ಆದಿಗುರು ಶಂಕರಾಚಾರ್ಯರ ಜಯಂತಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಶಂಕರಾಚಾರ್ಯರನ್ನು ಜಗದ್ಗುರು ಎಂದೂ ಕರೆಯಲಾಗುತ್ತದೆ. ಈ ವರ್ಷ ಏಪ್ರಿಲ್ 25ರಂದು ಶಂಕರ ಜಯಂತಿ ಆಚರಿಸಲಾಗುತ್ತದೆ. ಇದನ್ನು ದಾರ್ಶನಿಕರ ದಿನವಾಗಿಯೂ ಆಚರಿಸಲಾಗುತ್ತದೆ.
ಶಂಕರಾಚಾರ್ಯರು ಕೇರಳದ ಕಾಲಡಿಯಲ್ಲಿ ಸುಸಂಸ್ಕೃತ ಬ್ರಾಹ್ಮಣ ದಂಪತಿಗಳಾದ ಶಿವಗುರು ಮತ್ತು ಆರ್ಯಾಂಬಾರ ಸುಪುತ್ರರಾಗಿ ಜನಿಸಿದರು. ಬಹುವರ್ಷಗಳಿಂದ ಸಂತಾನವಿಲ್ಲದೆ ನೊಂದಿದ್ದ ದಂಪತಿಗಳು ಶಿವನ ಆರಾಧನೆಯಿಂದ ಜನಿಸಿದ ವರಪುತ್ರನಿಗೆ 'ಶಂಕರ' ಎಂದೇ ಹೆಸರಿಸುತ್ತಾರೆ. ಮುಂದೆ ಇವರೇ ಶಂಕರಾಚಾರ್ಯ ಎನಿಸಿ ಲೋಕ ಪ್ರಸಿದ್ಧಿ ಪಡೆದರು. ಇವರ ಜೀವಿತಾವಧಿಯನ್ನು ಕ್ರಿ.ಶ.688 ರಿಂದ720 ಎಂದು ಅಂದಾಜಿಸಲಾಗಿದೆ.
ಬಾಲ್ಯದಿಂದಲೇ ಶಂಕರರಿಗೆ ವೈರಾಗ್ಯ ಮನೋಭಾವ. ಆದರೆ ತಾಯಿ ಆರ್ಯಾಂಬೆಗೆ ಇರುವ ಒಬ್ಬನೇ ಮಗ ಸನ್ಯಾಸಿಯಾಗುವುದು ಬೇಕಿರಲಿಲ್ಲ. ಆದರೆ ತಾವು ಸನ್ಯಾಸ ಪಡೆಯಲು ಮಾತೆಯ ಅನುಮತಿ ಅತ್ಯಗತ್ಯವೆಂದು ಅರಿತಿದ್ದ ಶಂಕರರು ಸಮಯಕ್ಕಾಗಿ ಕಾದರು.ಅಂತಹ ಒಂದು ಸುಸಮಯ ಅವರಿಗೆ ಶೀಘ್ರವೇ ಒಲಿದುಬಂದಿತು.
ಮನೆಯ ಸಮೀಪದಲ್ಲಿದ್ದ ಪೂರ್ಣಾನದಿಗೆ ಸ್ನಾನಕ್ಕೆಂದು ತೆರಳುವ ಶಂಕರರ ಕಾಲನ್ನು ಮೊಸಳೆಯೊಂದು ಹಿಡಿಯುತ್ತದೆ. ಮಗನ ಕೂಗಿನಿಂದ ಓಡಿಬಂದ ಆರ್ಯಾಂಬೆಗೆ ಶಂಕರರು 'ತಾಯೇ ನಾನು ಬದುಕಬೇಕಾದರೆ ಒಂದು ದಾರಿ ಇದೆ. ನೀನು ನನಗೆ ಸನ್ಯಾಸಕ್ಕೆ ಅನುಮತಿ ನೀಡಿ, ನಾನು ಸನ್ಯಾಸ ದೀಕ್ಷೆ ಸಂಕಲ್ಪಿಸಿಕೊಂಡರೆ ಈ ಮೊಸಳೆಬಾಯಿಯಿಂದ ನಾನು ಪಾರಾಗುವುದು ನಿಶ್ಚಯ'ಎಂದು ಕೂಗಿ ಹೇಳಿದರು. ಮಗ ಬದುಕಿದರೆ ಸಾಕೆಂದು ಬಯಸಿದ ಮಾತೃ ಹೃದಯ ಅದಕ್ಕೆ ಒಪ್ಪಿಗೆ ನೀಡಿತು. ವಿಮೋಚನೆಯ ಬಯಕೆಯಿಂದ ಉರಿಯುತ್ತಿದ್ದ ಅವರು ಅನುಮತಿ ದೊರೆತ ಕೂಡಲೇ ಗುರುವನ್ನು ಹುಡುಕುತ್ತಾ ಮನೆಯನ್ನು ತೊರೆದರು. ಕೇರಳದಿಂದ ಹೊರಟ ಅವರು 2000 ಕಿ.ಮೀ.ನಷ್ಟು ನಡೆದು ನರ್ಮದಾ ನದಿ ತಟದ ಗುರು ಗೋವಿಂದಪಾದರ ಬಳಿ ಶಿಷ್ಯತ್ವ ಪಡೆದರು. ಅವರ ಮಾರ್ಗದರ್ಶನದಲ್ಲಿ ಎಲ್ಲಾ ವೈದಿಕ ಗ್ರಂಥಗಳನ್ನು ಕರಗತ ಮಾಡಿಕೊಂಡರು.
ಹನ್ನೆರಡನೇ ವಯಸ್ಸಿನಲ್ಲಿ ಶಂಕರರು ಪ್ರಮುಖ ಗ್ರಂಥಗಳ ಮೇಲೆ ವ್ಯಾಖ್ಯಾನಗಳನ್ನು ಬರೆದರು. ಶಂಕರರ ಅಪಾರ ಪಾಂಡಿತ್ಯವನ್ನು ಕುರಿತು ಹೀಗೆ ಹೇಳಲಾಗುತ್ತದೆ.
'ಅಷ್ಟವರ್ಷೇ ಚತುರ್ವೇದೀ ದ್ವಾದಶೇ ಸರ್ವ ಶಾಸ್ತ್ರ ವಿತ್|
ಷೋಡಷೇ ಕೃತವಾನ್ ಭಾಷ್ಯಂ ದ್ವಾತ್ರಿಂಶೇ ಮುನಿರಭ್ಯಗಾತ್||
ಅಂದರೆ ಶಂಕರಾಚಾರ್ಯರು ಎಂಟು ವರ್ಷದವರಿರುವಾಗ ನಾಲ್ಕು ವೇದಗಳನ್ನು ಕಲಿತರು; ಹನ್ನೆರಡನೆಯ ವಯಸ್ಸಿನಲ್ಲಿ ಎಲ್ಲ ಶಾಸ್ತ್ರಗಳನ್ನೂ ಬಲ್ಲವರಾಗಿದ್ದರು; ಹದಿನಾರನೆಯ ವಯಸ್ಸಿನಲ್ಲಿ ಭಾಷ್ಯಗಳನ್ನು ಬರೆದರು; ಮೂವತ್ತೆರಡನೆಯ ವಯಸ್ಸಿನಲ್ಲಿ ಶರೀರವನ್ನು ಬಿಟ್ಟರು. ಅವರ ಈ ಮಹತ್ಸಾಧನೆಗಳಿಂದ ಅವರು ಸಾಕ್ಷಾತ್ ಶಂಕರನ ಅವತಾರವೆಂದೇ ಜನಜನಿತರಾದರು.
ಭಾರತೀಯ ಸಮಾಜಕ್ಕೆ ತತ್ತ್ವಶಾಸ್ತ್ರಕ್ಕೆ ಶಂಕರರ ಕೊಡುಗೆಗಳು:
ಹುಟ್ಟು ಜ್ಞಾನಿಗಳಾಗಿದ್ದ ಶಂಕರರು ನದಿ ತಟದ ಗುಹೆಯೊಂದರಲ್ಲಿ ಧ್ಯಾನಸ್ಥರಾಗಿದ್ದಾಗ ಶಂಕರರು ತಮ್ಮ 'ಅದ್ವೈತ' ತತ್ತ್ವ ಸ್ವರೂಪದ ಜ್ಞಾನವನ್ನು ಕಂಡುಕೊಂಡರು. ಮತ್ತು ಅದನ್ನು ಪ್ರಚುರಪಡಿಸುವುದಕ್ಕಾಗಿ ದೇಶಾದ್ಯಂತ ಪರ್ಯಟನೆ ಕೈಗೊಳ್ಳಲು ನಿರ್ಧರಿಸಿದರು. ಭಾರತದಲ್ಲಿ ಹಿಂದೂ ಧರ್ಮವು ಸಂಕಷ್ಟದಲ್ಲಿದ್ದ ಎಂಟನೇ ಶತಮಾನದ ಕಾಲಘಟ್ಟದಲ್ಲಿ ಹಿಂದೂಗಳಲ್ಲಿದ್ದ ಜಾತಿ ಪದ್ಧತಿ ಮೂಢ ಆಚರಣೆಗಳ ಬಗ್ಗೆ ಅನ್ಯರು ನಿಂದಿಸುತ್ತಿದ್ದ ಕಾಲದಲ್ಲಿ ಹಿಂದೂ ಧರ್ಮೀಯರಲ್ಲಿ ಮತ್ತೆ ಆತ್ಮವಿಶ್ವಾಸ ಹುಟ್ಟಿಸಿ ದೇಶದ ಮೂಲೆ ಮೂಲೆಗಳಲ್ಲಿ ಸಂಚರಿಸಿ ತಮ್ಮ ಅದ್ವೈತ ತತ್ತ್ವದ ಮೂಲಕ ಧರ್ಮ ಜಾಗೃತಿಯನ್ನುಂಟು ಮಾಡಿದರು. ಆ ಮೂಲಕ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಅವರು ಬದುಕಿದ್ದು ಕೇವಲ ಮೂವತ್ತೆರಡು ವರ್ಷಗಳಷ್ಟೇ. ಆದರೆ ಅವರು ಸಾಧಿಸಿದ್ದು ಮಾತ್ರ ಅಪ್ರತಿಮವಾದದ್ದು. ಶ್ರೀಮಧ್ಬಗವದ್ಗೀತೆ, ಉಪನಿಷತ್ತುಗಳು, ಬ್ರಹ್ಮ ಸೂತ್ರಗಳಿಗೆ ಭಾಷ್ಯಗಳನ್ನು ಬರೆದ ಮೊದಲಿಗರು ಶಂಕರರು. ಶಂಕರರು ಯಾವುದೇ ಹೊಸ ಮತದ ಸ್ಥಾಪನೆ ಮಾಡಲಿಲ್ಲ. ಬದಲಾಗಿ ವೇದ ಸಂಪ್ರದಾಯಗಳನ್ನು ಎತ್ತಿ ಹಿಡಿದು ಅದರ ಸಾರ ಸತ್ವವನ್ನು ತಮ್ಮದೇ ರೀತಿಯಲ್ಲಿ ನಿಷ್ಕರ್ಷಿಸುವ ಮೂಲಕ ಜಗತ್ತಿಗೆ ಪ್ರಚಾರ ಪಡಿಸಿದರು.
ಅದ್ವೈತ ಸಿದ್ದಾಂತ:
ಸಂಸ್ಕೃತದಲ್ಲಿ 'ದ್ವಿ'ಎಂದರೆ ಎರಡು ಎಂದರ್ಥ. ಹಾಗಾಗಿ 'ಅ'+ 'ದ್ವೈತ'ಎಂದರೆ ಎರಡಲ್ಲದ್ದು. ಅದ್ವೈತ ಸಿದ್ದಾಂತದ ಸಾರವೇ ಇದು.ಆತ್ಮನಲ್ಲಿಯೇ ಪರಮಾತ್ಮನಿದ್ದಾನೆ. ಆತ್ಮನಿಗೂ ಪರಮಾತ್ಮನಿಗೂ ಬೇಧವಿಲ್ಲ. ಶಂಕರರು ಪ್ರತಿಪಾದಿಸಿದ 'ಅಹಂ ಬ್ರಹ್ಮಾಸ್ಮಿ' ಎಂದರೆ ಇದೇ. ನನ್ನೊಳಗೇ ಬ್ರಹ್ಮನಿದ್ದಾನೆ. ನಾನೇ ಬ್ರಹ್ಮನಾಗಿದ್ದೇನೆ."ತತ್ ತ್ವಮ್ ಅಸೀ"ಅಂದರೆ ನೀನೂ ಸಹ ಅದೇ ಆತ್ಮನ ಅಂಶದಿಂದ ಕೂಡಿದ್ದೀಯೆ ಎಂದರ್ಥ.ಶಂಕರರು ಹೇಳುವಂತೆ 'ಸರ್ವಂ ಬ್ರಹ್ಮಮಯಂ ಜಗತ್'ಅಂದರೆ ಜಗತ್ತೆಲ್ಲವೂ ಬ್ರಹ್ಮನಿಂದ ಆಗಿದೆ. ಆತ್ಮನೇ ಪರಮಾತ್ಮನೂ ಆಗಿದ್ದಾನೆ.ಅದು ಮಾತ್ರವೇ ಸತ್ಯ.ವಿಶ್ವದಲ್ಲಿನ ಉಳಿದೆಲ್ಲವೂ ಮಿಥ್ಯ.
ಶಂಕರರ ವೇದಾಂತವನ್ನು ಒಂದು ವಾಕ್ಯದಲ್ಲಿ ಅಥವಾ ಅರ್ಧ ಶ್ಲೋಕದಲ್ಲಿ ಹೀಗೆ ಸಂಗ್ರಹಿಸಬಹುದು.
||ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವನಾಪರಃ||
ಅಂದರೆ ಬ್ರಹ್ಮವು ಸತ್ಯ ಜಗತ್ತು ಮಿಥ್ಯ ಜೀವನು ಬ್ರಹ್ಮವಲ್ಲದೆ ಬೇರೆಯಲ್ಲ. ಸತ್, ಚಿತ್, ಆನಂದ ಸ್ವರೂಪಿಯಾದುದು ಬ್ರಹ್ಮ. ನಮ್ಮ ಕಣ್ಣಿಗೆ ಕಾಣುವ ಜಗತ್ತು, ಅನುಭವಕ್ಕೆ ಎಟುಕುವ ಈ ಪ್ರಪಂಚವೆಲ್ಲಾ ಮಿಥ್ಯೆ.ಎಂದರೆ ಅದು ಬ್ರಹ್ಮದ ತೋರಿಕೆ ಮಾತ್ರ. ನೀರ ಮೇಲಣ ಗುಳ್ಳೆಗೆ ನೀರನ್ನು ಬಿಟ್ಟು ಸ್ವತಂತ್ರ ಅಸ್ತಿತ್ವವಿಲ್ಲದಂತೆ ಈ ಪ್ತಪಂಚಕ್ಕೆ ಸ್ವತಂತ್ರವಾದ ಅಸ್ತಿತ್ವವಿಲ್ಲ. ಅರಿವಿನ ಕಣ್ಣಿನಿಂದ ನೋಡಿದರೆ ಇರುವುದೆಲ್ಲ ಬ್ರಹ್ಮವೆಂದು ತಿಳಿಯುತ್ತದೆ. ಜಗತ್ತು, ಜೀವಿಗಳು ಮಾಯಾ ಕಲ್ಪಿತ. ಅಜ್ಞಾನವೆಂಬ ಮಾಯಾ ಪ್ರಭಾವದಿಂದ ಎಲ್ಲವೂ ಬೇರೆ ಬೇರೆಯಾಗಿ ಕಾಣುತ್ತದೆ. ಈ ಅಜ್ಞಾನದ ಆವರಣವನ್ನು ಕಿತ್ತೆಸೆದರೆ ಸಾಕು, ಬೇಧವೆಲ್ಲ ಅಳಿದು ಹೋಗಿ ಬ್ರಹ್ಮ ಸ್ವರೂಪ ಪ್ರಾಪ್ತಿಯಾಗುತ್ತದೆ.ಅದೇ ಮೋಕ್ಷ.ಅದೇ ಪರಮ ಪುರುಷಾರ್ಥ. ಇದು ಶಾಂಕರ ಸಿದ್ದಾಂತದ ಸಾರವಾಗಿದೆ.
ತಾವು ಕಂಡುಕೊಂಡ ಸತ್ಯವನ್ನು ತಿಳಿಸಲು ದೇಶದ ನಾನಾ ಮೂಲೆಗಳನ್ನು ತಿರುಗಿ ವಿವಿಧ ಪಂಗಡಗಳ ಮುಖಂಡರನ್ನು, ಧಾರ್ಮಿಕ ವಿಚಾರವಾದಿಗಳನ್ನು ಸಂಧಿಸಿದ ಶಂಕರರು ಅವರೆಲ್ಲರನ್ನು ಆಧ್ಯಾತ್ಮಿಕ ವಾದದಲ್ಲಿ ಸೋಲಿಸಿದರು. ಕುಮಾರಿಲ ಭಟ್ಟ, ಮಂಡನ ಮಿಶ್ರರಾದಿಯಾಗಿ ನಾನಾ ವಿದ್ವಾಂಸರನ್ನು ವಾದದಲ್ಲಿ ಮಣಿಸಿದ ಶಂಕರರು ತಾವು ಸರ್ವಜ್ಞ ಪೀಠವನ್ನೇರಿದರು. ಹಾಗೆಯೇ ಮುಂದೆ ಹಿಂದೂ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ ತಾವು ಕಂಡುಕೊಂಡ ಅದ್ವೈತ ತತ್ವದ ಪ್ರಚಾರಕ್ಕಾಗಿ ದೇಶದ ನಾಲ್ಕು ಮೂಲೆಗಳಲ್ಲಿ ನಾಲ್ಕು ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಅವುಗಳೆಂದರೆ ಉತ್ತರದಲ್ಲಿ ಬದರಿ ಉತ್ತರಾಮ್ನಾಯ ಜ್ಯೋತಿರ್ಪೀಠ, ದಕ್ಷಿಣದಲ್ಲಿ ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠ, ಪೂರ್ವದಲ್ಲಿ ಪುರಿ ಪೂರ್ವಾಮ್ನಾಯ ಪೀಠ, ಹಾಗೂ ಪಶ್ಚಿಮದಲಿ ದ್ವಾರಕೆ ಪಶ್ಚಿಮ್ನಾಯ ಪೀಠ. ಈ ನಾಲ್ಕೂ ಮಠಗಳು ಇಂದಿಗೂ ತಮ್ಮ ಪರಂಪರೆಯನ್ನು ಮುಂದುವರೆಸಿದ್ದು ಅಸಂಖ್ಯಾತ ಶಿಷ್ಯವರ್ಗವನ್ನು ಹೊಂದಿವೆ.
ಷಣ್ಮತ ಸ್ಥಾಪಕರೆಂಬ ಖ್ಯಾತಿ:
ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು, ಸ್ಕಂಧ ಇವರ ಆರಾಧಕರು ಪರಸ್ಪರ ತಾವು ಮೇಲು ತಾವು ಮೇಲೆಂದು ಜಗಳವಾಡುತ್ತಿದ್ದನ್ನು ನಿಲ್ಲಿಸಿ ಅವೆಲ್ಲವೂ ಒಬ್ಬನೇ ಈಶ್ವರನ ಬೇರೆ ಬೇರೆ ರೂಪಗಳೆಂದು ಒಪ್ಪಿಸಿ ಈ ಆರೂ ದೇವತೆಗಳನ್ನು ಪರಸ್ಪರ ವಿರೋಧವಿಲ್ಲದೆ ಪೂಜಿಸಬೇಕೆಂದು ನಿಯಮ ಮಾಡಿದರು. ತಾವು ಉಪಾಸನೆ ಮಾಡುವ ದೇವತೆಯನ್ನು ಮಧ್ಯೆ ಇಟ್ಟು ಉಳಿದ ದೇವತೆಗಳನ್ನು ಅದರ ಸುತ್ತ ಇಟ್ಟು ಅವನ್ನು ಮುಖ್ಯ ದೇವತೆಯ ಪರಿವಾರವೆಂದು ಪೂಜಿಸಬೇಕೆಂಬ ನಿಯಮ ರೂಪಿಸಿದರು.ಆ ಮೂಲಕ ಸಮಾಜದಲ್ಲಿದ್ದ ಒಡಕನ್ನು ನಿವಾರಿಸಲು ಪ್ರಯತ್ನಿಸಿ ಷಣ್ಮತ ಸ್ಥಾಪಕರೆನಿಸಿದರು.
ಶಂಕರಾಚಾರ್ಯರ ಪ್ರಮುಖ ಕೃತಿಗಳು:
ಶಂಕರಾಚಾರ್ಯರು ಅದ್ವೈತ ತತ್ತ್ವದ ಪ್ರತಿಪಾದನೆಗೆ ಹಲವಾರು ಕೃತಿಗಳನ್ನು ರಚಿಸಿದರು. ಬ್ರಹ್ಮ ಸೂತ್ರ, ಉಪನಿಷತ್ತು, ಭಗವದ್ಗೀತೆಗಳಿಗೆ ಭಾಷ್ಯಗಳನ್ನು ರಚಿಸಿದರು. ಇವರು ರಚಿಸಿದ 'ಭಜಗೋವಿಂದಂ', ಸೌಂದರ್ಯ ಲಹರೀ, ಕನಕಧಾರಾ ಸ್ತೋತ್ರಗಳು ಬಹು ಪ್ರಸಿದ್ಧವಾಗಿವೆ. ಅಲ್ಲದೆ ಶ್ರೀ ಗಣೇಶ ಪಂಚರತ್ನಂ, ಗಣೇಶ ಭುಜಂಗಂ, ಶಿವಾನಂದ ಲಹರಿ, ಶಾರದಾ ಭುಜಂಗಂ, ಅನ್ನಪೂರ್ಣಾ ಸ್ತೋತ್ರಮ್, ಕಾಶಿ ಪಂಚಕಮ್, ದಕ್ಷಿಣಾಮೂರ್ತಿ ಅಷ್ಠಕಂ, ಶಿವಪಂಚಾಕ್ಷರ ಸ್ತೋತ್ರಂ, ನಿರ್ವಾಣ ಶತಕಂ ಮುಂತಾದವು ಬಹಳ ಖ್ಯಾತವಾಗಿವೆ. ಅಲ್ಲದೆ ಶಂಕರರು ಬ್ರಹ್ಮ ಸೂತ್ರ, ಭಗವದ್ಗೀತೆ, ಗಾಯತ್ರಿ ಮಂತ್ರ ಮುಂತಾದವುಗಳ ಮೇಲೆ ವ್ಯಾಖ್ಯಾನಗಳನ್ನು ರಚಿಸಿದರು.
ಉಪದೇಶ ಸಹಸ್ರಿ ಎಂಬುದು ಶಂಕರರ ಮತ್ತೊಂದು ಪ್ರಮುಖ ಗ್ರಂಥವಾಗಿದ್ದು ಇದರಲ್ಲಿ ಎರಡು ಭಾಗಗಳಿವೆ. ಒಂದು ಪದ್ಯ ರೂಪದಲ್ಲಿದ್ದರೆ, ಇನ್ನೊಂದು ಗದ್ಯದಲ್ಲಿದೆ.ಪಠ್ಯವು ಆತ್ಮ ವಿಮೋಚನೆಯ ಹಂತಗಳು ಮತ್ತು ವಿಧಾನಗಳನ್ನು ವಿವರಿಸುತ್ತದೆ.
ಶಂಕರರು ತಮ್ಮ ಅದ್ವೈತ ಸಿದ್ಧಾಂತದ ಪ್ರತಿಪಾದನೆಗೆ ಪೂರಕವಾಗಿ ಹಲವಾರು ಕೃತಿಗಳನ್ನು ರಚಿಸಿದರು. ಈ ಎಲ್ಲಾ ಕೃತಿಗಳಲ್ಲಿ ಮೇರು ಕೃತಿಯಾಗಿರುವುದು ವಿವೇಕ ಚೂಡಾಮಣಿ.ಇದು ಶಂಕರರ ಕೊನೆಯ ಕೃತಿ ಎಂದು ಹೇಳಲಾಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಅರ್ಜುನನಿಗೆ ಗೀತೋಪದೇಶ ಮಾಡಿದಂತೆ ವಿವೇಕ ಚೂಡಾಮಣಿಯು ಗುರು ಶಿಷ್ಯರ ಸಂಭಾಷಣೆ ರೂಪದಲ್ಲಿದೆ. ಇದರಲ್ಲಿ 580 ಶ್ಲೋಕಗಳಿದ್ದು 17 ಭಾಗಗಳಾಗಿ ವಿಂಗಡಿಸಿ77 ವಿವಿಧ ಉಪ ಭಾಗಗಳಿವೆ. ಅದ್ವೈತ ಸಿದ್ದಾಂತದ ಪ್ರವೇಶಕ್ಕೆ ವಿವೇಕ ಚೂಡಾಮಣಿಯು ಅಮೂಲ್ಯವಾದ ಗ್ರಂಥವಾಗಿದೆ. ಇದು ವಿಶ್ವದಲ್ಲಿ ಭಗವದ್ಗೀತೆಯನ್ನು ಬಿಟ್ಟರೆ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾದ ಶ್ರೇಷ್ಠವಾದ ಪುಸ್ತಕ. ಜೀವಿಯ ಉಗಮದಿಂದ ಜೀವಿಯ ಅಂತ್ಯದ ವರೆಗಿನ, ದೇಹ ಮತ್ತು ಆತ್ಮದ ಸಂಬಂಧ, ಮೋಕ್ಷದ ಚಿಂತನೆ, ಜೀವಪರ ಬದುಕು ಇವುಗಳನ್ನು ಗುರುವು ಶಿಷ್ಯನಿಗೆ ಉಪದೇಶಿಸುತ್ತಾನೆ. ಇದರ ಒಂದು ಶ್ಲೋಕ ಹೀಗಿದೆ.
ಸಹನಂ ಸರ್ವಾದುಃಖನಾಂ
ಅಪ್ರತಿಕಾರಪೂರ್ವಕಂ
ಚಿಂತಾವಿಲಾಪರಹಿತಂ
ಸಾತಿತಿಕ್ಷಾನಿಗದ್ಯತೆ
ಎಂದರೆ ಚಿಂತೆ ಮತ್ತು ಶೋಕಗಳಿಂದ ಮುಕ್ತನಾಗುವುದೇ ತಿತಿಕ್ಷು. ತಿತಿಕ್ಷು ಎಂದರೆ ವ್ಯಕ್ತಿಯ ಮರಣದ ನಂತರ ಮೋಕ್ಷವಲ್ಲ.ವ್ಯಕ್ತಿ ಇದ್ದಾಗಲೇ ಎಲ್ಲದರಲ್ಲೂ ಸಾಕ್ಷೀಭೂತನಾಗಿ ಯಾವುದಕ್ಕೂ ಅಂಟದೇ ಇರುವುದೇ ಮೋಕ್ಷ. ಪ್ರತಿ ಜೀವಿಯ ಅಂತಿಮ ಗುರಿ ಇದೇ ಆಗಿರಬೇಕೆಂದು ಶಂಕರರು ತಿಳಿಸುತ್ತಾರೆ. ಹೀಗೆ ಅನೇಕ ಮಹತ್ವದ ಕೃತಿಗಳನ್ನು ರಚಿಸುವ ಮೂಲಕ, ಮಹತ್ಕಾರ್ಯಗಳ ಮೂಲಕ ಹಿಂದೂ ಧರ್ಮದಲ್ಲಿ ನವೋದಯ ಉಂಟುಮಾಡಿದ ಶಂಕರರು ಭಾರತೀಯ ತತ್ತ್ವಶಾಸ್ತ್ರಕ್ಕೆ, ಆಧ್ಯಾತ್ಮಿಕ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆ ಮೂಲಕ ವಿಶ್ವದ ದಾರ್ಶನಿಕರ ಸಾಲಿನಲ್ಲಿ ಅಗ್ರ ಸಾಲಿನಲ್ಲಿ ನಿಲ್ಲುತ್ತಾರೆ. ಹೀಗಾಗಿಯೇ ಅವರ ಜನ್ಮದಿನವನ್ನು ದಾರ್ಶನಿಕರ ದಿನವಾಗಿ ಆಚರಿಸುವುದು ಅತ್ಯಂತ ಸೂಕ್ತವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.
||ಜಯ ಜಯ ಶಂಕರ
ಹರ ಹರ ಶಂಕರ||
-ಎಸ್.ಎಲ್. ವರಲಕ್ಷ್ಮೀಮಂಜುನಾಥ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ