ಉಜಿರೆ ಎಸ್ ಡಿಎಂ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

Upayuktha
0


ಉಜಿರೆ:
ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಕಾರ್ಯನಿರ್ವಹಿಸುವ ಆಧುನಿಕ ವೈದ್ಯಲೋಕವು ರೋಗಿಗಳ ಮಾನಸಿಕ ಹೊಯ್ದಾಟವನ್ನೂ ಸಕಾಲಿಕವಾಗಿ ಗುರುತಿಸಿ ಸಮಸ್ಯೆಗೆ ಪರಿಹಾರದ ದಾರಿಯನ್ನು ತೋರಿಸುವ ಕಾಳಜಿ ತೋರಬೇಕಾದ ಅಗತ್ಯವಿದೆ ಎಂದು ಮಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜಿನ ಮನೋವೈದ್ಯಶಾಸ್ತ್ರದ ಮುಖ್ಯಸ್ಥ ಡಾ. ಅನಿಲ್ ಕಾಕುಂಜೆ ತಿಳಿಸಿದರು.


ಉಜಿರೆ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಸೆಮಿನಾರ್  ಹಾಲ್‍ನಲ್ಲಿ ಕಾಲೇಜಿನ ಮನಃಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ‘ಸಾಮಾಜಿಕ ಹಿತರಕ್ಷಣೆಯಲ್ಲಿ ಮನಃಶಾಸ್ತ್ರಜ್ಞರ ಪಾತ್ರ’ ಕುರಿತು ಬುಧವಾರ ಆಯೋಜಿಸಿದ್ದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳಿದ್ದೂ ವೈದ್ಯರು ರೋಗಿಗಳ ದೈಹಿಕ ನೋವಿನ ಮೂಲಕಾರಣವನ್ನು ಪತ್ತೆಹಚ್ಚುವಲ್ಲಿ ವಿಫಲರಾಗುತ್ತಾರೆ. ಬಹಳಷ್ಟು ಪ್ರಕರಣಗಳಲ್ಲಿ ದೈಹಿಕ ನೋವಿನ ಮೂಲಕಾರಣ ವ್ಯಕ್ತಿಯ ಮಾನಸಿಕ ಸ್ಥಿತಿಗೆ ಸಂಬಂಧಿಸಿದ್ದಾಗಿರುತ್ತದೆ. ದೈಹಿಕ ನೋವು ಇರದಿದ್ದರೂ ಇದೆ ಎಂಬ ಭ್ರಮೆಯ ವರ್ತುಲದಲ್ಲಿ ಸಿಲುಕುವ ವ್ಯಕ್ತಿ ತಾನೇ ಸೃಷ್ಟಿಸಿಕೊಂಡ ಮಾನಸಿಕ ತೊಳಲಾಟದ ನಡುವೆ ಒದ್ದಾಡುತ್ತಿರುತ್ತಾನೆ. ವೈದ್ಯಕೀಯ ಪರೀಕ್ಷೆಯ ವರದಿಗಳನ್ನು ನೋಡಿದಾಗ ವೈದ್ಯರು ಆ ವ್ಯಕ್ತಿಯ ಮಾನಸಿಕ ಸ್ಥಿತಿಗತಿಯನ್ನು ಅವಲೋಕಿಸಿ ತಕ್ಷಣವೇ ಮನಃಶಾಸ್ತ್ರಜ್ಞರು ಮತ್ತು ಮನೋವೈದ್ಯರ ಬಳಿಗೆ ಕಳುಹಿಸಿಕೊಡಬೇಕು. ವೈದ್ಯಕೀಯ ತಪಾಸಣೆಯ ನೆಪದಲ್ಲಿ ಮನೋಚಿಕಿತ್ಸೆಯ ಸಾಧ್ಯತೆಗಳನ್ನು ಮೊಟಕುಗೊಳಿಸಬಾರದು ಎಂದು ಹೇಳಿದರು.


ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿದ್ದಾಗ ಮಾತ್ರ ಮನುಷ್ಯ ಆರೋಗ್ಯವಂತನೆನಿಸಿಕೊಳ್ಳುತ್ತಾನೆ. ಬಹುತೇಕ ಮಂದಿ ಮಾನಸಿಕ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಹೆಚ್ಚು ಗಮನಹರಿಸುವುದಿಲ್ಲ. ಮಾನಸಿಕ ಸಮಸ್ಯೆಗಳು ಕಂಡುಬಂದಲ್ಲಿ ಸೂಕ್ತ ವೈದ್ಯರನ್ನು ಭೇಟಿ ಮಾಡಲು ಹಿಂಜರಿಯುತ್ತಾರೆ. ಮಾನಸಿಕ ಸಮಸ್ಯೆಗಳು ಎದುರಾದಾಗ ಹಿಂಜರಿಯದೆ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದು ಸೂಕ್ತ ಎಂದರು.


21ನೇ ಶತಮಾನದಲ್ಲೂ ಮನಸ್ಸಿಗೆ ಸಂಬಂಧಿಸಿದ ಕಾಯಿಲೆಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕಾದ ಅವಶ್ಯಕತೆ ಇದೆ. ದೈಹಿಕ ಸಮಸ್ಯೆಗಳನ್ನು ಪತ್ತೆಹಚ್ಚಲು ಹಲವಾರು ಪರೀಕ್ಷಾ ವಿಧಾನಗಳಿವೆ. ಆದರೆ ಮಾನಸಿಕ ಸಮಸ್ಯೆಗಳನ್ನು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ, ಮನೋಸಂಬಂಧಿ ಖಾಯಿಲೆಗಳು ದೈಹಿಕ ಖಾಯಿಲೆಗಳಿಗಿಂತ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.


ಕಾಲೇಜಿನ ಪ್ರಾಂಶುಪಾಲ ಡಾ. ಕುಮಾರ ಹೆಗ್ಡೆ ಬಿ ಎ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಾಶ್ಚಿಮಾತ್ಯ ಸಂಸ್ಕೃತಿಯ ಜೀವನ ಶೈಲಿಯ ಅನುಕರಣೆಯ ಪ್ರಭಾವದಿಂದ ಇಂದಿನ ಯುವಕರು ಹಲವಾರು ಮಾನಸಿಕ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಪ್ರತಿಯೊಬ್ಬರೂ ಜೀವನ ನಿರ್ವಹಣೆಯ ಮಹತ್ವವನ್ನು ಅರಿತುಕೊಂಡು ಸಂತೋಷದಿಂದ ಇದ್ದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.


ಈ ಸಂದರ್ಭದಲ್ಲಿ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ‘ಮೆಗಾ ಮೈಂಡ್’ ನಿಯತಕಾಲಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ. ಕಾಲೇಜಿನ ವಿವಿಧ ವಿಭಾಗದ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಭಾಗದ ಮುಖ್ಯಸ್ಥೆ ಡಾ.ವಂದನಾ ಜೈನ್ ಸ್ವಾಗತಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕ, ಸಂಘಟನಾ ಕಾರ್ಯದರ್ಶಿ ಡಾ.ಮಹೇಶ್ ಬಾಬು ವಂದಿಸಿದರು.  ವಿದ್ಯಾರ್ಥಿಗಳಾದ  ಸಂಜಿತಾ, ಅಜಿತ್ ಕುಮಾರ್, ದೀಕ್ಷಾ ಕಾರ್ಯಕ್ರಮ ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top