ನಿಟ್ಟೆ: ‘ವಿದ್ಯಾರ್ಥಿಜೀವನದಲ್ಲಿ ವಿವಿಧ ಬಗೆಯ ಸಂಶೋಧನಾ ಪ್ರಯತ್ನಗಳನ್ನು ನಡೆಸುವುದು ಕಲಿಕಾ ಪ್ರಕ್ರಿಯೆಯ ಪ್ರಮುಖ ಅಂಗವೆನ್ನಬಹುದು. ವಿವಿಧ ಕ್ಷೇತ್ರಗಳಲ್ಲಿ ಹಲವಾರು ಬಗೆಯ ಸಂಶೋಧನೆಗಳು ನಡೆಯುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸ್ಟಾರ್ಟಪ್ ಗಳನ್ನು ಆರಂಭಿಸಬೇಕು’ ಎಂದು ಮಣಿಪಾಲ ತಾಂತ್ರಿಕ ಕಾಲೇಜಿನ ಇಲೆಕ್ಟ್ರಾನಿಕ್ಸ್ & ಕಮ್ಯೂನಿಕೇಶನ್ ವಿಭಾಗದ ಪ್ರಾಧ್ಯಾಪಕ ಹಾಗೂ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಹಳೆವಿದ್ಯಾರ್ಥಿ ಸಂಘ ‘ವಿನಮಿತ’ದ ಸಹಯೋಗದೊಂದಿಗೆ ಸುಮಾರು 31 ವರ್ಷಗಳಿಂದ ನಡೆಸಿಕೊಂಡು ಬಂದಿರುವ ‘ನಿಟ್ಟೆ ಎಕ್ಸ್ ಪ್ರೋ’ ಎಂಬ ಅಂತಿಮ ಬಿ.ಇ ವಿದ್ಯಾರ್ಥಿಗಳ ಪ್ರೊಜೆಕ್ಟ್ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಪ್ಳೂಣ್ಕರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ಪ್ರಾಜೆಕ್ಟ್ ಪ್ರದರ್ಶನಗಳು ಕೇವಲ ಅಂಕಗಳಿಗೆ ಸೀಮಿತವಾಗಿ ನಡೆಯಬಾರದು. ಇಂದು ನಾವು ಅಭಿವೃದ್ದಿ ಪಡಿಸಲು ಚಿಂತಿಸುತ್ತಿರುವ ತಂತ್ರಜ್ಞಾನವು ಕೇವಲ ಕಾಲ್ಪನಿಕ ಎಂದು ಭಾಸವಾದರೂ ಮುಂದೊಂದು ದಿನ ಪ್ರಾಮುಖ್ಯತೆ ಪಡೆದುಕೊಳ್ಳುವ ಪ್ರಾಜೆಕ್ಟ್ ಆಗಿ ಹೊರಹೊಮ್ಮಬಹುದಾಗಿದೆ’ ಎನ್ನುವುದರೊಂದಿಗೆ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಇದೇ ಸಂದರ್ಭದಲ್ಲಿ ಎಕ್ಸ್ ಪ್ರೋ ಆಬ್ಸ್ಟ್ರ್ಯಾಕ್ಟ್ ವಾಲ್ಯೂಮ್-21ನ್ನು ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಉಪಪ್ರಾಂಶುಪಾಲ ಡಾ.ಐ. ಆರ್ ಮಿತ್ತಂತಾಯ ಉಪಸ್ಥಿತರಿದ್ದರು.
ಎಕ್ಸ್ಪ್ರೋ ಸಂಯೋಜಕ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಡಾ. ಮಲ್ಲಿಕಪ್ಪಾ ಸ್ವಾಗತಿಸಿದರು. ಕಂಪ್ಯೂಟರ್‌ಸೈನ್ಸ್ ವಿಭಾಗದ ಸಹಪ್ರಾಧ್ಯಾಪಕ ಡಾ.ರಾಜು ವಂದಿಸಿದರು. ಬಯೋಟೆಕ್ನಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸ್ನೇಹಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಈ ಪ್ರಾಜೆಕ್ಟ್ ಪ್ರದರ್ಶನದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನ ವಿವಿಧ ಇಂಜಿನಿಯರಿಂಗ್ ವಿಭಾಗದ ಒಟ್ಟು 283 ಪ್ರಾಜೆಕ್ಟ್ ಗಳು ಪ್ರದರ್ಶನಗೊಂಡವು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


