ಆಳ್ವಾಸ್ ಈ ನೆಲದ ಶಕ್ತಿ ಕೇಂದ್ರ: ಡಾ.ಕುಮಾರ

Upayuktha
0

 ಆಳ್ವಾಸ್ ಟ್ರೆಡಿಷನಲ್‍ ಡೇ ಉದ್ಘಾಟಿಸಿದ ಜಿ.ಪಂ. ಸಿಇಒ

ಮಿಜಾರು (ಮೂಡುಬಿದಿರೆ): ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಿಜಾರು ಶೋಭಾವನ ಆವರಣವು ಶನಿವಾರ ಸಮಗ್ರ ಭಾರತದ ಸಂಸ್ಕೃತಿಕ ರಾಯಭಾರಿಯಂತೆ ಕಂಡುಬಂತು. ಈಶಾನ್ಯದ ಮಣಿಪುರದಿಂದ ಹಿಡಿದು ದಕ್ಷಿಣದ ಕೇರಳದ ವರೆಗಿನ ಕಲೆ, ಉಡುಗೆ- ತೊಡುಗೆ, ನೃತ್ಯ, ಆಹಾರ, ಪ್ರದರ್ಶನ ಸೇರಿದಂತೆ ಎಲ್ಲ ಸಾಂಸ್ಕೃತಿಕ ವೈಭವಗಳು ಸಾಕ್ಷಾತ್ಕರಿಸಿದವು. 


ಅದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮಿಜಾರು ಶೋಭಾವನ ಆವರಣದಲ್ಲಿ ಶನಿವಾರ ಹಮ್ಮಿಕೊಂಡ  ಸಮೂಹ ಶಿಕ್ಷಣ ಸಂಸ್ಥೆಗಳ `ಟ್ರೆಡಿಷನಲ್‍ ಡೇ'. `ಟ್ರೆಡಿಷನಲ್‍ ಡೇ' ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಹಣಾಧಿಕಾರಿ ಡಾ.ಕುಮಾರ ಮಾತನಾಡಿ, `ಆಳ್ವಾಸ್  ಈ ನೆಲದ ಶಕ್ತಿ ಕೇಂದ್ರ' ಎಂದು   ಹೇಳಿದರು.


ಆಳ್ವಾಸ್ ಕೇವಲ ಶಿಕ್ಷಣ ಸಂಸ್ಥೆಯಲ್ಲ. ಅದೊಂದು ವಿದ್ಯಾರ್ಥಿಗಳ ನೈತಿಕ ಹಾಗೂ ಮೌಲ್ಯಯುತ ಬದುಕು ರೂಪಿಸುವ ಶಕ್ತಿ ಕೇಂದ್ರ ಎಂದ ಅವರು, ಇದರ ಹಿಂದೆ ಡಾ. ಎಂ. ಮೋಹನ ಆಳ್ವ ಎಂಬ ಮಾಣಿಕ್ಯ ಇದ್ದಾರೆ ಎಂದು ಬಣ್ಣಿಸಿದರು.


ಪಠ್ಯಪುಸ್ತಕದ ಶಿಕ್ಷಣದಷ್ಟೇ ಬದುಕಿನ ಶಿಕ್ಷಣ ಮುಖ್ಯ. ನಾವು ನಿಜವಾಗಿ ಬದುಕಿನ ಪರಿಈಕ್ಷೆಯನ್ನು ಯಶಸ್ವಿಯಾಗಿ ಎದುರಿಸಬೇಕು ಎಂದು ಹಿತವಚನ ಹೇಳಿದರು.ಸಂಸ್ಕೃತಿ ಮತ್ತು ಪ್ರಕೃತಿಯನ್ನು ಕಾಪಾಡಿಕೊಂಡರೆ ಮಾತ್ರ ನಮಗೆ ಭವಿಷ್ಯ ಎಂದರು.


ಹೂವು ಸುಂದರವಾಗಿರಲು ಕಾಣದಿರುವ ಬೇರು ಕಾರಣ. ಅದೇರೀತಿ ನಮ್ಮ ಇಂದಿನ ಬದುಕಿಗೆ ಹಿರಿಯರ ಶ್ರಮ, ಪರಂಪರೆ ಕಾರಣ ಎಂದ ಅವರು, ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು ಎಂಬ ಕವಿ ಡಿವಿಜಿ ಅವರ ಸಾಲುಗಳನ್ನು ಉಲ್ಲೇಖಿಸಿದರು.


ನಮ್ಮ ಸಂಸ್ಕೃತಿ ಉಳಿಸ ಬೇಕಾದವರು ನಾವೇ ಎಂದ ಅವರು, ಅಂದು ಕಾಣದ ದೇವರಿಗೆ ಭಯ ಪಡುತ್ತಿದ್ದ ಜನ. ಇಂದು ತಂತ್ರಜ್ಞಾನ, ಸಿಸಿಟಿವಿ ಕ್ಯಾಮರಾ, ಮೊಬೈಲ್‍ಗೆ ಭಯ ಪಡುವಂತಾಗಿದೆ. ಏನನ್ನೋ ಪಡೆಯಲು ಏನನ್ನೋ ಕಳೆದು ಕೊಳ್ಳಬೇಡಿ ಎಂದರು.


ಬದುಕಿನಲ್ಲಿ ತಂತ್ರಜ್ಞಾನದ ಜೊತೆ ನೈತಿಕತೆ ಹಾಗೂ ಮೌಲ್ಯ ಮುಖ್ಯ. ನಾನು ಎತ್ತರದ ವ್ಯಕ್ತಿಯಲ್ಲ. ಹತ್ತಿರದ ವ್ಯಕ್ತಿ ಭಾವುಕವಾಗಿ ನುಡಿದರು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಮಾತನಾಡಿ, ವೈವಿಧ್ಯತೆಯೇ ದೇಶದ ಸಂಪತ್ತು. ಜಾತಿ ಮತ್ತು ಮತಗಳ ಜೊತೆ ಪರಂಪರೆಯ ಜನಪದ ಶ್ರೀಮಂತಿಕೆ, ಯುವ ಸಂಪತ್ತು ದೇಶದಲ್ಲಿದೆ. ಬದುಕಿನಲ್ಲಿ ಫ್ಯಾಷನ್ (ಅಲಂಕಾರ) ಗಿಂತ ಪ್ಯಾಷನ್ (ಬದ್ಧತೆ) ಅಗತ್ಯ ಎಂದರು. 


ಸ್ಪರ್ಧೆಗಳ ತೀರ್ಪುಗಾರರಾಗಿ ಆಗಮಿಸಿದ ರಂಗಕರ್ಮಿ-ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೋಡಿಯಾಲ್ ಬೈಲ್, ಕಿರುತೆರೆ ನಿರ್ದೇಶಕ ವಿನು ಬಳಂಜ, ಕಿರುತೆರೆ ನಟಿ ಚಂದನಾ, ಗಾಯಕ ಅಲೋಕ್‍ ಆರ್. ಬಾಬು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ ಪ್ರಾಚಾರ್ಯರುಗಳು ಇದ್ದರು. ಉಪನ್ಯಾಸಕ ಡಾ.ಯೋಗೀಶ್‍ ಕೈರೋಡಿ ಕಾರ್ಯಕ್ರಮ ನಿರೂಪಿಸಿದರು.


ಸ್ಪರ್ಧೆಗಳು:

ಬಳಿಕ ಟೀಮ್ ಕೇರಳ, ಟೀಮ್ ಸೌತ್‍ ಇಂಡಿಯಾ, ಟೀಮ್‍ ರೆಸ್ಟ್‍ ಆಫ್‍ ಇಂಡಿಯಾ (ನಾರ್ತ್& ನಾರ್ತ್ ಈಸ್ಟ್), ಟೀಮ್ ಮಹಾರಾಷ್ಟ್ರ & ಗುಜರಾತ್, ಟೀಮ್ ಕರಾವಳಿ ಕರ್ನಾಟಕ, ಟೀಮ್‍ ಕರ್ನಾಟಕ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆದವು.


ಸ್ಥಳೀಯ ಕಲಾವಿದರಾದ ಉಮೇಶ್ ಮಿಜಾರು ಮತ್ತು ಧೀರಜ್ ಶೆಟ್ಟಿ ಮಿಜಾರು ಕಾರ್ಯಕ್ರಮವನ್ನು ನೀಡಿದರು. ಪೊಳಲಿ ಅಶೋಕ ತಂಡದಿಂದ ಕೋಳಿ ನೃತ್ಯ, ಪೊಳಲಿ ಪಿಲಿ ನಲಿಕೆ ತಂಡದಿಂದ ಹುಲಿ ಕುಣಿತ, ವಿಕ್ರಂ ಜಾದೂಗಾರ್ ಅವರ ಜಾದೂ ಪ್ರದರ್ಶನ ಗಮನ ಸೆಳೆಯಿತು.


ಸಂಜೆ ಕನ್ನಡ ಗಾಯಕ ಅಲೋಕ್ ಬಾಬು ಆರ್ (ಆಲ್ ಓಕೆ) ಸಂಗೀತ ರಸಸಂಜೆ ರಂಗೇರಿತು. ವಿದ್ಯಾರ್ಥಿಗಳಾದ ಡಾ ಶಾಮ ಜೈನ್, ಅವಿನಾಶ್‍ ಕಟೀಲ್, ಶ್ರೇಯಾ ಪೊನ್ನಪ್ಪ ಮತ್ತು ಪ್ರಖ್ಯಾತ್ ಭಂಡಾರಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು, ಆಳ್ವಾಸ್ ಸ್ನಾತಕ ಹಾಗೂ ಸ್ನಾತಕೋತ್ತರ ಸಮೂಹ ಶಿಕ್ಷಣ ಸಂಸ್ಥೆಗಳ 8 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top