವೇ ಈ ಸಂಸ್ಥೆಯ ನಿರ್ಮಾಣ, ಡಾ. ಯಶೋವರ್ಮ ಅವರು ಪ್ರಾಂಶುಪಾಲರಾದಾಗಿನಿಂದಲೂ ಈ ಸಂಸ್ಥೆಗಾಗಿ ದುಡಿದು ಅದರ ಅಭಿವೃದ್ಧಿಗೆ ಕಾರಣಿಕರ್ತರಾದರು." ಎಂದು ನೆನಪಿಸಿಕೊಂಡರು.
ಕಾರ್ಯಕ್ರಮದ ಮುಖ್ಯ ಅತಿಥಿಯಾದ ಡಾ. ಪ್ರದೀಪ್ ಎ. ಮಾತನಾಡಿದರು. ಒಂದು ಶಿಕ್ಷಣ ಸಂಸ್ಥೆ ಹೇಗೆ ಪ್ರತಿಫಲನವಾಗುತ್ತದೆ ಎಂಬುದಕ್ಕೆ ಎಸ್.ಡಿ.ಎಂ. ಒಂದು ನಿದರ್ಶನ. ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುವ ವಿಶಿಷ್ಟ ಸಂಸ್ಥೆ ಇದಾಗಿದೆ. ಒಂದು ಶಿಕ್ಷಣ ಸಂಸ್ಥೆಯ ಮೇಲಿನ ಋಣ ತೀರಿಸಲು ಅಸಾಧ್ಯವಾದುದು. ಆದಷ್ಟು ಮಟ್ಟಿಗೆ ಸಂಸ್ಥೆಯ ಋಣವನ್ನು ತೀರಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುಮಾರ್ ಹೆಗಡೆ ಬಿ.ಎ. ಮಾತನಾಡಿದರು. ನೆನಪುಗಳನ್ನು ಮೆಲುಕು ಹಾಕಲು ಪೂರಕವಾದ ಒಂದು ಮಹತ್ವದ ವೇದಿಕೆ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಎಂದು ವಿಶ್ಲೇಷಿಸಿದರು. ನೂರಾರು ಕನಸುಗಳನ್ನಿಟ್ಟುಕೊಂಡು ಈ ಸಂಸ್ಥೆಗೆ ಪ್ರವೇಶಪಡೆದು ಕಾಲಕಳೆದಂತೆ ಪರಸ್ಪರ ಪರಿಚಿತರಾಗಿ ಎಲ್ಲರೂ ಈ ಸಂಸ್ಥೆಯ ವಿದ್ಯಾರ್ಥಿಗಳೆಂಬ ಅನುಬಂಧ ಮೂಡುತ್ತದೆ. 3500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಅಧ್ಯಯನನಿರತರಾಗಿದ್ದಾರೆ. ಕೇವಲ ಶಿಕ್ಷಣ ಒಂದೇ ಅಲ್ಲದೇ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ದಿಗೆ ಬೇಕಾದ ಚಟುವಟಿಕೆಗಳಿಗೆ ಸಂಸ್ಥೆ ಬೆಂಬಲ ನೀಡುತ್ತದೆ ಎಂದರು.
ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪೀತಾಂಬರ ಹೆರಾಜೆ ಸ್ವಾಗತಿಸಿದರೆ, ಕಾರ್ಯಕ್ರಮ ಸಂಯೋಜಕ ಧನಂಜಯ ರಾವ್ ಪ್ರಾಸ್ತಾವಿಕ ನುಡಿದರು. ಡಾ. ಮಾಧವ್ ಎನ್.ಕೆ ಅಭಿನಂದಿಸಿದರು. ಶ್ರೀಧರ್ ಕೆ.ವಿ. ವಂದಿಸಿದರು. ದಿವಾಕರ್ ಕೊಕ್ಕಡ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ