ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕಸಂಘದ ಮಂಗಳೂರು ವಿಶ್ವವಿದ್ಯಾನಿಲಯ ವಿಭಾಗವು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜುಗಳ ಸಹಯೋಗದಲ್ಲಿ ‘ರಾಷ್ಟ್ರೀಯ ಶಿಕ್ಷಣ ಪದ್ಧತಿ 2020ರ ಅನುಷ್ಠಾನ: ಸವಾಲುಗಳು ಮತ್ತು ಭವಿಷ್ಯ- ಪಠ್ಯಕ್ರಮ, ಮೌಲ್ಯಮಾಪನ, ಫಲಿತಾಂಶʼ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವೊಂದನ್ನು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮೇ 26 ರಂದು ಆಯೋಜಿಸಿದೆ.
ನಗರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ವಿಚಾರಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಸುಭಾಷಿಣಿ ಶ್ರೀವತ್ಸ, ಕಾರ್ಯಕ್ರಮ ಶಿಕ್ಷಕ-ಶಿಕ್ಷಣ-ಸಮಾಜ ಈ ಮೂರನ್ನು ಬೆಸೆಯುವ ಉದ್ದೇಶ ಹೊಂದಿದೆ. ರಾಷ್ಟ್ರೀಯ ಶಿಕ್ಷಣಪದ್ಧತಿಯ ಅನುಷ್ಠಾನದಲ್ಲಿ ಮುಂದಿನ ನಡೆ ಹೇಗಿರಬೇಕು, ವಿದ್ಯಾರ್ಥಿಗಳನ್ನು ಸಂಶೋಧನೆಯೆಡೆಗೆ ಸೆಳೆಯುವುದು, ಕೌಶಲ್ಯವೃದ್ಧಿ, ಉದ್ಯೋಗ ಸೃಷ್ಟಿ ಹೇಗೆ ಎಂಬ ಬಗೆಗಿನ ಚರ್ಚೆಗೆ ವೇದಿಕೆ ಕಲ್ಪಿಸಲಿದೆ, ಎಂಬ ಆಶಯ ವ್ಯಕ್ತಪಡಿಸಿದರು.
ಮಂಗಳೂರು ವಿಭಾಗದ ಕಾರ್ಯದರ್ಶಿ ವೆಂಕಟೇಶ್ ನಾಯಕ್, ಶಿಕ್ಷಣಪದ್ಧತಿಯ ಅನುಷ್ಠಾನ ಎದುರಾಗುತ್ತಿರುವ ಸಮಸ್ಯೆ, ಪದ್ಧತಿಯಲ್ಲಿರುವ ಕೊರತೆಗಳ ಬಗ್ಗೆಯೂ ವಿಚಾರಸಂಕಿರಣ ಬೆಳಕು ಚೆಲ್ಲಲಿದೆ, ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೆಆರ್‍ಎಂಎಸ್ಎಸ್‌ನ ರಾಜ್ಯಘಟಕದ ಜಂಟಿಪ್ರಧಾನ ಕಾರ್ಯದರ್ಶಿ ಡಾ. ಮಾಧವಎಂ.ಕೆ, ಸಂಘಟನೆಯು ನೂತನ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಬದ್ಧವಾಗಿದೆ, ಎಂದರು.
ರೂಪುರೇಷೆ:
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣಪರಿಷತ್‌ನ ಉಪಾಧ್ಯಕ್ಷ ಕರ್ನಲ್ (ಪ್ರೊ) ವೈಎಸ್ ಸಿದ್ದೇಗೌಡ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ಕಾರ್ಯದರ್ಶಿ ಪ್ರೊ. ಮನೀಶ್ ಆರ್. ಜೋಷಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಎಬಿಆರ್‍ಎಸ್ಎಂ ನ ಮಧ್ಯ ಕ್ಷೇತ್ರೀಯ ಪ್ರಮುಖ್ ಡಾ. ರಘು ಅಕಮಂಚಿ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣಪರಿಷತ್‌ನ ಕಾರ್ಯಕಾರಿ ನಿರ್ದೇಶಕ ಡಾ. ಗೋಪಾಲಕೃಷ್ಣ ಜೋಷಿ, ಪ್ಯಾನಲ್ ಚರ್ಚೆಯ ನೇತೃತ್ವ ವಹಿಸಲಿದ್ದಾರೆ. ಯುಜಿಸಿಯ ಸಹಕಾರ್ಯದರ್ಶಿ ಡಾ. ಎನ್ ಗೋಪುಕುಮಾರ್, ಚಾಣಕ್ಯ ವಿಶ್ವವಿದ್ಯಾನಿಲಯದ ಕಲೆ, ಮಾನವಿಕ ಮತ್ತು ಸಮಾಜವಿಜ್ಞಾನ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಜೇಂದ್ರಜೋಷಿ ಮೊದಲಾದವರು ವಿಷಯ ಮಂಡಿಸಲಿದ್ದಾರೆ. ಮುಕ್ತ ಪ್ರಶ್ನೋತ್ತರ ಅವಧಿಯ ಬಳಿಕ ಎಬಿಆರ್‍ಎಸ್ಎಂ ರಾಷ್ಟ್ರೀಯ ಸಂಘಟನಾ ಜೊತೆ ಕಾರ್ಯದರ್ಶಿ ಜಿ. ಲಕ್ಷ್ಮಣ್ ಸಮಾರೋಪ ಭಾಷಣ ಮಾಡಲಿದ್ದು, ಮಂಗಳೂರು ವಿವಿಯ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕೆಆರ್‍ಎಂಎಸ್ಎಸ್‌ನ ಮಂಗಳೂರು ವಿಭಾಗದ ಕೋಶಾಧಿಕಾರಿ ಆಶಾಲತಾ, ಸಂಚಾಲಕಿ ಡಾ. ಶೋಭಾ, ಸಂಘಟನಾ ಸಮಿತಿಯ ರಾಜೇಶ್ ಕುಮಾರ್, ಗುರುಪ್ರಸಾದ್ ಟಿಎನ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ