ಮಂಗಳೂರು: ಬಂದೂಕಿನ ಗುಂಡಿಗಿಂತ ಬ್ಯಾಲೆಟ್‌ಗೆ ಶಕ್ತಿ ಜಾಸ್ತಿ. ಅದು ದೇಶದ ನಾಗರೀಕರಿಗಿರುವ ಅತೀದೊಡ್ಡ ಶಕ್ತಿಯೂ ಹೌದು, ಎಂದು ಪುತ್ತೂರಿನ ಸರಕಾರಿ ಪದವಿ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕ್ಸೇವಿಯರ್ ಡಿಸೋಜ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ರಾಜ್ಯಶಾಸ್ತ್ರ,ಸಮಾಜಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಭಾಗಗಳು ಐ.ಕ್ಯೂಎ.ಸಿ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಅವರು, ಮತದಾನವೆಂಬುದು ದೇಶದ ಆಗುಹೋಗುಗಳನ್ನು ನಿರ್ಧರಿಸುವ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಬಹುದೊಡ್ಡ ಹೊಣೆಗಾರಿಕೆ. ಅತ್ಯುತ್ತಮ ನಾಯಕರ ಹೊರ ಹೊಮ್ಮುವಿಕೆಗೆ ಪ್ರತಿಯೊಬ್ಬರೂ ಮತದಾನ ಮಾಡುವುದು ಮುಖ್ಯ,ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಾಲೇಜಿನಲ್ಲಿ 18 ವರ್ಷ ತುಂಬಿದ ಎಲ್ಲಾ ವಿದ್ಯಾರ್ಥಿಗಳಿಗೂ ಮತದಾರರ ಚೀಟಿ(voter ID) ಮಾಡಿಸುವಂತೆ ಪ್ರೋತ್ಸಾಹಿಸಲಾಗಿದೆ ಎಂದರು. ವಿದ್ಯಾರ್ಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳ ನಡುವೆ ಮತದಾನ ಕುರಿತು ನಡೆದ ಸುದೀರ್ಘ ಸಂವಾದ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಲತಾ ಎ.ಪಂಡಿತ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಶಾನಿಕೆ ಆರ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಗಾಯತ್ರಿ ಎನ್, ಐ.ಕ್ಯೂಎ.ಸಿ ಸಂಯೋಜಕ ಡಾ. ಸಿದ್ಧರಾಜು ಎನ್. ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ರುಕ್ಮಯ್ಯ ಸ್ವಾಗತಿಸಿ, ಡಾ.ಆಶಾಲತಾ ನಿರೂಪಿಸಿದರು. ಉಪನ್ಯಾಸಕಿ ಡಾ. ರಾಜೇಶ್ವರಿ ವಂದನಾರ್ಪಣೆಗೈದರು. ವಿವಿಧ ವಿಭಾಗಗಳ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ