ವಿದ್ಯಾಗಿರಿ (ಮೂಡುಬಿದಿರೆ): ‘ಮನುಷ್ಯನೂ ಪ್ರಕೃತಿ. ಪರಿಸರ ಸಂರಕ್ಷಣೆ ಎಂದರೆ, ಮನುಷ್ಯ ತನ್ನನ್ನು ತಾನು ಸಂರಕ್ಷಿಸಿಕೊಳ್ಳುವುದು’ ಎಂದು ರಂಗಕರ್ಮಿ, ನಟ, ವಾಗ್ಮಿ ಪ್ರಕಾಶ್ ಬೆಳವಾಡಿ ವಿಶ್ಲೇಷಿಸಿದರು.
ಆಳ್ವಾಸ್ ಕಾಲೇಜಿನ ಮಾನವಿಕ ವಿಭಾಗದ ವತಿಯಿಂದ ‘ಭಾರತೀಯ ಸಂಸ್ಕೃತಿ ಮತ್ತು ಪರಿಸರ' ಧ್ಯೇಯದೊಂದಿಗೆ ನಡೆದ 'ಆಟ್ರ್ಸ್ ಎಗ್ಝುಬೆರೆನ್ಸ್ ರಿವಾಯತ್ 2023' ರಾಷ್ಟ್ರ ಮಟ್ಟದ ಅಂತರ ಕಾಲೇಜು ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮನುಷ್ಯ ಇಲ್ಲದಿದ್ದರೂ, ಪ್ರಕೃತಿ ಆರಾಮವಾಗಿ ಇರುತ್ತದೆ. ಆದರೆ, ಪ್ರಕೃತಿ ಇಲ್ಲದೇ ಮನುಷ್ಯ ಇಲ್ಲ ಎಂಬ ಎಚ್ಚರಿಕೆಯನ್ನು ನೀಡಿದರು.
ಪ್ಲಾಸ್ಟಿಕ್, ಸಂಸ್ಕರಣಗೊಂಡ ಆಹಾರ, ಅಗತ್ಯಕ್ಕಿಂತ ಹೆಚ್ಚು ಬಳಕೆಯನ್ನು ನೀವು ಬಿಟ್ಟರೆ, ನಿಮ್ಮ ಮನೆಯಿಂದ ಏನೂ ಕಸವಾಗಿ ಹೊರಹೋಗದಂತೆ ನೋಡಿಕೊಂಡರೆ, ನಿಮ್ಮ ಕಸವನ್ನು ನೀವೇ ನಿರ್ವಹಿಸಿದರೆ ಸಾಕು. ಪರಿಸರ ಹಾಗೂ ದೇಶಕ್ಕೆ ಇನ್ನೇನು ಕೊಡುಗೆ ಬೇಕು? ಎಂದರು.
ಹಿಂದೆ ಮನೆಯ ದ್ರವ ತ್ಯಾಜ್ಯ ‘ಕಲಗಚ್ಚು’ ಆಗಿ ಹಸು ಅಥವಾ ತರಕಾರಿ ಬುಡಕ್ಕೆ ಸೇರುತ್ತಿತ್ತು. ದಿನಸಿ ತರಲು ಚೀಲವಿತ್ತು. ನೀರಿನ ಬಾಟಲಿಯನ್ನು ತಾವೇ ಹಿಡಿದುಕೊಳ್ಳುತ್ತಿದ್ದರು ಎಂದು ವಿವರಿಸಿದರು.
ಪರಿಸರ ಸಂರಕ್ಷಣೆ ಪ್ರತಿ ನಾಗರಿಕರ ಜವಾಬ್ದಾರಿ. ಆದರೆ, ಒಳ್ಳೆತನವನ್ನು ಹೊರಗುತ್ತಿಗೆ ನೀಡಲು ಸಾಧ್ಯವಿಲ್ಲ ಎಂದರು.
‘ಪರಿಸರ ಚೆನ್ನಾಗಿರಲಿ ಎಂದು ದೇವರು ಗಿಡದಲ್ಲಿ ಇಟ್ಟ ಹೂವನ್ನು ಕೊಯ್ದು ದೇವರ ಮೂರ್ತಿ, ಫೋಟೊಗೆ ಇಡುತ್ತಾರೆ. ಹಸು ರಕ್ಷಣೆ ಬಗ್ಗೆ ಮಾತನಾಡಿದರೆ ಹಿಂದುತ್ವ ಎನ್ನುತ್ತಾರೆ. ಎಂಥಾ ವಿಪರ್ಯಾಸ ನೋಡಿ’ ಎಂದು ಮಾರ್ಮಿಕವಾಗಿ ಹೇಳಿದರು.
ಕಾಡು ಇದ್ದ ಕಾರಣ ಅರಣ್ಯ ಇಲಾಖೆ ಇದೆಯೇ ಹೊರತು, ಅರಣ್ಯ ಇಲಾಖೆ ಬೆಳೆಸಿದ ಕಾಡುಗಳಿಲ್ಲ. ಅರಣ್ಯದಲ್ಲಿ ಯಾವುದೂ ತ್ಯಾಜ್ಯವಲ್ಲ. ದೇಶದಲ್ಲಿ ಪ್ರಕೃತಿ ಸಂಪನ್ಮೂಲ ದೋಚುವವರಿಗೆ ಹೆಚ್ಚಿನ ಸುಂಕ ಅಥವಾ ದಂಡವೂ ಇಲ್ಲ ಎಂದರು.
ಅತಿಹೆಚ್ಚು ವಾಯುಮಾಲಿನ್ಯ ಹೊಂದುತ್ತಿರುವ ದೇಶಗಳ ಪೈಕಿ ಭಾರತ 36ನೇ ಸ್ಥಾನ ಪಡೆದಿದೆ. ಪರಿಸರ ನಾಶ, ವನ್ಯಜೀವಿಗಳ ಸಂಖ್ಯೆಯಲ್ಲಿ ಇಳಿಕೆಯಾಗಲು ರಾಜರು, ಬ್ರಿಟಿಷರು ಹಾಗೂ ಆಡಳಿತ ವರ್ಗದ ಕೊಡುಗೆ ಇದೆ. ಭಾರತದಲ್ಲಿ ಶೇ 60ರಷ್ಟು ವಾಯುಮಾಲಿನ್ಯವು ಒಳಾಂಗಣದಲ್ಲಿ ಆಗುತ್ತಿದೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಆರೋಗ್ಯ ಸಮಸ್ಯೆಗೆ ಈಡಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ನೀರನ್ನು ಮಿತವಾಗಿ ಬಳಸುವುದು, ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು, ಮರುಬಳಕೆ ಮಾಡುವ ವಸ್ತುಗಳನ್ನೇ ಹೆಚ್ಚಾಗಿ ಉಪಯೋಗಿಸುವುದರಿಂದ ಪರಿಸರ ನಾಶವನ್ನು ತಡೆಗಟ್ಟಬಹುದು ಎಂದರು.
ಪೋಸ್ಟರ್ ಬಿಡುಗಡೆ ಮೂಲಕ ವಿದ್ಯಾರ್ಥಿಗಳೇ ತಯಾರಿಸಿದ ಬಿದಿರಿನ ಸ್ಟ್ರಾ ಬಳಕೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾಲೇಜಿನ ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ, ಮಾನವಿಕ ವಿಭಾಗದ ಮುಖ್ಯಸ್ಥೆ ಸಂಧ್ಯಾ ಕೆ. ಎಸ್, ವಿದ್ಯಾರ್ಥಿ ಸಂಯೋಜಕರಾದ ಅಮೃತಾ ಭಟ್ ಹಾಗೂ ಚಂದ್ರಶೇಖರ್ ಇದ್ದರು. ಲಕ್ಷ್ಮೀ ಮತ್ತು ಬಳಗದವರು ಪ್ರಾರ್ಥಿಸಿ, ಆಯನಾ ವಿ. ರಮಣ್ ಹಾಗೂ ಎ. ಎಸ್ ಶ್ರೇಯ ನಿರೂಪಿಸಿದರು.
ನ್ಯೂಸಿಯಂ: ಭಂಡಾರ್ಕರ್ ಸಂಗ್ರಹಕ್ಕೆ ಬೆಳವಾಡಿ ಬೆರಗು
ರಂಗಕರ್ಮಿ, ಚಿತ್ರನಟ, ವಾಗ್ಮಿ ಪ್ರಕಾಶ್ ಬೆಳವಾಡಿ ಗುರುವಾರ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿನ ಹಿರಿಯ ಪತ್ರಕರ್ತ ಶ್ರೀಕರ ಎಲ್. ಭಂಡಾರ್ಕರ್ ಅವರ ಐತಿಹಾಸಿಕ ಪತ್ರಿಕೆಗಳ ಸಂಗ್ರಹ ‘ನ್ಯೂಸಿಯಂ’ಗೆ ಭೇಟಿ ನೀಡಿ ಶ್ಲಾಘಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ