ಬವಳಾಡಿ ಹೆಬ್ಬಾರ ಕುಟುಂಬದ ‘ಪದ್ಯಪಂಚಾಮೃತ’ ಕೃತಿ ಬಿಡುಗಡೆಗೊಳಿಸಿದ ಕವಿ ಡಾ. ವಸಂತಕುಮಾರ ಪೆರ್ಲ
ನಾಗೂರು (ಬೈಂದೂರು): ಶುಭಶೋಭನಗಳ ಸಂದರ್ಭದಲ್ಲಿ ಕೆಲಸಕಾರ್ಯಗಳ ಜೊತೆಗೆ ಆಯಾ ಸನ್ನಿವೇಶವನ್ನು ಸಂಭ್ರಮಿಸಲು ಹಾಡುವ ಸಂಪ್ರದಾಯದ ಹಾಡುಗಳಲ್ಲಿ ನಮ್ಮ ಸಂಸ್ಕೃತಿ ಸಂಪ್ರದಾಯಗಳು ಸಾರವತ್ತಾಗಿ ಅಡಗಿಕೊಂಡಿವೆ. ರಾಗ ತಾಳ ಮತ್ತು ಶ್ರುತಿಬದ್ಧವಾಗಿರುವ ಈ ಹಾಡುಹಸೆಗಳು ನಮ್ಮ ಪರಂಪರೆಯನ್ನು ಸಮರ್ಥವಾಗಿ ಮುಂದಿನ ತಲೆಮಾರಿಗೆ ದಾಟಿಸುತ್ತಿವೆ ಎಂದು ಹಿರಿಯ ಕವಿ– ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ. ವಸಂತಕುಮಾರ ಪೆರ್ಲ ಹೇಳಿದರು.
ನಾಗೂರಿನ ಉಳ್ಳೂರು ಮೂಕಜ್ಜಿ ಪ್ರತಿಷ್ಠಾನವು ಒಡೆಯರಮಠ ಶ್ರೀಗೋಪಾಲಕೃಷ್ಣ ಕಲಾಮಂದಿರದಲ್ಲಿ ಹಮ್ಮಿಕೊಂಡ ಬವಳಾಡಿ ಹೆಬ್ಬಾರ ಕುಟುಂಬದ ಸಹೋದರ ಸಹೋದರಿಯರಾದ ಐವರು ಕವಿಗಳ ಸಂಗ್ರಹಿತ ಸಂಕಲನವಾದ ಪದ್ಯಪಂಚಾಮೃತವನ್ನು ಬಿಡುಗಡೆಗೊಳಿಸಿ ಅವರು ಮಾತಾಡುತ್ತಿದ್ದರು.
ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ ಜೀವಿಸಿದ್ದ ಒಂದೇ ಕುಟುಂಬದ ಸಹೋದರ ಸಹೋದರಿಯರಾದ ಮೊಗೇರಿ ಪಾರ್ವತಿ ಅಡಿಗ, ಬವಳಾಡಿ ವೆಂಕಟರಮಣ ಹೆಬ್ಬಾರ, ಉಳ್ಳೂರು ಸರಸ್ವತಿ ಉಡುಪ, ಬವಳಾಡಿ ಹಿರಿಯಣ್ಣ ಹೆಬ್ಬಾರ ಮತ್ತು ಬವಳಾಡಿ ಸೀತಾರಾಮ ಹೆಬ್ಬಾರರು ಹೀಗೆ ಐದು ಮಂದಿಯೂ ಕವಿಗಳಾಗಿ ರೂಪುಗೊಂಡುದು ಇತಿಹಾಸದ ಒಂದು ಚೋದ್ಯವಾಗಿದೆ. ಸ್ಥಳದಲ್ಲೇ ಆಶುಕವಿತೆಗಳಂತೆ ರಚನೆಯಾದ ಈ ಹಾಡುಗಳಲ್ಲಿ ಸಾಹಿತ್ಯಾಂಶವು ಭಾವ ಭಾಷೆಗಳ ಸುಂದರ ಮಿಶ್ರಣದಲ್ಲಿ ಅದ್ಭುತವಾಗಿ ಮೂಡಿ ಬಂದಿವೆ. ಇದನ್ನು ಕಷ್ಟಪಟ್ಟು ಸಂಗ್ರಹಿಸಿ ಗ್ರಂಥರೂಪದಲ್ಲಿ ಹೊರತಂದ ಮೂಕಜ್ಜಿ ಪ್ರತಿಷ್ಠಾನದ ಯು. ಸುಬ್ರಹ್ಮಣ್ಯ ಐತಾಳರು ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ ಎಂದು ಡಾ. ಪೆರ್ಲ ಅವರು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ಕುಂದಾಪುರದ ಹಿರಿಯ ನ್ಯಾಯವಾದಿಗಳೂ ಸಾಹಿತಿಗಳೂ ಆದ ಎ. ಎಸ್. ಎನ್. ಹೆಬ್ಬಾರ್ ವಹಿಸಿದ್ದರು. ಯಾವ ಸಂವಹನ ವ್ಯವಸ್ಥೆ ಮತ್ತು ಪ್ರಚಾರ ಇರದಿದ್ದ ಆ ಕಾಲದಲ್ಲಿ ಈ ಐವರು ಪ್ರತಿಭಾವಂತ ಕವಿಗಳು ರಚಿಸಿದ ನೂರಾರು ಹಾಡುಗಳು ಇಂದಿಗೆ ಕಣ್ಮರೆಯಾಗಿ ಹೋಗಿವೆ. ಅಳಿದುಳಿದವುಗಳನ್ನು ಸಂಗ್ರಹಿಸಿ ಪ್ರಕಟಿಸಿದ ಈ ಕಾರ್ಯ ಸ್ತುತ್ಯರ್ಹವಾಗಿದೆ ಎಂದು ಅವರು ಹೇಳಿದರು.
ನಾಗೂರಿನ ಸಾಂದೀಪನ ಆಂಗ್ಲಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ ಬಿಜೂರು ಗೌರವ ಉಪಸ್ಥಿತಿ ವಹಿಸಿದ್ದರು. ಸಾಹಿತ್ಯಕ್ಷೇತ್ರದಲ್ಲಿ ಇದೊಂದು ಅಪೂರ್ವವಾದ ಪ್ರಯತ್ನವಾಗಿದೆ. ಮಕ್ಕಿ ದೇವಸ್ಥಾನದ ಮಹಾಲಿಂಗ ಭಟ್ಟರು ತನ್ನ ಸಂಗ್ರಹದಲ್ಲಿದ್ದ ಹಾಡುಗಳನ್ನು ಒದಗಿಸಿದ್ದರಿಂದ ಕೆಲಸ ಹಗುರವಾಗಿದೆ ಎಂದರು.
ಕೃತಿಯ ಸಂಪಾದಕ ಯು. ಸುಬ್ರಹ್ಮಣ್ಯ ಐತಾಳರು ಪ್ರಾಸ್ತಾವಿಕವಾಗಿ ಮಾತಾಡಿ ಎಲ್ಲರನ್ನೂ ಸ್ವಾಗತಿಸಿದರು. ಡಾ. ಭರತ್ ಐತಾಳ್ ಪ್ರಾರ್ಥಿಸಿದರು. ಶೈಲಜಾ ಭಟ್ ಉಪ್ರೊಳ್ಳಿ ಸೊಗಸಾದ ಭಾವಗೀತೆಗಳನ್ನು ಪ್ರಸ್ತುತಪಡಿಸಿದರು. ರಾಕೇಶ್ ಹೊಸಬೆಟ್ಟು ನಿರೂಪಿಸಿದರು. ಅಶ್ವಿನಿ ಐತಾಳ್ ವಂದನಾರ್ಪಣೆಗೈದರು.
ಮೊಗೇರಿ, ಉಳ್ಳೂರು ಮತ್ತು ಬವಳಾಡಿ ಕುಟುಂಬಗಳ ಸದಸ್ಯರು ಮತ್ತು ಸಾಹಿತ್ಯಪ್ರೀತಿಯ ಸಹೃದಯರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ