ತಮ್ಮ ಇಚ್ಛೆಯ ದಾರಿಯಲ್ಲಿ ನಡೆದರೆ ಯಶಸ್ಸು ಸಾಧ್ಯ: ಡಾ.ಗುರುರಾಜ್ ಕಿದಿಯೂರು

Upayuktha
0

 


ನಿಟ್ಟೆ: 'ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಜನೆಗೆ ಸಿಕ್ಕ ಪ್ರೋತ್ಸಾಹ ಹಾಗೂ ನಮ್ಮ ಛಲ ನಮ್ಮನ್ನು ಉತ್ತಮ ದಾರಿಯತ್ತ ಕೊಂಡೊಯ್ಯತ್ತದೆ. ಪ್ರತಿಯೋರ್ವ ಮಾನವನೂ ತನ್ನ ಇಚ್ಛೆಯ ದಾರಿಯಲ್ಲಿ ಮುಂದುವರೆದರೆ ಜೀವನದಲ್ಲಿ ಉತ್ತಮ ಸ್ಥಾನಕ್ಕೇರಲು ಸಾಧ್ಯ' ಎಂದು ಜಸ್ಟೀಸ್ ಕೆ.ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನ ನಿರ್ದೇಶಕ ಡಾ.ಗುರುರಾಜ್ ಕಿದಿಯೂರು ಅಭಿಪ್ರಾಯಪಟ್ಟರು.


ಅವರು ಏ.26 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಮಟ್ಟದ 4 ದಿನಗಳ ಟೆಕ್ನೋ-ಕಲ್ಚರಲ್ ಫೆಸ್ಟ್ 'ಇನ್ಕ್ರೆಡಿಯಾ-2023' ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ‘ಉದ್ಯೋಗಾವಕಾಶಗಳಿಗೆ ಅಗತ್ಯವಿರುವ ಕೌಶಲಗಳನ್ನು ಬೆಳೆಸಿಕೊಂಡು ತಂತ್ರಜ್ಞಾನದ ಬಗೆಗೆ ವಿವಿಧ ಸಂಶೊಧನೆಗಳನ್ನು ಮಾಡುವ ಮೂಲಕ ತಾಂತ್ರಿಕತೆಯೆ ಏಳಿಗೆಗೆ ಕಾರಣರಾಗಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಯಾಗಿ ಬಂದು 'ಇನ್ಕ್ರೆಡಿಯಾ-2023'ನ್ನು ಉದ್ಘಾಟಿಸಿದ ಯಕ್ಷಕಲಾವಿದ, ಪ್ರಾಧ್ಯಾಪಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತುದಾರ ಡಾ.ಪ್ರದೀಪ ವಿ. ಸಾಮಗ ಅವರು ಮಾತನಾಡುತ್ತಾ ‘ಯಾವುದೇ ಪ್ರಯತ್ನಕ್ಕೆ ಕೈಹಾಕುವ ಸಂದರ್ಭದಲ್ಲಿ ವಿವಿಧ ಬಗೆಯ ಟೀಕೆಗಳು ಕೇಳಿಬರುವುದು ಸಹಜ, ಆದರೆ ಬಂದ ಎಲ್ಲಾ ಕಷ್ಟಗಳನ್ನೂ ಮೆಟ್ಟಿ ನಮ್ಮ ಕಸಸಿನ ಹಾದಿಯಲ್ಲಿ ಸಾಗಬೇಕು. ಲೌಕಿಕ ಶಿಕ್ಷಣದೊಂದಿಗೆ ಕಲಾಸಕ್ತಿ ಹೊಂದಿರುವುದು ಅತ್ಯಗತ್ಯ. ಇಂದಿನ ದಿನಗಳಲ್ಲಿ ಪಿಯುಸಿ ಶಿಕ್ಷಣದ ಜೀವನ ಎಂಬುದು ಕೇವಲ ಓದಿಗೆ ಸೀಮಿತ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಕಲಾಪ್ರಕಾರಗಳಲ್ಲಿ ತೊಡಗಿಸಿಕೊಳ್ಳುವುದು ಎಂದರೆ ಮಹಾಪರಾಧ ಎಂಬಂತೆ ಸಮಾಜದಲ್ಲಿ ಕಾಣುವ ಜನರಿದ್ದಾರೆ. ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಚಟುವಟಿಕೆಗಳು ದೊರೆತರಷ್ಟೇ ವಿದ್ಯಾರ್ಥಿಗಳ ಕಲಿಕಾ ಹುಮ್ಮಸ್ಸು ಹಾಗೂ ಆತ್ಮವಿಶ್ವಾಸ ಹೆಚ್ಚಲು ಸಾಧ್ಯ" ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾನಿಲಯದ ಕುಲಾಧಿಪತಿ ಶ್ರೀ ಎನ್.ವಿನಯ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ಇಂದಿನ ದಿನಗಳಲ್ಲಿ ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಕೋರ್ ಇಂಜಿನಿಯರಿಂಗ್ ಬ್ರಾಂಚ್ ಗಳಿಗೆ ಉದ್ಯೋಗಾವಕಾಶಗಳು ಕಡಿಮೆ ಎಂಬ ಒಂದು ತಪ್ಪು ಕಲ್ಪನೆ ಬಹಳಷ್ಟು ವ್ಯಾಪಕವಾಗಿ ಹರಡಿದೆ. ಈ ತಪ್ಪು ಕಲ್ಪನೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಕೋರ್ ಇಂಜಿನಿಯರಿಂಗ್ ಬ್ರಾಂಚ್ ಗಳ ಪಠ್ಯಕ್ರಮದಲ್ಲಿ ಮಹತ್ತರ ಬದಲಾವಣೆಗಳನ್ನು ತರುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ತಾಂತ್ರಿಕ ಕಾಲೇಜು ಎಲ್&ಟಿ ಯಂತಹ ವಿವಿಧ ಸಂಸ್ಥೆಗಳೊಂದಿಗೆ ಸೇರಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಬಗೆಯನ್ನು ಕಂಡುಕೊಳ್ಳಬೇಕು. ಇನ್ನು ಕೆಲವೇ ವರ್ಷಗಳಲ್ಲಿ ಮತ್ತೆ ಮೆಕ್ಯಾನಿಕಲ್, ಸಿವಿಲ್, ಇಲೆಕ್ಟ್ರಿಕಲ್ ನಂತಹ ಬ್ರಾಂಚ್ ಗಳ ಸುವರ್ಣ ಯುಗ ಕಾಣುವಂತಾಗಬೇಕು’ ಎಂದರು.


ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಹಳೆ ವಿದ್ಯಾರ್ಥಿ- ಉದ್ಯಮಿ ಎನ್. ಸಂಜಿತ್ ಶೆಟ್ಟಿ ಪ್ರಾಯೋಜಿತ ಪ್ರಶಸ್ತಿಗಳನ್ನೂ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ವೃಂದ, ದೇಶದ ವಿವಿಧ ಕಾಲೇಜಿನ ಸುಮಾರು 4000 ವಿದ್ಯಾರ್ಥಿಗಳು ಪ್ರಥಮದಿನದಂದು ಭಾಗವಹಿಸಿದ್ದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಆಫ್ ಕ್ಯಾಂಪಸ್ ಸೆಂಟರ್ ನ ಮೈಂಟೆನೆನ್ಸ್ & ಡೆವಲಪ್ಮೆಂಟ್ ವಿಭಾಗ ನಿರ್ದೇಶಕ ಪ್ರೊ.ಎ.ಯೋಗೀಶ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್‌ಕರ್ ಸ್ವಾಗತಿಸಿ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಉಪಪ್ರಾಂಶುಪಾಲ ಡಾ.ಐ.ಆರ್ ಮಿತ್ತಂತಾಯ ವಿದ್ಯಾರ್ಥಿ ಸಾಧಕರ ಪಟ್ಟಿಯನ್ನು ವಾಚಿಸಿದರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಗಣೇಶ್ ಪೂಜಾರಿ ಕ್ರೀಡಾ ವಿಭಾಗದ ಸಾಧಕರ ಪಟ್ಟಿಯನ್ನು ವಾಚಿಸಿದರು. ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ & ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಅವರು ಎನ್. ಸಂಜಿತ್ ಶೆಟ್ಟಿ ಪ್ರಾಯೋಜಿತ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಕಾರ್ಯಕ್ರಮ ಸಂಯೋಜಕ ಡಾ.ನರಸಿಂಹ ಬೈಲ್ಕೇರಿ, ಡೀನ್-ಸ್ಟೂಡೆಂಟ್ ವೆಲ್ಫೇರ್ ವಂದಿಸಿದರು. ವಿದ್ಯಾರ್ಥಿಗಳಾದ ತೇಜಸ್ ಬಾಳಿಗ ಹಾಗೂ ರಿಯಾ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top