ಅಸಹನೀಯವಾದರೂ ಹೇಳಲೇ/ಕೇಳಲೇ ಬೇಕಾದ ಕಥೆ.... ದ ಕೇರಳ ಸ್ಟೋರಿ

Upayuktha
0

 


ನ್ನ ತಂದೆಯ ತೊಡೆಯ ಮೇಲೆ ಮಲಗಿರುವ ಹರೆಯದ ಮಗಳು ಕಮ್ಯುನಿಸ್ಟ್ ತಂದೆಗೆ ಹೇಳುತ್ತಾಳೆ... ನನ್ನ ಈ ಸ್ಥಿತಿಗೆ ಕಾರಣ ನೀವೇ. ನೀವೇಕೆ ನನಗೆ ನಮ್ಮ ಧರ್ಮದ ಕುರಿತು ಜ್ಞಾನವನ್ನು ಕೊಡಲಿಲ್ಲ ಎಂದು.


ಇನ್ನೊಂದೆಡೆ ತನ್ನ ಧರ್ಮದ ಕುರಿತು ಬೇರೊಬ್ಬರು ತಪ್ಪು ಮಾತನಾಡುವಾಗ ಅದನ್ನು ಅಲ್ಲಗೆಳೆಯಲು ಸಾಧ್ಯವಾಗದಷ್ಟು ಅಜ್ಞಾನ ತುಂಬಿತ್ತು ಆ ಹೆಣ್ಣು ಮಕ್ಕಳಲ್ಲಿ.


ತಮ್ಮದಲ್ಲದ ಧರ್ಮದ ದೇವರು ತಮ್ಮನ್ನು  ಶಿಕ್ಷಿಸುತ್ತಾನೆ ಎಂಬುದನ್ನು, ನಕಾಬು ಧರಿಸಿದರೆ ಮಾತ್ರ ತಮ್ಮನ್ನು ಯಾರೂ ಕೆಣಕುವುದಿಲ್ಲ ಎಂದೂ ನಂಬುವ ಆ ಹೆಣ್ಣು ಮಕ್ಕಳು.


ಮನೆಯಿಂದ ದೂರದಲ್ಲಿರುವ ಹೆಣ್ಣು ಮಕ್ಕಳು, ಹೇಳುವ/ಕೇಳುವವರಿಲ್ಲದ ಸ್ವಚ್ಛಂದ ವಾತಾವರಣ, ಹರೆಯದ ಆಕರ್ಷಣೆಗಳು, ವಯೋ ಸಹಜ ಆಕಾಂಕ್ಷೆಗಳು, ಸುಂದರವಾಗಿ ಕಾಣಬೇಕೆಂಬ ಅಪೇಕ್ಷೆ, ಯಾರಾದರೂ ತಮ್ಮ ಸೌಂದರ್ಯವನ್ನು ಹೊಗಳಲಿ ಎಂಬ ಬಯಕೆ, ಬೆಳ್ಳಗಿರುವುದೆಲ್ಲಾ ಹಾಲೆಂಬ ಮನೋಭಾವ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ತನ್ನತನವೇ ಇಲ್ಲದ ಟೊಳ್ಳು ವ್ಯಕ್ತಿತ್ವ‌ ಅವೆಲ್ಲವುಗಳ ಪರಿಣಾಮಕಾರಿ ಚಿತ್ರಣವನ್ನು ನಾವು ನೋಡಬಹುದಾದ ಚಿತ್ರ..... ಕೇರಳ ಸ್ಟೋರಿ


ಕೇರಳ ಸ್ಟೋರಿ .... ಖಂಡಿತವಾಗಿಯೂ ನಮ್ಮ ಕಣ್ತೆರೆಸುವ ಚಿತ್ರ.

ಶಾಲಿನಿ ಉನ್ನಿಕೃಷ್ಣನ್ ಎಂಬ ಹುಡುಗಿ ಸಿರಿಯಾ ಮತ್ತು ಅಮೆರಿಕಾದ ಗಡಿ ಭಾಗದಲ್ಲಿ ವಿಶ್ವಸಂಸ್ಥೆಯ ಭದ್ರತಾ ಪಡೆಯ ಕೈಗೆ ಸಿಕ್ಕು ತನ್ನ ಕಥೆಯನ್ನು ಹೇಳುವ, ಆ ಮೂಲಕ ಮತಾಂಧತೆಯ ದುಷ್ಪರಿಣಾಮಗಳ ಕುರಿತ ಈ ಚಲನಚಿತ್ರದಲ್ಲಿ ಹೆಣ್ಣು ಮಕ್ಕಳನ್ನು ಮಾನಸಿಕವಾಗಿ, ದೈಹಿಕವಾಗಿ ಯಾವ ರೀತಿ ಬಳಸಿಕೊಳ್ಳುತ್ತಾರೆ ಎಂಬುದರ ಹಸಿ ಹಸಿ ಚಿತ್ರಣ ಇದೆ.


ಉನ್ನತ ವಿದ್ಯಾಭ್ಯಾಸಕ್ಕಾಗಿ ತನ್ನೂರಿನಿಂದ ಕೇರಳದ ಕಾಸರಗೋಡಿಗೆ ತೆರಳುವ ಶಾಲಿನಿ ಉನ್ನಿಕೃಷ್ಣನ್ ಮತ್ತು ಆಕೆಯ ಸ್ನೇಹಿತೆಯರು ಮುಸ್ಲಿಂ ಹೆಣ್ಣು ಮಗಳ ಜೊತೆಗೆ ಹಾಸ್ಟೆಲಿನ ಒಂದೇ ಕೋಣೆಯಲ್ಲಿ ಇರುತ್ತಾರೆ. ಆ ಮುಸ್ಲಿಂ ಹೆಣ್ಣು ಮಗಳು ಮುಸ್ಲಿಂ ಉಗ್ರವಾದದ ಗುಂಪಿಗೆ ಸೇರಿದವಳಾಗಿದ್ದು ಆಕೆಯ ಕೆಲಸ ಈ ಹೆಣ್ಣು ಮಕ್ಕಳ ಮನಸ್ಸನ್ನು ಕೆಡಿಸಿ ಇವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ತಮಗೆ ಬೇಕಾದಂತೆ ಅವರನ್ನು ತಿದ್ದಿ ಮಾನವ ಬಾಂಬುಗಳನ್ನಾಗಿ ಬಳಸಿಕೊಳ್ಳುವುದು. ತನ್ನ ಗುಂಪಿನ ಮುಸಲ್ಮಾನ ಹುಡುಗರನ್ನು ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವವರೆಂದೂ ತನ್ನ ಸಂಬಂಧಿಗಳು ಎಂದು ಪರಿಚಯಿಸುವ ಆಕೆ ಮುಂದೆ ಅವರು ಒಬ್ಬರನ್ನೊಬ್ಬರು ಪ್ರೀತಿಸುವಂತೆ ಸನ್ನಿವೇಶಗಳನ್ನು ಸೃಷ್ಟಿಸುತ್ತಾಳೆ. ಅದಕ್ಕೆ ತಾಳ ಹಾಕುವ ಈ ಹೆಣ್ಣು ಮಕ್ಕಳು ಹಬ್ಬಗಳಿಗೆ ಆಕೆಯ ಮನೆಗೆ ಹೋಗುತ್ತಾ ಆಕೆ ಕೇಳುವ ಹಿಂದೂ ದೇವರ ಕುರಿತ ಅವಹೇಳನಕಾರಿ ಪ್ರಶ್ನೆಗಳಿಗೆ ಉತ್ತರಿಸಲು ಆಗದೆ ತಮ್ಮ ಧರ್ಮವನ್ನು (ಅರಿವು ಹೊಂದಿದ್ದರೆ ತಾನೇ) ಸಮರ್ಥಿಸಿಕೊಳ್ಳಲು ಆಗದೆ ತಮ್ಮ ಧರ್ಮದ ಕುರಿತಾಗಿ ಅಸಡ್ಡೆಯನ್ನು ಹೊಂದುತ್ತಾರೆ. ಹಲವಾರು ವರ್ಷಗಳಿಂದ ತಮ್ಮನ್ನು ಸಾಕಿ ಬೆಳೆಸಿದ ಅಪ್ಪ-ಅಮ್ಮಂದಿರನ್ನು ಮರೆತು ಕೆಲವೇ ದಿನಗಳ ಹುಸಿ ಸ್ನೇಹದ ಬಲೆಯಲ್ಲಿ ಬಿದ್ದ ಹೆಣ್ಣು ಮಕ್ಕಳಲ್ಲಿ ಶಾಲಿನಿ ಉನ್ನಿಕೃಷ್ಣನ್ ತನ್ನೂರಿಗೆ ಹೋಗಿದ್ದವಳು ರಜೆ ಮುಗಿಯುವ ಮುನ್ನವೇ ಮರಳಿ ಬಂದು ಸ್ನೇಹಿತನ ಜೊತೆ ವಾಸಿಸುತ್ತಾಳೆ.  ನಂತರ ತನ್ನ ಅನೈತಿಕ ಸಂಬಂಧದ ಫಲವಾಗಿ ಗರ್ಭಿಣಿಯಾಗಿ, ತನ್ನ ಸುತ್ತಣ ಸಮಾಜಕ್ಕೆ, ತಾಯಿಗೆ ಮುಖ ತೋರಿಸಲು ಭಯವಾಗಿ ಮತಾಂತರಕ್ಕೆ ಒಪ್ಪುತ್ತಾಳೆ. ಮತಾಂತರದ ನಂತರ ತನ್ನನ್ನು ಬಿಟ್ಟು ಹೋಗುವ ಪ್ರಿಯಕರನನ್ನು ಹುಡುಕಲು ಸಾಧ್ಯವಿಲ್ಲದೆ ಹೋದಾಗ ಮತ್ತೊಮ್ಮೆ ಧರ್ಮ ಗುರುಗಳ ಮಾತಿನಂತೆ ಇನ್ನೋರ್ವನನ್ನು ಮದುವೆಯಾಗಿ ಮಧುಚಂದ್ರಕ್ಕೆಂದು ಶ್ರೀಲಂಕಾಕ್ಕೆ ತೆರಳುತ್ತಾಳೆ. ಅಲ್ಲಿ ಇರುವಾಗಲೇ ಆಚೆಗೆ ತನ್ನ ಇನ್ನೋರ್ವ ಕ್ರಿಶ್ಚಿಯನ್ ಸ್ನೇಹಿತೆಯಿಂದ ಮತ್ತೊಬ್ಬ ಸ್ನೇಹಿತೆ ತನ್ನ ಬೆತ್ತಲೆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದುದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ವಿಷಯದ ಕ್ರಿಶ್ಚಿಯನ್ ಸ್ನೇಹಿತೆ ಈಕೆಯನ್ನು ಮರಳಿ ಬರಲು ಇನ್ನಿಲ್ಲದಂತೆ ಆದರೆ ಈಗಾಗಲೇ ತನ್ನನ್ನು ಹಿಡಿತಕ್ಕೆ ತೆಗೆದುಕೊಂಡವರ ಕಬಂಧ ಬಾಹುಗಳಿಂದ ಬಿಡಿಸಿಕೊಳ್ಳಲಾಗದಷ್ಟು ಸಮಸ್ಯೆಗೆ ಕೋಪದಲ್ಲಿ ಕೂತು ಹೋಗಿರುತ್ತಾಳೆ ಶಾಲಿನಿ ಉರ್ಫ್ ಫಾತಿಮಾ. ಒಪ್ಪಂದದ ಮದುವೆಯಾದ ಜೊತೆಗಾರನೊಂದಿಗೆ ಆಫ್ಘಾನಿಸ್ತಾನ, ಬಲೂಚಿಸ್ತಾನ ಮತ್ತು ಕೊನೆಗೆ ಸಿರಿಯಾ ಹೀಗೆ ಹಲವಾರು ದೇಶಗಳಲ್ಲಿ ಸುತ್ತುತ್ತಾ ತಪ್ಪಿಸಿಕೊಂಡು ಓಡಿ ಹೋಗುವಾಗ ವಿಶ್ವಸಂಸ್ಥೆಯ ಭದ್ರತಾ ಪಡೆಯವರ ಕೈಗೆ ಸಿಕ್ಕಿಬೀಳುತ್ತಾಳೆ.


ಭಾರತದ ದೇವರ ನಾಡೆಂದು ಹೆಸರಾದ ಕೇರಳದಲ್ಲಿ ಸಾವಿರಾರು ಹೆಣ್ಣು ಮಕ್ಕಳು ತಂತಮ್ಮ ಮನೆಗಳಿಂದ, ತಾವು ಓದುತ್ತಿರುವ ಕಾಲೇಜುಗಳಿಂದ ತಂದೆ ತಾಯಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾಣೆಯಾಗಿದ್ದಾರೆ. ಅದರಲ್ಲಿ ಕೇವಲ 700 ಜನ ಹೆಣ್ಣು ಮಕ್ಕಳ ಕುರಿತು ಮಾತ್ರ ಪೊಲೀಸ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ. 270 ರಷ್ಟು ಹೆಣ್ಣು ಮಕ್ಕಳನ್ನು  ರಕ್ಷಿಸಲಾಗಿದೆ ಹಾಗಾದರೆ ಉಳಿದ 40ರಿಂದ 50 ಸಾವಿರ ಜನ ಹೆಣ್ಣು ಮಕ್ಕಳು ಎಲ್ಲಿ ಹೋದರು. ಭಾರತ ದೇಶದಂತಹ ಜನನಿಬಿಡ ರಾಷ್ಟ್ರದಲ್ಲಿ ಇಷ್ಟೊಂದು ಜನ ಹೆಣ್ಣು ಮಕ್ಕಳು ಕಾಣೆಯಾಗುವುದರ ಹಿಂದಿನ ರಹಸ್ಯವೇ ಈ ಚಲನಚಿತ್ರದ ಜೀವಾಳ.


ಮೊದಲು ಹೆಣ್ಣು ಮಕ್ಕಳಿಗೆ ಅವರ ಧರ್ಮದ ಕುರಿತು ಅಸಡ್ಡೆ ಮೂಡಿಸುವುದು, ತಮ್ಮ ಧರ್ಮದ ಮೇಲೆ ಒಲವು ಮೂಡಿಸುವುದು, ಸುಂದರ ಪುರುಷರ ಜೊತೆ ಸ್ನೇಹ ಮಾಡಿಸುವುದು ಮೊದಲ ಹಂತವಾದರೆ, ಸ್ನೇಹ ಪ್ರೀತಿಯಾಗಿ, ಪ್ರೀತಿ ದೈಹಿಕ ಸಂಬಂಧವಾಗಿ ಮಾರ್ಪಟ್ಟು ಹೆಣ್ಣು ಮಕ್ಕಳು ಗರ್ಭಿಣಿಯರಾಗುವ ಪರಿಸ್ಥಿತಿಯನ್ನು ತಂದೊಡ್ಡುವುದು ಎರಡನೆಯ ಹಂತ.ತಂದೆ ತಾಯಿಗೆ ಮುಖ ತೋರಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಇರುವಾಗ ಅವರನ್ನು ತಮ್ಮ ಧರ್ಮಕ್ಕೆ ಮತಾಂತರಗೊಳಿಸಿಕೊಳ್ಳುವುದು  ಮತ್ತು ಅವರ ಅಸಹಾಯಕತೆಯ ಲಾಭ ಪಡೆದು  ಅವರಿಂದ ಕುಕೃತ್ಯಗಳನ್ನು ಮಾಡಿಸಲು ತರಬೇತಿ ನೀಡುವುದು, ತಮ್ಮ ಕಾಮತೃಷೆಯನ್ನು ತೀರಿಸಿಕೊಳ್ಳಲು ಹೀನಾಯವಾಗಿ ಬಳಸಿಕೊಳ್ಳುವುದು, ತಮಗೆ ದ್ರೋಹ ಮಾಡಿ ಓಡಿ ಹೋಗಲು ಪ್ರಯತ್ನಿಸಿದರೆ ಅವರ ಕೈಕಾಲುಗಳನ್ನು ನಿರ್ದಯವಾಗಿ ಕತ್ತರಿಸುವುದು ಇಲ್ಲವೇ ಅವರನ್ನು ಸಾಯಿಸುವುದು ಇಂತಹ ಪೈಶಾಚಿಕ ಆಕ್ರಮಣಗಳು ನಡೆಯುತ್ತವೆ.


ಕೇರಳ ಸ್ಟೋರಿಯಲ್ಲಿ ತೋರಿಸಿರುವ ಭಯಾನಕ ಚಿತ್ರಣಗಳು ಕೆಲವು ವರ್ಷಗಳ ಹಿಂದಿನಿಂದಲೂ ನಮ್ಮದೇ ರಾಜ್ಯದ ಕರಾವಳಿ ತೀರಗಳಲ್ಲಿ, ಕೇರಳ ರಾಜ್ಯಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಆದರೆ ಈ ಯಾವ ಪ್ರಕರಣಗಳು ಪೊಲೀಸ್ ಠಾಣೆಗಳಲ್ಲಿ ದಾಖಲಾಗುವುದಿಲ್ಲ. ದನಿ ಎತ್ತಬೇಕಾದ ಹೆಣ್ಣು ಮಕ್ಕಳ ಪಾಲಕರ ದನಿಯೇ ಹೂತು ಹೋದಾಗ ಉಳಿದವರಿಗೆ ಇದರ 


ಗೊಡವೆ ನಮಗೇಕೆ?? ಎಂಬ ತಾತ್ಸಾರ ಮನೋಭಾವ ಹುಟ್ಟಿದರೆ ತಪ್ಪಲ್ಲ. ಹೋದವರಂತೂ  ಹೋದರು ಇದ್ದವರ ಬದುಕಾದರೂ ಸುರಳೀತವಾಗಿ ಸಾಗಲಿ ಎಂಬ ಪಾಲಕರ ಅನಿಸಿಕೆ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಲು ಬಿಡುವುದಿಲ್ಲ. ಅದಕ್ಕೆ ಕಾರಣ ನಮ್ಮ ಕಾನೂನಿನಲ್ಲಿರುವ ಹಲವಾರು ದೋಷಗಳು. ಎಲ್ಲವೂ ಸಾಕ್ಷಿ, ಆಧಾರ ಮತ್ತು ದೂರು ನೀಡುವವರ ಮತ್ತು ದೂರನ್ನು ಪಡೆಯುವವರನ್ನು ಮೇಲೆ ಅವಲಂಬಿಸಿರುವುದರಿಂದ

ಈ ರೀತಿಯ ತೊಂದರೆಗಳು ಉಂಟಾಗುತ್ತವೆ.


ಯಾರು ಇದಕ್ಕೆಲ್ಲ ಕಾರಣ??


ನಮ್ಮ ವ್ಯವಸ್ಥೆ ಮತ್ತು ಅದರಲ್ಲಿರುವ ಹಲವಾರು ದೋಷಗಳು ಇದಕ್ಕೆ ಕಾರಣ. ಅತ್ಯಂತ ಪುರಾತನ ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಇನ್ನೂ ಹಲವಾರು ಮೂಢನಂಬಿಕೆಗಳು, ಪದ್ಧತಿಗಳು ಜಾರಿಯಲ್ಲಿವೆ.


ಹೆಣ್ಣು ಮಕ್ಕಳನ್ನು ಕೀಳಾಗಿ ನೋಡುತ್ತಾ ಹೆಣ್ಣು ಖರ್ಚಿನ ಬಾಬತ್ತು ಎಂಬ ಮನಸ್ಥಿತಿಯಿಂದ ಇನ್ನೂ ಭಾರತೀಯ ಸಮಾಜ ಹೊರಬಂದಿಲ್ಲ. ಹೆಣ್ಣು ಮಕ್ಕಳನ್ನು ಎರಡನೇ ದರ್ಜೆ ಪ್ರಜೆಗಳು ಎಂಬಂತೆ ನೋಡಲಾಗುತ್ತಿದ್ದು ಲಿಂಗ ಅಸಮಾನತೆಯ ಪರಿಣಾಮವಾಗಿ ಹೆಣ್ಣು ಶಿಶುವನ್ನು ಭ್ರೂಣಾವಸ್ಥೆಯಲ್ಲಿಯೇ ಹೊಸಕಿ ಹಾಕಲಾಗುತ್ತಿದ್ದು ಅದರ ಪರಿಣಾಮವಾಗಿ ಪ್ರತಿ ಸಾವಿರ ಜನಕ್ಕೆ 941 ಹೆಣ್ಣು ಮಕ್ಕಳು ಮಾತ್ರ ಉಳಿದುಕೊಂಡಿದ್ದಾರೆ.


ಪಾಲಕರು ತಮ್ಮ ಮನೆಯ ಮಕ್ಕಳಿಗಾಗಿ ಮಾಡಬೇಕಾದ ಕರ್ತವ್ಯಗಳು


ಮಕ್ಕಳಿಗೆ ನಮ್ಮ ಸನಾತನ ಆಚರಣೆಗಳ ಕುರಿತು ಮಾಹಿತಿ ನೀಡಬೇಕು. ಬೇರು ಭದ್ರವಾಗಿದ್ದರೆ ಮರ ಅಲುಗಾಡುವುದಿಲ್ಲ.

ಹಾಗೆಯೇ ನಾವು ನಮ್ಮ ಮಕ್ಕಳಲ್ಲಿ ನಯ, ವಿನಯ, ವಿಧೇಯತೆಗಳನ್ನು ಕಲಿಸುವುದರ  ಜೊತೆಜೊತೆಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು.


ತಪ್ಪು ಸರಿ ಒಳಿತು ಕೆಡುಕು ಯಾವುದೇ ಇರಲಿ ಎಲ್ಲವನ್ನು ಮುಕ್ತವಾಗಿ ತಂದೆ ತಾಯಿಗಳೊಂದಿಗೆ ಮಾತನಾಡುವ ಸ್ವಾತಂತ್ರ್ಯವನ್ನು ಮಕ್ಕಳಿಗೆ ನೀಡಬೇಕು. ''ದೊಡ್ಡವರ ಮುಂದೆ ಮಾತನಾಡುವಷ್ಟು ದೊಡ್ಡವಳಾ/ನಾದೆಯ?? ಎಂದು ಅವರನ್ನು ಹತ್ತಿಕ್ಕಬಾರದು. ನಿಮ್ಮ ಮುಂದೆ ಮಾತನಾಡದ ನಿಮ್ಮ ಮಕ್ಕಳು ಬೇರೊಬ್ಬರಿಗೆ ಪ್ರತಿರೋಧ ತೋರುವುದೆಂತು??


ಯಾವುದೇ ವಿಷಯಗಳನ್ನು ಸಾರಾಸಾರ ವಿವೇಚನೆ ಮಾಡದೆ ಪಾಲಕರ ಮುಂದೆ ಇಡದೆ ನಿರ್ಧಾರ ತೆಗೆದುಕೊಳ್ಳದಿರುವಂತೆ ಮಕ್ಕಳನ್ನು ಬೆಳೆಸಿರಿ. ಸಕಾರಾತ್ಮಕ ಧೋರಣೆಯ ಮನಸ್ಥಿತಿಯಲ್ಲಿ ಬೆಳೆಸುವುದು ಉತ್ತಮ.


ಇನ್ನು ಮಕ್ಕಳ ಕರ್ತವ್ಯಗಳು ಅದಕ್ಕಿಂತ ಹೆಚ್ಚು....


ಪಾಲಕರು ತಮ್ಮ ಮಕ್ಕಳನ್ನು ನಂಬಿ ಅವರನ್ನು ದೂರದ ಊರುಗಳಲ್ಲಿ ಶಾಲೆ ಕಾಲೇಜುಗಳಿಗೆ ಸೇರಿಸಿರುತ್ತಾರೆ. ಸ್ವೇಚ್ಚೆಯೇ ಬೇರೆ ಸ್ವಾತಂತ್ರ್ಯವೇ ಬೇರೆ. ಇವೆರಡರ ನಡುವಿನ ಅಂತರವನ್ನು ಅರಿತು ಬಾಳಬೇಕು.


ಎಲ್ಲರೂ ಮಾಡುತ್ತಾರೆ ನಾವು ಮಾಡುವುದರಲ್ಲಿ ಏನು ತಪ್ಪು?? ಎಂದೇ ಬಹಳಷ್ಟು ಹುಡುಗಿಯರು ಸ್ವಚ್ಛಂದತೆಗೆ ಇಳಿಯುತ್ತಾರೆ. ಎಲ್ಲರೂ ಕೆಟ್ಟವರಲ್ಲ ನಿಜ ಆದರೆ ಎಲ್ಲರೂ ಒಳ್ಳೆಯವರೆಂಬುದಕ್ಕೆ ಏನು ಗ್ಯಾರಂಟಿ??? ಸ್ನೇಹಿತರೊಂದಿಗಿನ ಹೊರಗಿನ ಓಡಾಟ, ಒಡನಾಟ, ರೆಸ್ಟೋರೆಂಟ್ಗಳಿಗೆ ಭೇಟಿ ಪ್ರವಾಸ ತಾಣಗಳಿಗೆ ಒಂದು ದಿನದ ಪಯಣ ಹೀಗೆ ಹಲವಾರು ದಾರಿಗಳಿವೆ. ಆದರೆ ಪ್ರತಿ ದಾರಿಗೂ ಒಂದು ಅಂತ್ಯವಿರುವಂತೆ ಯಾವುದನ್ನು ಎಲ್ಲಿ ಎಷ್ಟರಮಟ್ಟಿಗೆ ಉಪಯೋಗಿಸಬೇಕು ಎಂಬುದರ ಸ್ಪಷ್ಟ ತಿಳುವಳಿಕೆ ಅರಿವು ಹೆಣ್ಣು ಮಕ್ಕಳಿಗಿರಬೇಕು. ನೋ ಎಂಬ ಪದಕ್ಕೆ "ಬೇಡ" ಎಂಬ ಒಂದೇ ಒಂದು ಅರ್ಥ.... ಅದರ ಅರಿವು ಹೆಣ್ಣು ಮಕ್ಕಳಿಗೆ ಖಂಡಿತ ಇರಬೇಕು. ಏಕೆಂದರೆ ಇಂದಿಗೂ ಕೂಡ ಏನೇ ಅವಘಡಗಳಾದರೂ ಅದರ ಪ್ರತಿಫಲವನ್ನು ಎನ್ನುವವಳು ಉಣ್ಣ ಬೇಕಾದವಳು ಹೆಣ್ಣು ಮಾತ್ರ.


ಗಂಡು ಮಕ್ಕಳು ಕೂಡ ಇದಕ್ಕೆ ಹೊರತಲ್ಲ ತಮ್ಮೊಂದಿಗೆ ಬರುವ ಹೆಣ್ಣು ಮಗಳ ಸುರಕ್ಷೆ

ತಮ್ಮ ಜವಾಬ್ದಾರಿ ಎಂದು ಅರಿತಿರಬೇಕು. ಯಾವುದೇ ರೀತಿಯಲ್ಲಿ ಹದ್ದು ನೀಡಿ ವರ್ತಿಸಬಾರದು. ಸಂಯಮಿಕೆಯ ಚೌಕಟ್ಟನ್ನು ಹೊಂದಿರಬೇಕು.


ತಮ್ಮ ಧರ್ಮವನ್ನು ಮೇಲು ಎಂದು ಹೇಳಿ , ಬೇರೆಯವರ ಧರ್ಮಗಳನ್ನು ಅಳೆಯುವ ಜನರನ್ನು ಖಂಡಿತವಾಗಿ ದೂರವಿಡಬೇಕು.


ನಮಗೆ ಗೊತ್ತಿರದ ಜನರನ್ನು ಮನೆಯೊಳಗೆ ಬಿಟ್ಟುಕೊಳ್ಳದ ಕಾಲವಿದು.... ಎಷ್ಟೇ ಒಳ್ಳೆಯವರಾದರೂ ಎಷ್ಟೇ ಸ್ನೇಹಿತರಾದರು ಒಂದು ಹಂತದವರೆಗೆ ಮಾತ್ರ ಅವಕಾಶ ಕೊಡಬೇಕು.

ಸ್ನೇಹಿತರಾದರೆ ಮನೆಯ ಹಜಾರದಲ್ಲಿ ಬಂದು ಕುಳಿತುಕೊಳ್ಳಲಿ ಅಡುಗೆ ಮನೆಯ ಪಾರುಪತ್ಯ ವಹಿಸಬಾರದು. 


ಎಲ್ಲರೂ ಎಲ್ಲಾ ಕಾಲದಲ್ಲಿಯೂ ನಮಗೆ ಫೆವರೆಬಲ್ ಎನಿಸುವಂತಹ ರೀತಿಯಲ್ಲಿ ಇರಲಾಗದು, ಇರಲಾರರು ಕೂಡ. ಅದು ಗಂಡೇ ಇರಲಿ ಹೆಣ್ಣಿರಲಿ ನಿಮ್ಮ ಜಾಗೃತಿಯಲ್ಲಿ ನೀವು ಇರಬೇಕು. ಸದಾ ಪಾಲಕರ, ಅಧ್ಯಾಪಕರ ಸಂಪರ್ಕದಲ್ಲಿ ಇರಬೇಕು. ನಿಮ್ಮನ್ನು ಕಾಡುವ ಗೊಂದಲಗಳಿಗೆ ಸೂಕ್ತ ಮತ್ತು ಸಮರ್ಪಕ ಉತ್ತರಗಳು ಅವರಲ್ಲಿಲ್ಲದೇ ಹೋದರೂ ಭರವಸೆಯ ಬಿಸುಪು,ಸಾಂತ್ವನದ ಕೈ, ಸೋತಾಗ ಆಧರಿಸಲು ಹೆಗಲು, ಸಮಾಧಾನಿಸುವ ಮನ ಖಂಡಿತ ನಿಮ್ಮೊಂದಿಗೆ ಇರುತ್ತವೆ.


ಎಲ್ಲಾ ಅನ್ಯಧರ್ಮೀಯರನ್ನು ಅನುಮಾನಿಸುವ ಅವಶ್ಯಕತೆ ಇಲ್ಲ.... ಸಮಯ ಸಂದರ್ಭಗಳನ್ನು ಅನುಸರಿಸಿ ಅವರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು.... ಅವರ ವರ್ತನೆಯಲ್ಲಾಗುವ ವ್ಯತ್ಯಾಸಗಳ ಅರಿವನ್ನು ಹೊಂದಿ ನಿಮ್ಮನ್ನು ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೂಡ ಕಾಯ್ದುಕೊಳ್ಳಿ


-ವೀಣಾ ಹೇಮಂತ್ ಗೌಡ ಪಾಟೀಲ್ 

ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top