ಶ್ರೀ ನರಸಿಂಹ ಜಯಂತಿ: ಪರಮಾತ್ಮನ ಸ್ಮರಣೆ ಮಾತ್ರದಲಿ ಅನಿಷ್ಟ ನಿವೃತ್ತಿ, ಇಷ್ಟಪ್ರಾಪ್ತಿ

Upayuktha
0

ಮೇ 4, ನರಸಿಂಹ ಜಯಂತಿ ಪ್ರಯುಕ್ತ ಲೇಖನ




ಶ್ರೀ ಗುರುಭ್ಯೋ ನಮಃ 

ಪರಮ ಗುರುಭ್ಯೋ ನಮಃ 

ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋ ನಮಃ 


ರಮಾತ್ಮ ತನ್ನ ಭಕ್ತನನ್ನು ಕಾಪಾಡಲು ಒಂದು ಲೋಕ ವಿಲಕ್ಷಣವಾದ ರೂಪವನ್ನು ಪಡೆದು ಅವತರಿಸಿದ ದಿನ ನರಸಿಂಹ ಜಯಂತಿ. ನರಸಿಂಹ ರೂಪಿ ಪರಮಾತ್ಮನ ಸ್ಮರಣೆ ಮಾತ್ರದಲಿ ಅನಿಷ್ಟ ನಿವೃತ್ತಿ ಹಾಗೂ ಇಷ್ಟಪ್ರಾಪ್ತಿ. ಅದಕ್ಕೆಂದೇ ಶ್ರೀ ಜಗನ್ನಾಥ ದಾಸರು ತಮ್ಮ ಮಂಗಳಾಚರಣ ಸಂಧಿಯಲ್ಲಿ ಅನಿಷ್ಟಗಳು ಹಾಗೂ ವಿಘ್ನಗಳ ಪರಿಹಾರಕ್ಕೆ ತಮ್ಮ ಕುಲದೈವವಾದ ನರಸಿಂಹನನ್ನು 'ನಾರಸಿಂಹನೆ ನಮಿಪೆ ಕರುಣಿಪುದು ನಮಗೆ ಮಂಗಳವಾ' ಎಂದು ಸ್ತುತಿಸಿದ್ದಾರೆ.  


ಭಾಗವತ ಸಪ್ತಮ ಸ್ಕಂದ ಪರಮಾತ್ಮನ ಪಕ್ಷಪಾತ ರಾಹಿತ್ಯವನ್ನು ನಿರೂಪಿಸಿದ ಸ್ಕಂದ ಇದು ಬ್ರಹ್ಮಸೂತ್ರಗಳ ವಿವರಣೆ ಎಂದು ಹೇಳಿದ್ದಾರೆ. ತಂದೆ ಹಿರಣ್ಯಕಶಿಪು ದೈತ್ಯ ಅವರ ಮಗ ಪ್ರಹ್ಲಾದನೂ ದೈತ್ಯನೇ. ಆದರೆ ತಂದೆ ಅಂತರಂಗ ಬಹಿರಂಗಗಳಲ್ಲಿ ದೈತ್ಯನಾದರೆ ಮಗ ಬಾಹ್ಯದಲ್ಲಿ ದೈತ್ಯ, ಅಂತರಂಗದಲ್ಲಿ ಕರ್ಮಜ ದೇವತೆ. ಹಿರಣ್ಯಕಶಿಪುವನ್ನು ಸಂಹರಿಸಿದ ಭಗವಂತ ಪ್ರಹ್ಲಾದನನ್ನು ಸಂರಕ್ಷಿಸಿದ. ಅವನ ಅಹಂ ಅವನ ವಿನಾಶಕ್ಕೆ ಕಾರಣವಾದರೆ ಪ್ರಹ್ಲಾದನ ಗುಣ ಅವನ ಉದ್ಧಾರಕ್ಕೆ ಕಾರಣವಾಯಿತು. ಅದಕ್ಕೆ ಭಗವಂತ ಸಮ ಎನಿಸಿಕೊಂಡಿದ್ದಾನೆ. ಹಿರಣ್ಯಕಶಿಪು ಪ್ರಹ್ಲಾದರು ಸಂಬಂಧದಲ್ಲಿ ತಂದೆ ಮಕ್ಕಳಾದರೂ ಸ್ವಭಾವದಲ್ಲಿ ವ್ಯತಿರಿಕ್ತರು. ಹಿರಣ್ಯ (ಧನಕನಕಾದಿಗಳು) ಹಾಗೂ ಕಶಿಪು ಎಂದರೆ ಭೋಗ ವಿಲಾಸಗಳು. ಇವು ಅವನ ಜೀವನದ ಮುಖ್ಯ ಗುರಿ. ನಾವೆಲ್ಲರೂ ಕೂಡ ಒಂದಲ್ಲ ಒಂದು ರೀತಿ ಹಿರಣ್ಯಕಶಿಪುಗಳೇ. ಧನಕನಕಾದಿಗಳು ಭೋಗ-ವಿಲಾಸಗಳಲ್ಲಿ ಮುಳುಗಿದವರು. ನರಸಿಂಹ ರೂಪಿ ಪರಮಾತ್ಮ ನಮ್ಮಲ್ಲಿರುವ ಹಿರಣ್ಯಕಶಿಪುವನ್ನು ಸಂಹರಿಸಬೇಕು ಎಂದು ಬೇಡಿಕೊಳ್ಳಬೇಕು. ಆದರೆ ಇದಕ್ಕೆ ವಿರುದ್ಧವಾದ ಜೀವನ ಶೈಲಿ ಪ್ರಹ್ಲಾದನದು. ಸದಾ ಭೌತಿಕ ವಸ್ತುಗಳಿಂದ ದೂರವಿದ್ದು ಆಧ್ಯಾತ್ಮವನ್ನು ನಂಬಿದ ವಿರಕ್ತ ಜೀವನ ಅವನದು. ತಂದೆ ಲಕ್ಷ್ಮಿ ದಾಸ.  ಮಗ ಲಕ್ಷ್ಮೀಪತಿಯ ದಾಸ. ಅವನಿಗೆ ವಿಷಯದ ನಂಟು ಇವನಿಗೆ ವಿಷ್ಣುವಿನ ನಂಟು. ಅವನಿಗೆ ದುರ್ಗತಿ ಇವನಿಗೆ ಸದ್ಗತಿ.


ಚಂಡ ಮರ್ಕರ ಬಳಿ ಪ್ರಹ್ಲಾದನ ವಿದ್ಯಾಭ್ಯಾಸ. ಅವನ ಪಠ್ಯದಲ್ಲಿ ಭಗವಂತನನ್ನು ಬಿಟ್ಟು ಜಗತ್ತೆಲ್ಲ ತುಂಬಿತ್ತು. ವಿದ್ಯಾಭ್ಯಾಸವು ಇಂತಹುದೇ. ಜಗದ ಎಲ್ಲ ವಿಷಯವೂ ಇರುತ್ತದೆ, ಜಗನ್ನಾಥನ ವಿಷಯವು ಮರೆತುಬಿಟ್ಟಿರುತ್ತಾರೆ.

ಒಮ್ಮೆ ಹಿರಣ್ಯಕಶಿಪು ಕೇಳಿದ- 'ಮಗು, ಪ್ರಹ್ಲಾದ ಏನೇನು ಕಲಿತಿರುವೆ?'. ಪ್ರಹ್ಲಾದನ ಉತ್ತರ- " ಶ್ರವಣಂ ಕೀರ್ತನಂ ವಿಷ್ಣೋ: ಸ್ಮರಣ ಪಾದಸೇವನಂ. ಅರ್ಚನಮ್ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಂ". ಭಗವಂತನ ಬಗ್ಗೆ ಹೇಳುವುದು ಕೇಳುವುದು ಸ್ಮರಿಸುವುದು ಭಜಿಸುವುದು ಪೂಜಿಸುವುದು ವಂದಿಸುವುದು ದಾಸ್ಯಭಾವ ಹೊಂದುವುದು ಸ್ನೇಹ ತೋರುವುದು ತನ್ನಲ್ಲಿ ಬಿಂಬ ರೂಪಿಯಾದ ಭಗವಂತನ ಸಾಕ್ಷಾತ್ಕರಿಸಿಕೊಳ್ಳುವುದು ಎಂಬ ನವವಿಧ ಭಕ್ತಿಯನ್ನು ಹೇಳುತ್ತಾನೆ. ಹಿರಣ್ಯಕಶಿಪು ದಿಗ್ಭ್ರಮೆಗೊಂಡು ತನ್ನ ಮಗ ಹರಿಭಕ್ತ ಹೇಗಾದ ಎಂದು ಯೋಚಿಸಿ ಕೊನೆಗೂ ಇದು ಅವನ ಸಹಜ ಸ್ವಭಾವವೆಂದು ತಿಳಿದು ಅವನನ್ನು ದ್ವೇಷಿಸಿ ಕೊಲ್ಲಲು ನಿರ್ಧರಿಸಿದ. ಅದಕ್ಕಾಗಿ ಸರ್ವಪ್ರಯತ್ನಗಳನ್ನೂ ಮಾಡಿದ. ಆದರೆ ಅದರಿಂದ ಪ್ರಹ್ಲಾದನ ಒಂದು ಕೂದಲು ಕೂಡ ಕೊಂಕಲಿಲ್ಲ. ಇದೇ ಪರಮಾತ್ಮನ ಭಕ್ತರ ಸಾಧನೆಯ ಗುಟ್ಟು. ಆಗೊಮ್ಮೆ ಹಿರಣ್ಯಕಶಿಪು ಯೋಚಿಸಿದಂತೆ ಯಾವ ರೀತಿಯಲ್ಲೂ ಸಾವು ಬೇಡ ಎಂದು ಹೇಳಿದವನು ನಾನು, ಅದನ್ನು ಸಾಧಿಸಿದವನು ಇವನು.  ಬ್ರಹ್ಮ ನನಗೆ ವರ ಕೊಡುವ ಬದಲು ನನ್ನ ವಂಶಕ್ಕೆ ಕೊಟ್ಟುಬಿಟ್ಟನೋ ಏನು ಅಂತ ಯೋಚಿಸಿದನು. 


ಭಗವಂತನೊಬ್ಬನೇ ಶಾಶ್ವತ. ಅವನು ಆನಂದದಿ ಸಕಲ ಸದ್ಗುಣಗಳ ಖಣಿ. ದುಃಖಾದಿ ದೋಷಗಳನ್ನು ಸ್ವಲ್ಪವೂ ಇಲ್ಲದ ಪೂರ್ಣ ಪುರುಷ. ಈ ರೀತಿ ಉಪಾಸನೆ ಮಾಡಿದ ಪ್ರಹ್ಲಾದನ ಸಂರಕ್ಷಿಸುವುದಕ್ಕೆ ಇದೆ ವೈಶಾಖ ಶುಕ್ಲ ಚತುರ್ದಶಿಯಂದು ಹಿರಣ್ಯಕಶಿಪು ಕೇಳಿದ ವರದಂತೆ, ಬ್ರಹ್ಮ ಕೊಟ್ಟ ವರವೂ ಸತ್ಯವಾಗುವಂತೆ ಲೋಕ ವಿಲಕ್ಷಣವಾದ ನರ ಮತ್ತು ಮೃಗ ನರಸಿಂಹ ರೂಪವನ್ನು ತಾಳಿ ಹಿರಣ್ಯಕಶಿಪುವನ್ನು ಸಂಹರಿಸಿ ಪ್ರಹ್ಲಾದನನ್ನು ಸಂರಕ್ಷಿಸಿದನು. ಸ್ವತಃ ಶ್ರೀ ನರಸಿಂಹ ದೇವರು ಪ್ರತ್ಯಕ್ಷ ದರ್ಶನವಿತ್ತು ವರ ಕೇಳಲು ಹೇಳಿದಾಗ್ಯೂ ಪ್ರಹ್ಲಾದ ಯಾವ ವರವನ್ನೂ ಬೇಡಲಿಲ್ಲ. ಹಾಗೆ ಬೇಡಿ ತಾನು ಭಕ್ತನ್ ಆಗುವ ಬದಲು ವ್ಯಾಪಾರಿಯಾಗಲು ಅವನು ಇಚ್ಚಿಸಲಿಲ್ಲ. ಹಿರಣ್ಯಕಶಿಪು ಕೊನೆಗೂ ಸರ್ವನಾಶವನ್ನು ಕಂಡ. ನಾವುಗಳು ಕೂಡ ಧನಕನಕಾದಿಗಳು ಮತ್ತು ಭೋಗ ವಿಲಾಸಗಳ ಮಧ್ಯೆ ಇದ್ದು ಅವುಗಳ ಸೆಳೆತಕ್ಕೆ ಒಳಗಾಗದೆ ಅವುಗಳನ್ನು ಭಗವಂತನಿಗೆ ಅರ್ಪಿಸಿ ಕೃತಾರ್ಥರಾಗಬೇಕು. ಹಿರಣ್ಯಕಶಿಪುವಿಗೆ ದುರ್ಗತಿ ಆಯ್ತು ಆದರೆ ಅವನ ಒಳಗಿದ್ದ ಜಯನಿಗೆ ಮಾತ್ರ ಸದ್ಗತಿ ಆಯ್ತು. ದ್ವೇಷಿಗೆ ತಮಸ್ಸು, ಭಕ್ತನಿಗೆ ಮುಕ್ತಿ. ಇದು ಭಗವಂತನ ನಿಯಮ. ಪ್ರಹ್ಲಾದನಿಗೆ ಕೆಲಕಾಲ ನರಸಿಂಹ ದರ್ಶನವಾಗಲು ಅವನ ಒಳಗಿದ್ದ ಶ್ರೀ ವಾಯುದೇವರ ಆವೇಶ ಕಾರಣವಾಯಿತು. ನಾವು ಕೂಡ ಆ ನರಸಿಂಹ ದೇವರ ಅನುಗ್ರಹವಾಗಬೇಕಾದರೆ ನಮ್ಮ ಜೀವನವನ್ನು ಪರಿಶುದ್ಧವಾಗಿಟ್ಟುಕೊಂಡು ಸನ್ಮಾರ್ಗದತ್ತ ಸಾಗಬೇಕು. ಇದುವೇ ಜೀವನದ ಸಾರ್ಥಕತೆ.

ಶ್ರೀಕೃಷ್ಣಾರ್ಪಣಮಸ್ತು
ನಾಹಂ ಕರ್ತಾ ಹರಿಃ ಕರ್ತಾ

-ಹೇಮಮಾಲಿನಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top