ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜ್: VIBGYOR-2023 ವಾರ್ಷಿಕೋತ್ಸವ

Upayuktha
0

  


ಪುತ್ತೂರು: ಮಾನವನ ಜೀವನಕ್ಕೆ ಯಾವ ಅಂಶಗಳು ಮಹತ್ವವನ್ನು ತಂದುಕೊಡುತ್ತವೋ, ಅವೇ ಜೀವನ ಮೌಲ್ಯಗಳು ಪ್ರತಿಯೊಬ್ಬರೂ ಕೂಡಾ ಅಂತಹ ಬೆಲೆಬಾಳುವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಹೇಶ್ ನಿಟಿಲಾಪುರ ಹೇಳಿದರು.


ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕೋತ್ಸವ ವಿಬ್‍ಜಯಾರ್-2023 (VIBGYOR-2023) ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತಾಡಿದರು. 


ಶಿಕ್ಷಣ ನೀಡುವ ಸಂಸ್ಥೆಗಳು ಸಾಕಷ್ಟಿವೆ ಆದರೆ ಜೀವನಾನುಭವಗಳನ್ನು, ಉದ್ದೇಶ, ಚಿಂತನೆಗಳನ್ನು ತಿಳಿಸುವ ಶಿಕ್ಷಣ ವ್ಯವಸ್ಥೆ ಇಂದಿನ ಆವಶ್ಯಕತೆ ಎಂದರು. ಕಲಿಕೆಯ ನಂತರ ದುಡಿಯುವ ಯಂತ್ರಗಳಾಗಬಾರದು ಬದಲಿಗೆ ಸಕಾರಾತ್ಮಕ   ಚಿಂತನೆಗಳಿರುವ, ಸಮಾಜದ ಒಳಿತಿಗೆ ದುಡಿಯುವ ಯುವಜನತೆಯಾಗಬೇಕು ಎಂದು ನುಡಿದರು. ಸಮಾಜದ ಕೊರತೆಗಳ ಬಗ್ಗೆ ಗಮನಹರಿಸಿ ಅಲ್ಲಿಯ ಜನತೆಗೆ ನಿಮ್ಮ ಜತೆ ನಾವಿದ್ದೇವೆ ಎನ್ನುವ ಸಂದೇಶವನ್ನು ಸಾರುವ ಕೆಲಸ ನಿಮ್ಮಿಂದ ಆಗಲಿ ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ದೇಶದ ಧರ್ಮ ಸಂಸ್ಕೃತಿ, ಆದರ್ಶಗಳನ್ನು ಉಳಿಸಿ ಬೆಳೆಸುವುದಕ್ಕಾಗಿ ಪೌರಾಣಿಕ ಪ್ರಸಂಗಗಳನ್ನು ನೆನಪು ಮಾಡಿಕೊಳ್ಳುವ ಆವಶ್ಯಕತೆ ಇದೆ ಎಂದು ಹೇಳಿದರು. ಪ್ರಸಕ್ತ ಸನ್ನಿವೇಶದಲ್ಲಿ ನಡೆಯುವ ಕೆಲವೊಂದು ಘಟನೆಗಳು ನಮಗೆ ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದರು. ದುಡ್ಡು ಗಳಿಸುವುದೇ ಧ್ಯೇಯವಾಗಬಾರದು ಬದಲಿಗೆ ತಾನು ಮಾಡುವ ಕೆಲಸ ಸಮಾಜಕ್ಕೆ ಹೇಗೆ ಸಹಾಯಕ ಎನ್ನುವ ವಿಚಾರವರಿತು ಕೆಲಸ ಮಾಡಬೇಕು ಎಂದರು.


ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ರಾಜ್ಯಮಟ್ಟದ ಅಂತರ್ಕಾಲೇಜು ಕ್ರೀಡಾಕೂಟದಲ್ಲಿ ನಾಲ್ಕು ನೂತನ ಕೂಟ ದಾಖಲೆಗಳೊಂದಿಗೆ 16 ಚಿನ್ನ, 11 ಬೆಳ್ಳಿ, 11 ಕಂಚಿನ ಪದಕಗಳನ್ನು ಗಳಿಸುವುದರೊಂದಿಗೆ ಮಹಿಳೆಯರ ವಿಭಾಗದ ಸಮಗ್ರ ಪ್ರಶಸ್ತಿ, ಪುರುಷರ ವಿಭಾಗದ ರನ್ನರ್ ಅಪ್ ಸಮಗ್ರ ಪ್ರಶಸ್ತಿ ಹಾಗೂ ಸಮಗ್ರ ತಂಡ ಪ್ರಶಸ್ತಿಯನ್ನು ಗಳಿಸಿದ ವಿದ್ಯಾರ್ಥಿಗಳ ತಂಡವನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. 


ಶೈಕ್ಷಣಿಕವಾಗಿ ಪ್ರತಿ ವಿಭಾಗದಲ್ಲಿಯೂ ಅತ್ಯುತ್ತಮ ಸಾಧನೆಯನ್ನು ತೋರಿದ ಪ್ರತಿಭಾವಂತರಿಗೆ ವಿವಿಧ ದತ್ತಿನಿಧಿ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಪ್ರತಿಭಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅನನ್ಯ ಸಾಧನೆಯನ್ನು ಮಾಡಿದ ಸಾಧಕರನ್ನು ಗೌರವಿಸಲಾಯಿತು.


ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ವಿಶ್ವಾಸ್ ಶೆಣೈ, ಸಂಚಾಲಕ ಸುಬ್ರಮಣ್ಯ ಭಟ್.ಟಿ.ಎಸ್, ಸತ್ಯನಾರಾಯಣ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಚೇತನ್.ಪಿ.ಡಿ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ವಿವೇಕಾನಂದ ಪದವಿ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ.ಎ.ವಿ ನಾರಾಯಣ, ಪ್ರೊ.ವತ್ಸಲಾ ರಾಜ್ಞಿ, ವಿದ್ಯಾರ್ಥಿಗಳ ಪೋಷಕರು, ವಿಭಾಗ ಮುಖ್ಯಸ್ಥರು, ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.


ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ವಾರ್ಷಿಕ ವರದಿಯನ್ನು ಮಂಡಿಸಿದರು. ನಿವೇತಾ ಸ್ವಾಗತಿಸಿ, ಚೈತ್ರಾ ವಂದಿಸಿದರು. ರಚನಾ ಮತ್ತು ವಿದಿಶಾ ಕಾರ್ಯಕ್ರಮ ನಿರ್ವಹಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top