ಶೆಟ್ಟರ್, ಸವದಿ ನಡೆ ಅಕ್ಷಮ್ಯ: ಬಿಎಸ್‌ವೈ ಗುಡುಗು

Upayuktha
0



ಬೆಂಗಳೂರು: ಜಗದೀಶ್ ಶೆಟ್ಟರ್, ಲಕ್ಷ್ಮಣ್‌ ಸವದಿ ಅವರಿಗೆ ಭಾರತೀಯ ಜನತಾ ಪಕ್ಷ ಸಾಕಷ್ಟು ಸ್ಥಾನಮಾನಗಳನ್ನು ನೀಡಿದೆ. ಶೆಟ್ಟರ್ ಅವರನ್ನು ಮುಖ್ಯಮಂತ್ರಿ ಮಾಡಿದೆ, ಅಲ್ಲದೆ ರಾಜ್ಯಸಭೆಗೆ ಸದಸ್ಯರನ್ನಾಗಿ ಮಾಡಿ ಕೇಂದ್ರ ಸಚಿವರಾಗಿ ಸ್ಥಾನ ನೀಡುವುದಾಗಿಯೂ ಭರವಸೆ ನೀಡಲಾಗಿದೆ. ಆದರೆ ಅವರು ಸ್ವಾರ್ಥ ಲಾಲಸೆಯಿಂದ ಪಕ್ಷಕ್ಕೆ ದ್ರೋಹವೆಸಗಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.


ಲಕ್ಷ್ಮಣ ಸವದಿ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದರೂ ಅವರಿಗೆ ಮೇಲ್ಮನೆ ಸದಸ್ಯತ್ವ ನೀಡಿ ಸಚಿವರನ್ನಾಗಿ ಮಾಡಲಾಗಿದೆ. ಉಪ ಮುಖ್ಯಮಂತ್ರಿ ಹುದ್ದೆಯನ್ನೂ ನೀಡಲಾಗಿದೆ. 10 ತಿಂಗಳ ಹಿಂದೆಯಷ್ಟೇ ಎಂಎಲ್‌ಸಿ ಆಗಿ ಮರುನೇಮಕ ಮಾಡಿದ್ದೆವು. ಇನ್ನೂ 5 ವರ್ಷ 2 ತಿಂಗಳು ಅಧಿಕಾರಾವಧಿ ಇರುವಾಗಲೇ ಪಕ್ಷ ತೊರೆದರು. ಬಿಜೆಪಿಯಲ್ಲಿ ಎಲ್ಲ ಸ್ಥಾನಮಾನ ಅನುಭವಿಸಿ ಪಕ್ಷ ತೊರೆದರು. ಬಿಜೆಪಿ ನಿಮಗೆ ಏನು ಅನ್ಯಾಯ ಮಾಡಿದೆ? ಎಂದು ಬಿಎಸ್ ಯಡಿಯೂರಪ್ಪ ಪ್ರಶ್ನಿಸಿದರು.


ಜಗದೀಶ್ ಶೆಟ್ಟರ್ ಜನಸಂಘ ಕಾಲದಿಂದಲೂ ಬಿಜೆಪಿಯಲ್ಲಿ ಇದ್ದವರು. ಅವರನ್ನು ಶಾಸಕ, ಸಚಿವ, ವಿಪಕ್ಷ ನಾಯಕ, ಮುಖ್ಯಮಂತ್ರಿ ಮಾಡಿದ್ದು ಬಿಜೆಪಿ. ನಮ್ಮ ಜತೆಗೆ ಹೆಜ್ಜೆಹಾಕುವ ಜವಾಬ್ದಾರಿ ಶೆಟ್ಟರ್‌ಗೆ ಇತ್ತು. ಆದರೆ ಈಗ ಪಕ್ಷಕ್ಕೆ ದ್ರೋಹ ಮಾಡಿರುವುದು ಅಕ್ಷಮ್ಯ ಎಂದು ಬಿಎಸ್‌ವೈ ಅಸಮಾಧಾನ ವ್ಯಕ್ತಪಡಿಸಿದರು.


ಬಿಜೆಪಿಯ ಮಾಧ್ಯಮ ಕೇಂದ್ರದಲ್ಲಿ ತುರ್ತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಎಸ್‌ವೈ, ನನ್ನ ಸಂಪೂರ್ಣ ಬದುಕನ್ನು ಬಿಜೆಪಿಗೆ, ದೇಶಕ್ಕೆ ಮುಡಿಪಾಗಿಟ್ಟಿದ್ದೇನೆ. ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಈ ಚುನಾವಣೆಯಲ್ಲಿ ಹೊಸಮುಖಗಳಿಗೆ ಅವಕಾಶ ನೀಡಿದ್ದೇವೆ. ಹಳೆಬೇರು, ಹೊಸ ಚಿಗುರು ಸೇರಿಕೊಂಡು ಪಕ್ಷವನ್ನು ಬೆಳೆಸಬೇಕಾಗಿದೆ ಎಂದು ಯಡಿಯೂರಪ್ಪ ಹೇಳಿದರು.


ಎಲ್ಲಾ ಸಮುದಾಯಗಳ ಕೊಂಡೊಯ್ಯುವ ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್ ಕೇವಲ ವೋಟ್​ ಬ್ಯಾಂಕ್​ ರಾಜಕಾರಣ ಮಾಡುತ್ತಿದೆ. ಮೀಸಲಾತಿ ಹೆಚ್ಚಿಸಿ ಅನೇಕ ದಶಕಗಳ ಬೇಡಿಕೆ ಈಡೇರಿಸಿದ್ದೇವೆ. ಬಿಜೆಪಿ ಸಾಮಾಜಿಕ ನ್ಯಾಯ ಪಾಲನೆ ಮಾಡಿದೆ. ಮೀಸಲಾತಿ ವಿಚಾರದಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಪಕ್ಷ ಸ್ಥಾನಮಾನ ನೀಡಿದೆ. ರಾಜ್ಯಾದ್ಯಂತ ಸುತ್ತಾಡಿ ಇವರ ಬಂಡವಾಳ ಬಯಲು ಮಾಡುತ್ತೇನೆ. ಮತ್ತೆ ನಿಮಗೆ ಅಧಿಕಾರ ಕೊಡುವುದಿಲ್ಲ ಎಂದು ಶೆಟ್ಟರ್​ಗೆ ಹೇಳಿದ್ದೇವಾ? ನಿಮ್ಮನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ ಎಂದು ಧರ್ಮೇಂದ್ರ ಪ್ರಧಾನ್​ ಹೇಳಿದ್ದಾರೆ. ಕೇಂದ್ರಕ್ಕೆ ಬನ್ನಿ ಮಂತ್ರಿ ಮಾಡುತ್ತೇವೆ ಎಂದು ಪ್ರಧಾನ್ ಹೇಳಿದ್ದರು. ಆದರೆ ಜಗದೀಶ್ ಶೆಟ್ಟರ್​ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಜಗದೀಶ್ ಶೆಟ್ಟರ್​ಗೆ ಒಳ್ಳೆಯದಾಗಲಿ, ಇನ್ನು ಹೆಚ್ಚಾಗಿ ಮಾತಾಡಲ್ಲ. ಒಂದು ವೇಳೆ ಅವರಿಗೆ ತಪ್ಪು ಅರಿವಾಗಿ ಪಕ್ಷಕ್ಕೆ ಮರಳಿದರೆ ಸ್ವಾಗತ. ನಾನೇ ಮುಂದೆ ನಿಂತು ಶೆಟ್ಟರ್, ಸವದಿಯನ್ನು ಸ್ವಾಗತ ಮಾಡುವೆ. ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ ಎಂದರು.


ನಮಗೆ ಅಂತಹ ದೊಡ್ದ ನಾಯಕರ ಅವಶ್ಯಕತೆ ಇಲ್ಲ

ಮಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ನತ್ತ ಮುಖ ಮಾಡುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ ಜಗದೀಶ್ ಶೆಟ್ಟರ್ ರಾಜೀನಾಮೆ ವಿಚಾರವಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಜಗದೀಶ್ ಶೆಟ್ಟರ್ ಜೆಡಿಎಸ್ ಸೇರುವ ಸಾಧ್ಯತೆ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ನನ್ನನ್ನು ಸಂಪರ್ಕ ಮಾಡಿಲ್ಲ. ನಮಗೆ ಅಂತಹ ದೊಡ್ಡ ನಾಯಕರ ಅವಶ್ಯಕತೆ ಇಲ್ಲ ಎಂದಿದ್ದಾರೆ. ಸಣ್ಣವರು ಯಾರಾದರೂ ಬಂದರೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ದೊಡ್ಡ ನಾಯಕರ ಬಗ್ಗೆ ಯಾವುದೇ ನಿರೀಕ್ಷೆ ಇಟ್ಟುಕೊಂಡಿಲ್ಲ ಎಂದು ಹೇಳಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top