ಹಾಸ್ಯ - ಕುಡುಕ ಕರಿಯಪ್ಪನ ಕಥೆಗಳು

Upayuktha
0

   



ಹೊಸದಾಗಿ 80 ಅಡಿ ರಸ್ತೆಯಲ್ಲಿ ಬಾರ್ ತೆರೆದಿದ್ದ ದಾಸಪ್ಪನವರು ಬಹು ಬೇಗನೇ ಅಭಿವೃದ್ದಿ ಹೊಂದಿದ್ದರು. ಬಂದ ಲಾಭದ ಹಣವನ್ನು ಬ್ಯಾಂಕಿನಲ್ಲಿ ಕೂಡಿಟ್ಟು ನಿಧಾನವಾಗಿ ಬಾರ್ ಮೇಲೆ ಒಂದು ರೆಸ್ಟೋರೆಂಟ್‍ನ್ನು ಕಟ್ಟಿಸಿದರು. ಮಾಮುಲಿ ಕುಡಿತದ ಗಿರಾಕಿಗಳ ಜೊತೆಗೆ ಮಟನ್ ಚಿಕನ್  ಗಿರಾಕಿಗಳನ್ನು  ರೆಸ್ಟೊರೆಂಟ್‍ಗೆ  ಸೆಳೆಯಲು ಕರಿಯಪ್ಪನ ಸಲಹೆ ಕೇಳಿದರು.  ರೆಸ್ಟೋರೆಂಟ್‍ಗೆ  ಪಬ್ಲಿಸಿಟಿ ಪಡೆಯಲು ಮಾಧ್ಯಮ ಮಿತ್ರರನ್ನು  ಆಹ್ವಾನಿಸೋಣ ಎಂದು ಕರಿಯಪ್ಪ ಉಚಿತ ಸಲಹೆ ನೀಡುತ್ತಾ ‘ನೋಡಿ ದಾಸಪ್ಪನವರೇ ಒಂದು  ಶನಿವಾರ ಹಾಸ್ಯ ಸಂಜೆ ಕಾರ್ಯಕ್ರಮ ಏರ್ಪಡಿಸೋಣ. ಹಾಸ್ಯ ರಸ ಸವಿಯಲು ಮನೆಯಲ್ಲಿ ಕೆಲಸವಿಲ್ಲದೇ ಮಲಗಿರುವ ಸೋಮಾರಿಗಳು ಬಾರ್‍ಗೆ ಬರಬೇಕು. ಅಲ್ಲದೇ ಮನೆಯಲ್ಲಿ ಹೆಂಡತಿ ಎದುರು  ನಗಲಾಗದೇ ಒದ್ದಾಡುತ್ತಿರುವ ಮಹನೀಯರು ಬರಲಿ.  ಒಳ್ಳೊಳ್ಳೆಯ ಹಾಸ್ಯ ಕಲಾವಿದರನ್ನು ಕಾಸು ಕೊಟ್ಟು ಕರೆಸೋಣ. ಇನ್ನೂ ಈ  ಕಾರ್ಯಕ್ರಮದ ಪ್ರಾಯೋಜಕರು ನೀವು ಸರಿ ತಾನೇ ಎನ್ನಲು ದಾಸಪ್ಪ ಒಪ್ಪಿದನು. 

ಕುಡುಕ ಕರಿಯಪ್ಪ ದಾಸಪ್ಪ ಅಂಡ್ ಸನ್ಸ್  ಬಾರಿನ ಖಾಯಂ ಗಿರಾಕಿ. ಕರೋನ ಸಂಕಷ್ಟ ಕಾಲದಲ್ಲೂ ಬ್ಯಾಕ್ ಡೋರ್‍ನಲ್ಲಿ ಎಣ್ಣೆ ಖರೀದಿಸಿದ ಒಳ್ಳೆ ಗಿರಾಕಿ. ದಾಸಪ್ಪ ಕರಿಯಪ್ಪನೇ ಸಭೆ ಉದ್ಘಾಟಿಸಲು ಬಯಸಿದ್ದನು. ನಿರೂಪಕರು ಮೊದಲಿಗೆ ಪ್ರಾರ್ಥನೆ ಮಾಡಲು ಚಾಕಣ ಮಾರುವ ಜಕಣಾಚಾರಿಯನ್ನು ಕರೆದರು.   

ತೆರೆದಿದೆ ಬಾರು ಕುಡಿಯುವ ಬಾರೋ

ತೆರದಿದೆ ಬಾಯಿ ಸುರಿಯಿರಿ ಬೀರು..

ಪ್ರಾರ್ಥನೆ ಗೀತೆ ಮೆಚ್ಚಿ ಚಪ್ಪಾಳೆ ತಟ್ಟಿ ಒನ್ಸ್‍ಮೋರ್ ಎಂದನು ಮೋಹಿತನು. ಸಭೆಯ ಮಧ್ಯೆ ಮದ್ಯ ಸರಬರಾಜು ಮಾಡುವ  ಸಂದರ್ಭ ಜಕಣಾಚಾರಿ  ಹಾಡುವರು, ಈಗ ಕಾರ್ಯಕ್ರಮ  ಉದ್ಘಾಟನೆಯನ್ನು ಕರಿಯಪ್ಪನವರು ಮಾಡುವರು ಎಂದು ನಿರೂಪಕರು  ತಿಳಿಸಿದರು. ಪೋಡಿಯಂ ಬಾಕ್ಸ್‌ನತ್ತ ಬಂದ ಕರಿಯಪ್ಪನ ಕೈಗೆ ನಾಕ್ ಔಟ್ ಬಾಟ್ಳಿ ಕೊಟ್ಟರು. ಮುಚ್ಚಳ ತೆರೆಯಲು ಆ ತಕ್ಷಣಕ್ಕೆ ಯಾವ ಹತಾರವೂ ಸಿಗಲಿಲ್ಲವಾಗಿ ಕರಿಯಪ್ಪನೇ ಬಾಟ್ಳಿಯನ್ನು ತನ್ನ ಹುಳುಕು ದವಡೆಯಿಂದ ಓಪನ್ ಮಾಡಿದನು. ಬೀರು ಬಾಟಲಿನಿಂದ  ಬುರು ಬುರು ನೊರೆ ಉಕ್ಕಿತು. ನೆರೆದಿದ್ದವರ ಬಾಯಲ್ಲಿ ಸೊರ ಸೊರ ಜೊಲ್ಲು ಸೋರಿತು. ಸಭೆಯಲ್ಲಿದ್ದ ಎಲ್ಲರಿಗೂ ಮೊದಲನೇ ರೌಂಡಿನ ನೈಂಟಿಯನ್ನು ಸರಬರಾಜು ಮಾಡಲಾಯಿತು. ಕುಡುಕ ಕರಿಯಪ್ಪ ಮಾತು ಆರಂಭಿಸಿ ‘ಸನ್ಮಾನ್ಯ ಕುಡುಕ ಮಿತ್ರರೇ, ನನಗೆ ಬರೆಯಲು ಪೆನ್ ಬೇಕು ಜೊತೆಗೆ ರಮ್ ಇರಬೇಕು. ಸ್ಮೋಕ್ಸ್  ಅಂಡ್ ಡ್ರಿಂಕ್ಸ್ ಮೈ ಫೆವರಿಟ್. ಇವಿದ್ದರೆ ದಿನಕ್ಕೆ ಹತ್ತು ಪುಟ ಬರೆಯುವೆ.... ಅಷ್ಟರಲ್ಲಿ  ‘ನನಗೂ ಒಂದು  ಸಿಗರೇಟು ಬೇಕು.. ಸಭೆಯ ಮಧ್ಯೆ ಗಟಾರಿಯ ಬೇಡಿಕೆ ಕೇಳಿ ಬಂತು.

‘ಯಾರಪ್ಪ ಅದು, ನನ್ನ ಅಭಿಮಾನಿಯ  ಬೇಡಿಕೆ ಈ ಕೂಡಲೇ ಪೂರೈಸಿ.. ಕರಿಯಪ್ಪ ದಾಸಪ್ಪನವರತ್ತ ಮುಖ ಮಾಡಲು  ಆಯ್ತು ಬುದ್ದಿ.. ಎಂದು ದಾಸಪ್ಪ ಸಪ್ಲೇಯರ್ಸ್ಗೆ ಆಂತೆಯೇ ಆಜ್ಞಾಪಿಸಿದನು. ಕರಿಯಪ್ಪ ಭಾಷಣ ಮುಂದುವರಿಸಿ ನೋಡಿ ಮಿತ್ರರೇ, ಸರ್ಕಾರ ಹತ್ತು ಗಂಟೆ ಒಳಗೆ ಬಾರುಗಳು ಬಂದ್ ಆಗಬೇಕೆಂದು ಆಜ್ಞಾಪಿಸಿದೆ. ನಾವು ಕುಡಿದಿದ್ದು ಕಿಕ್ ಏರಲು ಹತ್ತರ ಮೇಲಾಗಬೇಕು ಇಳಿಯಲು ಬೆಳಿಗ್ಗೆ ಹೊತ್ತಾಗಬೇಕು. ಹತ್ತು ಗಂಟೆ ಒಳಗೆ ಮನೆಗೆ ಹೋಗಬೇಕು ಅಂದ್ರೇ ಮನಿ ಕೊಟ್ಟ ನಮಗಿಂತಲೂ ಬಾರ್ ಮಾಲೀಕರಿಗೆ ತುಂಬಾ ನಷ್ಟ ಹೌದು ತಾನೇ..

‘ ಹೌದು ಹೌದು.. ಎಂದು ಒಕ್ಕೊರಲಿನಿಂದ ಕೂಗಿದ ಕುಡುಕ ಮಿತ್ರರು ಎರಡನೇ ರೌಂಡ್ ನೈಂಟಿ ಬರಲಿ.. ಎಂದರು. 

ಭಾಷಣ ಮುಂದುವರಿಸಿದ ಕರಿಯಪ್ಪ ‘ಈ ಮೊದಲು ನಾವು ನಿಶೆ ಏರಿದ ಮೇಲೆ ನಿಶಾ ರಾತ್ರಿಲ್ಲಿ ಮನೆಗೆ ಹೋಗ್ತಾ ಇದ್ದೆವು.  ರೊಕ್ಕ ಕೊಟ್ಟ ತಪ್ಪಿಗೆ ಕಿಕ್ ಏರಿಸಿಕೊಳ್ಳದೇ ಮನೆಗೆ ಹೋದರೆ ನಮ್ಮ ಹೆಂಡ್ತಿಯರಿಗೆ ಸರಿಯಾಗಿ ಕಿಕ್ ಮಾಡ್ಲಿಕ್ಕೆ ಆಗುವುದಿಲ್ಲ. ಹೆಚ್ಚು ಕಮ್ಮಿ ಆದ್ರೇ ನಮಗೇನೇ ರಿವರ್ಸ್ ಕಿಕ್ ಬೀಳಬಹುದು. 

‘ಹೌದು.. ಹೌದು.. ನಮ್ಮ  ಕರಿಯಪ್ಪನವರೋ ಏಳ್ತಾ ಇರೋ ಮಾತ್ನಲ್ಲಿ ಖರೇ ಐತೆ. ನಮ್ಮ ಕಿಕ್ ಮಿಸ್ ಆದ್ರೇ ನಮ್ಮ ಮಿಸಸ್‍ಗಳಿಂದ ರಿವರ್ಸ್ ಕಿಕ್ ಪಕ್ಕ.. ಎನ್ನುತ್ತಲೇ ಕುರಿಚಿಕ್ಕನು ಮಧ್ಯೆ ಬಾಯಿ ಕುಡಿದಿದ್ದ ಮದ್ಯೆ ಹೆಚ್ಚಾಗಿ ನಾಲಿಗೆ ತೊದಲಿಸಿದನು. 

‘ಸ್ನೇಹಿತರೇ ಈ ಆಜ್ಞೆ ಜಾರಿಗೆ ಬರುವುದು ನಿಮಗೆ ಸಮ್ಮತವೇ ಕೈ ಎತ್ತಿ ಹೇಳಿ.. 

‘ನೋ..ನೋ.. ಈ ಆಜ್ಞೆ ಜಾರಿಗೆ ಬರಕೂಡದು.. ಕೈ ಎತ್ತಲೂ ಹೋಗಿ ಜಾರಿ ಹೋಗುತ್ತಿದ್ದ ಪಂಚೆಯನ್ನು ಸರಿಪಡಿಸಿಕೊಳ್ಳಲು ಪರದಾಡಿದನು ಪಂಚೆರಾಮನು. 

‘ಹೌದೌದು ಹತ್ರರೊಳ್ಗೆ ಬಾರ್ ಬಂದ್ ಆದ್ರೇ..ನಮ್ಮ ಬಾಯಿನೂ ಬಂದ್ ಆಗುತ್ತೆ. ಆದ್ರಿಂದ ನಾವೆಲ್ಲಾ ಹಾಸನ್ ಬಂದ್‍ಗೆ ಕರೆ ನೀಡಬೇಕು.. ಬಂಡಿಸಿದ್ದೇಗೌಡ ಗುಡುಗಿದನು. ಬಾರ್‍ನಲ್ಲಿ ಕುಡುಕರ ಗಲಾಟೆ ಜೋರಾಗಿ ಬೀದಿಗೂ ಹಬ್ಬಿತು. ನೈಟ್ ಡ್ಯೂಟಿ ಪೊಲೀಸರು ವಿಶಲ್ ಊದುತ್ತಾ ಲಾಠಿ ಹಿಡಿದು ಓಡಿಬಂದರು. ವಿಶಲ್ ಸದ್ದು ಕೇಳಿ ನಿಶಾಚಾರರು ಆಫ್ ಆದರು.  

‘ದಾಸಪ್ಪನೊರೇ, ಹತ್ತು ಗಂಟೆ ಆಯ್ತಲ್ಲಾ ಬಾರ್ ಬಂದ್ ಮಾಡಿ. ಬನ್ನಿ ಸ್ನೇಹಿತರೇ ಈಗ ನಾವು ನಮ್ಮ ನಮ್ಮ ಮನೆಗೆ ಹೋಗಿ ರಾತ್ರಿ ಕ್ರೈಂ ಸೀರಿಯಲ್ ನೋಡೋಣ.. ಎನ್ನುತ್ತಾ ಬಾರ್‍ನಿಂದ ಹೊರಬಿದ್ದ ಕರಿಯಪ್ಪನು ದಾರಿಯಲ್ಲೇ ಚರಂಡಿಗೆ ಬಿದ್ದನು. ಆಗ ಆ ದಾರಿಯಲ್ಲಿ ಕಲಾಭವನದಲ್ಲಿ ನಡೆದ ಕುರುಕ್ಷೇತ್ರ ನಾಟಕ ನೋಡಿ ಮನಗೆ ಮರಳುತ್ತಿದ್ದ ಕರಿಯಪ್ಪನ ಮಿತ್ರ ರಾಜನ್ ‘ಏನಿದು, ಕರಿಯಪ್ಪ, ನಿನ್ನ ದುರಾವಸ್ಥೆ, ಛೇ ನಾನು ನೋಡಲಾರೆ. ಹೋ ವಿಧಿಯೇ. ನನ್ನ ಮಿತ್ರನನ್ನು ಎಂತಹ ಕೊಳಕು ಚರಂಡಿಗೆ ದೂಡಿದೆ.. ಆ ನಗರಸಭೆಯವರಿಗಾದರೂ ಕರುಣೆ ಬಾರದೇ. ಅವರು ಚರಂಡಿಯನ್ನು ಸ್ವಚ್ಛ ಮಾಡಿದ್ದರೆ ಕರಿಯಪ್ಪನು ಗಬ್ಬು ನಾರುತ್ತಿರಲಿಲ್ಲ.  ಇರಲಿ ನನ್ನ ಮಿತ್ರನನ್ನು ಈ ಕೊಳಕು ಸ್ಥಿತಿಯಲ್ಲಿ ಬಿಟ್ಟು ಹೋದರೆ ಆ ಪರಮಾತ್ಮನು ಮೆಚ್ಚನು.. ಎಂದು  ಕರಿಯಪ್ಪನನ್ನು ಹೊತ್ತುಕೊಂಡು ರಂಗಗೀತೆ ಹಾಡುತ್ತಾ ಹೊರಟನು ಕವಿ ರಾಜನ್. 

-ಗೊರೂರು ಅನಂತರಾಜು, ಹಾಸನ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top