ಅಪರೂಪಕ್ಕೆ ಒಮ್ಮೊಮ್ಮೆ ಹೋಟೆಲ್ಗಳಿಗೆ ಹೋದಾಗ ಅಲ್ಲಿ ಯಾವುದಾದರೂ ಸ್ನೇಹಿತರ ಗುಂಪೊಂದು ನೆರೆದಿದ್ದರೆ ಮೇಲಿನಂತ ಪ್ರಶ್ನೆ ಅನೇಕ ಸಮಯದಿಂದ ನನ್ನನ್ನು ಕಾಡುತ್ತಿತ್ತು. ಇದು ಎಂತ ಪ್ರಶ್ನೆಯೆಂದು ಓದುಗರಲ್ಲಿ ಕುತೂಹಲವೂ ಆಶ್ಚರ್ಯವೂ ಮೂಡಬಹುದು. ಆದರೂ ಸಮಯ ಸಂದರ್ಭ ಬಂದಾಗ ಹೇಳಬೇಕಾದದ್ದು ನನ್ನ ಕರ್ತವ್ಯ ಎಂಬ ಹಿನ್ನೆಲೆಯಲ್ಲಿ ಮುಂದಿನ ಪ್ರಸಂಗದತ್ತ ಒಂದೆರಡು ಮಾತು.
ಕೆಲ ದಿನಗಳ ಹಿಂದೆ ಅದೊಂದು ಕಾಲೇಜಿನ ಎಂಬಿಎ ವಿದ್ಯಾರ್ಥಿಗಳ ತಂಡ ಅಧ್ಯಯನ ದೃಷ್ಟಿಯಿಂದ ನಮ್ಮ ಮನೆಗೆ ಬಂದಿದ್ದರು. ಸಣ್ಣಮಟ್ಟಿನ ಐಸ್ ಕ್ರೀಮ್ ಉದ್ಯಮವನ್ನು ನಡೆಸುವ ಮಗನ ಭೇಟಿ ಅವರ ಉದ್ದೇಶ. ಮಾತುಕತೆ ಸಂದರ್ಶನಗಳೆಲ್ಲ ಮುಗಿದ ಮೇಲೆ, ಐಸ್ ಕ್ರೀಮಿನ ಸ್ವಾದವನ್ನು ಸವಿದ ಮೇಲೆ ಮನೆಗೆ ತೆಗೆದುಕೊಂಡು ಹೋಗುವ ಉದ್ದೇಶದಲ್ಲಿ ಅರ್ಧ ಲೀಟರ್ ಕುಟುಂಬ ಡಬ್ಬವ (ಫ್ಯಾಮಿಲಿ ಪ್ಯಾಕ್) ಖರೀದಿಸಿ ಮಗನಿಂದ ಬೀಳ್ಕೊಂಡರು. ಕೃಷಿಯನ್ನು ವೀಕ್ಷಿಸುತ್ತಾ ಗಮ್ಯವನ್ನು ಸೇರುವುದು ಅವರ ಉದ್ದೇಶವಾಗಿತ್ತು. ಹಾಗೆ ಐದೂ ಜನರು ಐಸ್ ಕ್ರೀಮ್ ಅನ್ನು ಸವಿಯುತ್ತಾ ತೋಟದೆಡೆ ಬರುವಾಗ ಏನೋ ಕೆಲಸದಲ್ಲಿದ್ದ ನನ್ನ ಕಣ್ಣಿಗೆ ಬಿದ್ದರು. ಮಾತುಕತೆ ಮಾಡುವಾಗ ಒಂದೇ ಡಬ್ಬದಿಂದ ಐದೂ ಜನರು ಆಗಾಗ ಐಸ್ ಕ್ರೀಮನ್ನು ಸವಿಯುವುದನ್ನು ಕಂಡಾಗ ನನ್ನ ಕರ್ತವ್ಯ ಪ್ರಜ್ಞೆ ಜಾಗೃತವಾಯಿತು. ನೀವೇಕೆ ಸಣ್ಣ ಕಪ್ಪುಗಳನ್ನು ಕೇಳಿ ಪಡೆಕೊಳ್ಳಲಿಲ್ಲ ಎಂದು ಪ್ರಶ್ನಿಸಿದೆ? ನಾವು ಸ್ನೇಹಿತರು ಅಂಕಲ್. ಸ್ನೇಹಿತರ ಬಗ್ಗೆ ಯಾವುದೇ ಭೇದಭಾವ ಇರಕೂಡದು ಎಂದುತ್ತರಿಸಿದರು.
ನಿಮ್ಮ ಗಾಢವಾದ ಸ್ನೇಹಕ್ಕೆ ನನ್ನದು ಶತಕೋಟಿ ಅಭಿನಂದನೆಗಳು. ಆದರೆ ವೈರಸ್ಸುಗಳಿಗೋ ಬ್ಯಾಕ್ಟೀರಿಯಾಗಳಿಗೋ ನಿಮ್ಮ ಸ್ನೇಹದ ಬಗ್ಗೆ ಅರಿವಿದೆಯೇ? ಎಂದು ಮರು ಪ್ರಶ್ನಿಸಿದೆ. ಪ್ರಶ್ನಾರ್ಥಕವಾಗಿ ಮುಖವನ್ನು ನೋಡಿದರು. ಪ್ರೀತಿಯಿಂದ ಉತ್ತರಿಸಿದೆ.
ಮನುಷ್ಯನೊಬ್ಬ ಕೆಮ್ಮಿದಾಗ ಲಕ್ಷಾಂತರ ಸಂಖ್ಯೆಯಲ್ಲಿ ವೈರಸ್ಸು ಬ್ಯಾಕ್ಟೀರಿಯ ಮುಂತಾದ ಜೀವಿಗಳು ಹೊರ ಬರುತ್ತವಂತೆ. ಶೀನಿದಾಗ ಕೋಟ್ಯಂತರ ಸಂಖ್ಯೆಯಲ್ಲಿ ಹೊರಬರುತ್ತದೆ. ಉಗುಳಿದಾಗ ಮತ್ತೆ ಅದೆಷ್ಟೋ ಸಂಖ್ಯೆಯಲ್ಲಿ ಹೊರಗೆ ಬರುತ್ತದೆ. ಒಂದು ಆತ್ಮೀಯ ಅಪ್ಪುಗೆಯಿಂದ, ಹಸ್ತಲಾಘವದಿಂದ, ಮುಖಕ್ಕೆ ಮುಖ ಕೊಟ್ಟು ಮಾತುಕತೆಯಿಂದ ಕೊರೊನಾ ತನ್ನ ಅಟ್ಟಹಾಸವನ್ನು ಮೆರೆಯುತ್ತದೆ ಎಂದಾದರೆ ನೀವು ನೇರ ನೇರ ಪರಸ್ಪರರ ಎಂಜಲನ್ನೇ ಸೇವಿಸಿದರೆ ಸೂಕ್ಷ್ಮ ಜೀವಿಗಳಿಗೆ ನಿಮ್ಮ ಸ್ನೇಹದ ಭಾವ ಅರ್ಥ ಆಗಬಹುದೇ?
ಹೋಟೆಲ್ಗಳಿಗೆ ಹೋದಾಗ, ಸಂತೆ ಮಾರುಕಟ್ಟೆಯಲ್ಲಿ, ಜಾತ್ರೆ ಗದ್ದೆಯಲ್ಲಿ, ಸಮಾರಂಭಗಳಲ್ಲಿ ಆಹಾರವನ್ನು ಮುಚ್ಚಿಡದೇ ಇದ್ದಲ್ಲಿ ನೊಣ ಕುಳಿತಿರುವುದನ್ನು ಕಂಡಿಲ್ಲವೇ? ರಾತ್ರಿಯ ಹೊತ್ತು ಜಿರಳೆಗಳು ಓಡಾಡುವುದನ್ನು ಕಂಡಿಲ್ಲವೇ? ಮಲದ ಮೂಲಕವೋ, ಉಗುಳಿನ ಮೂಲಕವೋ, ಕೊಳೆತ ಆಹಾರದ ಅಥವಾ ಜೀವಿಗಳ ಮೂಲಕವೋ ನೊಣ ಜಿರಳೆಗಳ ಕಾಲುಗಳಿಗೆ ಸ್ಪರ್ಶಿಸಿದ ಸೂಕ್ಷ್ಮಾಣುಗಳು ಮುಚ್ಚಿಡದ ಆಹಾರದ ಮೂಲಕ ನಮ್ಮ ದೇಹದೊಳಗೆ ಹೋಗುತ್ತವೆ ಎಂಬುದನ್ನು ಚಿಕ್ಕ ತರಗತಿಗಳಲ್ಲೇ ಓದಿ ತಿಳಿದಿಲ್ಲವೇ? ನಮಗೆ ಅನಾರೋಗ್ಯವನ್ನು ಬರಿಸುದರಲ್ಲಿ ಮುಖ್ಯ ವಾಹಕಗಳೇ ಅವುಗಳು ಎಂದಾದರೆ ಬಾಯಿಯಿಂದ ಬಾಯಿಗೆ ಎಂಜಲು ಹರಡಿದಾಗ ಯಾವ ಮಟ್ಟದಲ್ಲಿ ಅನಾರೋಗ್ಯವನ್ನು ಹಂಚುತ್ತೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನೊಣ ಜಿರಳೆಗಳ ಕೆಲಸವನ್ನು ಅವುಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ನೀವು ಮಾಡಬೇಕೆ?
ಅನಾರೋಗ್ಯಕ್ಕೆ ಕಾರಣವಾಗುವ ಜೀವಿಗಳು ಪ್ರತಿಯೊಬ್ಬನ ದೇಹದ ಒಳಗೆ ನಮಗೆ ಅರಿವಿಲ್ಲದಂತೆ ಸೇರಿಕೊಂಡಿರಬಹುದು. ನಿರೋಧಕ ಶಕ್ತಿ ಇರುವ ಕಾರಣ ಅವುಗಳು ಮುನ್ನೆಲೆಗೆ ಬಾರದೆ ಇರಬಹುದು. ಇನ್ನೊಬ್ಬನ ಶರೀರವನ್ನು ಎಂಜಲಿನ ಮೂಲಕ ಹೊಕ್ಕಾಗ ಆ ವ್ಯಕ್ತಿಗೆ ನಿರೋಧಕ ಶಕ್ತಿ ಕಡಿಮೆ ಇದ್ದರೆ ಅಲ್ಲಿ ಮತ್ತೆ ಅದು ತನ್ನ ಕಾರ್ಯವನ್ನು ಆರಂಭಿಸಬಹುದು. ಶಾರೀರಿಕ ರೋಗ ನಿರೋಧಕ ಸಾಮರ್ಥ್ಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ ಎಂಬ ಅರಿವು ನಿಮಗಿರಬಹುದು. ತಾಯಿ ಮಕ್ಕಳಾದರೂ ಒಂದೇ ಬಟ್ಟಲಿನಿಂದ ಉಣ್ಣಬಾರದು ಎಂಬುದು ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರ. ಹಾಗಿರುವಾಗ ಸಂಪೂರ್ಣ ವಿಭಿನ್ನ ಕುಟುಂಬದಿಂದ ಬಂದ ನೀವುಗಳಿಗೆ ಎಂಜಲು ಸಂಬಂಧ ಶೋಭೆಯೇ? ಸ್ನೇಹದ ಬಂಧವನ್ನು ಎಂಜಲಿಗೆ ಬಂಧಿಸಬೇಡಿ. ಆರೋಗ್ಯ ಶಾಲಿಗಳಾಗಿ ಬಾಳಿ ಬದುಕಿ. ನಿಮಗೆ ಶುಭವಾಗಲಿ ಅಂತಂದೆ.
ನನ್ನ ಮಾತು ಮುಗಿಸಿದಂತೆ ಸಾರಿ ಅಂಕಲ್ ಎಂದು ತಿಳಿಸಿ ಹೊಸದಾಗಿ ನಾಲ್ಕು ಕಪ್ಪುಗಳನ್ನು ಸ್ವೀಕರಿಸಿ ಕೃಷಿ ಕ್ಷೇತ್ರವನ್ನು ಸುತ್ತಾಡಿ ಮುಂದಕ್ಕೆ ಪಯಣಿಸಿದರು.
ಎಲ್ಲಾ ಸ್ನೇಹ ಬಂಧುಗಳಲ್ಲಿಯೂ ಹಂಚಿಕೊಂಡಲ್ಲಿ ಸುಸಂಸ್ಕಾರ ಸಮಾಜದಲ್ಲಿ ಹಬ್ಬಬಹುದು ಎಂಬುದು ನನ್ನ ಆಶಯ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
-ಎ.ಪಿ. ಸದಾಶಿವ ಮರಿಕೆ.