ಕಾನೂನು ಸಮರದಲ್ಲಿ ವಿಜಯಶಾಲಿಯಾದ ಅಮ್ಮಂದಿರು

Upayuktha
0

ವಿಶ್ವ ತಾಯಂದಿರ ದಿನದ ವಿಶೇಷವಾಗಿ

ನ್ನ ಮಕ್ಕಳಿಗಾಗಿ ಜಗತ್ತಿನ ಯಾವುದೇ ಕಷ್ಟವನ್ನು ಸಹಿಸಲು ತಯಾರಾಗುವ ಜೀವ, ತಾನು ಹರಕು ಸೀರೆ ಉಟ್ಟರು ಮಕ್ಕಳನ್ನು ಸುಖದ ಸುಪ್ಪತ್ತಿಗೆಯಲ್ಲಿ ಓಲಾಡಿಸಲು ಬಯಸುವ ಜೀವ, ದೇವರು ತನ್ನ ನಂತರ ಮನುಷ್ಯನ ಕಾಳಜಿ ಮಾಡಲು ಸೃಷ್ಟಿಸಿರುವ ಮತ್ತೊಂದು ಜೀವಂತ ದೈವ ಅದು.... ಅಮ್ಮ.


ಅಂತಹ ಅಮ್ಮಂದಿರಲ್ಲಿ ದೇಶದ ಕಾನೂನು ವ್ಯವಸ್ಥೆಯನ್ನೇ ಪ್ರಶ್ನಿಸಿ ತಮ್ಮ ಹಕ್ಕಿಗಾಗಿ ಹೋರಾಡಿ  ಗೆದ್ದ ಐದು ಜನ ಮಹಿಳೆಯರು ನಮ್ಮ ಇಂದಿನ ಲೇಖನದ ಮುಖ್ಯ  ವಸ್ತುವಾಗಿದ್ದಾರೆ. ಮಕ್ಕಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳುವ ಮತ್ತು ಲಾಲನೆ ಪಾಲನೆ ಮಾಡುವ ಹಕ್ಕಿಗಾಗಿ ಕಾನೂನು ಸಮರ ನಡೆಸಿ ವಿಜಯಿಯಾದ ತಾಯಂದಿರ ಕಥೆ ಇನ್ನಷ್ಟು ಜನ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯನ್ನು ನೀಡಬಹುದು.


ಪ್ರಕರಣ ಒಂದು

ರುಕ್ಸಾನಾ ಶರ್ಮಾ ವರ್ಸಸ್ ಅರುಣ್ ಶರ್ಮಾ....

ರುಕ್ಸಾನ ಶರ್ಮ ಮತ್ತು ಅರುಣ್ ಶರ್ಮ ಎಂಬ ಇಬ್ಬರು ಮದುವೆಯಾಗಿ ಅಮೆರಿಕಾದಲ್ಲಿ ವಾಸಿಸುತ್ತಿದ್ದರು. ಇವರಿಗೆ ಒಂದು ಮಗು ಕೂಡ ಆಯಿತು. ಪ್ರಾರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇದ್ದು ನಂತರ ದಾಂಪತ್ಯದಲ್ಲಿ ವಿರಸ ಮೂಡಿ ಪತ್ನಿ ಭಾರತಕ್ಕೆ ಹಿಂದಿರುಗಲು ಬಯಸಿದಳು. ಭಾರತಕ್ಕೆ ಪತ್ನಿ ಮರಳಿದರೆ ಆಕೆಗೆ ಪತಿ ತಮ್ಮಿಬ್ಬರ ದಾಂಪತ್ಯದ ಫಲವಾದ ಮಗುವನ್ನು ಕೊಡಲು ಒಪ್ಪಲಿಲ್ಲ. ಭಾರತಕ್ಕೆ ಬಂದ ಆಕೆ ತನ್ನ ಪತಿಯ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿದಳು. ಸಾಕಷ್ಟು ವಿಚಾರಣೆಗಳಾದ ನಂತರ ಸುಪ್ರೀಂ ಕೋರ್ಟ್ ರುಕ್ಸಾನ ಶರ್ಮಳಿಗೆ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ತಾಯಿಯ ಪ್ರೀತಿ ಮತ್ತು ಮಮತೆಯ ಆಸರೆಯಲ್ಲಿ ಇದ್ದರೆ ಮಾತ್ರ ಅವರ ಮುಂದಿನ ಜೀವನ ಸುರಕ್ಷಿತವಾಗಿ ಇರುತ್ತದೆ ಮತ್ತು ಮಗುವಿನ ಭಾವನಾತ್ಮಕ ಬೆಳವಣಿಗೆ ಉತ್ತಮವಾಗಿರುತ್ತದೆ ಎಂಬ ಕಾರಣಗಳನ್ನು ನೀಡಿ ಮಗುವನ್ನು ಆಕೆಯ ಸುಪರ್ದಿಗೆ ಒಪ್ಪಿಸಲು ಆಕೆಯ ಪತಿ ಅರುಣ್ ಶರ್ಮನಿಗೆ ಆದೇಶ ಮಾಡಿತು.


ಪ್ರಕರಣ 2

ಮಿಸಸ್ ಚಟರ್ಜಿ ವರ್ಸಸ್ ನಾರ್ವೆ

ಸಾಗರಿಕ ಭಟ್ಟಾಚಾರ್ಯ ಎಂಬ ಮಹಿಳೆ ನಾರ್ವೆಯಲ್ಲಿ ವಾಸಿಸುತ್ತಿದ್ದಳು. ಮನೆ ಮತ್ತು ಕುಟುಂಬದ ಜವಾಬ್ದಾರಿಯಿಂದ ಹೈರಾಣದ ಆಕೆ ಕೆಲವೊಮ್ಮೆ ಭಾವನಾತ್ಮಕವಾಗಿ ಅತಿರೇಕಿಯಾಗಿ ವರ್ತಿಸುತ್ತಿದ್ದ ಕಾರಣ ನಾರ್ವೆಯ ಸಿಡಬ್ಲ್ಯೂಸಿ ಅಂದರೆ ಚೈಲ್ಡ್ ವೆಲ್ಫೇರ್ ಸರ್ವಿಸಸ್ (ಮಕ್ಕಳ ಕಲ್ಯಾಣ ಸಂಸ್ಥೆ) ನವರು ಆಕೆಯ ಮಕ್ಕಳ ಪಾಲನೆ ಮತ್ತು ಪೋಷಣೆಯ ಜವಾಬ್ದಾರಿಯನ್ನು ಆಕೆಯಿಂದ ಕಸಿದುಕೊಂಡರು. ಮನನೊಂದ ಆಕೆ ನಾರ್ವೆ ಸರ್ಕಾರದ ವಿರುದ್ಧ ಕಲ್ಕತ್ತದ ಹೈಕೋರ್ಟ್ ನಲ್ಲಿ ದೂರನ್ನು ದಾಖಲಿಸಿದಳು.

ಹಲವಾರು ವರ್ಷಗಳ ಸತತ ಪ್ರಯತ್ನದ ಫಲವಾಗಿ 2013ರಲ್ಲಿ ಆಕೆಯ ಮಾನಸಿಕ ಆರೋಗ್ಯ ಚೆನ್ನಾಗಿದ್ದು ಆಕೆ ತನ್ನ ಮಕ್ಕಳನ್ನು ಪಾಲಿಸುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾಳೆ ಎಂಬ ಹೈಕೋರ್ಟ್ ಆದೇಶದ ಪ್ರಕಾರ ಆಕೆಗೆ ಆಕೆಯ ಮಕ್ಕಳನ್ನು ಮರಳಿ ಕೊಡಲಾಯಿತು.


ಪ್ರಕರಣ ಮೂರು

ಮುಖೇಶ್ ಮತ್ತು ಸಂಗಡಿಗರು ವರ್ಸಸ್ ಎನ ಸಿ ಟಿ (ನ್ಯಾಷನಲ್ ಕ್ಯಾಪಿಟಲ್ ಟೆರಿಟರಿ) ದೆಹಲಿ

ಕೆಲ ವರ್ಷಗಳ ಹಿಂದೆ ಬರ್ಬರವಾಗಿ ಅತ್ಯಾಚಾರಕ್ಕೊಳಗಾಗಿ ಹಲವಾರು ದಿನಗಳ ಕಾಲ ಜೀವನ್ಮರಣದ ಹೋರಾಟ ಮಾಡಿ ಬಹು ಅಂಗಾಂಗ ವೈಫಲ್ಯದಿಂದ ಮರಣ ಹೊಂದಿದ ನಿರ್ಭಯ ಎಂಬ ಧೀರ ಬಾಲಕಿಯ ತಾಯಿ ಆಶಾ ಸಿಂಗ್ ಮಡಿದ ತನ್ನ ಮಗಳ ಸಲುವಾಗಿ ನಿರಂತರ ಹೋರಾಟವನ್ನು ಜಾರಿಯಲ್ಲಿಟ್ಟರು. ಇತ್ತೀಚಿಗೆ ಸುಪ್ರೀಂ ಕೋರ್ಟ್ ನಲ್ಲಿ ನಿರ್ಭಯ ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾದಾಗ ನಿಟ್ಟುಸಿರಿಟ್ಟ ಆಶಾ ಸಿಂಗ್ ಹೇಳಿದ್ದು *ಕೊನೆಗೂ ನ್ಯಾಯ ಸಿಕ್ಕಿತು* ಎಂದು. ಅದೆಷ್ಟೇ ಮಾನಸಿಕವಾಗಿ ಜರ್ಜರಿತರಾದರು ಹಠಬಿಡದೆ ತಮ್ಮ ಮಗಳ ನಿರ್ಧಯಿ ಅತ್ಯಾಚಾರ ಪ್ರಕರಣದ ವಿಚಾರಣೆಗೆ ಸತತವಾಗಿ ಒತ್ತಾಯಿಸಿ ಅಂತಿಮ ತೀರ್ಪಿನವರೆಗೂ ಬೆಂಬಿಡದೆ ಕಾಯ್ದ ಮಹಾತಾಯಿ ಆಶಾ ಸಿಂಗ್.


ಪ್ರಕರಣ ನಾಲ್ಕು

 ಶಬ್ನಮ್ ಜಹಾನ್ ಮತ್ತು ಸಂಗಡಿಗರು ವರ್ಸಸ್ ಮಹಾರಾಷ್ಟ್ರ ಸರ್ಕಾರ

ಶಬ್ನಮ್ ಜಹಾನ್ ಓರ್ವ ವಿಚ್ಛೇಧಿತೆ. ಒಳ್ಳೆಯ ಸಂಬಳದ ನೌಕರಿಯಲ್ಲಿ ಇದ್ದ ಆಕೆ ತನ್ನ ವಿಚ್ಛೇದನದ ನಂತರ ಮಗುವೊಂದನ್ನು ದತ್ತು ತೆಗೆದುಕೊಳ್ಳಲುಕಾನೂನು ಸಮರ ನಡೆಸಬೇಕಾಯಿತು. ವಿಚ್ಛೇದಿತ ಮಹಿಳೆ ಮಗುವನ್ನು ಹೊಂದಲು ಸರ್ಕಾರದ ಕಾನೂನಿನಲ್ಲಿ ಅವಕಾಶವಿರಲಿಲ್ಲ. ಇದರ ವಿರುದ್ಧ ಮಹಾರಾಷ್ಟ್ರ ಸರ್ಕಾರದ ಜಿಲ್ಲಾ ನ್ಯಾಯಾಲಯದಲ್ಲಿ ದೂರು ದಾಖಲಿಸಿದ ಶಬ್ನಮ್ ಜಹಾನ್ ತಾನು ಉದ್ಯೋಗಸ್ತೆಯಾಗಿದ್ದು ಆರ್ಥಿಕವಾಗಿ ಸಬಲಳಾಗಿದ್ದು, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಆರೋಗ್ಯವಂತಳಾ ಗಿರುವುದನ್ನು ಕೋರ್ಟಿಗೆ ಮನವರಿಕೆ ಮಾಡಿಕೊಟ್ಟಳಲ್ಲದೆ ತನಗೆ ಮಗುವನ್ನು ದತ್ತು ತೆಗೆದುಕೊಳ್ಳಲು ಅನುಮತಿ ನೀಡಲು ನ್ಯಾಯಾಲಯವನ್ನು ಕೋರಿಕೊಂಡಳು. ಜಿಲ್ಲಾ ನ್ಯಾಯಾಲಯದಲ್ಲಿ ಆಕೆಯ ಮನವಿಯನ್ನು ತಿರಸ್ಕರಿಸಿದ ಕಾರಣ ಆಕೆ ರಾಜ್ಯ ಹೈಕೋರ್ಟ್ ನಲ್ಲಿ ದೂರು ದಾಖಲಿಸಿದಳು.ಹಲವಾರು ವರ್ಷಗಳ ಕಾನೂನು ಸಮರದ ಮೂಲಕ ಕೋರ್ಟ್ ಆಕೆಗೆ ಮಗುವನ್ನು ದತ್ತು ತೆಗೆದುಕೊಳ್ಳಲು ಅನುಮತಿ ನೀಡಿತು. ಇದು ಎಲ್ಲಾ ವಿಚ್ಛೇದಿತ ಒಬ್ಬಂಟಿ ಜೀವನ ನಡೆಸುತ್ತಿರುವ ಮಹಿಳೆಯರಿಗೆ ಭರವಸೆಯನ್ನು  ನೀಡಿತು.


ದೀಪಿಕಾ ಸಿಂಗ್ ವರ್ಸಸ್ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಟ್ರಿಬ್ಯೂನಲ್ (ಕೇಂದ್ರಾಡಳಿತ ನ್ಯಾಯ ಮಂಡಳಿ)ಮತ್ತು ಸಂಗಡಿಗರು

ದೀಪಿಕಾ ಸಿಂಗ್ ಎಂಬ ಮಹಿಳೆ ತನ್ನ ಪತಿಯ ಮೊದಲ ವಿವಾಹದಲ್ಲಿ ಜನಿಸಿದ ಮಗುವಿನ ಲಾಲನೆ ಪಾಲನೆಗೆ ತನ್ನ ಮಾತೃತ್ವದ ರಜೆಗಳನ್ನು ವ್ಯಯಿಸಿದ್ದಳು. ಇದೀಗ ಆಕೆಯೇ ಗರ್ಭಿಣಿಯಾಗಿ ಮಗುವನ್ನು ಹೊಂದುವ ಸಮಯದಲ್ಲಿ ಆಕೆಗೆ ಮಾತೃತ್ವ ರಜೆಯನ್ನು ನೀಡಲು ನಿರಾಕರಿಸಿದ ಸರ್ಕಾರದ ನಿಯಮಾವಳಿಗಳ ವಿರುದ್ಧ ಆಕೆ ಪ್ರಕರಣ ದಾಖಲಿಸಿದಳು. ಪತಿಯ ಮೊದಲ ಪತ್ನಿಯ ಮಕ್ಕಳು ಜೈವಿಕವಾಗಿ ಆಕೆಯ ಮಕ್ಕಳಲ್ಲ. ಆದ್ದರಿಂದ ಆಕೆಗೆ ಮಾತೃತ್ವ ರಜೆಯನ್ನು ಕಡ್ಡಾಯವಾಗಿ ನೀಡಲೇಬೇಕು ಎಂದು ಅನೇಕ ದಿನಗಳ ವಿಚಾರಣೆಯ ನಂತರ ನ್ಯಾಯಾಲಯ ತೀರ್ಪು ನೀಡಿತು. ಜೊತೆಗೆ ನ್ಯಾಯಾಲಯವು ಕುಟುಂಬ ಪದದ ವಿವರಣೆಯನ್ನು ವಿಸ್ತರಿಸಿತಲ್ಲದೇ ತನ್ನದಲ್ಲದ ಜೈವಿಕ ಮಕ್ಕಳ ಪಾಲನೆ ಪೋಷಣೆಗೆ ಬಳಸಿದ ರಜೆಯನ್ನು ಹೊರತುಪಡಿಸಿಯೂ ಮಹಿಳೆಗೆ ಮಾತೃತ್ವ/ಹೆರಿಗೆ ರಜೆಯನ್ನು ನಿರಾಕರಿಸಲಾಗದು ಎಂದು ಅಧಿಸೂಚನೆಯನ್ನು ಹೊರಡಿಸಿತು.


ಈ ಮೇಲಿನ ಐದು ವಿವಿಧ ಪ್ರಕರಣಗಳಲ್ಲಿ ತಾಯಂದಿರೇ ಭಾಗಿಯಾಗಿದ್ದು ತಮ್ಮ ಹಕ್ಕಿಗಾಗಿ ಕಾನೂನಿನ ಮೊರೆ ಹೊಕ್ಕ ತಾಯಂದಿರು ಯಶಸ್ವಿಯಾಗಿದ್ದಾರೆ. ಈ ಮೂಲಕ ನಮ್ಮ ಹಕ್ಕು ಪಡೆದುಕೊಳ್ಳುವುದು ಕೂಡ ನಮ್ಮ ಕರ್ತವ್ಯ ಎಂದು  ಕಾನೂನು ಸಮರದ ಮೂಲಕ ಸಾಬೀತು ಮಾಡಿದ್ದಾರೆ. ಅಂತಹ ಧೀರ, ನ್ಯಾಯಯುತ ತಾಯಂದಿರಿಗೆ ಮತ್ತು ತೆರೆಮರೆಯಲ್ಲಿ ಪ್ರತಿದಿನ ತಮ್ಮ ಮಕ್ಕಳ ಸರ್ವತೋಮುಖ  ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಎಲ್ಲ ತಾಯಂದಿರಿಗೂ ತಾಯಂದಿರ ದಿನದ ಶುಭಾಶಯಗಳು. 


-ವೀಣಾ ಹೇಮಂತ್ ಗೌಡ 

ಪಾಟೀಲ್ ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top