ಬೆಂಗಳೂರು: ‘ನಾವು ಯಾವ ವೃತ್ತಿಯಲ್ಲಿ ತೊಡಗಿಕೊಂಡರೂ ಆ ವೃತ್ತಿಯ ಹಿಂದಿನ ಬೃಹತ್ ಕನಸಿನ ಭಾಗವಾಗಿರಬೇಕು, ಆಗ ಮಾತ್ರ ನಮ್ಮ ಜೀವನಕ್ಕೆ ಸಾರ್ಥಕತೆ ಬರುತ್ತದೆ. ಅನಿವಾರ್ಯ ಅಂದುಕೊಂಡು ಮನಸ್ಸಿಲ್ಲದೆ ಗೊಣಗಿಕೊಳ್ಳುತ್ತ ಕೆಲಸ ಮಾಡುವುದು ಅಥವ ಏನೋ ಸಂಬಳ ಬರುತ್ತೆ ಅಂತ ಯಾಂತ್ರಿಕವಾಗಿ ಕೆಲಸ ಮಾಡುವುದು - ನಮ್ಮನ್ನು ಕ್ರಮೇಣ ದುಃಖಿಗಳನ್ನಾಗಿಸುತ್ತದೆ, ಅಸಹಾಯಕ ಮನೋಭಾವದಿಂದ ನರಳುವಂತೆ ಮಾಡುತ್ತದೆ. ಅದರಲ್ಲೂ ನಮ್ಮ ಯುವ ಇಂಜಿನಿಯರ್‍ಗಳು ದೇಶವನ್ನು ಉನ್ನತ ಮಟ್ಟಕ್ಕೇರಿಸುವ ದೊಡ್ಡ ಕನಸಿನ ಭಾಗ ಆಗಬೇಕು, ಕಟ್ಟಡದ ಪ್ರತಿ ಕಲ್ಲನ್ನೂ ಸಂಪೂರ್ಣ ನಂಬಿಕೆಯಿಂದ ಇಟ್ಟು ಬೃಹತ್ ಕಟ್ಟಡ ಕಟ್ಟಬೇಕು ಅಥವ ಜನಸಾಮಾನ್ಯರ ಬದುಕನ್ನು ಹಸನಾಗಿಸುವ ಹೊಸ ವಿಚಾರಗಳನ್ನು ಹಾಗೂ ಅನ್ವೇಷಣೆಗಳನ್ನು ಶ್ರದ್ಧೆಯಿಂದ ಮಾಡಬೇಕು. ಆಗಲೇ ನಮಗೆ ಯಶಸ್ಸು, ಶ್ರೇಯಸ್ಸು, ಆತ್ಮಸಂತೋಷಗಳೆಲ್ಲವೂ ಲಭ್ಯವಾಗುತ್ತವೆ’, ಎಂದು ಪ್ರಸಿದ್ಧ ಗಾಯಕ, ಸಂಗೀತ ಸಂಯೋಜಕ ಹಾಗೂ ನಟ ವಾಸುಕಿ ವೈಭವ್ ನುಡಿದರು. ಅವರು ಬೆಂಗಳೂರು ನಗರದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿತಗೊಂಡಿದ್ದ ಪ್ರತಿಷ್ಠಿತ ರಾಷ್ಟ್ರಮಟ್ಟದ ತಂತ್ರಜ್ಞಾನ ಹಾಗೂ ಸಾಂಸ್ಕೃತಿಕ ಉತ್ಸವ- ‘ಅನಾದ್ಯಂತ-2023’ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಂದುವರಿದು ಶ್ರೀಯುತರು, ‘ನಾವು ಹೀಗೆ ಬೃಹತ್ ಕನಸಿನ ಭಾಗವಾಗುವುದನ್ನು ನಮ್ಮ ವಿದ್ಯಾಸಂಸ್ಥೆಗಳಲ್ಲಿಯೇ ಕಲಿಯುತ್ತೇವೆ. ಸದಾ ತಪ್ಪುಗಳನ್ನು ಮಾಡುತ್ತಲೇ ಕಲಿಯುತ್ತೇವೆ. ಆದರೆ ಆ ತಪ್ಪುಗಳನ್ನು ತಿದ್ದುವ ಅಪಾರ ಸಾಮಥ್ರ್ಯವುಳ್ಳ ದೈವಸ್ವರೂಪಿಗಳಾದ ಗುರುಗಳು ಇಲ್ಲಿರುತ್ತಾರೆ. ಅದಕ್ಕಾಗಿಯೇ ನಾವೆಲ್ಲರೂ ನಮ್ಮ ಗುರುಗಳಿಗೆ ಹಾಗೂ ತಂದೆ ತಾಯಿಗಳಿಗೆ ಸದಾ ಋಣಿಯಾಗಿರಬೇಕು. ಏಕೆಂದರೆ ಅವರು ನಮ್ಮ ತಪ್ಪುಗಳನ್ನು ತಿದ್ದಿದವರು’, ಎಂದರು. ನಂತರ ತಮ್ಮ ಸುಶ್ರಾವ್ಯ ಕಂಠದಿಂದ ಹೊರಹೊಮ್ಮಿದ ಕನ್ನಡ ಹಾಡುಗಳನ್ನು ಹಾಡಿ ನೆರೆದಿದ್ದ ಸಹಸ್ರಾರು ವಿದ್ಯಾರ್ಥಿಗಳನ್ನು ರಂಜಿಸಿದರು. ಕರೋನಾ ಪಿಡುಗು ಇಡೀ ವಿಶ್ವವನ್ನು ಭಾದಿಸುತ್ತಿದ್ದಾಗಲೂ ತೆರೆಮರೆಗೆ ಸರಿಯದೆ ಆನ್‍ಲೈನ್‍ನಲ್ಲಿ ವಿದ್ಯಾರ್ಥಿಗಳು ‘ಅನಾದ್ಯಂತ’ ಆಚರಿಸಿದರು. ಈಗ ಮತ್ತೆ ಮೊದಲಿನ ಸ್ಥಿತಿ ಬಂದಿರುವುದರಿಂದ ಅಪರಿಮಿತ ಉತ್ಸಾಹ ಹಾಗೂ ತೀವ್ರ ಬದ್ಧತೆಯಿಂದ ಆಯೋಜನೆಗೊಂಡ ಈ ಉತ್ಸವದಲ್ಲಿ ರಾಷ್ಟ್ರದಾದ್ಯಂತ ವಿವಿಧ ತಾಂತ್ರಿಕ ವಿದ್ಯಾಲಯಗಳಿಂದ ಆಗಮಿಸಿದ್ದವರೂ ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಉತ್ಸವದಲ್ಲಿ ಪಾಲ್ಗೊಂಡರು. ತಂತ್ರಜ್ಞಾನದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಜಗತ್ತಿನ ವಿಸ್ಮಯಗಳನ್ನು ಸಾದರಪಡಿಸುವ ಮಹದೋದ್ದೇಶವನ್ನು ‘ಅನಾದ್ಯಂತ-2023’ ಹೊಂದಿದೆ; ‘ಸಂಸ್ಕೃತಿಯ ತೊಟ್ಟಿಲು’ ಎಂಬ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡಿದೆ.
ಸಮಾರಂಭದಲ್ಲಿ ವಿಶೇಷ ಉಪನ್ಯಾಸವನ್ನು ಸಾದರಪಡಿಸಿದವರು, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್.ಸಿ. ನಾಗರಾಜ್. ತಮ್ಮ ಉಪನ್ಯಾಸದಲ್ಲಿ ಶ್ರೀಯುತರು-‘ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ, ನೈಸರ್ಗಿಕ ಸಂಪನ್ಮೂಲಗಳ ಅತಿ ಬಳಕೆ, ತಲೆದೋರಬಹುದಾದ ಭೀಕರ ಜಲಕ್ಷಾಮ, ಇತರೆ ಪ್ರಾಣಿಪಕ್ಷಿಗಳ ಜೀವಕ್ಕೆ ಸಂಚಕಾರ ಇತ್ಯಾದಿಗಳಿಂದ ನಲುಗುತ್ತಿರುವ ನಮ್ಮ ವಿಶ್ವಕ್ಕೆ ಸೂಕ್ತ ಪರಿಹಾರವನ್ನು ನಮ್ಮ ಯುವ ಇಂಜಿನಿಯರ್‍ಗಳು ಕಂಡುಕೊಳ್ಳಬೇಕಿದೆ. ಇತ್ತೀಚಿನ ಯುವ ತಂತ್ರಜ್ಞರಿಗೆ ಅಪಾರ ಅರಿವಿದೆ. ಸಮಾಜದ ಬಗ್ಗೆ ಕಾಳಜಿಯಿದೆ ಹಾಗೂ ಹೊಸತುಹೊಸತನ್ನು ಅನ್ವೇಷಿಸುವ ಉತ್ಸಾಹವಿದೆ. ತಂತ್ರಜ್ಞಾನದ ಸದ್ಬಳಕೆಯಿಂದ ಮಾತ್ರ ಈ ಜಗತ್ತನ್ನು ಅಪಾಯಗಳಿಂದ ಪಾರುಮಾಡಬಹುದು ಎಂಬ ನಂಬಿಕೆ ನನ್ನದು. ಈ ನಂಬಿಕೆ ಎಮ್ದೂ ಹುಸಿಯಾಗುವುದಿಲ್ಲ ಎಂಬುದಕ್ಕೆ ವಿದ್ಯಾರ್ಥಿಗಳೇ ಆಯೋಜಿಸಿರುವ ‘ಅನಾದ್ಯಂತ’, ಜ್ವಲಂತ ನಿದರ್ಶನ. ತಂತ್ರಜ್ಞಾನದಿಂದ ಬುದ್ದಿ ವಿಕಾಸವಾಗುತ್ತದೆ ಹಾಗೂ ಸಂಸ್ಕೃತಿ ಸಾಹಿತ್ಯಗಳಿಂದ ಸಮಾಜಮುಖಿ ಮಾನವೀಯ ಗುಣಗಳು ವೃದ್ಧಿಯಾಗುತ್ತವೆ ಎಂಬ ಉದ್ದೇಶದಿಂದ ಈ ಸಾಂಸ್ಕೃತಿಕ ಉತ್ಸವವನ್ನು ಹಮ್ಮಿಕೊಂಡಿದ್ದಾರೆ. ತಂತ್ರಜ್ಞಾನದ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಸಂಸ್ಕಾರವೂ ಮೇಳವಿಸಲಿ ಎಂಬುದು ನನ್ನ ಹಾರೈಕೆ’, ಎಂದರು.
ನಿಟ್ಟೆ ಶಿಕ್ಷಣ ಸಂಸ್ಥೆಯ ಡಾ. ಅಶ್ವಿತಾ ಪೂಂಜ, ಡಾ. ಸಂದೀಪ್ ಶಾಸ್ತ್ರಿ, ಡಾ. ವ್. ಶ್ರೀಧರ್, ಪ್ರೊ. ಎಸ್. ನಾಗೇಂದ್ರ ಹಾರೂ ಡಾ. ಕಿರಣ್ ಐತಾಳ್ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು.
ಅಧ್ಯಕ್ಷತೆ ವಹಿಸಿದ್ದವರು - ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ. ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ – ‘ನಮ್ಮ ದೇಶಕ್ಕೆ ಅಗತ್ಯವಿರುವುದು, ನಮ್ಮ ಅಪಾರ ಜ್ಞಾನ ಹಾಗೂ ಹೊಸ ಹೊಸ ಅನ್ವೇಷಣೆಗಳ ಸದ್ಬಳಕೆ. ಇದು ಈಡೇರಿದಾಗ ಮಾತ್ರ ನಮ್ಮ ದೇಶ ಆರೋಗ್ಯ, ಶೈಕ್ಷಣಿಕ, ಔದ್ಯಮಿಕ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಔನ್ನತ್ಯವನ್ನು ಸಾಧಿಸಲಿದೆ’, ಎಂದರು.
ಉತ್ಸವದಲ್ಲಿ ‘ಐಡಿಯಾಥಾನ್’, ‘ಸ್ಟುಡ್‍ಸ್ಯಾಟ್’, ‘ಸಿಮುಲೇಶನ್ ರೇಸ್’, ‘ರೂಬಿಕ್ ಕ್ಯೂಬ್’ ಇತ್ಯಾದಿ ತಂತ್ರಜ್ಞಾನ ಕ್ಷೇತ್ರದ ಸ್ಪರ್ಧೆಗಳಲ್ಲದೆ - ಬೀದಿ ನಾಟಕ, ಕ್ವಿeನ್, ನೃತ್ಯ, ಚರ್ಚಾ ಸ್ಪರ್ಧೆ, ಕ್ರೀಡೆ, ಫ್ಯಾಷನ್ ಶೋ ಇತ್ಯಾದಿ ಚಟುವಟಿಕೆಗಳೂ ನಡೆದವು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ