ಉಜಿರೆ: ಎಸ್.ಡಿ.ಎಂ ವಿದ್ಯಾರ್ಥಿಗಳಿಗೆ ವಿಶೇಷ ವೃತ್ತಿಪರ ಕೌಶಲ್ಯ

Upayuktha
0

ಉಜಿರೆ: ಉಜಿರೆಯ ಎಸ್.ಡಿ.ಎಂ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳ ಅಧ್ಯಯನಶೀಲ ಸಾಮಥ್ರ್ಯ, ಸೃಜನಶೀಲತೆ ಮತ್ತು ಪ್ರತಿಭಾನ್ವಿತ ಸಂವಹನ ಕೌಶಲ್ಯಗಳ ಕುರಿತು ಖ್ಯಾತ ಕಥೆಗಾರ ವಸುಧೇಂದ್ರ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ಎಸ್.ಡಿ.ಎಂ ಕಾಲೇಜು ಹೆಗ್ಗೋಡಿನ ನೀನಾಸಂ ಸಹಯೋಗದೊಂದಿಗೆ ಕಳೆದ 24 ವರ್ಷಗಳಿಂದ ಆಯೋಜಿಸುತ್ತಿರುವ ನೀನಾಸಂ ಸಾಹಿತ್ಯ ಅಧ್ಯಯನ ಶಿಬಿರದ ರಜತಮಹೋತ್ಸವದ ಆಚರಣೆಯ ನೆನಪಿನಲ್ಲಿ ಶುಕ್ರವಾರ ಆಯೋಜಿತವಾದ ಶಿಬಿರದಲ್ಲಿ ಪಾಲ್ಗೊಂಡ ನಂತರ ಇಲ್ಲಿಯ ವಿದ್ಯಾರ್ಥಿಗಳ ಪ್ರತಿಭಾ ಸಾಮಥ್ರ್ಯದ ಬಗ್ಗೆ ಪ್ರಶಂಸನೀಯ ಬರಹವನ್ನು ತಮ್ಮ ಫೇಸ್‍ಬುಕ್ ಪೇಜ್ ಮೂಲಕ ಹಂಚಿಕೊಂಡಿದ್ದಾರೆ.


“ಮಕ್ಕಳು ವೃತ್ತಿಪರ ಪತ್ರಕರ್ತರಂತೆ ಬಹಳ ಅಚ್ಚುಕಟ್ಟಾಗಿ ನನ್ನ ಸಂದರ್ಶನ ಮಾಡಿದರು. ಸುಮಾರು ಒಂದೂವರೆ ತಾಸಿನ ಈ ಸಂದರ್ಶನ ಸಾಕಷ್ಟು ಉತ್ಸಾಹವನ್ನು ನನ್ನಲ್ಲಿ ಮೂಡಿಸಿತು. ವಾರಕ್ಕೊಮ್ಮೆ ವಿದ್ಯಾರ್ಥಿಗಳೇ ರೂಪಿಸುವ ಏಕಪುಟದ ಪತ್ರಿಕೆಯನ್ನು ನನಗೆ ತೋರಿಸಿದರು. ‘ನಮ್ಮೂರ ವಾರ್ತೆ’ ಸುದ್ದಿ ಸಂಚಿಕೆಗೆ ಹಲವು ವೀಕ್ಷಕರು ಇದ್ದಾರೆಂದು ಹೆಮ್ಮೆಯಿಂದ ಹೇಳಿಕೊಂಡರು. ಇಬ್ಬರು ವಿದ್ಯಾರ್ಥಿಗಳು ‘ಮಂದಾರ’ ಎನ್ನುವ ಪಾಕ್ಷಿಕವನ್ನು ಹೊರತರುತ್ತಿದ್ದಾರೆ. ಇದರ ಪುಟವಿನ್ಯಾಸವಂತೂ ಯಾವುದೇ ಕನ್ನಡ ಪತ್ರಿಕೆಗೆ ಸವಾಲು ಒಡ್ಡುವಂತಿತ್ತು” ಎಂದು ಅವರು ವಿಶ್ಲೇಷಿಸಿದ್ದಾರೆ.


“ಎಲ್ಲಕ್ಕೂ ಹೆಚ್ಚಾಗಿ ನನ್ನ ಹೃದಯ ತಟ್ಟಿದ್ದು ಕಾಶಿಂಪೀರ್ ಮತ್ತು ಅಭಿರಾಮ್ ಎಂಬ ಇಬ್ಬರು ದೃಷ್ಟಿವಂಚಿತ ಹುಡುಗರ ಒಡನಾಟ. ನಾನು ಛಂದದ ಎಲ್ಲಾ ಪುಸ್ತಕಗಳನ್ನೂ ಗೂಗಲ್ ಪ್ಲೇನಲ್ಲಿ ಇ-ಬುಕ್ ಆಗಿ ಹಾಕಿದ್ದು, ಇವನ್ನೆಲ್ಲಾ ಇವರಿಬ್ಬರೂ ಓದಿಕೊಂಡಿದ್ದಾರೆ. ಯೂನಿಕೋಡ್ ಕನ್ನಡ ಅಕ್ಷರಗಳನ್ನು ಧ್ವನಿಯಾಗಿ ಬದಲಾಯಿಸುವ ತಂತ್ರಾಂಶವೊಂದನ್ನು ಇವರು ಬಳಸಿಕೊಂಡಿದ್ದಾರೆ” ಎಂದು ಪ್ರಸ್ತಾಪಿಸಿದ್ದಾರೆ.


ಸಾವಿರಾರು ಪುಸ್ತಕಗಳಿರುವ ಎಸ್.ಡಿ.ಎಂ ಗ್ರಂಥಾಲಯದಲ್ಲಿ ಮಕ್ಕಳು ಧ್ಯಾನದಿಂದ ಪುಸ್ತಕ ಓದುತ್ತಿದ್ದರು.ವಿದ್ಯಾರ್ಥಿಗಳು ಪುಸ್ತಕದ ಓದಿನಿಂದ ವಿಮುಖವಾಗುತ್ತಿರುವ ಈ ಹೊತ್ತಿನಲ್ಲಿ ಓದಿನ ಅಭಿರುಚಿಗೆ ಪೂರಕ ವಾತಾವರಣವಿರುವ ಎಸ್.ಡಿ.ಎಂ ಕಾಲೇಜು ಆಶಾಕಿರಣವನ್ನು ಮೂಡಿಸಿತು ಎಂದು ಶ್ಲಾಘಿಸಿದ್ದಾರೆ. ‘ಎಸ್.ಡಿ.ಎಂ ಮಕ್ಕಳ ಉತ್ಸಾಹ ಕಂಡು ನನಗೂ ಮತ್ತೊಮ್ಮೆ ವಿದ್ಯಾರ್ಥಿಯಾಗಿ ಈ ಕಾಲೇಜಿನಲ್ಲಿ ಓದಬೇಕು ಎನ್ನುವ ಅಭಿಲಾಷೆ’ ಮೂಡಿತು ಎಂದಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top