ತಾಯಿಯ ಒಡಲು... ಮಮತೆಯ ಕಡಲು

Upayuktha
0

 

ಹೇಗೆ ಹೇಳಲಮ್ಮಾ ನಿನ್ನ ಪ್ರೀತಿಯ ಅಗಾಧತೆಯನ್ನ... ಬರೆದು ಗೀಚೋಣವೆಂದರೆ ಪದಪುಂಜಗಳೇ ಸಾಲದು. ಹೌದು!ತಾಯಿಯೆಂದರೆ ಅವಳೊಂದು ಗುಡಿ ಇರದ ದೇವತೆಯಂತೆ. ತನ್ನ ಮಕ್ಕಳು ಹಾಗೂ ಕುಟುಂಬದ ಪೋಷಣೆಯಲ್ಲಿಯೇ ತನ್ನ ಅರ್ಧ ಜೀವಿತಾವಧಿಯನ್ನು ಸವೆಸುತ್ತಾಳೆ. ಯಾವುದೇ ರೀತಿಯ ಫಲಾಪೇಕ್ಷೆಯಿಲ್ಲದೆ ಎಲ್ಲರ ಬೇಕು -ಬೇಡಗಳನ್ನು ಬಹಳ ಮುತುವರ್ಜಿ ವಹಿಸಿ ನೋಡಿಕೊಳ್ಳುವಳು.

  

ತನ್ನ ಒಡಲಿನಲ್ಲಿ ಮಗುವಿನ ಅಂಗಾಂಗಗಳ ಬೆಳವಣಿಗೆ ಕಾರ್ಯಗಳು ಪ್ರಾರಂಭಗೊಳ್ಳುವಾಗಲೇ ಆಕೆ ತನ್ನ ಮಗುವಿನ ಮುಂದಿನ ಭವಿಷ್ಯ ಯಾವ ರೀತಿಯಾಗಿ ಕಟ್ಟಿಕೊಡಬೇಕು. ತನ್ನ ಮಗುವನ್ನು ಹೇಗೆಲ್ಲಾ ಪೋಷಿಸಬೇಕು ಎಂದೆಲ್ಲಾ ಮನದಲ್ಲೇ ಸಾಲು-ಸಾಲು ಪಟ್ಟಿಯನ್ನು ಸಿದ್ಧವಾಗಿರಿಸಿಕೊಂಡಿರುತ್ತಾಳೆ.

  

ಮಗು ಪ್ರಪಂಚಕ್ಕೆ ಕಾಲಿಟ್ಟ ಕ್ಷಣದಿಂದ ಪ್ರತಿ ಅಮ್ಮನ ಪುಟ್ಟ ಪ್ರಪಂಚ ತನ್ನ ಮಗ/ಮಗಳೇ ಆಗಿರುತ್ತಾಳೆ.


ಅಮ್ಮ ಎಂದರೆ ಆಕೆಯೊಂದು ಎಂದೂ ಬರಿದಾಗದ, ಬತ್ತದ ಪ್ರೀತಿಯ ಚಿಲುಮೆ. ತಾನು ಒಂದು ಹೊತ್ತು ತಿಂದರೂ ಕೂಡ ತನ್ನವರಿಗೆ ಮೂರು ಹೊತ್ತಿಗೂ ಕಿಂಚಿತ್ತೂ ಕಮ್ಮಿಯಾಗದಂತೆ ಕೊಟ್ಟು ತನ್ನ ಬರಿದಾದ ಹೊಟ್ಟೆಗೆ ನೀರು ಕುಡಿದು ಅದರಲ್ಲೇ ತೃಪ್ತಿ ಪಟ್ಟುಕೊಳ್ಳುತ್ತಾಳೆ.


ಎಷ್ಟೇ ಸಮಸ್ಯೆಯಿರಲಿ ಅಥವಾ ಯಾವುದೇ ನೋವಿರಲಿ ಆದರೆ ಆಕೆಗೆ ಬಿಡುವು ಎನ್ನುವುದು ಇರುವುದೇ ಇಲ್ಲ. ಗಾಣಕ್ಕೆ ಕಟ್ಟಿದ ಎತ್ತಿನಂತೆ ದಿನದ ಪ್ರತಿ ಕ್ಷಣವೂ ಒಂದಲ್ಲ ಒಂದು ರೀತಿಯ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರತ್ತಾಳೆ. ಆಕೆಗೆ ವಿಶ್ರಾಂತಿ ಎಂದು ಸಿಗುವುದು ರಾತ್ರಿ ನಿದ್ದೆಗೆಂದು ಮೈಚಾಚಿಕೊಂಡಾಗ ಮಾತ್ರ. ಮರುದಿನ ಅದೇ ದಿನಚರಿ ಅದೇ ಕೆಲಸ ಕಾರ್ಯಗಳು. ಒಟ್ಟಿನಲ್ಲಿ ತನ್ನ ಕುರಿತು ಒಂದು ಕ್ಷಣವೂ ಯೋಚಿಸಲು ಆಕೆಗೆ ಬಿಡುವು ಇರಲಾರದು.

   

ನಮ್ಮ ದಿನ ಪ್ರಾರಂಭವಾಗುವುದೇ 'ಅಮ್ಮಾ... ಎಂಬ ಕೂಗಿನಿಂದ ಅಮ್ಮಾ ತಿಂಡಿ ಆಯ್ತಾ... ಅಮ್ಮ ಟೈಮ್ ಆಯ್ತು...  ಅದು ಕೊಡು ಅಮ್ಮ ಇದು ಕೊಡು ಹೀಗೆ ಪ್ರತಿಯೊಂದಕ್ಕೂ ಕೂಡ ಆಕೆಯನ್ನೇ ಅವಲಂಬಿಸಿರುತ್ತೇವೆ. ತನ್ನ ಮಕ್ಕಳಿಗೆ ಸ್ವಲ್ಪ ನೋವಾದರೂ ಸಾಕು ತನಗೇನೋ ಆದಂತೆ ಚಡಪಡಿಸಲು ಪ್ರಾರಂಭಿಸಿರುತ್ತಾಳೆ. ನಿಷ್ಕಲ್ಮಶ ಪ್ರೇಮದ ಮೂರ್ತಿ ಅವಳು. ಅವಳ ಋಣವ ತೀರಿಸಲು ಅಸಾಧ್ಯವೇ ಸರಿ.

   

ಪ್ರತಿಯೊಂದು ತಾಯಿಯ ಕನಸು ಕೂಡ ತಾನು ಪಟ್ಟ ಕಷ್ಟದ ನೆರಳು ಸಹ ತನ್ನ ಮಕ್ಕಳಿಗೆ ಸೋಕಬಾರದೆಂದು ಆಗಿರುತ್ತದೆ. ತನ್ನ ಮಗುವು ಅಂಬೆಗಾಲಿಟ್ಟು ನಡೆಯುವಾಗ ಎಡವಿ ಇನ್ನೇನೂ ಬೀಳಬೇಕು ಎನ್ನುವಾಗ ಹೇಗೆ ಆಸರೆಯಾಗಿ ಜೊತೆನಿಲ್ಲುತ್ತಾಳೋ ಹಾಗೆಯೇ ಜೀವನದಲ್ಲೂ ಮಕ್ಕಳು ತಪ್ಪು ಹಾದಿಯತ್ತ ಹೆಜ್ಜೆ ಇಟ್ಟರೆ ಎಡವದಂತೆ ತಡೆದು ಸರಿಪಡಿಸುತ್ತಾಳೆ. ಅವಳ ಬೈಗುಳಗಳ ಹಿಂದೆ ಕಾಣದ ಕಾಳಜಿಯು ಅಡಗಿರುತ್ತದೆ. ಅದಕ್ಕಾಗಿಯೇ ಕೆಲವೊಂದು ಕಿವಿಮಾತುಗಳನ್ನು ಹೇಳುತ್ತಾಳೆ ಒಮ್ಮೊಮ್ಮೆ ಗದರಿ ನಮ್ಮನ್ನು ಸುಮ್ಮನಾಗಿಸುತ್ತಾಳೆಯೇ ಹೊರತು ಅದಾವುದೂ ಕೂಡ ನಮಗೆ ನೋವುಂಟು ಮಾಡಬೇಕೆಂದಲ್ಲ. ಆದರೆ ಆ ಕ್ಷಣಕ್ಕೆ ಅವಳ ಮೇಲೆ ಹರಿಹಾಯ್ದು  ಬಿಡುತ್ತೇವೆ. ಆದರೆ ಆಕೆಯ ಪ್ರೀತಿಯ ಆಳವನ್ನು ಅರಿಯುವಲ್ಲಿ ಸೋಲುತ್ತೇವೆ.

  

ಆದರೆ ಆಕೆಯ ಒಂದು ಹಿತನುಡಿ ನಮ್ಮನ್ನು ನಾವು ತಿದ್ದಿಕೊಂಡು ನಮ್ಮ ಉತ್ತಮ ಭವಿಷ್ಯಕ್ಕೆ ಮುನ್ನುಡಿಯಾಗುವುದೆಂದು ಯೋಚಿಸುವ ಕಿಂಚಿತ್ತೂ ವ್ಯವಧಾನವು ನಮ್ಮಲ್ಲಿರುವುದಿಲ್ಲ. ಯಾವತ್ತಾದರೂ ಅಮ್ಮ ನಿಮಗೆ ಬೈದಾಗ ಅಥವಾ ಬುದ್ಧಿಮಾತುಗಳನ್ನು ಹೇಳಿದಾಗ ಆದಷ್ಟು ಸಹನೆಯಿಂದ ಆಲಿಸಿ ನಿಮ್ಮನ್ನು ತಿದ್ದಿಕೊಳ್ಳಿ ಮುಂದೆ ಅದುವೇ ನಿಮಗೆ ದಾರಿದೀಪವಾಗಬಹುದು.

-ಪ್ರಸಾದಿನಿ.ಕೆ ತಿಂಗಳಾಡಿ

ಪ್ರಥಮ ಪತ್ರಿಕೋದ್ಯಮ ವಿಭಾಗ

ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ)ಪುತ್ತೂರು

                                                                                                              

                                                                                                             


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top