ಅಲಾರಂ- ಎಚ್ಚರಿಸುವ ಧ್ವನಿಯಷ್ಟೇ ಅಲ್ಲ...

Upayuktha
0

 

ನಾವು ಬೆಳಿಗ್ಗೆ ನಿದ್ದೆಯಿಂದ ಏಳಬೇಕಾದರೆ ಅಲಾರಂ ಶಬ್ದ ಕೇಳಲೇಬೇಕು. ಅಲಾರಂ ಎನ್ನುವುದು ಎಚ್ಚರಿಸುವ ಗಂಟೆಯೂ ಹೌದು ಅಂತೆಯೇ ನಿದ್ದೆ ಬರಿಸುವ ನೆಂಟನೂ ಹೌದು. ಹಿಂದೆ ಪ್ರಕೃತಿದತ್ತವಾದ ಅಲಾರಂ ಕೋಳಿಯ ರೂಪದಲ್ಲಿ ಬಾಯಿ ಬಿಡುತ್ತಿತ್ತು. ಮತ್ತೆ ಅದು ಇಡೀ ಭೂಮಂಡಲಕ್ಕೆ ಒಂದೇ ಆಗಿತ್ತು. ಈಗ ಹಾಗಲ್ಲ ಗಡಿಯಾರ, ಮೊಬೈಲ್ ಎಂದು ನಮಗೆ ಬೇಕಾದಂತೆ ಹೊಂದಿಸಿಕೊಳ್ಳುವಂಥ ಅಲಾರಂನ ವ್ಯವಸ್ಥೆ ಇದೆ. ಆದ್ದರಿಂದ ಅಲಾರಂ ಕೂಡ ನಮ್ಮಂಕೆಯಲ್ಲಿರುವಾಗ ಅದರ ಮಹತ್ವ ಕಳೆದುಕೊಳ್ಳುತ್ತದೆ. ಅಲಾರಂ ಅನ್ನುವುದು ನಮ್ಮನ್ನು ಎಚ್ಚರಿಸುವ ಒಂದು ಸಾಧನ. ಇದು ಸಕಾಲದಲ್ಲಿ ಎಚ್ಚರಿಸುವಂತಿದ್ದರೆ ಮಾತ್ರ ಪ್ರಸ್ತುತವಾಗುತ್ತದೆ. ಅದರ ಬದಲು ಅಲಾರಮನ್ನೇ ಬೇಕಾದಂತೆ ತಿರುಚಲು ಸಾಧ್ಯವಾದರೆ ರೋಗ ಲಕ್ಷಣಗಳನ್ನು ದಮನಿಸುವಂತೆ ಆಗಬಹುದು. ಅಲ್ಲವೆ ಮತ್ತೆ ಸಾಧಾರಣ ನೂರಕ್ಕೆ ತೊಂಭತ್ತು ಪಾಲು ಮಾರುಕಟ್ಟೆಯಲ್ಲಿ ಸಿಗುವ ಔಷಧಿಯಾಗಲಿ, ವೈದ್ಯರು ಕೊಡುವ ಸಲಹೆಗಳಾಗಲಿ ರೋಗ ಲಕ್ಷಣಗಳನ್ನು ಕೊಲ್ಲುವುದೇ ಹೊರತು ರೋಗದ ಮೂಲವನ್ನು ದಮನಿಸಲಾರದು. ಅಲಾರಂ ಎಂಬ ಎಚ್ಚರಿಕೆಯು ಸಕಾಲದಲ್ಲಿ ನಮಗುಂಟಾದರೆ ಅದೊಂದು ದೇವರು ಕೊಟ್ಟ ವರ ಎನ್ನಬಹುದು. ಉದಾಹರಣೆಗೆ ಕೆಲವು ರೋಗದ ಲಕ್ಷಣಗಳು ಉಲ್ಬಣವಾಗುವುದಕ್ಕೆ ಮೊದಲೇ ಗೊತ್ತಾದರೆ, ಕೆಲವೊಂದು ಮರಣ ಕಾಲದವರೆಗೂ ಸುಪ್ತವಾಗಿರುತ್ತವೆ. ರಕ್ತದೊತ್ತಡ ಎನ್ನುವುದು ಒಂದು ಸಂಖ್ಯೆಯನ್ನು ಮೀರಿದರೆ ಅದರ ಲಕ್ಷಣಗಳು ಒಂದೊಂದೇ ಕಾಣಬರುತ್ತವೆ. ಇದು ಸಕಾಲದಲ್ಲಿ ಬೊಬ್ಬಿಡುವ ಅಲಾರಂ. ಕೆಲವೊಮ್ಮೆ ಸಂಖ್ಯೆಯು ಅಪಾಯ ಮಟ್ಟವನ್ನು ಮೀರುತ್ತಿದ್ದರೂ ಯಾವುದೇ ಸೂಚನೆ ಕೊಡಲಾರದು. ಅದು ಮಾತ್ರ ಅಪಾಯಕಾರಿಯೇ. ಆದ್ದರಿಂದ ನಮ್ಮ ಸಹಜತೆಯ ನಡೆ ಅಸಹಜತೆಯ ಕಡೆಗೆ ಹೋಗುತ್ತದೆ ಎಂದು ತಿಳಿಸುವ ಶರೀರದ ಅಲಾರಂ ಅದೆಷ್ಟು ಮಹತ್ವವಾದದ್ದೆಂದು ನಮಗೆ ಅರಿವಾಗುತ್ತದೆ. 


ಹೆಚ್ಚಿನ ಸಂದರ್ಭಗಳಲ್ಲಿ ನಾವು ಅಲಾರಮನ್ನು ನಿರ್ಲಕ್ಷ್ಯ ಮಾಡುವುದೇ ಜಾಸ್ತಿ. ಬೆಳಗ್ಗಿನ ಜಾವ ಎಚ್ಚರಿಸುವ ಅಲಾರಂ ಬಂದ್ ಮಾಡಿ ಪುನಹ ನಾವು ಹೊದಿಕೆ ಹೊದ್ದುಕೊಂಡರೆ ಆ ದಿನದ ವ್ಯವಹಾರಕ್ಕೆ ಹಿನ್ನಡೆಯೆಂದೇ ಅರ್ಥ. ಅಂತೆಯೇ ನಮ್ಮ ದಿನನಿತ್ಯದ ವ್ಯವಹಾರದಲ್ಲಿ ಸಣ್ಣದಾದ ಸೂಚನೆಯೊಂದನ್ನು ನಿರ್ಲಕ್ಷಿಸಿ ಪ್ರಮಾದಗಳಾದ ಪ್ರಸಂಗಗಳು ಸಾಕಷ್ಟಿವೆ. ನಾನು 1987ನೇ ಇಸವಿಯಲ್ಲಿ ಸ್ವಾಮೀಜಿಯವರ ವಾಹನದಲ್ಲಿ ಚಾಲಕನಾಗಿದ್ದಾಗ ನಡೆದ ಒಂದು ಘಟನೆ ಜ್ಞಾಪಿಸಿಕೊಳ್ಳುವುದಾದರೆ ಈ ರೀತಿ ಇದೆ. ಅಂದಿನವರೆಗೆ ನನಗೆ ಹೊಸ ವಾಹನಗಳನ್ನು ಚಲಾಯಿಸುವ ಅವಕಾಶಗಳು ಸಿಗಲಿಲ್ಲ. ಹಳೆ ವಾಹನಗಳಲ್ಲಿ ಅಷ್ಟಿಷ್ಟು ಅನುಭವವಿತ್ತು. ಮಠದ ವಾಹನವಾದರೋ ಆ ಕಾಲದಲ್ಲಿ ಅತ್ಯಾಧುನಿಕವಾದದ್ದು. ಈಗಿನ ಟಿ.ಟಿ. ಎಂಬ ವಾಹನವೇ ಅಂದಿನ ಟೆಂಪೊ ಟ್ರಾವೆಲರ್ ಎನ್ನುವಂಥದ್ದು. ಅದು ಜರ್ಮನಿಯಲ್ಲಿ ತಯಾರಾಗಿ ಬಂದಂಥ ಬೆಂಜ್ ಇಂಜಿನ್ ವಾಹನ. ಡೇಶ್ ಬೋರ್ಡಲ್ಲಿ ಹಲವಾರು ಎಚ್ಚರಿಕೆಯನ್ನು ಕೊಡುವ ವ್ಯವಸ್ಥೆ ಇತ್ತು. ಆಯಿಲ್ ಕಡಿಮೆ ಆದರೆ, ಡೈನೆಮೊ ಚಾರ್ಜ್ ಆಗದಿದ್ದರೆ, ಬ್ರೇಕ್ ಶೂಗಳು ಸವೆದರೆ, ಹೇಂಡ್ ಬ್ರೇಕ್ ಲಗತ್ತೀಕರಿಸಿದ್ದರೆ ಹೀಗೆ ಹತ್ತಾರು ಅಲಾರಂಗಳು ಸಿದ್ಧವಾಗಿರುತ್ತಿದ್ದವು. ನನಗೆ ಚಾಲನೆಯಲ್ಲಿ ಅನುಭವವಿತ್ತೇ ಹೊರತು ಈ ಅಲಾರಂಗಳ ಅರಿವಿರಲಿಲ್ಲ. ಹಾಗೆಯೇ ಒಂದು ದಿನ ಕೊಯಮುತ್ತೂರಿಗೆ ಹೋಗುವಾಗ ಸತ್ಯಮಂಗಲ ಘಾಟಿಯಲ್ಲಿ ಡೇಶ್ ಬೋರ್ಡಲ್ಲಿ ಕೆಂಪು ದೀಪವೊಂದು ಆಗಾಗ ಉರಿದು ನಂದಿ ಹೋಗುತ್ತಿತ್ತು. ಅದು ಬ್ರೇಕಿಗೆ ಸಂಬಂಧ ಪಟ್ಟದ್ದೆಂದು ಗೊತ್ತಿದ್ದರೂ ಅದು ಮಧ್ಯೆ ಮಧ್ಯೆ ನಂದಿ ಹೋಗುತ್ತಿದ್ದುದರಿಂದ ಅದರ ತೀವ್ರತೆಯನ್ನು ನಾನು ಅರ್ಥ ಮಾಡಿಕೊಳ್ಳಲು ಅಶಕ್ತನಾಗಿದ್ದೆ. ಇನ್ನೇನು ಒಂದೆರಡು ಕಿ.ಮೀ. ಗಳಲ್ಲಿ ಘಾಟಿ ರಸ್ತೆ ಮುಗಿಯಬೇಕು ಅಲ್ಲಿಗೆ ನನ್ನ ವಾಹನದ ಬ್ರೇಕ್ ಫೈಲ್ಯೂರ್ ಆಯಿತು. ಇಂತಹ ಸಂದರ್ಭಗಳಲ್ಲಿ ವಾಹನಗಳನ್ನು ಹೇಗೆ ನಿಲ್ಲಿಸಬೇಕೆಂದು ನನಗೆ ನನ್ನ ಗುರುಗಳು ಹೇಳಿಕೊಟ್ಟಿದ್ದರಿಂದ ಆ ದಿನ ನಾನು ಬಚಾವಾದೆ.  ಅಂದರೆ ಕೆಂಪು ದೀಪವೆಂಬ ಅಲಾರಮನ್ನು ನಿರ್ಲಕ್ಷ್ಯ ಮಾಡಿದ್ದರಿಂದ ಏನೂ ಆಗಬಹುದಿತ್ತು. 


(ಈ ಲೇಖನದ ವಿಷಯವಲ್ಲವಾದರೂ ಬ್ರೇಕ್ ಕೈಕೊಟ್ಟಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಹೊಸತಾಗಿ ವಾಹನ ಚಾಲನೆ ಕಲಿತವರೊಡನೆ ನನ್ನ ಅನುಭವವನ್ನು ಹಂಚಿಕೊಳ್ಳಲು ಅಪೇಕ್ಷಿಸುತ್ತೇನೆ. ಸಹಜವಾಗಿ ನಾವು ವಾಹನ ಚಾಲನೆ ಮಾಡುವಾಗ ಬ್ರೇಕ್ ಫೈಲ್ಯೂರ್ ಆಗಬಹುದೆಂದು ಯೋಚಿಸುವುದೇ ಇಲ್ಲ. ಆದ್ದರಿಂದ ಅಂತಹ ಸಂದರ್ಭದಲ್ಲಿ ಕೈಕಾಲು ಬಿಡುತ್ತೇವೆ, ಗಾಬರಿ ಆಗುತ್ತೇವೆ, ಮೆದುಳು ಕ್ರಿಯಾಶೀಲವಾಗುವುದಕ್ಕೆ ಮೊದಲೇ ಏನಾದರೊಂದು ಎಡವಟ್ಟು ಮಾಡಿ ಇದೆಲ್ಲ ಬ್ರೇಕ್ ಕೈಕೊಟ್ಟಿದ್ದರಿಂದ ಎಂಬ ತೀರ್ಮಾನಕ್ಕೆ ಬರುತ್ತೇವೆ. ಹಿಂದಿನ ಕಾಲದ ವಾಹನಗಳಂತೆ ಈ ಸಮಸ್ಯೆ ಈಗಿನ ಹೊಸ ಹೊಸ ತಂತ್ರಜ್ಞಾನದಲ್ಲಿ ಇರುವುದಿಲ್ಲ. ಈಗ ಬ್ರೇಕ್ ಫೈಲ್ ಆಗಿ ಅಪಘಾತಗಳು ಬಹಳ ಬಹಳ ಕಡಿಮೆಯಾಗಿವೆ.ಅಷ್ಟರ ಮಟ್ಟಿಗೆ ತಂತ್ರಜ್ಞಾನವನ್ನು ಮೆಚ್ಚಲೇ ಬೇಕು. ಆದರೂ ಕೆಲವೊಮ್ಮೆ ಬ್ರೇಕ್ ಕೈಕೊಡುವುದು ಇದೆ. ಆವಾಗ ನಾವು ಪ್ರಥಮವಾಗಿ ಗಾಬರಿಯಾಗಬಾರದು. ಆ ಕ್ಷಣದಲ್ಲಿ ನಮ್ಮ ವಾಹನ ಯಾವ ಗೇರ್ನಲ್ಲಿರುತ್ತದೋ ಅದರಿಂದ ವೇಗ ಕಡಿಮೆ ಇರುವೆಡೆಗೆ ಗೇರನ್ನು ಬದಲಿಸಿ ವೇಗವನ್ನು ಕಡಿಮೆಯಾಗುವಲ್ಲಿ ಗಮನ ಕೊಡಬೇಕು. ಉದಾಹರಣೆಗೆ ನಾಲ್ಕನೇ ಗೇರಲ್ಲಿರುವಾಗ ಬ್ರೇಕ್ ಫೈಲಾದರೆ ಕೂಡಲೇ ಮೂರು, ಎರಡು, ಒಂದು ಹೀಗೆ ಗೇರನ್ನು ಬದಲಾಯಿಸಿದಾಗ ವೇಗ ನಿಯಂತ್ರಣಕ್ಕೆ ಬರುತ್ತದೆ. ಯಾವುದೇ ಕಾರಣಕ್ಕೂ ಇಂಜಿನ್ ಆಫ್ ಮಾಡುವ ಗೋಜಿಗೆ ಹೋಗಬೇಡಿ. ಕಾರಣ ವಾಹನ ಗೇರಲ್ಲಿರುವಾಗ ಎಂಜಿನ್ ಆಫ್ ಆಗದು. ಒಂದು ವೇಳೆ ಆದರೂ ಜರ್ಕ್ ಸಿಗುವಾಗ ಪುನಹ ವೇಗ ಹೆಚ್ಚಾಗಬಹುದು. ಸಾಧ್ಯವಾದರೆ ಹೆಡ್ಲೈಟ್ ಹೊತ್ತಿಸಿಡಿ. ಆವಾಗ ಎದುರಿಂದ ಬರುವ ವಾಹನಗಳು ಜಾಗೃತೆ ವಹಿಸುತ್ತವೆ. ಕೊನೆಯ ಕ್ಷಣದವರೆಗೂ ಪ್ರಯತ್ನ ಮಾತ್ರ ಬಿಡಬೇಡಿ. ಪ್ರಯತ್ನದಿಂದ ಅಪಾಯದ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ಆದದ್ದಾಗಲಿ ಎಂದು ಕೈ ಚೆಲ್ಲಿದರೆ ಅತಿ ದೊಡ್ಡ ಗಂಡಾತರಕ್ಕೆ ಆಹ್ವಾನವಿತ್ತಂತೆ. ಎಡಕ್ಕೋ ಬಲಕ್ಕೋ ರಸ್ತೆಯಂಚಿನಲ್ಲಿ ಮೈದಾನಗಳಿದ್ದರೆ, ವಾಹನದ ವೇಗ ನಿಯಂತ್ರಣಕ್ಕೆ ಬಂದರೆ, ಏರು ಪ್ರದೇಶದತ್ತ ವಾಹನ ಕೊಂಡು ಹೋದಾಗ ಸಾಮಾನ್ಯವಾಗಿ ನಿಯಂತ್ರಣಕ್ಕೆ ಬರುತ್ತದೆ. ಪೂರ್ಣ ನಿಲ್ಲುವ ಹಂತಕ್ಕೆ ಬರುವಾಗ ಪ್ರಥಮ ಗೇರಲ್ಲಿ ವಾಹನವನ್ನು ನಿಲ್ಲಿಸಿ, ಹೇಂಡ್ ಬ್ರೇಕ್ ಎಳೆದು ಬಿಡಿ. ಅದೇರೀತಿ ಹೇಂಡ್ ಬ್ರೇಕ್ ವಾಹನ ಚಲಿಸುವಾಗ ಎಳೆಯಬೇಡಿ. ಅದರ ಪ್ರಯೋಜನ ವಾಹನ ನಿಂತ ಮೇಲಷ್ಟೆ. ಇದಿಷ್ಟು ಮಾಡಲು ಎಲ್ಲ ಕಡೆ ಅವಕಾಶ ಸಿಗದು. ಆದರೆ ಇದಕ್ಕಿಂತ ಭಿನ್ನವಾದ ಮಾರ್ಗವಿಲ್ಲ. ಇನ್ನು ಮುಜಾಗ್ರತೆ ಎನ್ನುವಲ್ಲಿ ಯೋಚಿಸಿದಾಗ ವಾಹನದ ವಿಷಯದಲ್ಲಿ ನಮ್ಮ ಅಜಾಗ್ರತೆಯೇ ಪ್ರಧಾನವಾಗಿರುತ್ತದೆ. ಉದಾಹರಣೆಗೆ ಇಂಧನ ಉಳಿಸಲೆಂದು ಇಳಿ ಹಾದಿಯಲ್ಲಿ ನ್ಯೂಟ್ರಲ್ ಆಗಿ ಚಲಾಯಿಸುವುದು, ಹಾಗೆಯೇ ತಕ್ಕದಲ್ಲದ ವೇಗಕ್ಕೆ ತಕ್ಕದಲ್ಲದ ಗೇರ್ನಲ್ಲಿ ಮುನ್ನಡೆಸುವುದು, ಅತಿಯಾದ ವೇಗದಲ್ಲಿ ಚಲಾಯಿಸಿ ಇನ್ನೊಂದು ವಾಹನವನ್ನು ಹಿಂದಿಕ್ಕುವಾಗ ಎದುರಿನ ವಾಹನದ ವೇಗವನ್ನು ಅಂದಾಜಿಸುವಲ್ಲಿ ವಿಫಲವಾಗುವುದು, ಎದುರಿನ ವಾಹನಕ್ಕೆ ಹತ್ತಿರ ಹತ್ತಿರಕ್ಕೆ ಬಂದು ಏಕಾಏಕಿ ಬಲಕ್ಕೆ ಹೊರಳುವುದು, ವಿರುದ್ಧ ದಿಕ್ಕಿನಿಂದ ಬರುವ ವಾಹನದ ತೀರಾ ಹತ್ತಿರಕ್ಕೆ ಹೊಗಿ  ಹಠಾತ್ತಾಗಿ ವಾಹನವನ್ನು  ಎಡಕ್ಕೆ ತಿರುಗಿಸುವುದು, ಘಾಟಿ ರಸ್ತೆಗಳ ಹಾದಿಯನ್ನು ಇಂಧನಕ್ಕಾಗಿ ನ್ಯೂಟ್ರಲ್ನಳ್ಳಿಸುವುದು,  ಬ್ರೇಕಿನ ಮೇಲೆ ವಿಶ್ವಾಸವಿದ್ದಾಗ ಮಾತ್ರ ಕೆಲಸಕ್ಕೆ ಬರಬಹುದು. ಈ ಸಂದರ್ಭಗಳಲ್ಲಿ ಬ್ರೇಕ್ ವೈಫಲ್ಯವಾದರೆ ಅಪಘಾತ ಕಟ್ಟಿಟ್ಟ ಬುತ್ತಿ. ಅಂತೆಯೇ ನಾನು ಬಸ್ ಚಾಲಕನಾಗಿದ್ದಾಗ ನನ್ನ ರಜೆಗೆ ಬದಲಿಗೆ ಬರುವ ಚಾಲಕ ಬಸ್ಸಿನ ಮಾಲಕನನ್ನು ಮೆಚ್ಚಿಸಲೆಂದು ಇಳಿ ಹಾದಿಗಳಲ್ಲಿ ಎಪ್ಪತ್ತು ಎಂಭತ್ತು ಜನರಿದ್ದ ಬಸ್ಸನ್ನು ನ್ಯೂಟ್ರಲ್ನಲ್ಲಿ ಚಲಾಯಿಸುತ್ತಿದ್ದ. ಇಂಧನವೇನೋ ಒಂದೆರಡು ಲೀಟರ್ ಉಳಿಯಬಹುದು. ಆದರೆ ಅದರ ಅಪಾಯದ ಅರಿವಿದ್ದವರು ಯಾರೂ ಆ ಕೆಲಸ ಮಾಡಲಾರರು. ಬಸ್ಸಿನ ಮಾಲಕ ಎರಡು ಲೀಟರ್ಗೆ ಅಂದಿನ ಕಾಲದಲ್ಲಿ ಅರುವತ್ತು ರೂಪಾಯಿ ನಷ್ಟವೆಂದು ಲೆಕ್ಕ ಹಾಕಿದರೆ ತಿಂಗಳಿಗೆ ಸಾವಿರದ ಎಂಟುನೂರು, ವರ್ಷಕ್ಕೆ ಇಪ್ಪತ್ತು ಸಾವಿರಕ್ಕೂ ಮಿಕ್ಕಿ ನಷ್ಟವೆಂದೆಣಿಸುವನು. ಅದೇ ಸಂದರ್ಭ ಚಾಲಕನು ಅಪಾಯದ ಅಲಾರಮನ್ನು ಪರಿಗಣಿಸಿ ಜೀವಕ್ಕೆ ಬೆಲೆ ಕಟ್ಟಲಾಗದು ಎಂದೆಣಿಸಿ ದಿನ ಒಂದಕ್ಕೆ ಅರವತ್ತು ರೂಪಾಯಿಗೆ ಇಷ್ಟು ಜೀವಿಗಳಿಗೆ ಅಪಾಯವಿಲ್ಲದಂತೆ ಚಾಲನೆ ಮಾಡಿದೆ ಎಂಬ ಸಂತೃಪ್ತ ಭಾವ ಹೊಂದುವನು. ಎಲ್ಲವೂ ಹಣದ ಮುಖದಲ್ಲೇ ನಡೆಯುವ ವ್ಯವಹಾರಗಳಾದುದರಿಂದ ಅಂದು ನಾನು ಹನ್ನೊಂದು ವರ್ಷದ ಸೇವೆಯನ್ನು ಅರವತ್ತು ರೂಪಾಯಿಗೆ ಕಳೆದು ಕೊಳ್ಳಬೇಕಾಯಿತು. ಆದರೂ ಒಂದು ತೃಪ್ತಿ ಎಂದರೆ ನಾನು ಕೆಲಸ ಕಳೆದುಕೊಂಡರೂ ಯಾರ ಜೀವವೂ ಕಳೆದು ಹೋಗಿಲ್ಲವೆಂಬುದು.) 


ಅದೇ ರೀತಿ ಪ್ರಕೃತಿಯೂ ನಮಗೆ ಹಲವಾರು ಅಲಾರಮುಗಳನ್ನು ನೀಡುತ್ತದೆ. ನಾವು ಯಂತ್ರೋಪಕರಣಗಳಿಗೆ ಮಾರು ಹೋದದ್ದರಿಂದ ನಮ್ಮೊಳಗಿನ ಜೈವಿಕ ಅಲಾರಂ ಸತ್ತು ಹೋಗಿದ್ದರಿಂದ ನಮಗೆ ಇಂದು ಅಪಾಯಗಳ ಸರಮಾಲೆಗಳೇ ಕಂಡುಬರುತ್ತವೆ. ಉದಾಹರಣೆಗೆ  ಅಂದಿನ ಕಾಲದಲ್ಲಿ ಪ್ರತಿಯೊಂದು ಹಳ್ಳಿ ಇರಬಹುದು, ನಗರ ಪ್ರದೇಶಗಳಿರಬಹುದು ಗುಬ್ಬಿಗಳ, ಕಾಗೆಗಳ ಸಾಮ್ರಾಜ್ಯವೇ ಇತ್ತು. ಇಂದು ಅಂಥ ಕಾಗೆ ಗುಬ್ಬಿಗಳು ಎಲ್ಲಿ ಹೋದವು? ಹಾಗಾದರೆ ಪ್ರಕೃತಿ ನೀಡಿದ ಈ ಅಲಾರಂ ಯಾವ ಅಪಾಯವನ್ನು ಸೂಚಿಸುತ್ತದೆ? ಕಾದು ನೋಡಬೇಕಷ್ಟೆ. ಋತುಮಾನಗಳಲ್ಲಾಗುವ ಬದಲಾವಣೆ ಏನನ್ನು ಹೇಳುತದೆ? ನಾವು ಸಣ್ಣವರಿರುವಾಗ ಚಳಿಗಾಲ, ಬೇಸಿಗೆ ಕಾಲ, ಮಳೆಗಾಲವೆಂಬುದು ಸಾಮಾನ್ಯವಾಗಿ ನಾಲ್ಕು ನಾಲ್ಕು ತಿಂಗಳು ಇರುತ್ತಿತ್ತು. ಮಳೆಗಾಲದಲ್ಲಿ ಭರ್ಜರಿ ಮಳೆಗಳು, ಚಳಿಗಾಲದಲ್ಲಿ ತಡೆಯಲಾರದಷ್ಟು ಥಂಡಿಯ ದಿನಗಳು, ಬೇಸಿಗೆಯಲ್ಲಿ ಬಹಳ ಬಿಸಿಲುಗಳಿದ್ದರೂ ಒಂದು ಹಂತದ ಹಿತವೂ ಇತ್ತು. ಆದರೆ ಇಂದು ಯಾವ ಕಾಲವೆಂದೇ ತಿಳಿಯದ ಬದಲಾವಣೆ. ಈ ಅಲಾರಂ ಯಾವುದಕ್ಕೆ ನಾಂದಿ? ಎಲ್ನಿನೋ, ಚಂಡಮಾರುತ, ನಲ್ವತ್ತು ಡಿಗ್ರಿಗೂ ಮಿಕ್ಕಿ ಬಿಸಿಯ ಅನುಭವ ಇದರಲ್ಲಿ ಯಾವ ಅಲಾರಂ ಅಡಗಿದೆ? ಇದನ್ನು ಕಡೆಗಣಿಸದಿರೋಣ. ಕೊನೆ ಪಕ್ಷ ಅಲಾರಂ ಆದರೂ ಸರಿಯಾಗಿ ಕೆಲಸ ಮಾಡಿಕೊಂಡಿರುವಂತಾದರೂ ನಿಸ್ವಾರ್ಥಿಗಳಾಗೋಣ...ಏನಂತೀರಿ?

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top