ಮಕ್ಕಳಲ್ಲಿ ಮಡಿವಂತಿಕೆ ಬೇಡ: ಡಾ.ಆಳ್ವ
ವಿದ್ಯಾಗಿರಿ (ಮೂಡುಬಿದಿರೆ): ‘ಮಡಿವಂತಿಕೆಯನ್ನು ಬಾಲ್ಯದಲ್ಲೇ ಮಕ್ಕಳಿಂದ ದೂರ ಮಾಡಿ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಆಳ್ವಾಸ್ ರಂಗ ಅಧ್ಯಯನ ಕೇಂದ್ರವು ಹಮ್ಮಿಕೊಂಡ 31ನೇ ವರ್ಷದ ರಾಜ್ಯಮಟ್ಟದ ಮಕ್ಕಳ ರಂಗ ಶಿಬಿರ ‘ಚಿಣ್ಣರ ಮೇಳ- 2023’ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ಸಮಾಜಜೀವಿ. ಸಮಾಜದ ಜೊತೆ ಬೆರೆತಾಗಲೇ ನೆಮ್ಮದಿ, ಯಶಸ್ಸು ಎಲ್ಲವೂ ಸಾಧ್ಯ. ಮಕ್ಕಳು ಮಾತನಾಡಬೇಕು. ಎಲ್ಲರೊಂದಿಗೆ ಬೆರೆಯುವಂತೆ ಮಾಡಿ ಎಂದರು.
‘ಮಕ್ಕಳ ಮನಸ್ಸು ಕಟ್ಟುವುದು ಮುಖ್ಯ. ಅದು ವಿಜ್ಞಾನ, ಸಮಾಜ, ವಾಣಿಜ್ಯ ಕಲಿಕೆಗಿಂತಲೂ ಭಿನ್ನ’ ಎಂದ ಅವರು, ‘ಮಕ್ಕಳನ್ನು ನೋಡಿಕೊಳ್ಳಲು ಆಗುತ್ತಿಲ್ಲ ಎಂಬುದು ಇಂದಿನ ಹಲವು ಪೋಷಕರ ದೂರು. ಆದರೆ, ಸಮಸ್ಯೆ ಪೋಷಕರದ್ದೇ ಹೊರತು ಮಕ್ಕಳದ್ದಲ್ಲ' ಎಂದರು. ‘ಬದುಕಿನಲ್ಲಿ ಎಲ್ಲರೂ ನಟರೇ. ಆದರೆ, ಅಭಿನಯ ವಿಭಿನ್ನ’ ಎಂದರು.
ಕಾರ್ಯಕ್ರಮದಲ್ಲಿ ಶಿಬಿರದ ನಿರ್ದೇಶಕ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್ ರಾಂ ಸುಳ್ಯ ಮಾತನಾಡಿ, ‘ಮಕ್ಕಳಿನಲ್ಲಿರುವ ಪ್ರತಿಭೆ ಹೊರತರುವುದು ಈ ಶಿಬಿರದ ಉದ್ದೇಶ’ ಎಂದರು.
ಕಲಾವಿದ ತಾರಾನಾಥ ಕೈರಂಗಳ ಮತ್ತು ಇತರರು ಇದ್ದರು. ಸುಮನಾ ಪ್ರಸಾದ್ ಆಶಯ ಗೀತೆ ಹಾಡಿದರು. ಹರ್ಷಿತಾ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ