ಉಚಿತಗಳು ಉಚಿತ...! ಬೇಡವೆಂದರೂ ಖಚಿತ...!!

Upayuktha
0


 

ಅಟಲ್‌ಜಿ,

ನೀವು ನೀಡಬೇಡಿ ಅಂತ ಹೇಳಿದರೂ, ಕಳ್ಳರನ್ನಾಗಿಸುವ, ದೇಶ ದುರ್ಬಲಗೊಳಿಸುವ ಅನೇಕ ಉಚಿತ ಗಳನ್ನು ಈಗ ಕೊಡಲಾಗುತ್ತಿದೆ.  


ಉಚಿತವಾಗಿ ಬಾಗಿನದಂತೆ ಕೊಡುವಾಗ ಬೇಡ ಅನ್ನುವುದು ಹೇಗೆ!!?


ಇವತ್ತು ಬಿಳಿ ಶರ್ಟು ಪೈಜಾಮ ಧರಿಸಿ, ಕೈ ಮುಗಿಯುತ್ತ, ಪಕ್ಷದ ಶಾಲು ಹೊದ್ದು ಯಾರು ಬರ್ತಾರೆ, ಏನು ಉಚಿತ ತರ್ತಾರೆ ಅಂತ ಗೇಟ್ ಕಡೆ ನೋಡುವುದೇ ನಮ್ಮ ದಿನಚರಿಯಾಗಿದೆ!!! 


ದಿನಾ ಮೊಬೈಲ್‌ನಲ್ಲಿ ಅಕೌಂಟಿಗೆ ನೇರ ಹಣ ಬಂದ  ಬ್ಯಾಂಕ್ ನೋಟಿಫಿಕೇಷನ್ ಗಮನಿಸುವುದೇ ನಿತ್ಯ ಕಾಯಕವಾಗಿದೆ.


ಅಟಲ್‌ಜಿ, 


ಅತೀವ ಸಂತೋಷಪೂರ್ವಕ ವಿಷಾದದೊಂದಿಗೆ

ನಿಮ್ಮ ಗಮನಕ್ಕೆ ಈ ಉಚಿತ ಗಳ ಪಟ್ಟಿ ಕೊಡುವುದಕ್ಕೆ ಇಚ್ಛೆಪಡುತ್ತೇವೆ:


ಅಧಿಕೃತ ಉಚಿತ ಗಳು:


1) ಲೀಟರ್ ಹಾಲು, 

(ಉಚಿತ ನೀರು ಕೊಡುವುದು ಕಷ್ಟ ಸಾಧ್ಯವಾದ ಕಾರಣ ಉಚಿತ ಹಾಲು!!)


2) 3-5ಗ್ಯಾಸ್ ಸಿಲಿಂಡರ್ : ಯುಗಾದಿ, ಗಣೇಶ ಚೌತಿ, ದೀಪಾವಳಿ, ಮಹಾಲಯ (!?) ಮತ್ತು ಮುತ್ತಜ್ಜನ ವೈದಿಕಕ್ಕೆ!!


3) 201 ಯುನಿಟ್ ಕರೆಂಟ್ 

(ಸಾಧಾರಣ ಮನೆಗೆ 40 ಯುನಿಟ್ ಸಾಕು.  ಆದರೂ ಹೆಚ್ಚು ಹೆಚ್ಚು ಕರೆಂಟ್ ಬಳಸಲಿ, ಹಗಲು ಹೊತ್ತು ಸೇರಿ ಪ್ರತೀ ಮನೆಯಲ್ಲಿ 24 ಗಂಟೆಯೂ ವಿದ್ಯುತ್ ಬೆಳಗುತ್ತಿರಲಿ ಎಂಬ ಆಶಯದೊಂದಿಗೆ)


4) ದರಗು ತರುವುದಕ್ಕೆ, ಬೇಲಿ ಕಟ್ಟುವುದಕ್ಕೆ ಸೀರೆ, ಪಂಚೆ, ಷರಟು (ಮುಂದಿನ ಚುನಾವಣೆ ಹೊತ್ತಿಗೆ ಪ್ರತೀ ವ್ಯಕ್ತಿಯ  ಶ್ರಮದ ಸಾಮರ್ಥ್ಯ ಕ್ಷೀಣಿಸಿದರೆ, ಎಲ್ಲರಿಗೂ ಎಲ್ಲಾ ಬಟ್ಟೆಗಳನ್ನೂ ಉಚಿತವಾಗಿ ಕೊಡಲಾಗುವುದು.


5) ಬ್ಲಾಸ್ಟಿಂಗ್ ಕುಕ್ಕರ್

ಉಚಿತ ಕುಕ್ಕರ್‌ಗೆ ಬೈ ಒನ್ ಟೇಕ್ ಟ್ವಂಟಿ ಪಾಲಿಸಿಯಲ್ಲಿ ಇಪ್ಪತ್ತು ರೀತಿಯ ಗೃಹಪಯೋಗಿ ವಸ್ತುಗಳನ್ನು ಉದಾ: ಮಿಕ್ಸಿ, ಚಮಚ, ತಟ್ಟೆ, ತವ, ಲೋಟ..,... ಇತ್ಯಾದಿ ಕೊಡುವ ಪ್ಯಾಕೇಜ್ ಇದೆ!!


6) 10kg ಅಕ್ಕಿ 

(ಬೇಯಿಸುವುದಕ್ಕೆ ಬೇಕಾಗುವ ನೀರಿನ್ನು ಲೀಟರ್‌ಗೆ ₹.30 ರಂತೆ ಮಾರಿ, GST ಯಲ್ಲಿ ಬೊಕ್ಕಸಕ್ಕೆ ಆದಾಯ ತರುವ ಬೃಹತ್ ಯೋಜನೆ ಇದೆ!!)


7) 5kg ಸಿರಿಧಾನ್ಯ 

(ಪರೋಕ್ಷವಾಗಿ ಅನೇಕರ ಸಿರಿ ಸಂಪತ್ತು ಹೆಚ್ಚಿಸುವ ಭಾರೀ ಯೋಜನೆ ಇದು)


8) ಮನೆಯ ಯಜಮಾನಿಗೆ ತಿಂಗಳಿಗೆ ₹.2,000

(ಮನೆಯಲ್ಲಿ ಯಜಮಾನಿ ಯಾರು ಅನ್ನು ವಿಚಾರದಲ್ಲಿ FIR, ಕೇಸು, ಹಿಯರಿಂಗ್ ಫೀಸು, ಕೋರ್ಟ್ ಫೀಸ್‌ಗಳ ರೂಪದಲ್ಲಿ ಸರಕಾರದ ಆದಾಯ ಹೆಚ್ಚುವ ಬಜೆಟ್ ನಿರೀಕ್ಷೆ ಸರಕಾರದ ಮುಂದಿರುತ್ತೆ!!)


9) ಪದವೀಧರ ನಿರುದ್ಯೋಗ ಭತ್ಯೆ 3000 ಪ್ರತೀ ತಿಂಗಳಿಗೆ 

(ಇದು ವರ್ಕ್ ಫ್ರಮ್ ಹೋಮ್ ಕಾನ್ಸೆಪ್ಟ್‌ನ್ನು ಎಲ್ಲರಿಗೂ ವಿಸ್ತರಿಸುವ ಯೋಜನೆ!! ಮನೆಯಲ್ಲೇ ಊಟ, ನಿದ್ದೆಯಂತಹ ಕೆಲಸವನ್ನು ಹೆಚ್ಚು ಮಾಡುವ ದೂರ ದೃಷ್ಟಿಯ ಯೋಜನೆ!!)


10) ಡಿಪ್ಲಮೋ ನಿರುದ್ಯೋಗ ಭತ್ಯೆ 1500 (ಡಿಟೋ ಪಾಯಿಂಟ್ ನಂಬರ್ 9)


11) ಕಾಶಿ, ಮೆಕ್ಕಾ ಯಾತ್ರೆಗಳಿಗೆ ಒಂದಷ್ಟು ದೂರದವರೆಗೆ ಉಚಿತ ಬಸ್ ಚಾರ್ಜು (ಮೊಬೈಲ್‌ನಲ್ಲಿ ಲೈವ್ ಆಗಿ ದೇವರ ದರ್ಶನ ಮಾಡಿ, ತಿರುಪತಿ ಟ್ರಾವಲ್ಸ್‌ನ ಟಿಕೇಟ್ ಸಬ್‌ಮಿಟ್ ಮಾಡಿ ಕ್ಲೈಮ್ ಮಾಡಿದರಾಯ್ತು!!)


12) ಮಹಿಳೆಯರಿಗೆ ಸರಕಾರಿ ಬಸ್‌ನಲ್ಲಿ ಉಚಿತ ಪ್ರಯಾಣ

(ಈ ಹಿನ್ನಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಏರಿದರೆ, 3000 ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುವುದು.) ಈ ಯೋಜನೆ ಯಶಸ್ವಿಯಾದಲ್ಲಿ, ಮುಂದೆ ರೈಲು, ವಿಮಾನ ಪ್ರಯಾಣಗಳನ್ನೂ ಮಹಿಳೆಯರಿಗೆ ಉಚಿತವಾಗಿಸಲಾಗುವುದು!!


13) ಕೃಷಿ ಕುಟುಂಬದ ಯುವಕನನ್ನು ಮದುವೆ ಆಗುವ ಯುವತಿಗೆ ₹.2,00,000.  (ಮುಂದೆ ಕೃಷಿ ಕಾರ್ಮಿಕ, ಪುರೋಹಿತ, ಅಡುಗೆ, ಮನೆಯಲ್ಲೇ ಇದ್ದು ದನ ಕಾಯುವ ವರನನ್ನು ಮದುವೆ ಆಗುವ ವಧುಗಳಿಗೆ ಮುಂದಿನ ಬಜೆಟ್‌ನಲ್ಲಿ ಇದೇ ರೀತಿಯ ಅನುದಾನ ವಿಸ್ತರಣೆ ಪಕ್ಷದ ಮುಂದಿದೆ!!)


ಅನಧಿಕೃತ ಉಚಿತಗಳು

14) ಪ್ರತಿ ಓಟಿಗೆ ಪ್ರತೀ ಚುನಾವಣೆ ಹಿಂದಿನ ರಾತ್ರಿ ₹ 2,000 ದಿಂದ ₹.5000  ನಗದು 


15) ಪ್ರತಿ ಓಟಿಗೆ ಪ್ರತೀ ಚುನಾವಣೆ ಹಿಂದಿನ ದಿನ ಮಧ್ಯ ರಾತ್ರಿ ಮದ್ಯ ಪ್ರಿಯರಿಗೆ 24 ಗಂಟೆ ನಶೆ ಇರುವಂತಹ ವಿಶೇಷ ಉಚಿತ ಮದ್ಯಪಾನ


16) ರಾಜಕೀಯ ಸಭೆ ಸಮಾರಂಭ, ರೋಡ್ ಶೋಗಳಿಗೆ ಬರುವವರಿಗೆ  ಅಲೋಯನ್ಸಸ್,  ಪಲಾವ್ ಪ್ಯಾಕೇಟ್, ಬಾಡೂಟ


17) ರಾಜಕೀಯ ಬೈಕ್ ರ‌್ಯಾಲಿಗಳಿಗೆ ಪೆಟ್ರೋಲ್, ಭತ್ಯೆ, ಊಟೋಪಚಾರ (ಬೈಕ್ ರ‌್ಯಾಲಿಗೆ ಹೆಲ್ಮೇಟ್ ಕಡ್ಡಾಯದ ಬಂಧನ ಇರುವುದಿಲ್ಲ)


"ಗಾಂಧಿ ತಾತನ ಸನ್ನಿಧಿಗೊಂದು ಬಾಲಕಿ ಬರೆದ...'' ಪತ್ರದಂತೆ, ಈ ಉಚಿತ ಪತ್ರವನ್ನು ಬರೆದು ಕಳಿಸುತ್ತಿದ್ದೇವೆ.


ಪತ್ರದಲ್ಲಿರುವ ವ್ಯಾಕರಣದ ತಪ್ಪುಗಳಿಗೆ ಮಾತ್ರ ಕ್ಷಮೆ ಇರಲಿ!!


ಇತಿ,

***

- ಅರವಿಂದ ಸಿಗದಾಳ್, ಮೇಲುಕೊಪ್ಪ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top