ಮನಸ್ಸು ಮಾತು ಕೇಳುತ್ತಿಲ್ಲ....!

Upayuktha
0

  

ಗತ್ತನ್ನೇ ಗೆಲ್ಲಬಹುದು ಆದರೆ ತನ್ನದೇ ಮನಸ್ಸನ್ನು ಗೆಲ್ಲುವುದು ಬಹು ಕಷ್ಟ. ಮನಸ್ಸು ಗೆದ್ದವರು ಜಗತ್ತನ್ನು ಗೆದ್ದವರಿಗಿಂತಲೂ ಬಹಳ ದೊಡ್ಡವರು.ನಾವು ಅದನ್ನು ಮಂಗನಿಗೆ ಹೋಲಿಸುತ್ತೇವೆ, ಒಂದು ಕಡೆ ದೃಢವಾಗಿ ನಿಲ್ಲದೆ ಎಲ್ಲಿಂದ ಎಲ್ಲಿಗೋ ಕ್ಷಣಮಾತ್ರದಲ್ಲಿ ಹಾರಿಹೋಗುತ್ತದೆ.

   

ಮನಸ್ಸಿನ ಮಾತು ಯಾರು ಕೇಳುತ್ತಾರೆಯೋ ಅವರು ಕ್ಷೀಣಿಸುತ್ತಾರೆ. ಯಾರ ಮಾತನ್ನು ಮನಸ್ಸೇ ಕೇಳುತ್ತದೆಯೋ ಅವರು ಎಲ್ಲವನ್ನ ಸಾಧಿಸುತ್ತಾರೆ. ನಮ್ಮ ಮಾತನ್ನು  ಮನಸ್ಸು ಕೇಳಬೇಕು, ಅದರ ಮೇಲೆ  ನಿಯಂತ್ರಣ ಸಾಧಿಸಬೇಕೆನ್ನುವುದು ಅಷ್ಟು ಸುಲಭದ ಮಾತಲ್ಲ. ಹರಸಾಹಸ ಪಟ್ಟು ಈ ಕಲಿಯುಗದಲ್ಲಿ ದೇವರನ್ನೇ ವಲಿಸಿಕೊಳ್ಳಬಹುದು. ಆಕರ್ಷಣೆಗಳಿಂದಲೇ ತುಂಬಿರುವ ಈ ಕಾಲದಲ್ಲಿ ಮನಸ್ಸನ್ನ ಗೆದ್ದು ಬೀಗಲು ನಮ್ಮ ಜೊತೆಗೆ ನಾವೇ ಮಹಾನ್ ಯುದ್ಧವೇ ಮಾಡಬೇಕು.


ಇದು ಕಥೆ.ಪುಟ್ಟದಾದ ಒಂದು ಗ್ರಾಮದಲ್ಲಿ ದೊಡ್ಡ ಮನೆತನ ಒಂಗಿತ್ತು.ಅದರಲ್ಲಿ ತಂದೆ ತಾಯಿ ಅಣ್ಣ ತಮ್ಮಂದಿರ ಕುಟುಂಬಗಳೆಲ್ಲವೂ ಕೂಡೇ ಸಂಸಾರ ಮಾಡುತ್ತಿದ್ದವು. ಅವರಿಗೆ ಏನೇನಿಸಿತೋ ಏನೋ ತಮ್ಮ ಹೊಲದಲ್ಲಿ ಚಿನ್ನದ ನಿಧಿ ಇದೆ ಎಂದು ಭಾವಿಸಿ ಸಿಕ್ಕಸಿಕ್ಕಲ್ಲಿ ಅಗಿದು ಹೊಲದ ತುಂಬೆಲ್ಲ ಹುಡುಕಲು ಪ್ರಾರಂಭಿಸಿದರು, ಆದರೂ ಯಾವ ನಿಧಿಯು ಸಿಗಲಿಲ್ಲ.ಆ ನಿಧಿ ನಮ್ಮಿಂದ ತಪ್ಪಿಸಿಕೊಂಡು ಭೂಮಿಯಲ್ಲಿ ಓಡಾಡುತ್ತಿದೆ ಎಂದು ತಮಗೆ ತಾವೇ ಕಲ್ಪನೆ ಮಾಡಿಕೊಂಡು ಅದನ್ನು ಹುಡುಕಲು ಒಬ್ಬ ಮಂತ್ರವಾದಿಯನ್ನು ಕರೆಸಿದರು, ಆತ ಇವರನ್ನ ಗಮನಿಸಿ, ಇವರ ಹುಚ್ಚು ಭ್ರಮೆಯನ್ನ ಅರಿತುಕೊಂಡು ಇದನ್ನು ಮಾತುಗಳಿಂದ ಬಗೆಹರಿಸಿ ಇವರ ಹುಚ್ಚು ಬಿಡಿಸಲು ಸಾಧ್ಯವಿಲ್ಲ ಎಂದು ತಿಳಿದು, ಆತ ಒಂದು ಉಪಾಯ ಹೂಡಿದ. ಆ ದಿನ ರಾತ್ರಿ ತನ್ನ ಶಿಷ್ಯನೋಡನೆ ಅವರ ಹೊಲಕ್ಕೆ ಬಂದು ಒಂದು ತಾಮ್ರದ ಬಿಂದಿಗೆಯಲ್ಲಿ ಮಣ್ಣನ್ನು ತುಂಬಿ ಆ ಬಿಂದಿಗೆಯ ಬಾಯಿಯನ್ನು  ಸಂಪೂರ್ಣವಾಗಿ ಮುಚ್ಚಿ ಅದನ್ನು ಮಣ್ಣಿನಲ್ಲಿ ಹೂತು ಹಾಕಿದನು. ಬೆಳಗ್ಗೆ ಬಂದು ನಿಮ್ಮ ಹೊಲದಲ್ಲಿ ನಿಧಿ ಇದೆ ರಾತ್ರಿ ನನ್ನ ಕನಸಿನಲ್ಲಿಯೂ ಕಂಡಿತ್ತು  ಎಂದು ಹೇಳಿ ಅದನ್ನ ನಿಮಗೆ ತೆಗೆದುಕೊಡುತ್ತೇನೆ ನೀವು ನನಗೆ ಎರಡು ಲಕ್ಷ ರೂಪಾಯಿ ಹಣ ಕೊಡಬೇಕೆಂದು ಹಣದ ಬೇಡಿಕೆ ಇಟ್ಟನು. ಬಹುದೊಡ್ಡ ಚಿನ್ನದ ನಿಧಿಯೆ ಸಿಗುತ್ತದೆ ಎನ್ನುವ ಆಸೆಯಲ್ಲಿ ಅವರು ಎರಡು ಲಕ್ಷ ರೂಪಾಯಿ ಕೊಡಲು ಒಪ್ಪಿದರು.ಆತ ಹಣವನ್ನು ಆ ತಕ್ಷಣವೇ ಪಡೆದುಕೊಂಡನು, ತಾನು ರಾತ್ರಿ ಬಂದು ಮುಚ್ಚಿಟ್ಟು ಹೋದ ಜಾಗದಿಂದ ತಾಮ್ರದ ಬಿಂದಿಗೆಯನ್ನ ಹೊರ ತೆಗೆದನು ಎಲ್ಲರಿಗೂ ಆನಂದವೇ ಆನಂದ ಆತ ಹೇಳಿದ ಇದರಲ್ಲಿದ್ದ ಚಿನ್ನವನ್ನು ನೀವು ಪಡೆದುಕೊಳ್ಳಬೇಕಾದರೆ ಒಂದು ವಾರಗಳ ಕಾಲ ಇದನ್ನು ದೇವರ ಕೋಣೆಯಲ್ಲಿಡಬೇಕು.ಇದರ ಮುಚ್ಚಳವನ್ನ ಯಾರು ಬಿಚ್ಚಬಾರದು ಒಂದು ವೇಳೆ ವಾರದ ಮಧ್ಯೆ ಯಾರಾದರೂ ಬಿಚ್ಚಿದರೆ ಅದರಲ್ಲಿರುವ ಚಿನ್ನ ಮಣ್ಣಾಗುವ ಸಾಧ್ಯತೆ ಇದೆ. ಹಾಗಾದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದನು.ಆತನ ಆಜ್ಞೆಯನ್ನು ಒಪ್ಪಿ ಅದನ್ನ ದೇವರ ಕೋಣೆಯಲ್ಲಿಟ್ಟರು ನಾಲ್ಕು ದಿನಗಳು ಕಳೆದವು ಆಗ ತಮ್ಮನಿಗೂ ತಮ್ಮನ ಹೆಂಡತಿಗೂ ದುರಲೋಚನೆ ಬೆಳೆಯಿತು ಮನೆಯಲ್ಲಿ ಯಾರು ಇಲ್ಲದಾಗ ಇರುವ ಚಿನ್ನವೇನು ಮಣ್ಣಾಗುತ್ತದೆಯೇ  ಎಂದುಕೊಂಡು,ಅದರ ಮೇಲಿನ ಮುಚ್ಚಳವನ್ನು ತೆಗೆದು ಸ್ವಲ್ಪ ಚಿನ್ನ ಕದಿಯಲು ಪ್ರಯತ್ನಿಸಿದರು,ಆದರೆ ಅದರಲ್ಲಿ ಮಣ್ಣನ್ನ ಕಂಡು ಹಾಗೆ ಮುಚ್ಚಿಟ್ಟರು. ಈ ದುರಾಲೋಚನೆ ಅಣ್ಣ ಅಣ್ಣನ ಹೆಂಡತಿಗೂ ತಂದೆ ತಾಯಂದಿರಿಗೂ ಹಾಗೂ ತಮ್ಮದೇ ಮಕ್ಕಳಿಗೂ ಬರಲು ಪ್ರಾರಂಭಿಸಿತು, ಏಳು ದಿನದಲ್ಲಿ ಒಬ್ಬರಿಗೆ ಒಬ್ಬರು ತಿಳಿಯದಂತೆ ಎಲ್ಲರೂ ಆ ಬಿಂದಿಗೆಯನ್ನು ತೆಗೆದು ನೋಡಿದರು. ಏಳನೇ ದಿನದ ನಂತರ ಆ ಮಂತ್ರವಾದಿಯನ್ನ ಕರೆಸಿ ಆ ಬಿಂದಿಗೆಯ ಮುಚ್ಚಳವನ್ನು  ಎಲ್ಲರ ಮಧ್ಯೆ ತೆಗೆಸಿದರು. ಆಗ ಅದರಲ್ಲಿ ಮಣ್ಣಿರುವುದನ್ನು ಕಂಡು ಆ ಮಂತ್ರವಾದಿಯ ಮೇಲೆ ರೇಗಲು ಪ್ರಾರಂಭಿಸಿದರು. ಆತ ಹೇಳಿದ ನಾನು ಹಾಕಿದ ಶರತ್ತನ್ನು ಈ ಮನೆಯಲ್ಲಿ ಯಾರೋ ಮುರಿದಿದ್ದೀರಿ ಇದನ್ನು ಯಾರು ಬಿಚ್ಚಿ ನೋಡಿದ್ದೀರಿ ಹೇಳಿ,ದೇವರ ಮೇಲೆ ಪ್ರಮಾಣ ಮಾಡಿ ಎಂದನು. ಆಗ ಎಲ್ಲರೂ ಮುಖವನ್ನ ಕೆಳಗೆ ಬಾಗಿಸಿದರು. ಮಂತ್ರವಾದಿಗೆ ಅರ್ಥವಾಯಿತು ಎಲ್ಲರೂ ಇದನ್ನು ತೆಗೆದು ನೋಡಿದ್ದಾರೆಂದು.ಇವರು ನನ್ನ ಮಾತನ್ನ ಕೇಳಿದರು ಇವರ ಮನಸ್ಸು ನನ್ನ ಮಾತನ್ನು ಕೇಳುವುದಿಲ್ಲ ಎನ್ನುವುದರ ಅರಿವು ಆತನಿಗೆ ಮೊದಲೇ ಇತ್ತು. ಅದಕ್ಕಾಗಿ ಈ ಆಟ ಆಡಿದ.


ಈ ಕತೆಯನ್ನು ನಾನು ನಿಮಗೆ ಏಕೆ ಹೇಳಿದೆ ಎಂದರೆ ಗುರುಗಳು ಯಾವುದನ್ನು ಕೇಳಬಾರದು ನೋಡಬಾರದು ಎಂದು ಹೇಳಿರುತ್ತಾರೆಯೋ,ನನ್ನ ಮಾತನ್ನು ಪಾಲಿಸಿದರೆ ನೀವು ಶ್ರೇಷ್ಠ ಸಾಧಕರಾಗಿ  ಬೆಳೆಯುತ್ತೀರಿ ಎಂದಿರುತ್ತಾರೆಯೋ, ಅವರ ಮಾತುಗಳನ್ನು ಕಡೆಗಣಿಸಿ, ನಮ್ಮ ಮನಸ್ಸು ತನ್ನೊಳಗೆ ತುಂಬಿಕೊಂಡ ಕಲ್ಮಶದ ಕಡೆಗೆ ನಮ್ಮನ್ನು  ಸೆಳೆದು ಆ ಮೋಹದಲ್ಲೇ ಬಿದ್ದು ಒದ್ದಾಡುವಂತೆ ಮಾಡುತ್ತದೆ. ತನ್ನ ತಾಳಕ್ಕೆ ತಕ್ಕಂತೆ ನಮ್ಮನ್ನ ಕುಣಿಸಿಕೊಳ್ಳುತ್ತದೆ. ಮತ್ತೆ ನಾವು ಅಂದುಕೊಳ್ಳುತ್ತೇವೆ ಭಗವಂತ ನಮಗೇನು ಒಳ್ಳೇದು ಮಾಡುತ್ತಿಲ್ಲ ಎಂದು. ತನ್ನದೇ  ಪ್ರತಿರೂಪಿಗಳಾದ ಗುರುಗಳು ಹಾಗೂ ತಂದೆ ತಾಯಿಗಳ ರೂಪದಲ್ಲಿ ಬಂದು ಒಳ್ಳೆಯ ವಿಚಾರಗಳನ್ನು ಬೋಧಿಸುತ್ತಿರುತ್ತಾನೆ, ಯಾವತ್ತಿಗಾದರೂ ಅವರ ಮಾತುಗಳನ್ನ ನಮ್ಮ ಮನಸ್ಸಿಗೆ ತುರುಕುವ ಪ್ರಯತ್ನ ಮಾಡಿದ್ದೇವೆಯೇ, ಇದನ್ನು ನಮಗೆ ನಾವೇ ಕೇಳಿಕೊಳ್ಳೋಣ. ನನ್ನ ಗುರುದೇವರು ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ.ದೇಹ ಬಹಳ ದನಿದರೆ ಅದನ್ನ  ಸ್ವಲ್ಪ ವಿಶ್ರಾಂತಿಗೆ ಬಿಡು, ಒಳ್ಳೆಯ ವಿಚಾರಗಳಿಂದ ಮನಸ್ಸು ದನಿದರೆ ಅದನ್ನು ಯಾವುದೇ ಕಾರಣಕ್ಕೂ ಆ ವಿಚಾರಗಳಿಂದ ವಿಶ್ರಾಂತಿಗೆ ಬಿಡಬೇಡ. ಚಿನ್ನದ ಪಲ್ಲಕ್ಕಿಯಲ್ಲಿ ಹೋಗುವ ಶ್ವಾನಕ್ಕೆ ಆ ಪಲ್ಲಕ್ಕಿಯ ಪರದೆ ತೆಗೆದರೆ ಅದು ಬೀದಿಯ ಬದಿಗಿರುವ ಹೇಸಿಗೆಯ ಕಡೆಗೆ ನೆಗೆದುಬಿಡುತ್ತದೆ, ಹಾಗೆ ಮನಸ್ಸು ಒಳ್ಳೆಯ ವಿಚಾರಗಳಿಂದ ಅದಕ್ಕೆ ಸ್ವಲ್ಪ ವಿಶ್ರಾಂತಿ ನೀಡಿದರೆ, ಕೆಟ್ಟ ಆಲೋಚನೆಗಳ ಕಡೆಗೆ ಹಾರಿಹೋಗುತ್ತದೆ.ಮನಸ್ಸಿನ ಗುಣವೆ ಹಾಗೆ ಅಲ್ಲವೇ ಕೆಟ್ಟದ್ದನ್ನೇ ಹೆಚ್ಚು ಬಯಸುವುದು. ಯಾರು ಮನಸ್ಸು ಗೆಲ್ಲುತ್ತಾರೆ ಅವರಿಗೆ ಜಗತ್ತೇ ತಲೆಬಾಗುತ್ತದೆ.

-ಶ್ರೀರಾಮಕೃಷ್ಣ ದೇವರು. ಮರೇಗುದ್ದಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top