ಮಂಗಳೂರು: ಮೂಡುಬಿದ್ರೆ ವಿಧಾನಸಭಾ ಕ್ಷೇತ್ರ ವ್ಯಾಫ್ತಿಯ ಮೂಡುಶೆಡ್ಡೆಯಲ್ಲಿ ನಿನ್ನೆ (ಬುಧವಾರ) ನಡೆದ ಅಹಿತಕರ ಘಟನೆಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರ ಪ್ರಚೋದನಕಾರಿ ನಡವಳಿಕೆಯೇ ಕಾರಣ ಎಂದು ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಹೇಳಿದರು.
ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ನಿನ್ನ ನಡೆದ ಘಟನೆಗಳ ಕುರಿತು ವಾಸ್ತವ ಸಂಗತಿಗಳನ್ನು ವಿವರಿಸಿದರು.
ಮೂಡುಶೆಡ್ಡೆ ಮತಗಟ್ಟೆಯಲ್ಲಿ ಮತದಾನ ಮುಗಿದು ಅಧಿಕಾರಿಗಳು ಮತಯಂತ್ರಗಳನ್ನು ಡಿಮಸ್ಟರಿಂಗ್ ಕೇಂದ್ರಕ್ಕೆ ಬಸ್‌ಗಳಲ್ಲಿ ಒಯ್ಯುತ್ತಿದ್ದಾಗ ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದರು. ಅದೇ ವೇಳೆಗೆ ದಿಢೀರನೆ ಅಲ್ಲಿಗೆ ಬಂದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಬಿಜೆಪಿ ಕಾರ್ಯಕರ್ತರು ಸೇರಿದ್ದ ಪಕ್ಷದ ಬೂತ್ ಎದುರೇ ಕಾರು ನಿಲ್ಲಿಸಿ, ಮೋದಿ ಪರ ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪ್ರಶ್ನಿಸಿದ್ದಲ್ಲದೆ ತಳ್ಳಾಡಿದರು. ಆಗ ಅವರ ಜತೆಗೆ ಬಂದಿದ್ದ ಬೆಂಬಲಿಗರು ಕೂಡ ಬಿಜೆಪಿ ಕಾರ್ಯಕರ್ತರು, ಮಹಿಳೆಯರು ಮತ್ತು ಮಕ್ಕಳ ಮೇಲೂ ಹಲ್ಲೆ ಮತ್ತು ಕಲ್ಲು ತೂರಾಟ ನಡೆಸಿದರು ಎಂದು ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷೆ ಹಾಗೂ ಬಿಜೆಪಿ ಕಾರ್ಯಕರ್ತೆ ಕವಿತಾ ದಿನೇಶ್ ಆರೋಪಿಸಿದರು.
ಮಿಥುನ್ ರೈ ಕಾರು ಬಾಗಿಲು ತೆಗೆದಾಗ ಕೆಲವು ಮಂದಿ ಕೆಳಗೆ ಬಿದ್ದು ಕಾಲ್ತುಳಿತಕ್ಕೆ ಒಳಗಾಗುವ ಸನ್ನಿವೇಶ ಉಂಟಾಗಿತ್ತು. ಸ್ವತಃ ನನ್ನ ಮೇಲೂ ಕಾಂಗ್ರೆಸ್ ಕಾರ್ಯಕರ್ತರು ತೂರಿದ ಕಲ್ಲು ಬಿದ್ದು ಏಟಾಗಿದೆ. ಅದೃಷ್ಟವಶಾತ್ ತಲೆಗೆ ಬೀಳದ ಕಾರಣ ಬಚಾವ್ ಆದೆ ಎಂದು ಕವಿತಾ ದಿನೇಶ್ ಹೇಳಿದರು. ಬಿಜೆಪಿ ಬಗ್ಗೆ ಸುಳ್ಳು ಆರೋಪ ಮಾಡುವ ಬದಲು ನಿಮ್ಮ ಕಡೆಯಿಂದ ಆಗಿರುವ ತಪ್ಪುಗಳ ಬಗ್ಗೆ ಸ್ಪಷ್ಟನೆ ಕೊಡಿ ಎಂದು ಕವಿತಾ ದಿನೇಶ್ ಆಗ್ರಹಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಪ್ರಚೋದನಕಾರಿ ನಡವಳಿಕೆಗೆ ಬಿಜೆಪಿ ಹಾಗೂ ಪರಿವಾರ ಸಂಘಟನೆಗಳ ಕಾರ್ಯಕರ್ತರು ತೀವ್ರ ಪ್ರತಿರೋಧ ತೋರಿದರು. ಆಗ ಹೊಯ್ ಕೈಯ್ ಮತ್ತು ಘರ್ಷಣೆ ಉಂಟಾಗಿ ಬಿಜೆಪಿಯ ಕೆಲವು ಕಾರ್ಯಕರ್ತರು ಗಾಯಗೊಂಡಿದ್ದಾರೆ. ಅವರಿಗೆ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ಉಮಾನಾಥ ಕೋಟ್ಯಾನ್ ತಿಳಿಸಿದರು.
ಕಾಂಗ್ರೆಸ್ ಆರೋಪವನ್ನು ಉಲ್ಲೇಖಿಸಿ ಮಾಧ್ಯಮ ಪ್ರತಿನಿಧಿಯೊಬ್ಬರು ಕೇಳಿದ ಪ್ರಶ್ನೆಗೆ, ಪ್ರಧಾನಿ ಮೋದಿ ಪರ ಘೋಷಣೆ ಕೂಗುವುದು ನಮ್ಮ ಜನ್ಮಸಿದ್ಧ ಹಕ್ಕು. ಅವರ ಪರ ಬಿಜೆಪಿ ಕಾರ್ಯಕರ್ತರಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಹಾಕುವರೆ? ಅಂತಹ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ನೇರವಾಗಿ ಬಿಜೆಪಿ ಕಾರ್ಯಕರ್ತರ ಗುಂಪಿನ ಎದುರೇ ಕಾರು ನಿಲ್ಲಿಸಿ ಪ್ರಚೋದನಕಾರಿಯಾಗಿ ನಡೆದುಕೊಂಡಿರುವುದು ತಪ್ಪು. ಒಂದು ವೇಳೆ ಅವರು ಸಂಯಮವಹಿಸಿ ಸ್ವಲ್ಪ ದೂರ ಹೋಗಿ ಕಾಂಗ್ರೆಸ್ ಬೂತ್ ಎದುರೇ ಕಾರು ನಿಲ್ಲಿಸಿದ್ದರೆ ಅಹಿತಕರ ಘಟನೆಗಳಿಗೆ ಆಸ್ಪದವೇ ಇರಲಿಲ್ಲ ಎಂದು ಕೋಟ್ಯಾನ್ ಉತ್ತರಿಸಿದರು.
ಕಾಂಗ್ರೆಸ್ ಕಾರ್ಯಕರ್ತರ ಕಲ್ಲು ತೂರಾಟದಿಂದ ಪೊಲೀಸ್ ವಾಹನಗಳಿಗೂ ಹಾನಿಯಾಗಿದೆ. ಕಾಂಗ್ರೆಸಿಗರು ಪೊಲೀಸರ ಮೇಲೂ ಹಲ್ಲೆ ನಡೆಸಿದ್ದಾರೆ. ನಿನ್ನೆಯ ಘಟನಾವಳಿಗೆ ಸಂಬಂಧಿಸಿದಂತೆ ಬಿಜೆಪಿ ಕೂಡ ಪೊಲೀಸರಿಗೆ ದೂರು ನೀಡಿದ್ದು, ಕಾನೂನಿನಂತೆ ಕ್ರಮ ಜರಗುಲಿದೆ ಎಂದು ಅವರು ಹೇಳಿದರು.
ಸೋಲಿನ ಭೀತಿಯಿಂದ ಹತಾಶರಾದ ಕಾಂಗ್ರೆಸ್ ಅಭ್ಯರ್ಥಿ ಈ ರೀತಿ ಗಲಾಟೆ ಮಾಡಿಸಿ ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ಕೊಡಿಸಿದ್ದಾರೆ. ಅವರ ನಡವಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಕೋಟ್ಯಾನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮೂಡುಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಸುನಿಲ್ ಆಳ್ವ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಉಮೇಶ್ ಶೆಟ್ಟಿ, ಮೂಡುಶೆಡ್ಡೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಹಾಲಿ ಅಧ್ಯಕ್ಷೆ ಜಯಶ್ರೀ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ