ವಿವಿ ಕಾಲೇಜು: ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರಿಗೆ ಸಿಬ್ಬಂದಿಯಿಂದ 'ಗೌರವಾಭಿನಂದನೆʼ

Upayuktha
0

'ವೈ.ಪಿʼ ಒಬ್ಬ ಅತ್ಯುತ್ತಮ ಮಾರ್ಗದರ್ಶಿ, ಪ್ರಾಧ್ಯಾಪಕ, ಆಡಳಿತಗಾರ, ಮಾನವೀಯ ಹೃದಯಿ…

 


ಮಂಗಳೂರು: ಕುಲಪತಿಯಾಗುವುದಕ್ಕಿಂತ ಆ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸುವುದು ಸವಾಲಿನ ಕೆಲಸ. ಬಾಲ್ಯದ ಬಡತನ, ಅನುಭವಗಳು, 'ನಾನು' ಎಂಬ ಭಾವವನ್ನೇ ತೊಡೆದುಹಾಕಿದ ಕೋವಿಡ್ ಕಷ್ಟಕಾಲ, ಆಡಳಿತದಲ್ಲಿ ಸರ್ವರ ಸಹಕಾರದಿಂದಷ್ಟೇ ಇದು ಸಾಧ್ಯವಾಯಿತು, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ ಆಯೋಜಿಸಲಾಗಿದ್ದ ʼಗೌರವಾಭಿನಂದನೆʼ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ, ಸಹ ಪ್ರಾಧ್ಯಾಪಕರಿಗೆ ಪ್ರಾಧ್ಯಾಪಕರಾಗಿ ಭಡ್ತಿ, ವಿವಿ ಕಾಲೇಜಿನ ನ್ಯಾಕ್ ʼಎʼ ಗ್ರೇಡ್ ಸಾಧನೆ, ಕಾಲೇಜಿನ 150 ನೇ ವರ್ಷಾಚರಣೆ, ವಿವಿ ವತಿಯಿಂದ 596 ಲ್ಯಾಪ್ಟಾಪ್ಗಳ ವಿತರಣೆ ಮೊದಲಾದವುಗಳು ಅಧಿಕಾರಾವಧಿಯಲ್ಲಿ ತೃಪ್ತಿ ಕೊಟ್ಟ ಕೆಲಸಗಳು, ಎಂದರು. ವಿವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಉದಯಕುಮಾರ್ ಎಂ ಎ ಸೇರಿದಂತೆ ತಮ್ಮ ಅಧಿಕಾರಾವಧಿಯಲ್ಲಿ ಹೆಗಲು ಕೊಟ್ಟು ದುಡಿದ ಸಿಬ್ಬಂದಿಯನ್ನು ಅವರು ಇದೇ ವೇಳೆ ನೆನಪಿಸಿಕೊಂಡರು. 


ಈ ಮೊದಲು, ಯಡಪಡಿತ್ತಾಯ ಅವರ ವಿದ್ಯಾರ್ಥಿಗಳೂ ಆಗಿದ್ದ ಹಿರಿಯ ಪ್ರಾಧ್ಯಾಪಕರೂ ಸೇರಿದಂತೆ ಹಲವರು ಮಾತನಾಡಿ, 'ವೈ.ಪಿ ಸರ್ʼ ಅವರು ಒಬ್ಬ ಅತ್ಯುತ್ತಮ ಸಂಶೋಧನಾ ಮಾರ್ಗದರ್ಶಿ, ಪ್ರಾಧ್ಯಾಪಕ, ಅದ್ಭುತ ಮಾತುಗಾರ, ಅತ್ಯುತ್ತಮ ಸ್ನೇಹಿತ, ಉತ್ತಮ ಆಡಳಿತಗಾರ, ಮಾನವೀಯ ಹೃದಯವುಳ್ಳವರು ಎಂಬುದನ್ನು ಉದಾಹರಣೆಗಳ ಸಹಿತ ವಿವರಿಸಿದರು.


ಕುಲಪತಿಗಳ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸಿದ ಅನುಭವವುಳ್ಳ ಡಾ.ಭಾರತಿ ಪಿಲಾರ್, ಕುಲಪತಿಗಳು ʼಶೂನ್ಯ ಕಡತ ನೀತಿʼಯ ಪಾಲನೆಗೆ ನೀಡುತ್ತಿದ್ದ ಪ್ರಾಶಸ್ತ್ಯ, ಸಮಯಪಾಲನೆ, ಜನಸಾಮಾನ್ಯರ ಕುಲಪತಿಯಾಗಿ ಬದಲಾದ ಬಗೆಯನ್ನು ವಿವರಿಸಿದರು. ಕುಲಸಚಿವರಾಗಿ ಅವರು ನಿವೃತ್ತಿ ವೇತನ ಸಮಸ್ಯೆಯನ್ನು ಬಗೆಹರಿಸಿದ ರೀತಿ, ಪರೀಕ್ಷಾಂಗ ಕುಲಸಚಿವರಾಗಿ ಗಣಕೀಕರಣ ವ್ಯವಸ್ಥೆ ಜಾರಿ ಸೇರಿದಂತೆ ಹಲವು ಸಾಧನೆಗಳನ್ನು ಹೆಸರಿಸಿದರು.


ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ- ಶ್ರೀಮತಿ ಅನುರಾಧಾ ದಂಪತಿಯನ್ನು ನೆನಪಿನ ಕಾಣಿಕೆ ನೀಡಿ, ಸನ್ಮಾನಿಸಿ ಗೌರವಿಸಲಾಯಿತು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಠಿಣ ಪರಿಶ್ರಮಿಯಾಗಿರುವ ಕುಲಪತಿ ವೈಯಕ್ತಿಕವಾಗಿಯೂ ಕಷ್ಟದ ಸಂದರ್ಭದಲ್ಲಿ ಸ್ಪೂರ್ತಿ ತುಂಬಿದರು, ಮಾದರಿಯಾದರು ಎಂದರು. ಯಡಪಡಿತ್ತಾಯ ಅವರ ಮಗಳು ಸ್ನೇಹ, ಮೊಮ್ಮಗಳು ಲಾಸ್ಯ ಉಪಸ್ಥಿತರಿದ್ದರು.


ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರಾಧ್ಯಾಪಕ ಡಾ. ಗಣಪತಿ ಗೌಡ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ವಾಣಿಜ್ಯ ಶಾಸ್ತ್ರ ವಿಭಾಗದ ಡಾ. ಸುಧಾ ಎನ್. ವೈದ್ಯ ಧನ್ಯವಾದ ಸಮರ್ಪಿಸಿದರು. ಕಛೇರಿ ಅಧೀಕ್ಷಕಿ ಭಾಗ್ಯಲಕ್ಷ್ಮೀ ವೇದಿಕೆಯಲ್ಲಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top