ಎನ್‍ಐಟಿಕೆ ಸುರತ್ಕಲ್: ಭಾರತ ಸರ್ಕಾರದ "ಏಕ್ ಭಾರತ್ ಶ್ರೇಷ್ಠ ಭಾರತ ಯುವ ಸಂಗಮ' ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮದ 2ನೇ ಹಂತದಲ್ಲಿ ಮಧ್ಯಪ್ರದೇಶದ ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳ 45 ವಿದ್ಯಾರ್ಥಿಗಳ ನಿಯೋಗ ಇಂದು ಸುರತ್ಕಲ್ ಎನ್‍ಐಟಿಕೆಗೆ ಆಗಮಿಸಿದೆ. ಇವರ ಜತೆಗೆ ನಾಲ್ವರು ಅಧ್ಯಾಪಕರು/ ಸಿಬ್ಬಂದಿ ಆಗಮಿಸಿದ್ದು, ಇಡೀ ತಂಡ ಮೇ 11 ರಿಂದ ಮೇ 16ರವರೆಗೆ ಎನ್‍ಐಟಿಕೆಯಲ್ಲಿ ವಾಸ್ತವ್ಯ ಮಾಡಲಿದೆ.
ಮಧ್ಯಪ್ರದೇಶದಿಂದ ಆಗಮಿಸಿದ 4 ಸಂಯೋಜಕರು ಮತ್ತು 45 ಮಂದಿ ಯುವಕರನ್ನು (18-30 ವರ್ಷ ವಯಸ್ಸಿನ) ಸ್ವಾಗತಿಸುವ ಸಮಾರಂಭ ಸುರತ್ಕಲ್‍ನ ಎನ್‍ಐಟಿಕೆಯಲ್ಲಿ ಗುರುವಾರ ನಡೆಯಿತು. ಎನ್‍ಐಟಿಕೆ ನಿರ್ದೇಶಕ (ಹೆಚ್ಚುವರಿ-ಪ್ರಭಾರ)
ಪ್ರೊ.ಪ್ರಸಾದ್ ಕೃಷ್ಣ ಅವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭವನ್ನು ವಿದ್ಯಾರ್ಥಿ ಕಲ್ಯಾಣ ವಿಭಾಗದ ಡೀನ್ ಪ್ರೊ. ನರೇಂದ್ರನಾಥ್ ಎಸ್ ಉದ್ಘಾಟಿಸಿದರು.
ಎರಡು ರಾಜ್ಯಗಳ ನಡುವೆ ಶ್ರೀಮಂತ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ವಿಚಾರ ವಿನಿಮಯವನ್ನು ಹೆಚ್ಚಿಸುವುದು ಮತ್ತು ಪ್ರವಾಸೋದ್ಯಮ, ಸಂಪ್ರದಾಯ, ಪ್ರಗತಿ, ತಂತ್ರಜ್ಞಾನ ಮತ್ತು ಪರಸ್ಪರ ಸಂಪರ್ಕವನ್ನು ಉತ್ತೇಜಿಸುವುದು ಈ ಭೇಟಿಯ ಉದ್ದೇಶವಾಗಿದೆ.
ಮಧ್ಯಪ್ರದೇಶದ ಪ್ರತಿನಿಧಿಗಳು ಸಸಿಹಿತ್ಲು ಬೀಚ್, ಪಿಲಿಕುಳ ನಿಸರ್ಗಧಾಮ, ಉಡುಪಿ, ಮುರ್ಡೇಶ್ವರ, ಆಗುಂಬೆ, ಮೂಡುಬಿದಿರೆ, ಕಾರ್ಕಳ, ಶೃಂಗೇರಿ ಮತ್ತು ಮಂಗಳೂರು ನಗರ ಸೇರಿದಂತೆ ಕರಾವಳಿ ಕರ್ನಾಟಕದ ಮತ್ತು ಸುತ್ತಮುತ್ತಲಿನ ಹಲವಾರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಭೇಟಿ ನೀಡುತ್ತಿರುವ ಮಧ್ಯಪ್ರದೇಶ ತಂಡಕ್ಕಾಗಿ ಎನ್‍ಐಟಿಕೆಯಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಏಕ್ ಭಾರತ್ ಶ್ರೇಷ್ಠ ಭಾರತ್ ಘಟಕದ ನೋಡಲ್ ಅಧಿಕಾರಿ ಡಾ. ಪ್ರಜೋಫ್ ಪ್ರಭಾಕರನ್ ವಿವರ ನೀಡಿದರು. ಕರ್ನಾಟಕದ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಮಧ್ಯಪ್ರದೇಶದಿಂದ ಆಗಮಿಸುವ ವಿದ್ಯಾರ್ಥಿಗಳು ಸ್ಥಳೀಯರ ಜತೆ ಸಂವಾದ ನಡೆಸುವರು.
ಏಕ್ ಭಾರತ್ ಶ್ರೇಷ್ಠ ಭಾರತ್ ಅಡಿಯಲ್ಲಿ ಯುವ ಸಂಗಮ್ ಯುವ ವಿನಿಮಯ ಕಾರ್ಯಕ್ರಮವು ಶಿಕ್ಷಣ ಸಚಿವಾಲಯದ ಉಪಕ್ರಮವಾಗಿದೆ. ಜನತೆಯ ನಡುವೆ, ಅದರಲ್ಲೂ ಮುಖ್ಯವಾಗಿ ವಿವಿಧ ರಾಜ್ಯಗಳ ಯುವಕರ ನಡುವೆ ನೇರ ಸಂಪರ್ಕವನ್ನು ವಿಶೇಷವಾಗಿ ಬಲಪಡಿಸುವುದು ಮತ್ತು ಮತ್ತು ಅವರಿಗೆ ಭಾರತದ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಪರಿಚಯಿಸುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ ಈ ಉಪಕ್ರಮವನ್ನು ಪ್ರಾರಂಭಿಸಲಾಗದೆ. ಮೊದಲ ಹಂತದಲ್ಲಿ ಅಗಾಧ ಭಾಗವಹಿಸುವಿಕೆ ಕಂಡುಬಂದಿದ್ದು, ಈಶಾನ್ಯ ಭಾರತಕ್ಕೆ ಸುಮಾರು 1200 ಯುವಕರು ಭೇಟಿ ನೀಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಭಾರತದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ಸಂಪರ್ಕವನ್ನು ಸೃಷ್ಟಿಸುವ ಉದ್ದೇಶದಿಂದ ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆ ಮಾಡಿ, ಅದರ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.
ಅಗಾಧ ಪ್ರತಿಭೆ, ಜಾಗತಿಕ ಜ್ಞಾನ, ಸೃಜನಶೀಲತೆ ಮತ್ತು ನಾವೀನ್ಯತೆಯ ಮನೋಭಾವವನ್ನು ಒಳಗೊಂಡಿರುವ ಯುವಕರಿಗೆ ದೇಶದ ಮಾನವೀಯ ತತ್ತ್ವಶಾಸ್ತ್ರವನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಮೌಲ್ಯಗಳನ್ನು ಮರು ಪರಿಚಯಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ