ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಉದ್ಘಾಟನೆ
ಮಂಗಳೂರು: ಶ್ರೀ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘದ ಪ್ರಧಾನ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ ಇಂದು ನೆರವೇರಿತು. ಇದೇ ವೇಳೆಗೆ ಸಂಘದ ಬೆಳ್ಳಿ ಹಬ್ಬದ ಸಂಭ್ರಮಾಚರಣೆ ಯನ್ನೂ ಉದ್ಘಾಟಿಸಲಾಯಿತು.
ಮೋರ್ಗನ್ಸ್‌ಗೇಟ್- ಜೆಪ್ಪುವಿನಲ್ಲಿ ಸುಮಾರು 8 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಸುಂದರ ಬಹುಮಹಡಿ ಕಟ್ಟಡವನ್ನು ಸಂಘದ ಅಧ್ಯಕ್ಷರು ಹಾಗೂ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರ ಅಧ್ಯಕ್ಷತೆಯಲ್ಲಿ ಭಾನುವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಮುಖ್ಯ ಅತಿಥಿಗಳಾಗಿ ಸಹಕಾರ ರತ್ನ ಡಾ. ಎಂ.ಎನ್ ರಾಜೇಂದ್ರ ಕುಮಾರ್, ನಿಟ್ಟೆ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್ ಡಾ. ಎಂ. ಶಾಂತಾರಾಮ ಶೆಟ್ಟಿ, ಮಾಜಿ ಶಾಸಕ ಜೆ.ಆರ್ ಲೋಬೋ, ಮಂಗಳೂರು ಮಹಾನಗರಪಾಲಿಕೆ ಮೇಯರ್ ಜಯಾನಂದ ಅಂಚನ್, ಸ್ಥಳೀಯ ಕಾರ್ಪೊರೇಟರ್ ಪಿ.ಎಸ್. ಭಾನುಮತಿ ಹಾಗೂ ಸಂಸ್ಥೆಯ ಉನ್ನತ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕೇವಲ 3 ಲಕ್ಷ ರೂ ಪಾಲು ಬಂಡವಾಳ ಮತ್ತು 300 ಮಂದಿ ಸದಸ್ಯರೊಂದಿಗೆ 1997ರಲ್ಲಿ ಪ್ರಾರಂಭವಾದ ಲಕ್ಷ್ಮಣಾನಂದ ವಿವಿಧೋದ್ದೇಶ ಸಹಕಾರ ಸಂಘ ಇಂದು ಐದೂವರೆ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡು 400 ಕೋಟಿ ರೂ.ಗಳ ವಹಿವಾಟು ನಡೆಸುತ್ತಿರುವ ಬೃಹತ್ ಸಂಸ್ಥೆಯಾಗಿ ಬೆಳೆದಿದೆ. ಸಾವಿರಾರು ಮಂದಿ ದುರ್ಬಲ ವರ್ಗದ ಜನರಿಗೆ ಸಹಕಾರ ತತ್ವದಡಿ ಸಾಲವನ್ನು ನೀಡಿ ಜೀವನೋಪಾಯಕ್ಕೆ ಸುಭದ್ರ ನೆಲೆಯನ್ನು ಹಾಕಿಕೊಟ್ಟಿರುವ ಸಂಸ್ಥೆ ಇದಾಗಿದೆ. ಸಂಸ್ಥಾಪಕ ಅಧ್ಯಕ್ಷರಾದ ಕೃಷ್ಣ ಜೆ. ಪಾಲೆಮಾರ್ ಅವರ ದೂರದರ್ಶಿತ್ವ, ಮಾರ್ಗದರ್ಶನ, ನಿರ್ದೇಶಕರು, ಪಾಲುದಾರರು ಸದಸ್ಯರು- ಹೀಗೆ ಎಲ್ಲ ವರ್ಗದವರ ಬಿಡುವಿಲ್ಲದ ಶ್ರಮದ ಪರಿಣಾಮ ಸಂಸ್ಥೆ ಈ ಮಟ್ಟಕ್ಕೆ ಬೆಳೆದು ನಿಂತಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರೆಲ್ಲರೂ ಅಭಿಪ್ರಾಯಪಟ್ಟರು.
ಸಂಸ್ಥೆಗೆ ಶುಭ ಹಾರೈಸಿ ಮಾತನಾಡಿದ ಡಾ. ಎಂ.ಎನ್ ರಾಜೇಂದ್ರ ಕುಮಾರ್, ವೈಯಕ್ತಿಕ ನೆಲೆಯಲ್ಲಿ 5 ಲಕ್ಷ ರೂ.ಗಳ ಕೊಡುಗೆಯ ಚೆಕ್ ಅನ್ನು ಕೃಷ್ಣ ಪಾಲೆಮಾರ್ ಅವರಿಗೆ ಹಸ್ತಾಂತರಿಸಿ, ಸನ್ಮಾನಿಸಿದರು.
ಸಹಕಾರ ಸಂಸ್ಥೆಯ ವತಿಯಿಂದ 3,000 ಮಂದಿ ಆಟೋ ಚಾಲಕರಿಗೆ ಸಹಾಯಧನ ಒದಗಿಸಿ ಅವರೆಲ್ಲರೂ ಈಗ ಮಾಲೀಕರಾಗಿ ಪ್ರಗತಿ ಸಾಧಿಸಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕೃಷ್ಣ ಪಾಲೆಮಾರ್ ನೆನಪಿಸಿಕೊಂಡರು.
ಸಂಸ್ಥೆ ಬೆಳ್ಳಿ ಹಬ್ಬ ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಹಂಪನಕಟ್ಟೆಯ ಸಿಟಿ ಮಾರ್ಕೆಟ್ ಕಾಂಪ್ಲೆಕ್ಸ್, ಕಾವೂರು, ಕಾಟಿಪಳ್ಳ, ಉಳ್ಳಾಲ ಸೇರಿದಂತೆ ಐದು ಶಾಖೆಗಳನ್ನು ತೆರೆದು ವ್ಯವಹಾರ ವಿಸ್ತರಣೆಯನ್ನು ಘೋಷಿಸಲಾಯಿತು.
ಸದಸ್ಯರಿಗೆ ಶೇ.20ರ ಡಿವಿಡೆಂಡ್ ಕೂಡ ಈ ಸಂದರ್ಭದಲ್ಲಿ ವಿತರಿಸಲಾಯಿತು.
ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ