ಆಳ್ವಾಸ್ ಕಾಲೇಜು ವಾರ್ಷಿಕೋತ್ಸವ
ವಿದ್ಯಾಗಿರಿ: ‘ವಿನೂತನ ಆವಿಷ್ಕಾರಗಳು ದೇಶದ ಪ್ರಗತಿಗೆ ಪ್ರೇರಕ ಹಾಗೂ ಪೂರಕ. ವಿದ್ಯಾರ್ಥಿಗಳು ಈ ದಿಶೆಯಲ್ಲಿ ಹೆಜ್ಜೆ ಇಡಬೇಕು’ ಎಂದು ಮಂಗಳೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ.ರಾಜುಕೃಷ್ಣ ಚಲ್ಲಣ್ಣವರ್ ಹೇಳಿದರು.
ಆಳ್ವಾಸ್ ಕಾಲೇಜಿನ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಶನಿವಾರ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಲಿಕೆಯಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಪ್ರೀತಿ ಮತ್ತು ಬದ್ಧತೆಯಿಂದ ಅಧ್ಯಯನ ಮುಂದುವರಿಸಿ ಎಂದರು.
ಆಳ್ವಾಸ್ ಕಾಲೇಜು ಮೂಡಬಿದಿರೆಗೆ ಜಾಗತಿಕ ಛಾಪು ನೀಡಿದೆ. ಇದು ಡಾ.ಮೋಹನ ಆಳ್ವ ಅವರ ದೃಷ್ಟಿ ಹಾಗೂ ಶ್ರಮ. ನೀವೂ ನಿಮ್ಮ ಕಲ್ಪನೆಯಂತೆ ಮುನ್ನಡೆಯಿರಿ ಎಂದರು.
ನೀವೆಲ್ಲ ಬೀಜಗಳಂತೆ. ಆಳ್ವಾಸ್‍ನಲ್ಲಿ ಸಿಗುವ ಶೈಕ್ಷಣಿಕ ಪೋಷಣೆಯಿಂದ ಭವಿಷ್ಯದಲ್ಲಿ ಸಮಾಜಕ್ಕೆ ಫಲ ನೀಡಲಿದ್ದಿರಿ ಎಂದು ಹಾರೈಸಿದರು.
ಕಾಲೇಜಿನ ವರದಿ ವಾಚಿಸಿದ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ‘ಕಾಲೇಜಿನ 24 ವರ್ಷಗಳ ಇತಿಹಾಸದಲ್ಲಿ 399 ರ್ಯಾಂಕ್ ಬಂದಿವೆ. 64 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿನ ಮೂಲಕ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಲೇಜು 18 ವರ್ಷಗಳು ಮಂಗಳೂರು ವಿಶ್ವವಿದ್ಯಾಲಯದ ಕ್ರೀಡಾ ಸಮಗ್ರ ಪ್ರಶಸ್ತಿ ಪಡೆದಿದೆ ಎಂದರು.
ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಕ್ರೀಡಾಕೂಟದಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುತ್ತಿದ್ದು, 4 ಬಾರಿ ಚಾಂಪಿಯನ್ ಆಗಿದೆ. ಶೀಘ್ರವೇ ಸ್ವಾಯತ್ತ ಪಡೆಯುವತ್ತ ಹೆಜ್ಜೆ ಇಡುತ್ತಿದೆ ಎಂದರು.
ಕಾಲೇಜಿನ ಆಡಳಿತ ಅಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ನೀವು ಏನು ಕಲಿಯುತ್ತಿದ್ದೀರಿ ಎಂಬುದಕ್ಕಿಂತ ಎಲ್ಲಿ ಕಲಿಯುತ್ತಿದ್ದೀರಿ? ಎಂಬುದು ಬದುಕಿನಲ್ಲಿ ಮುಖ್ಯವಾಗುತ್ತದೆ. ಯಶಸ್ಸಿನಲ್ಲಿ ಶೇ 99 ಬೆವರು (ಶ್ರಮ) ಇರುತ್ತದೆ ಎಂಬ ಥಾಮಸ್ ಆಲ್ವಾ ಎಡಿಸನ್ ಮಾತುಗಳನ್ನು ನೆನಪಿಡಿ ಎಂದರು.
ರ್‍ಯಾಂಕ್ ವಿಜೇತ, ಕ್ರೀಡಾ ಸಾಧಕ, ಎನ್‍ಸಿಸಿ ಹಾಗೂ ಇತರ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಸಹಾಯಕ ಪ್ರಾಧ್ಯಾಪಕ ಧನಂಜಯ ಆಚಾರ್ಯ ಬರೆದ ‘ಇಂಡಿಯನ್ ಕಾನ್ಸ್ಟಿಟ್ಯೂಷನ್’ ಕೃತಿ ಬಿಡುಗಡೆ ಮಾಡಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಖದಿಜಾ ಆಫ್ರಾ ಸ್ವಾಗತಿಸಿ, ಸಾತ್ವಿಕ್ ಶೆಟ್ಟಿ ಮತ್ತು ಶ್ರೇಯಾ ಪೊನ್ನಪ್ಪ ನಿರೂಪಿಸಿದರು. ಅನಘಾ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ